Nayanthara Divorce: ಡಿವೋರ್ಸ್ ಬಗ್ಗೆ ಕೊನೆಗೂ ಮಾತನಾಡಿದ ನಟಿ ನಯನತಾರಾ
ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂದು ಒಂದು ವಾರದಿಂದ ಸುದ್ದಿ ಹರಿದಾಡುತ್ತಿದೆ. ಈ ದಂಪತಿಯ ವಿವಾಹ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಡಿವೆ. ನಯನತಾರಾ ಅವರೇ ತಮ್ಮ ದಾಂಪತ್ಯ ಜೀವನದಿಂದ ಬೇಸತ್ತು ತನ್ನ ಪತಿಯ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಕೂಡ ಸಖತ್ ಸದ್ದು ಮಾಡಿತ್ತು. ಅದರಲ್ಲಿ ನಟಿ ತಮ್ಮ ವಿವಾಹವನ್ನು "ದೊಡ್ಡ ತಪ್ಪು" ಎಂದು ಹೇಳಿದಂತೆ ಬರೆಯಲಾಗಿತ್ತು, ಜೊತೆಗೆ ಡಿವೋರ್ಸ್‌ನ ಸುಳಿವು ನೀಡಿದಂತಿತ್ತು. ಈ ಬಗ್ಗೆ ನಟಿ ನಯನತಾರಾ ಅವರೂ ಕೊನೆಗೂ ಪ್ರತಿಕ್ರಿಯಿಸಿದ್ದು, ಡಿವೋರ್ಸ್ ವಿಚಾರದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.
ನಿರ್ದೇಶಕ ವಿಘ್ನೇಶ್ ಅವರ ಮುಂದಿನ ಚಿತ್ರ "ಲವ್ ಇನ್ಶೂರೆನ್ಸ್ ಕಂಪನಿ"ಗೆ ಪೋಕ್ಸೋ ಕೇಸ್ ಆರೋಪ ಎದುರಿಸುತ್ತಿರುವ ಜಾನಿ ಮಾಸ್ಟರ್ ಅವರನ್ನು ನೃತ್ಯ ನಿರ್ದೇಶಕರಾಗಿ ಆಯ್ಕೆ ಮಾಡಿಕೊಂಡ ನಂತರ ಈ ವದಂತಿಗಳು ಹೆಚ್ಚಾಗಿ ಹರಡಿದ್ದವು. ಇದೇ ಸಮಯದಲ್ಲಿ ನಯನಾತಾರಾ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು ಎನ್ನಲಾದ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು. ಅದರಲ್ಲಿ ಅವರು ಮದುವೆಯಾಗಿದ್ದು ದೊಡ್ಡ ತಪ್ಪು, ನನ್ನ ಒಂಟಿಯಾಗಿ ಬಿಡಿ ಎಂಬ ಸಾಲುಗಳಿದ್ದವು. ಇದು ಎಲ್ಲೆಡೆ ಹರಿದಾಡಿ ನಯನತಾರಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು.

"ಮೂರ್ಖ ವ್ಯಕ್ತಿಯನ್ನು ಮದುವೆಯಾಗುವುದು ಒಂದು ದೊಡ್ಡ ತಪ್ಪು. ನಿಮ್ಮ ಗಂಡನ ಕೆಲಸಗಳಿಗೆ ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿಲ್ಲ. ಏಕೆಂದರೆ ಪುರುಷರು ಸಾಮಾನ್ಯವಾಗಿ ಬೆಳೆಯುವುದಿಲ್ಲ. ನನ್ನನ್ನು ಒಬ್ಬಂಟಿಯಾಗಿ ಬಿಡುವುದು ಉತ್ತಮ" ಎನ್ನುವ ಸ್ಕ್ರೀನ್‌ಶಾಟ್ ಸಂಚಲನವನ್ನೇ ಸೃಷ್ಟಿಸಿತ್ತು. ಈ ಸುದ್ದಿ ಎಲ್ಲೆಡೆ ಹರಿದಾಡಿದ್ದರಿಂದ ಅವರ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ದರು. ಡಿವೋರ್ಸ್ ವದಂತಿ ನಡುವೆಯೂ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಕೊನೆಗೂ ನಯನತಾರಾ ಮತ್ತು ವಿಘ್ನೇಶ್ ತಮ್ಮದೇ ಶೈಲಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಫೋಟೋ ಮೂಲಕ ಪ್ರತಿಕ್ರಿಯೆ
ನಯನತಾರಾ ಒಂದು ಸ್ಪೆಷಲ್ ಹಾಗೂ ಫನ್ನೀ ಫೋಟೋ ಮೂಲಕ ಡಿವೋರ್ಸ್ ವದಂತಿಗೆ ಉತ್ತರ ನೀಡಿದ್ದಾರೆ. ಈ ಫೋಟೋದಲ್ಲಿ ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಇದ್ದಾರೆ. ಈ ಫೋಟೋದಲ್ಲಿ ದಂಪತಿ ಇಬ್ಬರೂ ಆಶ್ಚರ್ಯದಿಂದ ನೋಡುತ್ತಿರುವ ಪೋಸ್ ಕೊಟ್ಟಿದ್ದಾರೆ. ಅದರೊಂದಿಗೆ "ನಮ್ಮ ಬಗ್ಗೆ ನಾವು ಹುಚ್ಚು ಸುದ್ದಿಗಳನ್ನು ನೋಡಿದಾಗ ನಮ್ಮ ಪ್ರತಿಕ್ರಿಯೆ" ಹೀಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಮೂಲಕ ಡಿವೋರ್ಸ್ ವದಂತಿ ಸುಳ್ಳು ಎಂದು ನಯನತಾರಾ ತೆರೆ ಎಳೆದಿದ್ದಾರೆ.
2015ರ ಅವರ ಚೊಚ್ಚಲ ನಿರ್ದೇಶನದ ಚಿತ್ರ "ನಾನುಮ್ ರೌಡಿ ಧಾನ್" ಸೆಟ್‌ನಲ್ಲಿ ನಯನತಾರಾ ಮತ್ತು ವಿಘ್ನೇಶ್ ಮೊದಲ ಬಾರಿಗೆ ಭೇಟಿಯಾಗಿದ್ದರು. ನಟ ಧನುಷ್ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಇದರಲ್ಲಿ ವಿಜಯ್ ಸೇತುಪತಿ ಕೂಡ ನಟಿಸಿದ್ದರು. ಈ ಚಿತ್ರವು ಯಶಸ್ವಿಯಾಯಿತು. ಬಳಿಕ ವಿಘ್ನೇಶ್ ಹಾಗೂ ನಯನತಾರಾ ನಡುವೆ ಪ್ರೀತಿ ಮೂಡಿತ್ತು. ನಂತರ ಜೂನ್ 2022ರಲ್ಲಿ ಅದ್ಧೂರಿಯಾಗಿ ವಿವಾಹವಾದರು. ಅದೇ ವರ್ಷ ಬಾಡಿಗೆ ತಾಯ್ತನದ ಮೂಲಕ ಅವರು ಅವಳಿ ಮಕ್ಕಳನ್ನು ಪಡೆದರು. ಅವರ ಹೆಸರು ಉಯಿರ್ ಮತ್ತು ಉಲಾಗ್. ಸದ್ಯ ಅವರು ತಮ್ಮ ಕುಟುಂಬದೊಂದಿಗೆ ನೆಮ್ಮದಿಯಾಗಿ ಇದ್ದಾರೆ.












Click it and Unblock the Notifications