KD Movie: 'ಕೆಡಿ' ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಕಿಚ್ಚ ಸುದೀಪ್ ನಟನೆ? ಇಲ್ಲಿದೆ ಉತ್ತರ
ಸ್ಯಾಂಡಲ್‌ವುಡ್ ನಟ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ KD ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದೀಗ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮತ್ತೊಬ್ಬ ಸ್ಟಾರ್ ನಟ ನಟಿಸಲಿದ್ದಾರೆ ಎಂಬ ಸುದ್ದಿ ಮೊದಲಿನಿಂದಲೂ ಇತ್ತು. ನಟ ಕಿಚ್ಚ ಸುದೀಪ್ ಕೂಡ ಕೆಡಿ ಸಿನಿಮಾದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಕೊನೆಗೂ ಸ್ಪಷ್ಟನೆ ಸಿಕ್ಕಿದೆ.
ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಕೆಡಿ ಸಿನಿಮಾದ ಭಾಗವಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ಅವರೂ ನಟಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಸುದೀಪ್ ಅವರಿಗೆ ಈ ಪ್ರಶ್ನೆ ಕೇಳಿದಾಗಲೂ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಅದನ್ನ ನಾನು ಹೇಳುವುದಿಲ್ಲ. ಜೋಗಿ ಪ್ರೇಮ್ ಅವರೇ ಹೇಳ್ತಾರೆ ಎಂದು ಕುತೂಹಲ ಮೂಡಿಸಿದ್ದರು. ಹೀಗಾಗಿ ಸುದೀಪ್ ಕೆಡಿ ಸಿನಿಮಾದಲ್ಲಿದ್ದಾರೆ ಎನ್ನುವ ಸುದ್ದಿ ಜೀವಂತವಾಗಿದೆ.

ಈ ಸಿನಿಮಾದಲ್ಲಿ ಈಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವಿದೆ. ಇದರೊಂದಿಗೆ ಮತ್ತೊಬ್ಬ ನಟ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಕೆಡಿ ಸಿನಿಮಾದಲ್ಲಿ ಸುದೀಪ್ ಅವರನ್ನು ಪ್ರಮುಖ ಪಾತ್ರಕ್ಕೆ ಫೈನಲ್ ಮಾಡಲಾಗಿದೆಯಂತೆ. ಈ ಹಿಂದೆ ಶಿವಣ್ಣ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಆದರೆ ಕೆಡಿ ಚಿತ್ರತಂಡ ಸುದೀಪ್ ಅವರನ್ನೇ ಆ ಪ್ರಮುಖ ಪಾತ್ರಕ್ಕೆ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಪ್ರೇಮ್ ಟೀಮ್ ಸದ್ಯ ಒಂದು ಪ್ರಮುಖ ದೃಶ್ಯ ಚಿತ್ರೀಕರಿಸಲು ಸಜ್ಜಾಗುತ್ತಿದ್ದು, ಈ ಅಚ್ಚರಿಯ ವಿಚಾರ ಹೊರಬಿದ್ದಿದೆ. ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಅವರ ಪಾತ್ರದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದ್ದು, ಅವರ ಪಾತ್ರದ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ. ಈ ತಿಂಗಳ ಕೊನೆಯ ವೇಳೆಗೆ ಸುದೀಪ್ ಅವರು ಕೆಡಿ ಟೀಂ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ನಿಜವಾದರೆ ಧ್ರುವ ಹಾಗೂ ಕಿಚ್ಚನ ಅಭಿಮಾನಿಗಳು ಜಾತ್ರೆಯೇ ಮಾಡಲಿದ್ದಾರೆ.
ಕೆಡಿ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ವಿವಿಧ ರಾಜ್ಯಗಳಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಸೆಟ್ಟಾಗಲ್ಲ, ಹೋಗೆ ನಂಗೂ ನಿಂಗೂ ಸಾಂಗ್ ಧೂಳೆಬ್ಬಿಸುತ್ತಿದೆ. ಈ ಸಿನಿಮಾದ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಮತ್ತೊಂದು ವಿಶೇಷ ಸಾಂಗ್‌ನಲ್ಲಿ ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಸೊಂಟ ಬಳುಕಿಸಲಿದ್ದಾರೆ. ಒಟ್ಟಾರೆ ಹಲವು ಸಸ್ಪೆನ್ಸ್‌ಗಳಿಂದ ಕೆಡಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದೆ. ಪ್ರೇಮ್ ಅವರ ಡೈರೆಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ.












Click it and Unblock the Notifications