ಪೊಲೀಸರ ನೋಟಿಸ್‌ಗೆ ಕಿರುತೆರೆ ನಟಿ ಡೋಂಟ್‌ಕೇರ್: ಅರೆಸ್ಟ್ ಆಗ್ತಾರಾ ಶಶಿಕಲಾ?
ಪತಿ ಹಾಗೂ ನಿರ್ದೇಶಕ ಟಿ.ಜಿ. ಹರ್ಷವರ್ಧನ್‌ಗೆ ಬ್ಲ್ಯಾಕ್‌ಮೇಲ್ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಿರುತೆರೆ ನಟಿ ಶಶಿಕಲಾ ವಿರುದ್ಧ ದೂರು ದಾಖಲಾಗಿದ್ದು, ವಿಚಾರಣೆಗೆ ಬರುವಂತೆ ಪೊಲೀಸರು ನೀಡಿದ ನೋಟಿಸ್‌ಗೆ ನಟಿ ಡೋಂಟ್‌ಕೇರ್ ಎಂದಿದ್ದಾರೆ. ಪೊಲೀಸರು ಮೊದಲು ನೀಡಿದ ನೋಟಿಸ್ ಅನ್ನು ಕಿರುತೆರೆ ನಟಿ ಶಶಿಕಲಾ ನಿರ್ಲಕ್ಷಿಸಿದ ಕಾರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ 2ನೇ ನೋಟಿಸ್ ಅನ್ನು ವಿದ್ಯಾರಣ್ಯಪುರ ಪೊಲೀಸರು ಜಾರಿ ಮಾಡಿದ್ದಾರೆ.
ನಟಿ ಶಶಿಕಲಾ ವಿರುದ್ಧ ಪತಿ ಹರ್ಷವರ್ಧನ್ ಕಿರುಕುಳ ಆರೋಪ ಮಾಡಿ ದೂರು ನೀಡಿದ್ದರು. ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ಹಿನ್ನೆಲೆಯಲ್ಲಿ ಪೊಲೀಸರು ನಟಿಗೆ ನೋಟಿಸ್ ಜಾರಿ ಮಾಡಿದ್ದರು. ಪೊಲೀಸರ ನೋಟಿಸ್‌ಗೆ ಉತ್ತರಿಸಿದ ನಟಿ ಶಶಿಕಲಾ ತಮ್ಮ ಧಾರಾವಾಹಿ ಶೂಟಿಂಗ್ ಹಾಗೂ ಆಶ್ರಮದ ಕೆಲಸದಲ್ಲಿ ಬ್ಯೂಸಿಯಾಗಿದ್ದರು.

ಇದೀಗ ಮೊದಲ ನೋಟಿಸ್‌ಗೆ ವಿಚಾರಣೆಗೆ ಹಾಜರಾಗದ ನಟಿಗೆ ವಿದ್ಯಾರಣ್ಯಪುರ ಠಾಣೆ ಪೊಲೀಸರು ಮತ್ತೊಂದು ಅಂದರೆ ಎರಡನೇ ನೋಟಿಸ್ ನೀಡಿದ್ದಾರೆ. ಈ ನೋಟಿಸ್‌ಗೂ ನಟಿ ಉತ್ತರಿಸದೇ ಇದ್ದರೆ ಅಥವಾ ವಿಚಾರಣೆಗೆ ಹಾಜರಾಗದೇ ಇದ್ದರೆ ಮೂರನೇ ನೋಟಿಸ್ ನೀಡಲಿರುವ ಪೊಲೀಸರು ಬಳಿಕವೂ ನಟಿ ಸ್ಪಂದಿಸದೇ ಇದ್ದರೆ ನೇರವಾಗಿ ಬಂಧಿಸುವ ಸಾಧ್ಯತೆ ಇದೆ.
ಇನ್ನು ಪ್ರಕರಣ ಸಂಬಂಧ ದೂರುದಾರ ಹರ್ಷವರ್ಧನ್ ವಿಚಾರಣೆಗೆ ಹಾಜರಾಗಿದ್ದು, ತಮ್ಮ ಬಳಿ ಇರುವ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾರೆ. ಸರಿಯಾದ ದಾಖಲೆಗಳನ್ನು ಒದಗಿಸುವಂತೆ ಪೊಲೀಸರು ತಿಳಿಸಿದ್ದು, ಇತ್ತ ವಿಚಾರಣೆಗೆ ಹಾಜರಾಗದ ನಟಿ ಶಶಿಕಲಾಗೆ ಎರಡನೇ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಪೊಲೀಸರ ಎರಡನೇ ಎಚ್ಚರಿಕೆಗಾದರೂ ನಟಿ ಶಶಿಕಲಾ ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕಿದೆ. ಅಂದ ಹಾಗೇ ನಟಿ ಶಶಿಕಲಾ ಕಿರುತೆರೆ ಧಾರಾವಾಹಿಗಳು, ಕಿರು ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದು, ಗಂಗೊಂಡನಹಳ್ಳಿಯಲ್ಲಿ ಅನಾಥಾಶ್ರಮ ನಡೆಸುತ್ತಿದ್ದಾರೆ.












Click it and Unblock the Notifications