Eko movie: 'ಎಕೊ' ಒಂದು ಪೈಸಾ ವಸೂಲ್ ಅನುಭವ: ರಾಜಾರಾಂ ತಲ್ಲೂರು ವಿಮರ್ಶೆ
ಕಳೆದ ನವೆಂಬರ್ 21ರಂದು ತೆರೆಕಂಡ ಮಲಯಾಳಂನ ಎಕೊ (Eko) ಸಿನಿಮಾ ಬಗ್ಗೆ ಹಿರಿಯ ಪತ್ರಕರ್ತ, ಲೇಖಕ ರಾಜಾರಾಂ ತಲ್ಲೂರು ಅವರ ವಿಮರ್ಶೆ ಇಲ್ಲಿದೆ. ಈ ಬಗ್ಗೆ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿರುವ ಅವರು, 'ಸಿನಿಮಾ ರೆಕಮಂಡೇಷನ್-ಎಕೊ, ಅಪರೂಪಕ್ಕೆ ಒಂದು ಒಳ್ಳೆಯ ಮಲೆಯಾಳಂ ಸಿನಿಮಾ ನೋಡಿದೆ. ತನ್ನ ವೇಗದಲ್ಲಾಗಲೀ, ಓಘದಲ್ಲಾಗಲೀ ಯಾವುದೇ ಕೋನದಿಂದಲೂ ಥ್ರಿಲ್ಲರ್ ಎಂದು ಕರೆಯಲಾಗದ ಈ ಸಿನಿಮಾ ಕೊನೆಯಲ್ಲಿ ಉಳಿಸುವ ಒಂದು ದಿಗ್ಭ್ರಾಂತಿ ಇದೆಯಲ್ಲ-ಅದು ಈ ಸಿನಿಮಾವನ್ನು ಬೇರೆ ಮಾತಿಲ್ಲದಂತೆ ಥ್ರಿಲ್ಲರ್ genreಕ್ಕೆ ಸೇರಿಸಿಬಿಡುತ್ತದೆʼ.
'ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಈ ಸಿನಿಮಾ Eko (2025) ನಿರ್ದೇಶಕರು ದಿನಜಿತ್ ಅಯ್ಯತ್ತಾನ್. ಮಲಯಾಳಂ ಗಂಧ ಇರುವವರು ಅದನ್ನು ಆ ಭಾಷೆಯಲ್ಲೇ ನೋಡಬೇಕೆಂಬುದು ನನ್ನ ಶಿಫಾರಸು. ನಾನು ಕನ್ನಡಕ್ಕೆ ಡಬ್ ಆದ ಆವೃತ್ತಿಯನ್ನು ನೋಡಿದೆ. ತೀರಾ ಕೆಟ್ಟ ಡಬ್ಬಿಂಗ್. ಒರಿಯಂಟೇಷನ್ ತಪ್ಪಿದವರು ಯಾರೋ ಮಂಗಳೂರು, ಉಡುಪಿ, ಮಡಿಕೇರಿ, ಬಂಟ್ವಾಳ ಎಂದೆಲ್ಲ ಕೇರಳದ ನಿರ್ದಿಷ್ಟ ಊರುಗಳನ್ನು ಈ ಸಿನಿಮಾದಲ್ಲಿ ದಿಕ್ಕೆಡಿಸಿಬಿಟ್ಟಿದ್ದಾರೆ, ಕನ್ನಡದ ಡಬ್ಬಿಂಗನ್ನೇ ನಂಬಿದರೆ ಸಿನಿಮಾ ಅರೆಬರೆ ಅನ್ನಿಸಿದರೂ ಅಚ್ಚರಿ ಇಲ್ಲ'.

"ಹೆಣ್ಣು ಮತ್ತು ನಾಯಿ ಇಬ್ಬರನ್ನೂ ಕಟ್ಟಿಹಾಕಿಟ್ಟು ರಕ್ಷಿಸಬೇಕು" ಎಂಬ ಪುರುಷ ಡಾಮಿನೆನ್ಸ್‌ನ ಅತಿರೇಕದ ಸೂತ್ರವಾಕ್ಯವೊಂದಕ್ಕೆ "ಕಟ್ಟಿಹಾಕಿಡುವುದು ರಕ್ಷಣೆಯೂ ಹೌದು-ಬಂಧನವೂ ಹೌದು; ಇದು ಹೆಣ್ಣಿಗೂ ಸತ್ಯ, ಗಂಡಿಗೂ ಸತ್ಯ" ಎಂಬ ಕೊರೊಲರಿಯನ್ನು ಕಟ್ಟಿಕೊಡುವ ಈ ಸಿನಿಮಾ, ನಿಧಾನ ಚಲನೆಯದು. ಉದ್ದಕ್ಕೂ ಫ್ಲ್ಯಾಷ್‌ಬ್ಯಾಕ್ ಮೂಲಕ ಕಥೆಯನ್ನು ಹೆಣೆಯಲಾಗಿದೆ'.
'ನಾಯಿಗಳ ಬ್ರೀಡರ್ ಒಬ್ಬರು ಮಲೇಷಿಯಾದಿಂದ ತಂದ ಅಪರೂಪದ ನಾಯಿತಳಿಯೊಂದು ಮತ್ತು ಅದರೊಂದಿಗೆ ಕರೆತಂದ ಮಹಿಳೆಯೊಬ್ಬರು ಈ ಕಥೆಯ ಕೇಂದ್ರಬಿಂದು. ಸಿನಿಮಾದ ಉದ್ದಕ್ಕೂ ಬರುವ ಬಹುತೇಕ ಎಲ್ಲ ಪಾತ್ರಗಳಿಗೂ ರಕ್ಷಣೆಯೇ ಬಂಧನ ಆಗಿ ಪರಿಣಮಿಸುವ ಈ ಕಥೆ ಮಲೇಷ್ಯಾದಿಂದ ಕೇರಳಕ್ಕೆ (ಕರ್ನಾಟಕ-ಕೇರಳ ಗಡೀಯ ಕಾಡುಭಾಗ) ಹರಿದುಬರುವ ಹಾದಿಯಲ್ಲಿ ಸಿಗುವ ರುದ್ರರಮಣೀಯ ಪರಿಸರಗಳ ಚೆಂದದ ಛಾಯಾಗ್ರಹಣ, ಅಪ್ಪಟ ನಟನೆ, ಬಿಗಿಯಾದ ಚಿತ್ರಕಥೆ-ನಿರ್ದೇಶನಗಳು ಒಟ್ಟಿನಲ್ಲಿ ಪೈಸಾ ವಸೂಲ್ ಅನುಭವ ನೀಡುತ್ತವೆ. ದಯವಿಟ್ಟು ನೋಡಿ' ಎಂದು ಬರೆದಿದ್ದಾರೆ.

ಎಕೊ ಸಿನಿಮಾ ಕುರಿತು
2025ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಮಿಸ್ಟರಿ ಥ್ರಿಲ್ಲರ್ ಸಿನಿಮಾ 'ಏಕೋ (Eko)' ಸಿನಿಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಭಾರೀ ಮೆಚ್ಚುಗೆ ಗಳಿಸಿದೆ. ದಿನ್ಜಿತ್ ಅಯ್ಯಥಾನ್ ನಿರ್ದೇಶನದಲ್ಲಿ, ಬಹುಲ್ ರಮೇಶ್ ಕಥೆ-ಚಿತ್ರಕಥೆ ಬರೆದು, ಛಾಯಾಗ್ರಹಣವೂ ಮಾಡಿರುವ ಈ ಚಿತ್ರವನ್ನು ಆರಾಧ್ಯಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಎಂಆರ್‌ಕೆ ಜಯರಾಮ್ ನಿರ್ಮಿಸಿದ್ದಾರೆ. ಇದು ಆರಾಧ್ಯಾ ಸ್ಟುಡಿಯೋಸ್‌ನ ಮೊದಲ ನಿರ್ಮಾಣದ ಸಿನಿಮಾ.
ಚಿತ್ರದಲ್ಲಿ ಸಂದೀಪ್ ಪ್ರದೀಪ್, ವಿನೀತ್, ನಾರಾಯಣ್, ಬಿನು ಪಪ್ಪು ಹಾಗೂ ಬಿಯಾನಾ ಮೊಮಿನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಏಪ್ರಿಲ್‌ನಲ್ಲಿ ಆರಂಭವಾದ ಚಿತ್ರೀಕರಣ, ಜೂನ್ ಮಧ್ಯಭಾಗದಲ್ಲಿ ಪೂರ್ಣಗೊಂಡಿದ್ದು, ಮುಖ್ಯವಾಗಿ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಶೂಟಿಂಗ್ ನಡೆಸಲಾಗಿದೆ. ಕೇವಲ ₹5 ಕೋಟಿ ಬಜೆಟ್‌ನಲ್ಲಿ ನಿರ್ಮಿತವಾದ ಈ ಚಿತ್ರವು ವಿಶ್ವದಾದ್ಯಂತ ₹50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.
'ಎಕೋ' ಚಿತ್ರವನ್ನು ಕೇರಳದಲ್ಲಿ ರಾಜಕೀಯ ದೃಷ್ಟಿಕೋನದಿಂದಲೂ ವಿಶ್ಲೇಷಿಸಲಾಗುತ್ತಿದೆ. ಕೆಲವು ವಿಮರ್ಶಕರು, ಚಿತ್ರದಲ್ಲಿನ ಕಥಾನಕವನ್ನು "ನಾಯಿಗಳನ್ನು ನಿಯಂತ್ರಿಸುವವರು ಅಂತಿಮವಾಗಿ ಅಧಿಕಾರ ಹಿಡಿಯುತ್ತಾರೆ" ಎಂಬ ರೂಪಕದ ಮೂಲಕ ಶಕ್ತಿಯ ಸಂರಚನೆಗಳ ಪ್ರತೀಕವಾಗಿ ಓದಿದ್ದಾರೆ. ಕಥಾಹಂದರ, ತಾಂತ್ರಿಕ ನೈಪುಣ್ಯ, ಅರ್ಥಗರ್ಭಿತ ರೂಪಕಗಳು ಮತ್ತು ವಾಣಿಜ್ಯ ಯಶಸ್ಸು ಈ ಎಲ್ಲ ಕಾರಣಗಳಿಂದ 'ಎಕೋ' 2025ರ ಪ್ರಮುಖ ಮಲಯಾಳಂ ಸಿನಿಮಾಗಳ ಪಟ್ಟಿಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ.












Click it and Unblock the Notifications