Bigg Boss: ಕಿಚ್ಚ ಸುದೀಪ್ ಬಿಗ್‌ಬಾಸ್‌ನಲ್ಲಿ ಇನ್ನೂ ಎಷ್ಟು ಸೀಸನ್ ನಿರೂಪಣೆ ಮಾಡಲಿದ್ದಾರೆ?
Bigg Boss Kannada 12: ಬಿಗ್‌ಬಾಸ್ ಕನ್ನಡ ಸೀಸನ್-12 ಇನ್ನೇನು ಕೆಲವೇ ತಿಂಗಳಲ್ಲಿ ಶುರುವಾಗಲಿದೆ. ಇಲ್ಲಿವರೆಗೆ ಬಿಗ್‌ಬಾಸ್ ಪ್ರೇಕ್ಷಕರಲ್ಲಿ ಎದುರಾಗಿದ್ದ ಗೊಂದಲಗಳಿಗೆ ತೆರೆಯೂ ಬಿದ್ದಿದೆ. ಮುಖ್ಯವಾಗಿ ಬಾರಿ ಬಿಗ್‌ಬಾಸ್ ನಡೆಸಿಕೊಡುವುದು ಯಾರು? ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಎಂದಿನಂತೆ ನಟ ಕಿಚ್ಚ ಸುದೀಪ್ ಅವರೇ ಈ ಸೀಸನ್ ನಿರೂಪಣೆ ಮಾಡಲಿದ್ದಾರೆ ಎಂದು ಅಧಿಕೃತ ಮಾಹಿತಿಯೂ ಸಿಕ್ಕಾಗಿದೆ. ಕಳೆದ ಸೀಸನ್‌ನಲ್ಲೇ ನಾನು ಮುಂದಿನ ಸೀಸನ್‌ನಲ್ಲಿ ಇರೋದಿಲ್ಲ ಎಂದು ಸುದೀಪ್ ಶಾಕ್ ನೀಡಿದ್ದರು. ಈಗ ಸುದೀಪ್ ಅವರೇ ಈ ಸೀಸನ್ ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ಅಲ್ಲದೆ ಸುದೀಪ್ ಇನ್ನೂ ಎಷ್ಟು ಸೀಸನ್‌ವರೆಗೆ ಬಿಗ್‌ಬಾಸ್ ನಡೆಸಿಕೊಡಲಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ.
ಕನ್ನಡ ಬಿಗ್‌ಬಾಸ್‌ನ ಕೇಂದ್ರಬಿಂದುವಾಗಿ ಸುದೀಪ್ ಅವರು ಮನೆಮಾತಾಗಿದ್ದಾರೆ. ಇಲ್ಲಿವರೆಗೆ ಅಷ್ಟೂ ಸೀಸನ್‌ಗಳನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಬಿಗ್‌ಬಾಸ್ ಅಂದ್ರೆ ಸುದೀಪ್, ಸುದೀಪ್ ಅಂದ್ರೆ ಬಿಗ್‌ಬಾಸ್ ಎನ್ನುತ್ತಿದ್ದರು ಪ್ರೇಕ್ಷಕರು. ಕೆಲವರು ಸುದೀಪ್ ನಿರೂಪಣೆ ಮಾಡ್ತಾರೆ ಅಂತ ಬಿಗ್‌ಬಾಸ್ ಕಾರ್ಯಕ್ರಮ ನೋಡುವವರೂ ಇದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರು ಬಿಗ್‌ಬಾಸ್‌ಗೆ ವಿದಾಯ ಘೋಷಿಸಿ ಶಾಕ್ ಕೊಟ್ಟಿದ್ದರು. ಸೀಸನ್-11ರ ವೇಳೆಯೇ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳುವುದಾಗಿ ತಿಳಿಸಿದ್ದರು. ಹಾಗಾಗಿ ಪ್ರೇಕ್ಷಕರು ಕೂಡ ಸುದೀಪ್ ಅವರಿಲ್ಲದೆ ಬಿಗ್‌ಬಾಸ್ ಊಹೆ ಮಾಡಿಕೊಳ್ಳುವುದೂ ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಸುದೀಪ್ ಜಾಗಕ್ಕೆ ಬೇರೆ ನಟ ಬರುತ್ತಾರೆ ಎಂದೂ ಹೇಳಲಾಗಿತ್ತು.

ಸುದೀಪ್ ಅವರು ತಮ್ಮ ಬ್ಯುಸಿಯಾದ ಕೆಲಸ, ಸಿನಿಮಾ ಸೇರಿದಂತೆ ಇನ್ನಿತರ ವೈಯಕ್ತಿಕ ಕಾರಣಗಳಿಂದ ಬಿಗ್‌ಬಾಸ್‌ನಿಂದ ಹೊರನಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದನ್ನು ಖುದ್ದು ಸುದೀಪ್ ಅವರೇ ಖಚಿತಪಡಿಸಿದ್ದರು. ಹಾಗಾಗಿ ಸುದೀಪ್ ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಕಾಣಿಸಿಕೊಳ್ಳಲ್ಲ ಎಂದೇ ಪ್ರೇಕ್ಷಕರು ಭಾವಿಸಿದ್ದರು. ಸುದೀಪ್ ಅವರ ಜಾಗಕ್ಕೆ ಮತ್ತೊಬ್ಬ ನಟ ಬರುತ್ತಾರೆ ಎಂದು ಹಲವರ ಹೆಸರು ಕೂಡ ಕೇಳಿಬಂದಿತ್ತು. ಆದರೆ ಎಲ್ಲರೂ ಈ ಬಾರಿ ಹೊಸ ನಿರೂಪಕ ಬಿಗ್‌ಬಾಸ್ ನಡೆಸಿಕೊಡ್ತಾರೆ ಎಂದೇ ಊಹಿಸಿದ್ದರು. ಆದರೆ ಬಿಗ್‌ಬಾಸ್ ಆಯೋಜಕರು ಹಾಗೂ ಕಲರ್ಸ್ ವಾಹಿನಿ ಈ ಎಲ್ಲ ಲೆಕ್ಕಾಚಾರ ತಲೆಕೆಳಗೆ ಮಾಡಿದೆ. ಎಂದಿನಂತೆ ಸುದೀಪ್ ಅವರೇ ಈ ಸೀಸನ್‌ನಲ್ಲಿ ಮಿಂಚಲಿದ್ದಾರೆ ಎಂದು ಸಿಹಿಸುದ್ದಿ ನೀಡಿದೆ.
ಮುಂದಿನ 4 ಸೀಸನ್‌ಗೂ ಸಹಿ ಹಾಕಿದ್ದೇನೆ
ಕಲರ್ಸ್ ಹಾಗೂ ಬಿಗ್‌ಬಾಸ್ ಆಯೋಜಕರು ಈ ಸೀಸನ್ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಮುಖ್ಯವಾಗಿ ಸುದೀಪ್ ಅವರು ಈ ಸೀಸನ್‌ನಲ್ಲಿ ಮಾತ್ರ ಇರುತ್ತಾರಾ? ಅಥವಾ ಮುಂದಿನ ಸೀಸನ್‌ಗಳಲ್ಲಿ ಏನಾದರೂ ಬದಲಾವಣೆಗಳು ಆಗಲಿವೆಯೇ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಅವರೇ ನೇರವಾಗಿ ಉತ್ತರ ಕೊಟ್ಟಿದ್ದಾರೆ. ʼಬಿಗ್‌ಬಾಸ್ ಕನ್ನಡದ ಮುಂದಿನ 4 ಸೀಸನ್‌ಗಳಿಗೆ ಸೈನ್ ಮಾಡಿದ್ದೇನೆʼ ಎಂದು ಸುದೀಪ್ ಅವರೇ ಖಚಿತಪಡಿಸಿದ್ದಾರೆ. ಹಾಗಾಗಿ ಬಿಗ್‌ಬಾಸ್ ಸೀಸನ್-15ರವರೆಗೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುವುದು ಪಕ್ಕಾ ಆಗಿದೆ. ಸುದೀಪ್ ಅವರು ಈ ನಿರೂಪಣೆಯಲ್ಲಿ ಮುಂದುವರಿಯಲು ಕೆಲ ಷರತ್ತುಗಳನ್ನು ಹಾಕಿದ್ದು, ಅದಕ್ಕೆಲ್ಲ ಕಾರ್ಯಕ್ರಮದ ಆಯೋಜಕರು ಒಪ್ಪಿದ್ದಾರೆ ಎಂದೂ ಹೇಳಲಾಗುತ್ತಿದೆ. ಹಾಗಾಗಿ ಮುಂದಿನ ಸೀಸನ್‌ಗಳಲ್ಲೂ ಕಿಚ್ಚ ಕಾಣಿಸಿಕೊಳ್ಳುವುದು ಕನ್ಫರ್ಮ್ ಆಗಿದೆ.












Click it and Unblock the Notifications