ಲಕ್ಷ್ಮೀ ಬಾರಮ್ಮ ಧಾರಾವಾಹಿ ಶೀಘ್ರದಲ್ಲೇ ಅಂತ್ಯ: ಸತ್ಯ ರಿವೀಲ್ ಆಗಿದ್ದೇಗೆ?
ಕನ್ನಡ ಕಿರುತೆರೆಯಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್ ಕೊಟ್ಟು ಮುನ್ನುಗ್ಗುತ್ತಿದೆ. ಮೊದಲು ಭಾಗ್ಯ ಲಕ್ಷ್ಮೀ ಧಾರಾವಾಹಿಯೊಂದಿಗೆ ಆರಂಭವಾದ ಈ ಕಥೆ ಬಳಿಕ ಲಕ್ಷ್ಮೀ ಬಾರಮ್ಮ ಹೆಸರಿನಲ್ಲಿ ಸ್ವತಂತ್ರ ಧಾರಾವಾಹಿ ಪ್ರಸಾರ ಕಾಣಲು ಆರಂಭವಾಯಿತು. ಮೊದಲು ಅಕ್ಕ ತಂಗಿಯ ಬಾಂಧವ್ಯದಿಂದ ಆರಂಭವಾದ ಈ ಕಥೆ ಬಳಿಕ ಲಕ್ಷ್ಮೀ, ಕಾವೇರಿ, ಕೀರ್ತಿ, ವೈಷ್ಣವ್ ಈ ನಾಲ್ವರ ಸುತ್ತಲೂ ಹೆಣೆದುಕೊಂಡಿತು.
ಕಾವೇರಿಯ ಮುದ್ದು ಮಗನಾದ ವೈಷ್ಣವ್ ಸಂಗೀತ ಲೋಕದಲ್ಲಿ ಸೂಪರ್ ಸ್ಟಾರ್ ಆಗಿದ್ದ ಎಲ್ಲವನ್ನೂ ತಾಯಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ವೈಷ್ಣವ್, ಪ್ರೀತಿ ವಿಚಾರದಲ್ಲಿ ತಾಯಿಯ ಅಭಿಪ್ರಾಯ, ಅನುಮತಿ ಪಡೆಯದೇ ಕೀರ್ತಿ ಎನ್ನುವ ಡಾನ್ಸರ್‌ಅನ್ನು ಪ್ರೀತಿಸಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಅಸಮಾಧಾನಗೊಂಡ ಕಾವೇರಿ ಮಗನ ಮುಂದೆ ಪ್ರೀತಿಗೆ ಒಪ್ಪಿದಂತೆ ನಟಿಸಿ ಉಪಾಯದಿಂದ ಕೀರ್ತಿಯಿಂದ ಮಗನನ್ನು ದೂರ ಮಾಡಿ ತಾನೇ ಮುಂದೆ ನಿಂತು ಲಕ್ಷ್ಮೀಯ ಜೊತೆ ಮದುವೆ ಮಾಡುತ್ತಾಳೆ.

ಮೊದಮೊದಲು ಕೀರ್ತಿಯ ನೆನಪಿನಲ್ಲೇ ಇದ್ದ ವೈಷ್ಣವ್ ಕಾಲಕಳೆದಂತೆ ಬದಲಾಗಿ ಲಕ್ಷ್ಮೀಯನ್ನು ಪ್ರೀತಿಸಲು ಶುರು ಮಾಡುತ್ತಾನೆ. ಈ ಮಧ್ಯೆ ಕೀರ್ತಿಗೆ ಕಾವೇರಿಯ ಕುತಂತ್ರ ತಿಳಿದು ಮತ್ತೆ ತನ್ನ ಪ್ರೀತಿಯನ್ನು ಪಡೆಯಲು ಹೋರಾಡುತ್ತಾಳೆ. ಕೊನೆಗೆ ಕಾವೇರಿ ತನ್ನ ದಾರಿಗೆ ಅಡ್ಡವಾದ ಕೀರ್ತಿಯ ಕಥೆ ಮುಗಿಸಲು ಆಕೆಯನ್ನು ಬೆಟ್ಟದಿಂದ ತಳ್ಳುತ್ತಾಳೆ. ಈ ಹಂತದಲ್ಲಿ ರೋಚಕ ತಿರುವು ಪಡೆದುಕೊಂಡ ಈ ಧಾರಾವಾಹಿಯಲ್ಲಿ ಲಕ್ಷ್ಮೀ ತನ್ನ ಅತ್ತೆ ಕಾವೇರಿ ವಿರುದ್ಧ ತಿರುಗಿ ಬೀಳುತ್ತಾಳೆ. ಆಕೆ ಮಾಡಿರುವ ಅನ್ಯಾಯಗಳನ್ನು ಬಹಿರಂಗ ಪಡಿಸಿ ಕೊನೆಯಲ್ಲಿ ಜೈಲಿಗೆ ಕಳುಹಿಸುತ್ತಾಳೆ. ವೈಷ್ಣವ್ ಕೂಡ ಅಮ್ಮನ ಮೋಸ ತಿಳಿದು ಆಕೆಯನ್ನು ದ್ವೇಷಿಸುತ್ತಾನೆ. ಈ ನಡುವೆ ಕೀರ್ತಿ ತನ್ನ ಎಲ್ಲಾ ಹಳೆಯ ನೆನಪುಗಳನ್ನು ಕಳೆದುಕೊಂಡವಳಂತೆ ಪ್ರತ್ಯಕ್ಷಳಾಗುತ್ತಾಳೆ.
ಇತ್ತ ಜೈಲಿನಲ್ಲಿದ್ದೇ ಮಸಲತ್ತು ಮಾಡುತ್ತಿದ್ದ ಕಾವೇರಿ, ತನ್ನನ್ನು ಜೈಲಿಗೆ ಕಳುಹಿಸಿದ ಲಕ್ಷ್ಮೀ ಮೇಲೆ ಕಿಡಿಕಾರುತ್ತಾ ತನ್ನ ಸಹಚರರಿಂದ ಕೆಲವು ಕೆಲಸಗಳನ್ನು ಮಾಡಿಸಿಕೊಂಡು ವೈಷ್ಣವ್ ಕಣ್ಣಿನಲ್ಲಿ ಮತ್ತೆ ಒಳ್ಳೆಯವಳಾಗಿ ಆರೋಪಗಳಿಂದ ಮುಕ್ತಳಾಗಿ ಜೈಲಿನಿಂದ ವಾಪಸ್ ಬರುತ್ತಾಳೆ. ಜೈಲಿನಿಂದ ಬಂದವಳೇ ಲಕ್ಷ್ಮೀಯನ್ನು ವೈಷ್ಣವ್‌ನಿಂದ ದೂರಮಾಡಿ, ಆತನಿಗೆ ಮತ್ತೊಂದು ಮದುವೆ ಮಾಡಿಸಲು ಮುಂದಾಗಿದ್ದಾಳೆ. ಈಗಾಗಲೇ ವೈಷ್ಣವ್ ಮದುವೆಯಾಗಲು ಬಂದಿರುವ ಹುಡುಗಿಯನ್ನು ಕೂಡ ಪರಿಚಯ ಮಾಡಿಕೊಡಲಾಗಿದೆ. ಸದ್ಯ ಈ ಹಂತದಲ್ಲಿ ಇಂಟ್ರಸ್ಟಿಂಗ್ ಆಗಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ತಂಡ ಪ್ರೇಕ್ಷಕರಿಗೆ ದಿಢೀರ್ ಶಾಕ್ ಕೊಡಲು ಮುಂದಾಗಿದ್ದಾರೆ.
ಹೌದು, ಲಕ್ಷ್ಮೀ ಬಾರಮ್ಮ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗುವ ಸಾಧ್ಯತೆ ಇದೆ. ಈ ವಿಚಾರ ಬಹಿರಂಗಗೊಂಡಿದ್ದು ಹೇಗೆ ಎಂದರೆ, ಧಾರಾವಾಹಿ ತಂಡದ ಒಬ್ಬ ಸದಸ್ಯ ಅಂತಿಮ ದಿನದ ಶೂಟಿಂಗ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ತಕ್ಷಣವೇ ಆ ಪೋಸ್ಟ್ ಡಿಲೀಟ್ ಆಗಿದ್ದು, ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯಗೊಳ್ಳುತ್ತಾ ಎನ್ನುವ ಅನುಮಾನ ಮೂಡಿದೆ. ಆದರೆ ಧಾರಾವಾಹಿ ತಂಡ ಅಧೀಕೃತವಾಗಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.












Click it and Unblock the Notifications