BIFFES 2025: ಇಂದಿನಿಂದ ಬೆಂಗಳೂರು ಚಲನಚಿತ್ರೋತ್ಸವ: ಎಷ್ಟು ಸಿನಿಮಾ, ಎಲ್ಲೆಲ್ಲಿ ಪ್ರದರ್ಶನ?
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಇಂದಿನಿಂದ (ಮಾರ್ಚ್ 1) ಶುರುವಾಗುತ್ತಿದ್ದು, ಮಾರ್ಚ್ 8ರವರೆಗೆ ನಡೆಯಲಿದೆ. 2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಸದ್ಯ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ. ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಖ್ಯಾತ ನಟ ಕಿಶೋರ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಉದ್ಘಾಟನೆಗೊಳ್ಳಲಿರುವ ಈ ಕಾರ್ಯಕ್ರಮ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
"ಸರ್ವಜನಾಂಗದ ಶಾಂತಿಯ ತೋಟ" ಎಂಬ ಧ್ಯೇಯವಾಕ್ಯದೊಂದಿಗೆ ಈ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದು, ಇಂದು ಸಂಜೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಚಲನಚಿತ್ರೋತ್ಸವದ ಕೈಪಿಡಿಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ. ವಿಶೇಷ ಅತಿಥಿಯಾಗಿ ನಟ ಕಿಶೋರ್ ಕುಮಾರ್ ಭಾಗಿಯಾಗಲಿದ್ದಾರೆ.

ಈ ಚಲನಚಿತ್ರೋತ್ಸವದಲ್ಲಿ 13 ಪರದೆಗಳಲ್ಲಿ ಸುಮಾರು 60 ದೇಶಗಳ 200ಕ್ಕೂ ಹೆಚ್ಚು ಚಲನಚಿತ್ರಗಳ 400 ಪ್ರದರ್ಶನಗಳು ಇರಲಿವೆ. ರಾಜಾಜಿನಗರದ ಒರಾಯನ್ ಮಾಲ್‌ನ ಪಿವಿಆರ್ ಸಿನಿಮಾಸ್, ಚಾಮರಾಜಪೇಟೆಯ ಡಾ.ರಾಜ್‌ಕುಮಾರ್ ಭವನ ಹಾಗೂ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಈ ಸಿನಿಮಾಗಳ ಪ್ರದರ್ಶನ ಇರಲಿದೆ.

ಸರ್ವ ಜನಾಂಗದ ಶಾಂತಿಯ ತೋಟ ಎಂಬ ಘೋಷವಾಕ್ಯದಡಿ ಈ ಬಾರಿಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಈ ಸಾಲುಗಳಿಗೆ ಬದ್ಧವಾಗಿರುವ ಕಿಶೋರ್ ಅವರ ಮುಂದಾಳತ್ವದಲ್ಲಿ ಬೆಂಗಳೂರು ಚಲನಚಿತ್ರೋತ್ಸವ ಅತ್ಯಂತ ಯಶಸ್ವಿಯಾಗಲಿದೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ವರ್ಷದ ಚಲನಚಿತ್ರೋತ್ಸವದ ಥೀಮ್ ಸರ್ವ ಜನಾಂಗದ ಶಾಂತಿಯ ತೋಟವನ್ನು ಆಯ್ಕೆ ಮಾಡಲಾಗಿದ್ದು, ಕಳೆದ ವರ್ಷ ʼಸಾಮಾಜಿಕ ನ್ಯಾಯʼ ಥೀಮ್‌ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು.

ಸುಮಾರು 9 ಕೋಟಿ ರೂಪಾಯಿ ವೆಚ್ಚದಲ್ಲಿ ಚಲನಚಿತ್ರೋತ್ಸವನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜಾಗತಿಕವಾಗಿ ಮನ್ನಣೆ ಪಡೆದಿದೆ. ಬೆಂಗಳೂರು ಈಗ ಭಾರತೀಯ ಮತ್ತು ಅಂತರರಾಷ್ಟ್ರೀಯ ಸಿನಿಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಳೆದಿದೆ. ಚಲನಚಿತ್ರೋತ್ಸವದಲ್ಲಿ ಪ್ರತಿ ವರ್ಷವೂ 60ಕ್ಕೂ ಹೆಚ್ಚು ದೇಶಗಳಿಂದ ಬಂದ ಸುಮಾರು 200ಕ್ಕೂ ಅಧಿಕ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಾರಿಯೂ ಈ ಸಿನಿಮಾಗಳ 400ಕ್ಕೂ ಹೆಚ್ಚು ಪ್ರದರ್ಶನಗಳು ಇರಲಿವೆ. ಪ್ರತಿ ಆವೃತ್ತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಪ್ರವೇಶ ಪಾಸ್ ದರ ಎಷ್ಟು?: ಓರಾಯನ್ ಮಾಲ್‍ನ 11 ಸ್ಕ್ರೀನ್‍ಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸಾರ್ವಜನಿಕರಿಗಾಗಿ ಪ್ರವೇಶ ಪಾಸ್ ಕೂಡ ಇದೆ. ಸಾರ್ವಜನಿಕರಿಗೆ ಪಾಸ್ ದರ 800 ರೂಪಾಯಿ, ವಿದ್ಯಾರ್ಥಿ, ಹಿರಿಯ ನಾಗರಿಕರು ಹಾಗೂ ಚಿತ್ರರಂಗದ ಸದಸ್ಯರಿಗೆ 400 ರೂಪಾಯಿ ದರ ನಿಗದಿ ಮಾಡಲಾಗಿದೆ. ಆಸಕ್ತರು ಚಿತ್ರೋತ್ಸವದ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಏಷಿಯನ್, ಇಂಡಿಯನ್ ಹಾಗೂ ಕನ್ನಡ ಚಲನಚಿತ್ರಗಳು ಎನ್ನುವ ಮೂರು ವಿಭಾಗಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದ್ದು, ಇದಕ್ಕೆ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ಕೂಡ ನೀಡಲಾಗುತ್ತೆ.












Click it and Unblock the Notifications