Saif Ali Khan: ನಟ ಸೈಫ್ ಮೇಲೆ ಹಲ್ಲೆ ನಡೆಸಿದವ ಕೊನೆಗೂ ಅರೆಸ್ಟ್, ಸ್ಫೋಟಕ ವಿಚಾರ ಬಹಿರಂಗ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಹಲ್ಲೆ ಯತ್ನ ನಡೆಸಿದ ಆರೋಪಿಯನ್ನು ಮುಂಬೈ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಮೂರು ದಿನಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಮುಂಬೈ ಮಹಾನಗರದ ಡಿಸಿಪಿ ದೀಕ್ಷಿತ್ ಗೆಡಾಮ್ ಇಂದು ಪ್ರೆಸ್‌ಮೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ನಟ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಆರೋಪಿಯು ಭಾರತೀಯನಲ್ಲ, ಆದರೆ ಇದರ ಈತನ ಮೂಲ ಬಾಂಗ್ಲಾದೇಶ ಎಂದು ತಿಳಿದು ಬಂದಿದೆ. ಈತ ಭಾರತಕ್ಕೆ ಬಂದ ಬಳಿಕ ಹೆಸರು ಬದಲಾಯಿಸಿಕೊಂಡಿದ್ದ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಬಂಧಿತ ಆರೋಪಿಯ ಬಳಿಯ ಭಾರತಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲ. ಆಧಾರ್ ಕಾರ್ಡ್ ಸೇರಿದಂತೆ ಇಲ್ಲಿಯವನು ಎಂದು ಹೇಳಲು ಸೂಕ್ತ ದಾಖಲೆಗಳು ಸಿಕ್ಕಿಲ್ಲ. ಸದ್ಯ ಆತ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಹೇಳಿಕೊಂಡಿದ್ದಾನೆ. ಆದರೆ ಈತನ ಮೂಲ ಹೆಸರು ಬೇರೆ ಇರಬಹುದು ಎನ್ನುವ ಶಂಕೆ ಇದೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆರೋಪಿಯ ಹೆಸರು ಮೊಹಮ್ಮದ್ ಷರೀಫುಲ್ಲಾ ಇಸ್ಲಾಂ ಶೆಹಜಾದ್ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಂದು ಕಳ್ಳತನ ಮಾಡುವ ಉದ್ದೇಶದಿಂದ ಸೈಫ್ ಅವರ ನಿವಾಸಕ್ಕೆ ನುಗ್ಗಿದ್ದ ಎಂದು ಹೇಳಿಕೊಂಡಿದ್ದಾನೆ. ಇಂದು ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

ಆರೋಪಿಯು ಮುಂಬೈನ ಪಬ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಇಲ್ಲಿ ನೆಲೆಸಿ, ಹೆಸರು ಬದಲಾಯಿಸಿಕೊಂಡಿದ್ದ. ಕಳೆದ ಬುಧವಾರ ರಾತ್ರಿ ನಟ ಸೈಫ್ ಅಲಿ ಖಾನ್ ನಿವಾಸಕ್ಕೆ ನುಗ್ಗಿದ್ದ ಆರೋಪಿ ನಟನ ಮೇಲೆ ಹಲ್ಲೆ ನಡೆಸಿದ್ದ. ಈ ಹಲ್ಲೆಯಿಂದ ಸೈಫ್ ಅವರ ಕುತ್ತಿಗೆ ಹಾಗೂ ಬೆನ್ನಿನ ಭಾಗದಲ್ಲಿ ಗಾಯಗಳಾಗಿತ್ತು. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಜನವರಿ 16ರಂದು ಬೆಳಗಿನ ಜಾವ ಸುಮಾರು 2 ಗಂಟೆ ಸಮಯದಲ್ಲಿ ಸೈಫ್ ಅವರ ಮೇಲೆ ದಾಳಿ ನಡೆದಿತ್ತು. ಆರೋಪಿ ದರೋಡೆ ಮಾಡುವ ಉದ್ದೇಶದಿಂದಲೇ ನಟ ಮನೆ ಪ್ರವೇಶಿಸಿದ್ದ. ಸದ್ಯ ಈ ಸಂಬಂಧ ಎಫ್ಐಆರ್ ಕೂಡ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಇದೇ ಪ್ರಕರಣದಲ್ಲಿ ಇತರರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಅವರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನಿಜವಾದ ಆರೋಪಿಯನ್ನು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಥಾಣೆಯ ಹಿರಾನಂದನಿ ಎಸ್ಟೇಟ್‌ನಲ್ಲಿರುವ ಟಿಸಿಎಸ್ ಕಾಲ್ ಸೆಂಟರ್ ಹಿಂಭಾಗದಲ್ಲಿರುವ ಮೆಟ್ರೋ ನಿರ್ಮಾಣ ಸ್ಥಳದ ಬಳಿಯ ಕಾರ್ಮಿಕ ಶಿಬಿರದಲ್ಲಿ ಬಂಧಿಸಿರುವುದಾಗಿ ವಿವರಿಸಿದ್ದಾರೆ.












Click it and Unblock the Notifications