ಆ ಶೂಟಿಂಗ್ ಜಾಗ ಭಯಾನಕ, ಮತ್ತೆ ಅಲ್ಲಿಗೆ ಹೋಗಲ್ಲ: ನಟಿ ಕಾಜೋಲ್‌ಗೆ ಕಾಡಿತ್ತಾ ದೆವ್ವ?
ಬಾಲಿವುಡ್ ನಟಿ ಕಾಜೋಲ್ (Kajol) ಶಾಕಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಭಾರತದಲ್ಲೇ ಸಿನಿಮಾ ಚಿತ್ರೀಕರಣಕ್ಕೆ ಹೆಸರುವಾಸಿಯಾಗಿರುವ ಸ್ಥಳವನ್ನು ಕಾಜೋಲ್ ಭಯಾನಕ ಪ್ರದೇಶ ಎಂದು ಕರೆದಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಜೋಲ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಈ ಮಾತು ಕೇಳಿ ಜನ ಫುಲ್ ಬೆಚ್ಚಿಬಿದ್ದಿದ್ದಾರೆ. ತಮ್ಮ ಸಿನಿಮಾ ಶೂಟಿಂಗ್ ವೇಳೆ ಆ ಜಾಗದಲ್ಲಿ ಭಯಾನಕ ಅನುಭವ ಆಗಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆ ಜಾಗ ಯಾವುದು ಎಂದೂ ಅವರು ಸಂದರ್ಶನದಲ್ಲಿ ನೇರವಾಗಿ ಹೇಳಿದ್ದಾರೆ.
ಚಿತ್ರೀಕರಣದ ಸಮಯದಲ್ಲಿ ನನಗೆ ನಕಾರಾತ್ಮಕ ಭಾವನೆಗಳು ಬಂದಿವೆ. ಅಲ್ಲಿನ ಕೆಲವು ಸ್ಥಳಗಳು ತುಂಬಾ ಭಯಾನಕವಾಗಿದ್ದವು, ನಾನು ಅಲ್ಲಿಂದ ಹೊರಟು ಮತ್ತೆ ಎಂದಿಗೂ ಬರಬಾರದೆಂದು ಬಯಸಿದ್ದೆ ಎಂದಿದ್ದಾರೆ. ತೆಲಂಗಾಣದ ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯನ್ನು (Ramoji Film City) ಅವರು "ವಿಶ್ವದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದು" ಎಂದು ನಟಿ ಕಾಜೋಲ್ ಕರೆದಿದ್ದು, ಸದ್ಯ ಇದು ವಿವಾದ ಹುಟ್ಟುಹಾಕಿದೆ.

ಜೂನ್ 20ರಂದು ಬಿಡುಗಡೆಯಾಗಲಿರುವ ಕಾಜೋಲ್ ನಟನೆಯ ಮುಂಬರುವ ಹಾರರ್ ಚಿತ್ರ "ಮಾ" ಪ್ರಚಾರದ ಸಮಯದಲ್ಲಿ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಹೇಳಿದ್ದು, ರಾಮೋಜಿ ಫಿಲ್ಮ್ ಸಿಟಿಯು ಆತಂಕಕಾರಿ ಅನುಭವಗಳಿಗೆ ಹೆಸರುವಾಸಿಯಾದ ಸ್ಥಳವಾಗಿದೆ ಎಂದು ಹೇಳಿದ್ದಾರೆ. ರಾತ್ರಿಯಲ್ಲಿ ನೀವು ಶಾಂತವಾಗಿ ಮಲಗುತ್ತೀರೋ ಅಥವಾ ಹೊರಗೆ ಹೋಗುತ್ತೀರೋ ಎಂದು ತಿಳಿಯದ ಸ್ಥಳಗಳಿವೆ. ಹೈದರಾಬಾದ್‌ನಲ್ಲಿರುವ ರಾಮೋಜಿ ರಾವ್ ಸ್ಟುಡಿಯೋ ಕೂಡ ಅಂತಹ ಒಂದು ಸ್ಥಳ. ಅದನ್ನು ಅತ್ಯಂತ ಭಯಾನಕ ಸ್ಥಳ ಎಂದು ಹೇಳಲಾಗುತ್ತದೆ. ನನಗೆ ಏನೂ ಆಗದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಕಾಜೋಲ್ ಹೇಳಿದ್ದಾರೆ.
ನಟಿಯ ಈ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ಸಿನಿಮಾರಂಗದವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟಿಯ ಹೇಳಿಕೆಗಳು ಜಾಗತಿಕವಾಗಿ ಗುರುತಿಸಲ್ಪಟ್ಟ ಶೂಟಿಂಗ್ ತಾಣವಾದ ರಾಮೋಜಿ ಫಿಲ್ಮ್ ಸಿಟಿಯ ಪ್ರತಿಷ್ಠೆಯನ್ನು ಹಾಳುಮಾಡಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಅತಿದೊಡ್ಡ ಸ್ಟುಡಿಯೋಗಳಲ್ಲಿ ಒಂದಾಗಿರುವ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಅಂತರರಾಷ್ಟ್ರೀಯ ಸಿನಿಮಾಗಳ ಚಿತ್ರೀಕರಣಕ್ಕೆ ಹೆಸರುವಾಸಿಯಾಗಿದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಿಜವಾಗಿಯೂ ದೆವ್ವ ಇದ್ದಿದ್ದರೆ, ಪ್ರತಿ ವರ್ಷ ಲಕ್ಷಾಂತರ ಜನರು ಅಲ್ಲಿಗೆ ಭೇಟಿ ನೀಡುತ್ತಿರಲಿಲ್ಲ. ಇದು ಚಲನಚಿತ್ರ ಪ್ರವಾಸೋದ್ಯಮದಲ್ಲಿ ಹೈದರಾಬಾದ್‌ನ ಹೆಮ್ಮೆಯಾಗಿದೆ ಎಂದು ಹಲವರು ಕಾಜೋಲ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ಕೆಲವರು ನಟಿಯ ಹೇಳಿಕೆಯನ್ನು ವೈಯಕ್ತಿಕ ಭಾವನೆ ಅಥವಾ ಮೂಢನಂಬಿಕೆ ಎಂದು ತಳ್ಳಿಹಾಕಿದ್ದಾರೆ. ಇನ್ನೂ ಕೆಲವರು ನಿಮ್ಮ ಹೇಳಿಕೆಗೆ ಸಾಕ್ಷಿ ಏನು ಪ್ರಶ್ನಿಸಿದ್ದಾರೆ.
ಕಾಜೋಲ್ ಈ ಹಿಂದೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಲವಾರು ಚಲನಚಿತ್ರಗಳ ಚಿತ್ರೀಕರಣ ಮಾಡಿದ್ದಾರೆ. ಕುತೂಹಲಕಾರಿಯಾಗಿ, ಅವರ ಪತಿ ಮತ್ತು ಜನಪ್ರಿಯ ನಟ ಅಜಯ್ ದೇವಗನ್ ಕೂಡ ತಮ್ಮ ಅನೇಕ ಚಲನಚಿತ್ರಗಳ ಚಿತ್ರೀಕರಣವನ್ನು ಇದೇ ಸ್ಟುಡಿಯೋದಲ್ಲಿ ಮುಂದುವರಿಸಿದ್ದಾರೆ. ಈಗ ದಿಢೀರನೆ ಆ ಸ್ಥಳವನ್ನು ಭಯಾನಕ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.












Click it and Unblock the Notifications