ದೇವಸ್ಥಾನಕ್ಕೆ ಹೋಗಿ ಹಣೆಗೆ ನಾಮ ಹಾಕಿಸಿಕೊಂಡ ನಟಿ ರಚಿತಾ ರಾಮ್, ತಮಿಳು ಸಿನಿಮಾದಲ್ಲಿ ನಟಿಸಿ ಅಂದ ಫ್ಯಾನ್ಸ್
ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿ 'ಡಿಂಪಲ್ ಕ್ವೀನ್' ರಚಿತಾ ರಾಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರಚಿತಾ ಅವರು ಭಕ್ತಿಭಾವದಿಂದ ಹಣೆಗೆ ನಾಮ ಹಾಕಿಸಿಕೊಂಡು ಗೋವಿಂದಾ, ಗೋವಿಂದಾ ಎಂದಿದ್ದಾರೆ. ಆದರೆ ರಚಿತಾ ಹೋಗಿದ್ದು, ತಿರುಪತಿಗೆ ಅಂತೂ ಅಲ್ವೇ ಅಲ್ಲ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಗೆ ರಚಿತಾ ಭೇಟಿ ನೀಡಿದ್ದಾರೆ. ಸದಾ ಸಿನಿಮಾಗಳ ಶೂಟಿಂಗ್, ಗ್ಲಾಮರ್ ಪ್ರಪಂಚದ ಸದ್ದುಗದ್ದಲದಲ್ಲಿ ಬ್ಯುಸಿಯಾಗಿರುವ ನಟಿ, ಎಲ್ಲದರಿಂದ ಕೊಂಚ ಬಿಡುವು ಪಡೆದು ತಮ್ಮ ಮನೆ ದೇವರಾದ ಶ್ರೀ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿ ಅತ್ಯಂತ ಭಕ್ತಿಭಾವದಿಂದ ವಿಶೇಷ ಪೂಜೆ ಸಲ್ಲಿಸಿರುವ ಅವರ ಫೋಟೋಗಳು ಈಗ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ಮನೆದೇವರಿಗೆ ವಿಶೇಷ ಪೂಜೆ
ಪಾಂಡವಪುರ ತಾಲ್ಲೂಕಿನಲ್ಲಿರುವ ಐತಿಹಾಸಿಕ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯವು ನಟಿ ರಚಿತಾ ರಾಮ್ ಅವರ ಮನೆ ದೇವರಾಗಿದೆ. ಇದೇ ಕಾರಣಕ್ಕೆ ಅವರು ತಮಗೆ ಬಿಡುವ ಸಿಕ್ಕಾಗಲೆಲ್ಲಾ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ. ಈ ಬಾರಿಯೂ ಸಹ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ತೀರಾ ಸರಳವಾದ ಸಾಂಪ್ರದಾಯಿಕ ಉಡುಪನ್ನು ಧರಿಸಿ ರಚಿತಾ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆ ಹಣೆಗೆ ಭವ್ಯವಾದ ನಾಮವನ್ನು ಧರಿಸಿ, ಸಾಮಾನ್ಯ ಭಕ್ತರಂತೆ ದೇವರ ಸನ್ನಿಧಿಯಲ್ಲಿ ಕೈಮುಗಿದು ನಿಂತರು. ದೇವಸ್ಥಾನದ ಶಾಂತ ವಾತಾವರಣದಲ್ಲಿ ಅವರು ಒಂದು ಗಂಟೆಗೂ ಹೆಚ್ಚು ಕಾಲ ಕಾಲ ಕಳೆದು, ವಿಶೇಷ ಅರ್ಚನೆ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.

ನಾಮ ಇಟ್ಟುಕೊಳ್ಳುವುದು ನನ್ನ ಸಂಪ್ರದಾಯ
ಈ ವಿಡಿಯೋವನ್ನು ಹಂಚಿಕೊಂಡಿರುವ ನಟಿ, "ಪ್ರತಿ ವರ್ಷವೂ ಹಣೆಗೆ ನಾಮ ಇಟ್ಟುಕೊಳ್ಳುವುದು ನನ್ನ ಪಾಲಿನ ಒಂದು ಪವಿತ್ರ ಸಂಪ್ರದಾಯ. ಇದು ಅತ್ಯಂತ ದೈವಿಕ ಅನುಭವವನ್ನು ನೀಡುತ್ತದೆ ಮತ್ತು ನಿಜವಾಗಿಯೂ ಆಶೀರ್ವದಿಸಲ್ಪಟ್ಟ ಭಾವನೆ ಮೂಡಿಸುತ್ತದೆ. ಗೋವಿಂದ ಗೋವಿಂದ ಗೋವಿಂದ" ಎಂದು ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಗುರೂಜಿ ಅವರಿಂದ ಆಶೀರ್ವಾದ
ಸ್ವಾಮಿಯ ದರ್ಶನ ಹಾಗೂ ಮಹಾಮಂಗಳಾರತಿ ಮುಗಿದ ಬಳಿಕ, ನಟಿ ರಚಿತಾ ರಾಮ್ ಅವರು ಮೇಲುಕೋಟೆ ಕ್ಷೇತ್ರದ ಪ್ರಮುಖರಾದ ಸ್ಥಾನಿಕರಾದ ಶ್ರೀನಿವಾಸನ್ ಗುರೂಜಿ ಅವರನ್ನು ಭೇಟಿ ಮಾಡಿದರು. ಗುರೂಜಿಯವರ ಪಾದಕ್ಕೆ ನಮಸ್ಕರಿಸಿ ಭಕ್ತಿಯಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ನಟಿಗೆ ದೇವರ ಶೇಷವಸ್ತ್ರ ಹೊದಿಸಿ, ತೀರ್ಥಪ್ರಸಾದಗಳನ್ನು ನೀಡಿ ಗೌರವಿಸಿದರು. ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮೇಲುಕೋಟೆ ದೇವಸ್ಥಾನಕ್ಕೆ ಬಂದಿರುವ ಸುದ್ದಿ ಹರಡುತ್ತಿದ್ದಂತೆ, ಸ್ಥಳೀಯ ಸಾರ್ವಜನಿಕರು, ಭಕ್ತಾದಿಗಳು ಹಾಗೂ ಅವರ ನೂರಾರು ಅಭಿಮಾನಿಗಳು ದೇವಸ್ಥಾನದ ಆವರಣದಲ್ಲಿ ಜಮಾಯಿಸಿದರು. ತಮ್ಮ ನೆಚ್ಚಿನ ನಟಿಯನ್ನು ಹತ್ತಿರದಿಂದ ನೋಡಲು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.
ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟ-ನಟಿಯರು ಸಾರ್ವಜನಿಕ ಪ್ರದೇಶಗಳಿಗೆ ಬಂದಾಗ ಬೌನ್ಸರ್ಸ್ ಇಟ್ಟುಕೊಂಡು ಜನರಿಂದ ದೂರ ಉಳಿಯಲು ಪ್ರಯತ್ನಿಸುತ್ತಾರೆ. ಆದರೆ ರಚಿತಾ ರಾಮ್ ಅವರು ಯಾವುದೇ ಅಹಂಕಾರ ಪ್ರದರ್ಶಿಸದೆ, ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ಕಂಡು ಮುಗುಳ್ನಕ್ಕರು. ಎಲ್ಲರನ್ನೂ ಅತ್ಯಂತ ಆತ್ಮೀಯವಾಗಿ ಮಾತನಾಡಿಸಿ, ಕೆಲವರೊಂದಿಗೆ ಸೆಲ್ಫಿಗೂ ಫೋಸ್ ನೀಡಿ ನೆರೆದಿದ್ದವರ ಮನಗೆದ್ದರು.
"ತಮಿಳು ನಟಿಯಂತಿದ್ದಾರೆ" ಎಂದು ಕಮೆಂಟ್
ಸಾಮಾಜಿಕ ಜಾಲತಾಣಗಳಲ್ಲಿ ರಚಿತಾ ರಾಮ್ ಅವರ ದೇವಸ್ಥಾನದ ಫೋಟೋಗಳು ಮತ್ತು ವಿಡಿಯೋಗಳು ಸದ್ಯ ಸಖತ್ ಟ್ರೆಂಡ್ ಆಗುತ್ತಿವೆ. ಮಾಡರ್ನ್ ಉಡುಪುಗಳಲ್ಲಿ ಮಿಂಚುತ್ತಿದ್ದ ನಟಿ, ಈ ರೀತಿ ಹಣೆಗೆ ನಾಮವಿಟ್ಟುಕೊಂಡು ಪಕ್ಕಾ ಸಾಂಪ್ರದಾಯಿಕ ಶೈಲಿಯಲ್ಲಿ ಕಾಣಿಸಿಕೊಂಡಿದ್ದನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಈ ಅಪರೂಪದ ಲುಕ್ ನೋಡಿ ಕೆಲವು ಅಭಿಮಾನಿಗಳು, "ಹಣೆಯ ನಾಮ ಮತ್ತು ಈ ಸಾಂಪ್ರದಾಯಿಕ ಉಡುಪಿನಲ್ಲಿ ಇವರನ್ನು ನೋಡಿದರೆ ತಮಿಳು ಸಿನಿಮಾದ ನಟಿಯರ ತರಹ ಕ್ಲಾಸಿಕ್ ಆಗಿ ಕಾಣಿಸುತ್ತಿದ್ದಾರೆ" ಎಂದು ಕಮೆಂಟ್ ಮಾಡುತ್ತಿದ್ದಾರೆ. ಸ್ಟಾರ್ ಪಟ್ಟದಲ್ಲಿದ್ದರೂ ದೇವಸ್ಥಾನದ ನಿಯಮ ಹಾಗೂ ಸಂಸ್ಕೃತಿಗೆ ತಕ್ಕಂತೆ ಸರಳವಾಗಿ ನಡೆದುಕೊಂಡ ನಟಿಯ ಗುಣಕ್ಕೆ ಇಂಟರ್ನೆಟ್‌ನಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.













Click it and Unblock the Notifications