Hansika Motwani: ಕನ್ನಡದಲ್ಲಿ ನಟಿಸಿದ್ದ ಖ್ಯಾತ ನಟಿ ವಿರುದ್ಧ ಎಫ್‌ಐಆರ್ ದಾಖಲು
ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಹನ್ಸಿಕಾ ಮೋಟ್ವಾನಿ (Hansika Motwani) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಹನ್ಸಿಕಾ ಅವರ ಇಡೀ ಕುಟುಂಬದಲ್ಲಿ ಅಲ್ಲೋಲಕಲ್ಲೋಲವೇ ಆಗಿದೆ. ಹನ್ಸಿಕಾ ಸೇರಿದಂತೆ ಕುಟುಂಬಸ್ಥರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ಹನ್ಸಿಕಾ ವಿರುದ್ಧ ಇದೀಗ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಾಗಿರುವುದಾಗಿ ವರದಿಯಾಗಿದೆ.
ಹನ್ಸಿಕಾ ಅವರ ಅತ್ತಿಗೆಯೇ ಇಡೀ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದಾರೆ. ಹನ್ಸಿಕಾ ಸಹೋದರ ಪ್ರಶಾಂತ್ ಅವರ ಪತ್ನಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಅವರು ಈ ಆರೋಪ ಮಾಡಿದ್ದಾರೆ. ಹಾಗಾಗಿ ಹನ್ಸಿಕಾ ಸೇರಿದಂತೆ ಇಡೀ ಕುಟುಂಬದ ವಿರುದ್ಧವೂ ದೂರು ದಾಖಲಾಗಿದೆ.

ಹನ್ಸಿಕಾ ಹಾಗೂ ಅವರ ತಾಯಿಯಿಂದಾಗಿ ನನ್ನ ಹಾಗೂ ಗಂಡನ ನಡುವೆ ಪದೇ ಪದೇ ಜಗಳ ನಡೆಯುತ್ತಿವೆ. ಅವರು ನಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಮುಸ್ಕಾನ್ ದೂರಿದ್ದಾರೆ. ಮುಸ್ಕಾನ್ ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಮೇರೆಗೆ ಎಫ್‌ಐಆರ್ ಕೂಡ ದಾಖಲಾಗಿದೆ ಎನ್ನಲಾಗಿದೆ. ಈ ಎಫ್‌ಐಆರ್‌ನಲ್ಲಿ ಹನ್ಸಿಕಾ, ಆಕೆಯ ಸಹೋದರ ಪ್ರಶಾಂತ್ ಹಾಗೂ ತಾಯಿ ಮೋನಾ ಮೋಟ್ವಾನಿ ಅವರ ಹೆಸರು ಉಲ್ಲೇಖಿಸಲಾಗಿದೆ.
ಮೋಟ್ವಾನಿ ಕುಟುಂಬಸ್ಥರು ದುಬಾರಿ ಉಡುಗೊರೆಗಳು ಹಾಗೂ ಹಣದ ಬೇಡಿಕೆ ಇಟ್ಟಿದ್ದಾರೆ. ಆಸ್ತಿ-ಸಂಬಂಧಿತ ವಂಚನೆಯಲ್ಲೂ ಅವರು ಭಾಗಿಯಾಗಿದ್ದಾರೆ ಎಂದು ಮುಸ್ಕಾನ್ ಆರೋಪಿಸಿದ್ದಾರೆ. ಮುಸ್ಕಾನ್ ಹಾಗೂ ಪ್ರಶಾಂತ್ ಅವರು 2020ರಲ್ಲಿ ಮದುವೆಯಾಗಿದ್ದರು. ಆದರೆ ಎರಡು ವರ್ಷಗಳಿಂದ ಈ ಜೋಡಿ ಬೇರೆ ಬೇರೆಯಾಗಿ ವಾಸಿಸುತ್ತಿದೆ.

ಮೋಟ್ವಾನಿ ಕುಟುಂಬಸ್ಥರು ಹಲವು ದಿನಗಳಿಂದ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಆಸ್ತಿ ವಿಚಾರವಾಗಿ ವಂಚಿಸಿದ್ದಾರೆ. ನನ್ನ ಹಾಗೂ ನನ್ನ ಗಂಡನ ನಡುವೆ ಅವರು ಪದೇ ಪದೇ ಮಧ್ಯಪ್ರವೇಶಿಸುತ್ತಿದ್ದಾರೆ. ಅವರ ಮಾತು ಕೇಳಿಕೊಂಡು ನನ್ನ ಪತಿ ಕಿರುಕುಳ ಕೊಡುತ್ತಿದ್ದಾರೆ. ಈಗ ದುಬಾರಿ ಗಿಫ್ಟ್ ಕೊಡುವಂತೆ ನನಗೆ ಪೀಡಿಸುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇನ್ನು ಈ ಎಫ್‌ಐಆರ್ ದಾಖಲಾಗಿ ಹಲವು ದಿನಗಳಾಗಿದ್ದು, ಇದೀಗ ಬೆಳಕಿಗೆ ಬಂದಿದೆ. ನಟಿ ಹನ್ಸಿಕಾ ಮೋಟ್ವಾನಿ ಅವರ ಹೆಸರು ಕೂಡ ಎಫ್‌ಐಆರ್‌ನಲ್ಲಿ ಇರುವುದರಿಂದ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಖ್ಯಾತ ನಟಿಯಾಗಿರುವ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಅವರು ಥೋಡಿ ಖುಷಿ ಥೋಡೆ ಘಮ್, ಅದಾಲತ್, ಕ್ರೈಮ್ ಪೆಟ್ರೋಲ್, ಭಾರತ್ ಕಾ ವೀರ್ ಪುತ್ರ-ಮಹಾರಾಣಾ ಪ್ರತಾಪ್, ಏಜೆಂಟ್ ರಾಘವ್-ಕ್ರೈಂ ಬ್ರಾಂಚ್ ಸೇರಿಂದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಮಾತಾ ಕಿ ಚೌಕಿ ಎಂಬ ಸೀರಿಯಲ್ ಮೂಲಕ ಅವರು ಖ್ಯಾತಿ ಗಳಿಸಿದ್ದರು. ಬಾಲ ಕಲಾವಿದೆಯಾಗಿ ವೃತ್ತಿಜೀವನ ಪ್ರಾರಂಭಿಸಿದರು ಮತ್ತು ಟಿವಿ ಕಾರ್ಯಕ್ರಮಗಳ ಹೊರತಾಗಿ ಅವರು ಹಲವು ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕೂಡ ಮಿಂಚಿದ್ದರು. ಇದೀಗ ಅವರ ಇಡೀ ಕುಟುಂಬದ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.












Click it and Unblock the Notifications