ರೆಟ್ರೋ ಲುಕ್‌ನಲ್ಲಿ ಡಾಲಿ ಹೊಸ ಸಿನಿಮಾ, ಪೋಸ್ಟರ್ ಹೇಳಿದ ಕಥೆಯೇನು?
ನಟ ಡಾಲಿ ಧನಂಜಯ್ ಅವರು ವಿಭಿನ್ನ ಪಾತ್ರಗಳಿಗೆ ಸೈ ಎನಿಸಿಕೊಂಡವರು. ಪ್ರತಿ ಸಿನಿಮಾದಲ್ಲೂ ಅವರ ಪಾತ್ರಗಳು ಕೂಡ ಭಿನ್ನ, ಹೀರೋಗೂ ರೆಡಿ, ವಿಲನ್‌ಗೂ ರೆಡಿ ಅಂತಾ ಈಗಾಗಲೇ ಅವರು ತೋರಿಸಿಕೊಟ್ಟಿದ್ದಾರೆ. ಸದ್ಯ ಡಾಲಿ ಅವರ ಮುಂದಿನ ಸಿನಿಮಾದಲ್ಲಿ ಕೂಡ ಅವರ ಪಾತ್ರ ಸಖತ್ ವಿಭಿನ್ನವಾಗಿದೆ ಎಂದೇ ಹೇಳಬಹುದು. "666 ಆಪರೇಷನ್ ಡ್ರೀಮ್ ಥಿಯೇಟರ್" ಎಂಬ ಸಿನಿಮಾದಲ್ಲಿ ಡಾಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಡಾಲಿ ರೆಟ್ರೋ ಸ್ಟೈಲ್‌ನಲ್ಲಿ ಮಿಂಚಿದ್ದಾರೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳನ್ನು ನಿರ್ದೇಶಿಸಿರುವ ಹೇಮಂತ್ ರಾವ್ ಅವರೇ "666 ಆಪರೇಷನ್ ಡ್ರೀಮ್ ಥಿಯೇಟರ್" ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಡಾಲಿ ಧನಂಜಯ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಇದು ಒಂದು ಕ್ರೈಂ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಟಗರು ಬಳಿಕ ಈ ಜೋಡಿ ಮತ್ತೊಮ್ಮೆ ತೆರೆ ಮೇಲೆ ಬರಲಿದೆ. ಹಾಗಾಗಿ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿದೆ.

1970ರ ದಶಕದ ಸ್ಪೈ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಇದು ಒಂದು ಸ್ಟೈಲಿಷ್, ರೆಟ್ರೋ ಲುಕ್ ಹೊಂದಿರುವ ಸ್ಪೈ-ಆಕ್ಷನ್ ಕಥೆಯಾಗಿದ್ದು, ಗುರು-ಶಿಷ್ಯ ಸಂಬಂಧದ ಮೇಲೆ ಆಧಾರಿತವಾಗಿದೆ. ಚಿತ್ರದಲ್ಲಿ 'CID 999' ಸ್ಪೈ ಚಿತ್ರಗಳ ಪ್ರೇರಣೆಯನ್ನು ಕಾಣಬಹುದು. ಈ ಸಿನಿಮಾಗೆ ಚರಣ್ ರಾಜ್ ಸಂಗೀತವಿದೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಅದ್ವೈತ ಗುರುಮೂರ್ತಿ ನಿರ್ವಹಿಸಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಆಕ್ಷನ್ ಮತ್ತು ಕ್ರೈಂ ಥ್ರಿಲ್ಲರ್ ಅನುಭವ ನೀಡಲಿದೆ ಎಂಬ ನಿರೀಕ್ಷೆಯಿದೆ.
ವೈಶಾಖ್ ಜೆ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. "666 ಆಪರೇಷನ್ ಡ್ರೀಮ್ ಥಿಯೇಟರ್" ಒಂದು ರೆಟ್ರೋ ಸ್ಪೈ ಥ್ರಿಲ್ಲರ್ ಆಗಿದ್ದು, ಶಿವರಾಜ್ ಕುಮಾರ್ ಮತ್ತು ಧನಂಜಯ್ ಅವರ ಅಭಿನಯ, ಹೇಮಂತ್ ರಾವ್ ಅವರ ನಿರ್ದೇಶನ ಮತ್ತು ವಿಶಿಷ್ಟ ಶೈಲಿಯ ಕಥಾವಸ್ತುಗಳಿಂದ ತುಂಬಿ ನಿಂತಿದೆ. ಡಾಲಿಗೆ ಈಗ ತೆಲುಗು ಚಿತ್ರರಂಗದಲ್ಲೂ ಫುಲ್ ಡಿಮ್ಯಾಂಡ್ ಇರುವುದರಿಂದ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಹೊರತರಲಾಗುತ್ತಿದೆ.
ಅಣ್ಣಾವ್ರ ಆಪರೇಷನ್ ಡೈಮಂಡ್ ರಾಕೆಟ್ ಪ್ರೇರಣೆ?
ಈ ಹಿಂದೆ ಚಂದನವನದಲ್ಲಿ ಡಾ.ರಾಜ್‌ಕುಮಾರ್ ಅವರು ಆಪರೇಷನ್ ಡೈಮಂಡ್ ರಾಕೆಟ್ (Operation Diamond Racket) ಸಿನಿಮಾ ಮಾಡಿ ಮಿಂಚಿದ್ದರು. ಇದು ಇಂದಿಗೂ ಹಿಟ್ ಸಿನಿಮಾಗಳ ಸಾಲಲ್ಲಿದೆ. ಇದು ಕೂಡ ಆಗಿನ ಕಾಲಕ್ಕೆ ಸ್ಪೈ ಕಥೆ ಆಧಾರಿತ ಸಿನಿಮಾವಾಗಿತ್ತು. ಇದೀಗ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾಗೂ ಅಣ್ಣಾವ್ರ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾಗೂ ತುಸು ಸಾಮ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications