ಕರ್ಣನಿಗೆ ಜೋಡಿಯಾದ ಬಿಗ್ ಬಾಸ್ ಭವ್ಯ ಗೌಡ: ಸೀಕ್ರೆಟ್ ರಿವೀಲ್ ಆಗಿದ್ದೇಗೆ?
ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ನಟ ಕಿರಣ್ ರಾಜ್ ರಾನಿ ಸಿನಿಮಾ ಯಶಸ್ಸಿನ ಬಳಿಕ ಇದೀಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಹೊಸ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿರುವ ಕಿರಣ್ ರಾಜ್ ಕಲರ್ಸ್ ಕನ್ನಡ ವಾಹಿನಿಯಿಂದ ಜೀ ಕನ್ನಡ ವಾಹಿನಿಗೆ ಜಂಪ್ ಆಗಿದ್ದಾರೆ.
ಹೌದು ಈ ಬಾರಿ ಕಿರಣ್ ರಾಜ್ ಜೀ ಕನ್ನಡ ವಾಹಿನಿಯಲ್ಲಿ ತಮ್ಮ ಹೊಸ ಪಯಣ ಆರಂಭಿಸಿದ್ದಾರೆ. ಶೀಘ್ರದಲ್ಲೇ ಪ್ರಸಾರ ಕಾಣಲಿರುವ ಹೊಚ್ಚ ಹೊಸ ಧಾರಾವಾಹಿ ಕರ್ಣದಲ್ಲಿ, ಕಿರಣ್ ರಾಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕರ್ಣ ಧಾರಾವಾಹಿಯ ಪ್ರೋಮೋ ಎಲ್ಲೆಡೆ ವೈರಲ್ ಆಗಿದ್ದು, ಧಾರಾವಾಹಿಯ ಒನ್ ಲೈನ್ ಕಥೆ ಏನು ಎನ್ನುವುದು ಈಗಾಗಲೇ ಪ್ರೇಕ್ಷಕರಿಗೆ ತಿಳಿದು ಹೋಗಿದೆ.

ಕಿರಣ್ ರಾಜ್ ಕರ್ಣ ಧಾರಾವಾಹಿಯಲ್ಲಿ ಪ್ರಶಸ್ತಿ ಪುರಸ್ಕೃತ ಸ್ತ್ರೀರೋಗ ತಜ್ಞನಾಗಿದ್ದಾರೆ. ತನ್ನದೇ ಮನೆಯಲ್ಲಿ ಅನಾಥನಂತೆ ಬದುಕುತ್ತಿರುವ ಕರ್ಣ ಹೊರಗಿನ ಪ್ರಪಂಚಕ್ಕೆ ಜನಪ್ರಿಯ ಡಾಕ್ಟರ್ ಆಗಿದ್ದರೂ ಕೂಡ ಮನೆಯಲ್ಲಿ ಮಾತ್ರ ಕೆಲಸಗಾರನಂತೆ ಇರುತ್ತಾನೆ. ಮನೆಯ ಎಲ್ಲಾ ಸದಸ್ಯರ ಕೆಲಸವನ್ನು ತಾನೇ ಮಾಡುವ ಕರ್ಣ ಅಮ್ಮ, ಅಜ್ಜಿಯ ಪಾಲಿಗೆ ಮುದ್ದಿನ ಮಗ. ಆದರೆ ಅಪ್ಪನೇ ತಿಪ್ಪೆಗುಂಡಿಯಲ್ಲಿ ಸಿಕ್ಕವನು ಎಂದು ಎಲ್ಲರ ಎದುರು ನಿಂದಿಸುತ್ತಾನೆ. ಹೀಗೆ ತನ್ನ ನೋವು ನುಂಗಿಕೊಂಡು ನಗುತ್ತಾ ಕರ್ಣ ಎಲ್ಲವನ್ನೂ ಎದುರಿಸುವುದೇ ಈ ಧಾರಾವಾಹಿಯ ಕಥಾ ವಸ್ತುವಾಗಿದೆ.
ಕರ್ಣ ಧಾರಾವಾಹಿ ಪ್ರೋಮೋ ವೈರಲ್ ಆಗುತ್ತಿದ್ದಂತೆ ಕಿರಣ್ ರಾಜ್‌ಗೆ ನಾಯಕಿ ಯಾರು ಎನ್ನುವ ಪ್ರಶ್ನೆ ಹುಟ್ಟುಕೊಂಡಿತ್ತು. ಅಭಿಮಾನಿಗಳು ಕಿರಣ್‌ಗೆ ಸರಿ ಹೊಂದುವ ತಮ್ಮಿಷ್ಟದ ನಾಯಕಿಯರ ಹೆಸರನ್ನು ಪ್ರೋಮೋ ಕಮೆಂಟ್‌ನಲ್ಲಿ ತಿಳಿಸಿದ್ದರು. ಈ ಪೈಕಿ ಮೋಕ್ಷಿತಾ ಪೈ, ರಂಜನಿ ರಾಘವನ್ ಹಾಗೂ ಭವ್ಯ ಗೌಡ ಮೂರು ಜನರ ಹೆಸರು ಜೋರಾಗಿಯೇ ಕೇಳಿ ಬಂದಿತ್ತು. ಇದೀಗ ಈ ಮೂವರ ಪೈಕಿಯೇ ಒಬ್ಬರು ಕರ್ಣನಿಗೆ ನಾಯಕಿ ಎನ್ನುವುದು ತಿಳಿದು ಬಂದಿದೆ.

ಹೌದು, ಕರ್ಣ ಧಾರಾವಾಹಿಯಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಅದರಲ್ಲಿ ಒಂದು ಪಾತ್ರಕ್ಕೆ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ಭವ್ಯ ಗೌಡ ಆಯ್ಕೆಯಾಗಿದ್ದಾರೆ. ಕಿರಣ್ ರಾಜ್ಗೆ ಜೋಡಿಯಾಗಿ ಭವ್ಯ ಗೌಡ ಕರ್ಣ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕರ್ಣನ ಮತ್ತೊಂದು ನಾಯಕಿ ಯಾರು ಎನ್ನುವುದು ಈಗಲೂ ಕೂಡ ರಹಸ್ಯವಾಗಿಯೇ ಇದೆ.












Click it and Unblock the Notifications