ಹರಿಪ್ರಿಯಾ ಇನ್ನೂ ಯಂಗ್, ಮದುವೆ ನಂತರ ಸಿನಿಮಾದಿಂದ ದೂರವಾದ್ರು: ಕಾರಣ ತಿಳಿಸಿದ ನಟಿ ಭಾವನಾ
ನಟಿ ಭಾವನಾ ರಾಮಣ್ಣ ಅವರು ಇತ್ತೀಚೆಗೆ ಐವಿಎಫ್ ಚಿಕಿತ್ಸೆ ಮೂಲಕ ಮದುವೆಯಾಗದೆ ಗರ್ಭಿಣಿಯಾಗಿರುವ ವಿಚಾರವನ್ನು ಹೇಳಿಕೊಂಡಿದ್ದರು. ಸದ್ಯ ನಾನು ಆರು ತಿಂಗಳ ಗರ್ಭಿಣಿಯಾಗಿದ್ದು, ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದೇನೆ ಎಂದಿದ್ದರು. ಇದಕ್ಕೆ ಅವರು ಹಲವು ಕಾರಣಗಳನ್ನೂ ನೀಡಿದ್ದಾರೆ. ಮುಖ್ಯವಾಗಿ ಸಿನಿಮಾ ಕಲಾವಿದರ ಮದುವೆ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಮಾತನಾಡಿರುವ ಅವರು, ನಟಿ ಹರಿಪ್ರಿಯಾ ಅವರ ಬಗ್ಗೆ ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ಹರಿಪ್ರಿಯಾ ಅವರು ಮದುವೆಯಾದ ಬಳಿಕ ದೂರ ಸರಿದಿದ್ದಾರೆ ಎಂದಿರುವ ಭಾವನಾ, ಇದಕ್ಕೆ ಕಾರಣವೇನು ಎಂದೂ ಹೇಳಿದ್ದಾರೆ.
'ಸಿನಿಮಾ ಕಲಾವಿದರನ್ನು ಮದುವೆ ಮಾಡಿಕೊಳ್ಳುವುದು ಇಂದಿಗೂ ತುಂಬಾ ಕಷ್ಟಕರವಾದ ವಿಚಾರ. ಕಲಾವಿದರನ್ನ ಮದುವೆಯಾಗುವುದು ಸುಲಭವಾಗಿಲ್ಲ. ನಮಗೆ ವಿವಿಧ ಕ್ಷೇತ್ರದವರ ಪರಿಚಯ ಆಗುತ್ತೆ. ನಾವು ಯಶಸ್ಸು, ಸೋಲು ಎರಡನ್ನೂ ನೋಡಿರುತ್ತೀವಿ. ಹೆಚ್ಚು ಹಣ ನೋಡಿರುತ್ತೀವಿ. ಸಹಜವಾಗಿ ಒಬ್ಬ ಗಂಡಿಗೆ ಅಭದ್ರತೆ ಇದ್ದೇ ಇರುತ್ತೆ. ನಾವು ಕೆಲಸ ಮಾಡುವವರ ಜೊತೆಗೆ ನಮ್ಮ ಒಡನಾಟ ಕೂಡ ಹೆಚ್ಚಾಗಿರುತ್ತೆ. ಒಳ್ಳೆಯ ಬಾಂಧವ್ಯ ಇರುವುದರಿಂದ ಸಹಜವಾಗಿ ಅವರೊಂದಿಗೆ ಬೆರೆಯುತ್ತೇವೆ' ಎಂದಿದ್ದಾರೆ.

'ಆದರೆ ಗಂಡನಾಗಿ ಬರುವವನು ನಮ್ಮನ್ನ ಕಲಾವಿದರಾಗಿ ನೋಡುವುದಿಲ್ಲ. ಯಾಕೆಂದರೆ ಅವರಿಗೆ ನಾನು ಹೆಂಡತಿಯಾಗಿರುತ್ತೇನೆ. ಪತ್ನಿಯಾಗಿ ನಿರೀಕ್ಷೆಗಳು ಕೂಡ ಭಿನ್ನವಾಗಿರುತ್ತೆ. ಒಬ್ಬ ಕಲಾವಿದೆಯಾಗಿ ನನ್ನ ತೆರೆ ಮೇಲೆ ನೋಡುವುದಕ್ಕೂ ಮದುವೆ ಆದ ಮೇಲೆ ನೋಡುವುದಕ್ಕೂ ವ್ಯತ್ಯಾಸವಿದೆ. ನಾನು ಯಾವಾಗ ಹೆಂಡತಿ ಆಗ್ತೀನಿ, ಆಗ ಅವರ ನಿರೀಕ್ಷೆಗಳು ಕೂಡ ಹೆಚ್ಚಾಗಿರುತ್ತೆ. ಅದಕ್ಕೆಲ್ಲ ಸರಿಸಮನಾಗಿ ನಿಲ್ಲಬೇಕಂದ್ರೆ ಕಲಾವಿದೆಯಾಗಿ ನಿಜಕ್ಕೂ ಕಷ್ಟ ಎಂದಿದ್ದಾರೆ' ಭಾವನಾ.
'ಈಗ ನಟಿ ಹರಿಪ್ರಿಯಾ ಅವರ ಕಥೆಯೂ ಹಾಗೇ ಆಗಿದೆ. ಹರಿಪ್ರಿಯಾ ಇನ್ನೂ ಯಂಗ್, ಆದರೆ ಅವರು ಆಗಲೇ ಮೇನ್‌ಸ್ಟ್ರೀಮ್‌ನಿಂದ ದೂರವಾಗಿದ್ದಾರೆ. ಅವರು ಎಷ್ಟು ವರ್ಷಗಳಿಂದ ಸಿನಿಮಾರಂಗದಲ್ಲಿ ಕಷ್ಟಪಟ್ಟಿದ್ದರು? ಮದುವೆಯಾದ ಕೂಡಲೇ ನಾವು ಮುಖ್ಯಭೂಮಿಕೆಯಿಂದ ಹೊರಗೆ ಎಂದಾಗಿಬಿಡುತ್ತೆ. ಅಲ್ಲಿ ನಮ್ಮ ವ್ಯಕ್ತಿತ್ವ ಬದಲಾಗಿರುತ್ತೆ. ಕಲಾವಿದರು ಮದುವೆಯಾದ ಮೇಲೆ ಪರ್ಸನಾಲಿಟಿ ಬದಲಾಯಿಸಿಕೊಳ್ಳುಬೇಕು ಅಂದ್ರೆ ಸುಲಭದ ಮಾತಲ್ಲ. ಕಲಾವಿದರು ಮಾಡುವ ಪಾತ್ರಗಳ ಬಗ್ಗೆಯೂ ಜಡ್ಜ್‌ಮೆಂಟ್ ಮಾಡ್ತಾರೆ' ಎಂದು ಹೇಳಿದ್ದಾರೆ.
ವಿದೇಶದಲ್ಲಿ ನಮ್ಮಂತೆ ಇಲ್ಲ!
'ವಿದೇಶಗಳಲ್ಲಿ ಹುಡುಗಿ ಮನೆಗೆ ಹುಡುಗ ಬರ್ತಾನೆ. ಹುಡುಗ ಕೇವಲ ಒಂದು ಸೂಟ್‌ಕೇಸ್ ತಗೊಂಡು ಬರ್ತಾರೆ. ಸಂಬಂಧದಿಂದ ದೂರ ಹೋಗಬೇಕಂದ್ರೆ ಆ ಸೂಟ್‌ಕೇಸ್ ಮಾತ್ರವೇ ತೆಗೆದುಕೊಂಡು ಹೋಗಬೇಕು. ಆದ್ರೆ ನಮ್ಮಲ್ಲಿ ಹಾಗಲ್ಲ. ಇಲ್ಲಿ ಗಂಡನ ಮನೆಗೆ ಹೆಣ್ಣು ಹೋಗ್ತಾಳೆ. ಇಲ್ಲಿ ಈಗಾಗಲೇ ಒಂದು ಪ್ರಪಂಚ ಸೃಷ್ಟಿಸಿಕೊಂಡು ಸೆಟ್ ಆಗಿಬಿಟ್ಟಿದ್ದೀವಿ. ಪುರುಷರು ನಮಗೆ ಹೊಂದಿಕೊಂಡು ನಮ್ಮ ಮನೆಯಲ್ಲಿ ಇರುವವರು ಎಷ್ಟು ಮಂದಿ ಇದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಒಂದು ಹುಡುಗಿಯೇ ಒಂದು ಮನೆ ಮಾಡಿದ್ದೀನಿ, ಬನ್ನಿ ಇಲ್ಲೇ ಇರಿ ಅಂದ್ರೆ ಅದಕ್ಕೆ ಒಪ್ಪಿಕೊಳ್ಳುವವಂತಹ ಮನಸ್ಥಿತಿ ಅಷ್ಟಾಗಿಲ್ಲ. ಇದನ್ನೆಲ್ಲ ನೋಡಿದಾಗ ನನ್ನ ನಿರ್ಧಾರವೇ ಸರಿ ಅನಿಸುತ್ತೆ' ಎಂದು ಭಾವನಾ ಹೇಳಿದ್ದಾರೆ.












Click it and Unblock the Notifications