Drone Prathap: ಸರಿಗಮಪ ಮಂಜಮ್ಮ ಮನೆಗೆ ಭೇಟಿದ ಡ್ರೋನ್ ಪ್ರತಾಪ್: ಕುಟುಂಬಸ್ಥರಿಗೆ ಧನ ಸಹಾಯ
ವಿಶಿಷ್ಟ ಗಾಯನದ ಮೂಲಕ ಸರಿಗಮಪ ಕಾರ್ಯಕ್ರಮದಲ್ಲಿ ಜನಪ್ರಿಯತೆ ಗಳಿಸಿದ್ದ ಮಂಜಮ್ಮ ಕಳೆದ ಐದು ದಿನಗಳ ಹಿಂದೆ ವಿಧಿವಶರಾಗಿದ್ದಾರೆ. ಇತ್ತೀಚಿಗೆ ಮಂಜಮ್ಮ ಅವರಿಗೆ ಅನಾರೋಗ್ಯ ಹೆಚ್ಚಾಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಕುಟುಂಬಸ್ಥರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಂಜಮ್ಮ ಬೆಂಗಳೂರಿನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಮಧುಗಿರಿಯ ಅಂಧ ಸಹೋದರಿಯರಾದ ಮಂಜಮ್ಮ ಹಾಗೂ ರತ್ನಮ್ಮ ಜೋಡಿಯಾಗಿ ಹಾಡುತ್ತಿದ್ದರು. ಸರಿಗಮಪ ಕಾರ್ಯಕ್ರಮಕ್ಕೂ ಮೊದಲು ಕಡು ಬಡತನದಲ್ಲಿದ್ದ ಈ ಸೋದರಿಯರು ದೇವಸ್ಥಾನದಲ್ಲಿ ಹಾಡುಗಳನ್ನು ಹಾಡಿ ಹಣ ಸಂಗ್ರಹಿಸಿ ಬದುಕು ನಡೆಸುತ್ತಿದ್ದರು. ಮಂಜಮ್ಮ ಹಾಗೂ ರತ್ನಮ್ಮ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಹಾಡುಗಳು ಸರಿಗಮಪ ತಂಡಕ್ಕೆ ತಲುಪಿ ದೊಡ್ಡ ಅವಕಾಶ ನೀಡಲಾಗಿತ್ತು.

ಸರಿಗಮಪ ವೇದಿಕೆ ಬಂದ ಮಂಜಮ್ಮ ಹಾಗೂ ರತ್ನಮ್ಮ ವಿಶಿಷ್ಟ ಗಾಯನದ ಮೂಲಕ ಜನರಿಂದ ಮೆಚ್ಚುಗೆ ಪಡೆದಿದ್ದರು. ಸದ್ಯ ಮಂಜಮ್ಮ ಇಹಲೋಕ ತ್ಯಜಿಸಿದ್ದು, ಮನೆಗೆ ಆಧಾರವಾಗಿದ್ದ ಮಗಳನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ. ಮಂಜಮ್ಮ ಅವರ ಸಹೋದರಿ ಹಾಗೂ ತಂದೆ ಕಣ್ಣೀರು ಹಾಕುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು, ಅವರ ಮನೆ ಪರಿಸ್ಥಿತಿ ಅರಿತ ಸೆಲೆಬ್ರೆಟಿಯೊಬ್ಬರು ಅವರ ಮನೆಗೆ ಭೇಟಿ ನೀಡಿ ಧನ ಸಹಾಯ ಮಾಡಿದ್ದಾರೆ.
ಹೌದು ಬಿಗ್ ಬಾಸ್ ಸೀಜನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದಲ್ಲಿ ಇರುವ ಮಂಜಮ್ಮ ಮನೆಗೆ ಭೇಟಿ ನೀಡಿದ್ದಾರೆ. ಕುಟುಂಬಸ್ಥರ ಬಳಿ ಮಂಜಮ್ಮ ಅವರಿಗೆ ಏನಾಗಿತ್ತು ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಂಡ ಡ್ರೋನ್ ಪ್ರತಾಪ್ ಮಂಜಮ್ಮ ಫೋಟೋಗೆ ಪೂಜೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಮಂಜಮ್ಮ ಅವರ ಕುಟುಂಬಕ್ಕೆ ನೆರವಾಗಲಿ ಎಂದು ತಮ್ಮ ಕೈಲಾದಷ್ಟು ಹಣವನ್ನು ಸಹಾಯದ ರೂಪದಲ್ಲಿ ನೀಡಿದ್ದಾರೆ.
ಮಂಜಮ್ಮ ಮನೆಗೆ ಭೇಟಿ ನೀಡಿದ ವಿಡಿಯೋವನ್ನು ಡ್ರೋನ್ ಪ್ರತಾಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಗಾಯಕಿ ಮಂಜಮ್ಮ ಅವರ ಆತ್ಮಕ್ಕೆ ಈಗ ಸಂತೋಷವಾಗಿರಬಹುದು ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನಿಮ್ಮ ಒಳ್ಳೆಯ ಮನಸ್ಸಿಗೆ ಒಳ್ಳೆಯದೇ ಆಗುತ್ತದೆ ಎಂದು ಜನ ಹಾರೈಸಿದ್ದಾರೆ. ಅಲ್ಲದೇ ಪ್ರತಾಪ್ ಅವರೇ ಮಂಜಮ್ಮ ಅವರ ಕುಟುಂಬಸ್ಥರ ಅಕೌಂಟ್ ನಂಬರ್ ಅಥವಾ ಫೋನ್ ಪೇ, ಗೂಗಲ್ ಪೇ ನಂಬರ್ ಹಾಕಿದರೆ ನಾವು ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದು ನೆಟ್ಟಿಗರು ಕಮೆಂಟ್ ಹಾಕುತ್ತಿದ್ದಾರೆ.












Click it and Unblock the Notifications