ಸಿನಿಮಾದಲ್ಲಿ ಮೊದಲು ಚಾನ್ಸ್ ಕೊಟ್ಟ ಡೈರೆಕ್ಟರ್‌ನ ಮರೆಯಬಾರದು: ರಶ್ಮಿಕಾಗೆ ನಟಿ ಹರ್ಷಿಕಾ ತಿರುಗೇಟು
ಕೊಡಗಿನಿಂದ ಚಿತ್ರರಂಗಕ್ಕೆ ಬಂದ ಮೊದಲ ನಟಿ ಎನ್ನುವ ಮೂಲಕ ರಶ್ಮಿಕಾ ಮಂದಣ್ಣ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಏಕೆಂದರೆ ಕೊಡಗಿನಿಂದ ಬಂದಿರುವ ಅನೇಕ ನಟಿಯರು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ರಶ್ಮಿಕಾ ಅವರ ಹೇಳಿಕೆ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಕೊಡಗಿನ ಮೂಲದವರಾದ ನಟಿ ಪ್ರೇಮಾ, ತನಿಷಾ ಕುಪ್ಪಂಡ ಸೇರಿದಂತೆ ಹಲವರು ರಶ್ಮಿಕಾ ಮಾತಿಗೆ ತಿರುಗೇಟು ನೀಡಿದ್ದಾರೆ. ಕೊಡಗಿನಿಂದಲೇ ಬಂದಿರುವ ನಟಿ ಹರ್ಷಿಕಾ ಪೂಣಚ್ಚ ಕೂಡ ರಶ್ಮಿಕಾಗೆ ಟಾಂಗ್ ನೀಡಿದ್ದಾರೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಕಾಲು ಯಾವಾಗಲೂ ನೆಲದ ಮೇಲೆಯೇ ಇರಬೇಕು ಎಂದಿದ್ದಾರೆ.
ನಾವು ಹುಟ್ಟಿರುವ ಜಾಗ, ನಮ್ಮ ಮೂಲವನ್ನ ಯಾವತ್ತೂ ಮರೆಯಬಾರದು ಎಂದು ತಿರುಗೇಟು ನೀಡಿದ್ದಾರೆ. ನಾವು ಹುಟ್ಟಿದ ಸ್ಥಳ, ನಾವು ಎಲ್ಲಿಂದ ಬಂದಿದ್ದು? ನಮ್ಮ ಮೊದಲನೇ ಡೈರೆಕ್ಟರ್ ಯಾರು? ಯಾರು ಮೊದಲಿಗೆ ಸಿನಿಮಾದಲ್ಲಿ ಚಾನ್ಸ್ ಕೊಟ್ಟರು? ಅನ್ನೋದನ್ನ ಮರೆಯಲೇಬಾರದು. ಅದು ಜೀವನದಲ್ಲಿ ಯಾವತ್ತಿಗೂ ತುಂಬಾ ಮುಖ್ಯವಾಗುತ್ತೆ ಎಂದು ರಶ್ಮಿಕಾಗೆ ಕಿವಿಮಾತು ಹೇಳಿದ್ದಾರೆ.

ಈ ಹಿಂದೆ ರಶ್ಮಿಕಾ ನಾನು ಹೈದರಾಬಾದ್‌ನವಳು ಎಂದಿದ್ದನ್ನು ಉಲ್ಲೇಖಿಸಿದ ಹರ್ಷಿಕಾ, ಅವರು ನಾನು ನೇರವಾಗಿ ಹೈದರಾಬಾದ್‌ನವಳು ಎನ್ನುವ ಬದಲು, ನಾನು ಹೈದರಾಬಾದ್‌ನಲ್ಲಿ ಈಗ ಮನೆ ಮಾಡಿಕೊಂಡಿದ್ದೀನಿ ಎಂದಿದ್ದರೆ ಅಷ್ಟು ವಿವಾದ ಸೃಷ್ಟಿಯಾಗುತ್ತಿರಲಿಲ್ಲ. ನಾವು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ, ಈಗ ಇರೋದು ಹೈದರಾಬಾದ್‌ನಲ್ಲಿ ಅನ್ನಬಹುದಿತ್ತು. ನನ್ನ ಪ್ರಕಾರ ಅವರು ಅದೇ ಅರ್ಥದಲ್ಲಿ ಹೇಳಿದರು ಅನಿಸುತ್ತೆ ಎಂದಿದ್ದಾರೆ.
ಇನ್ನು ರಶ್ಮಿಕಾ ಅವರ ವಿಚಾರದಲ್ಲಿ ನಾನು ಪೂರ್ತಿಯಾಗಿ ಮಾತನಾಡುವುದು ತಪ್ಪಾಗುತ್ತೆ. ಅವರು ನಿರ್ದೇಶಕರ ಬಗ್ಗೆ, ಪ್ರೊಡಕ್ಷನ್ ಬಗ್ಗೆ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದರು ಅನ್ನೋದು ನನಗೆ ಗೊತ್ತಿಲ್ಲ. ಆದರೆ, ನಮ್ಮ ಕೊಡವ ಸಮುದಾಯದ ಬಗ್ಗೆ ಅವರು ನೀಡಿರುವ ಹೇಳಿಕೆ ಬಗ್ಗೆ ಮಾತ್ರ ಪ್ರತಿಕ್ರಿಯೆ ಕೊಡಬಹುದು. ಬೇರೆ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹರ್ಷಿಕಾ ಹೇಳಿದ್ದಾರೆ.
ನಮ್ಮ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವ ನಟಿ ರಶ್ಮಿಕಾ. ಅವರ ಸಿನಿಮಾಗಳು ನೂರಾರು ಕೋಟಿ ಕಲೆಕ್ಷನ್ ಮಾಡಿವೆ. ಹೀಗಿರುವಾಗ ಎಲ್ಲೋ ಒಂದು ಕಡೆ ಆ ಹೇಳಿಕೆ ಕೊಟ್ಟಿರಬಹುದು. ನಾವು ಅವರನ್ನು ಈ ವಿಚಾರದಲ್ಲಿ ಕ್ಷಮಿಸೋಣ ಎಂದಿದ್ದಾರೆ. ನನ್ನ ಪ್ರಕಾರ ಕೊಡಗಿನಿಂದ ಬಂದು ಟಾಲಿವುಡ್, ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಮೊದಲ ನಟಿ ಎಂಬರ್ಥದಲ್ಲಿ ಆ ಹೇಳಿಕೆ ನೀಡಿರಬಹುದು. ನಾನು ನಂಬರ್ ಒನ್ ನಟಿ ಎಂದಿದ್ದರೂ ಅದು ತಪ್ಪಾಗುತ್ತಿರಲಿಲ್ಲ ಎಂದಿದ್ದಾರೆ.
ರಶ್ಮಿಕಾ ನಿಜಕ್ಕೂ ಹೆಮ್ಮೆ
ರಶ್ಮಿಕಾ ಮಾತಿನ ಅರ್ಥ ಬೇರೆಯೇ ಇರಬಹುದು. ಕೊಡಗಿನಿಂದ ನಾನೇ ಮೊದಲು ಎನ್ನುವುದು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಹಲವು ನಟಿಯರು ಕೊಡಗಿನಿಂದ ಬಂದಿದ್ದಾರೆ. ನಟಿ ಪ್ರೇಮಾ ಅವರಿದ್ದಾರೆ. ನಾವೆಲ್ಲ ಅವರನ್ನ ನೋಡಿಕೊಂಡು ಬಂದವರು, ಪ್ರೇಮಾ ಅವರು ಸಿನಿಮಾದಲ್ಲಿದ್ದರೆ ಆ ಸಿನಿಮಾ ಹಿಟ್ ಎನ್ನುವ ಮಾತಿದೆ. ರಶ್ಮಿಕಾ ಅವರು ಆ ಅರ್ಥದಲ್ಲಿ ಹೇಳಿರುವುದಿಲ್ಲ. ರಶ್ಮಿಕಾ ಅವರು ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯ ಪಕ್ಕ ರಶ್ಮಿಕಾ ಅವರ ಪೋಸ್ಟರ್ ಹಾಕಿದ್ರು. ನಮ್ಮ ಕರ್ನಾಟಕದಿಂದ ಹೋಗಿ ಬಾಲಿವುಡ್‌ನವರ ಜೊತೆ ನಿಲ್ಲುತ್ತಾರೆ ಅಂದರೆ ಅದು ಒಂದು ರೀತಿ ಹೆಮ್ಮೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications