Aparna: ಕನ್ನಡದ ಖ್ಯಾತ ನಿರೂಪಕಿ, ಮಜಾ ಟಾಕೀಸ್ ಖ್ಯಾತಿಯ ಅಪರ್ಣಾ ಇನ್ನಿಲ್ಲ
ಬೆಂಗಳೂರು, ಜುಲೈ 11: ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ, ನಟಿ ಅಪರ್ಣಾ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದ ಅಪರ್ಣಾ ಮಜಾ ಟಾಕೀಸ್ ವರು ಪಾತ್ರದಿಂದ ಜನರ ಅಪಾರ ಮೆಚ್ಚುಗೆ ಗಳಿಸಿದ್ದರು. ಅಲ್ಲದೇ ಅನೇಕ ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಅವರ ಕನ್ನಡಕ್ಕೆ ಮನಸೋಲದವರಿಲ್ಲ.
ತಮ್ಮ ಶುದ್ಧವಾದ ಕನ್ನಡ, ಮಾತಿನ ಶೈಲಿ ಹಾಗೂ ನಟನೆಯಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದ ಅಪರ್ಣಾ ಅವರು ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಹಲವು ತಿಂಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ನಿರೂಪಕಿ ಅಪರ್ಣಾ ಅವರ ಅಗಲಿಕೆಗೆ ಮಾಜಿ ಸಿಎಂ,ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. 'ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ಅತ್ಯಂತ ನೋವಾಯಿತು. ಸರಳ ಕನ್ನಡದಲ್ಲಿ ಸುಂದರವಾಗಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಒಬ್ಬ ಸಜ್ಜನಿಕೆಯ ನಿರೂಪಕಿಯನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಅಪರ್ಣಾ ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ "ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ" ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ.












Click it and Unblock the Notifications