Kantara Chapter 1: ಸಿನಿಮಾ ನಿರ್ಮಿಸುವವರಿಗೆ ಕಾಂತಾರ ಪ್ರೇರಣೆಯ ಸಂಕೇತ: ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತಮ್ಮ ರಾಜಕೀಯ ಚಟುವಟಿಕೆಗಳ ನಡುವೆ ಬಿಡುವು ಮಾಡಿಕೊಂಡು ಇತ್ತೀಚೆಗೆ ತೆರೆಕಂಡಿರುವ ಕಾಂತಾರ ಚಾಪ್ಟರ್-1 ಸಿನಿಮಾ ವೀಕ್ಷಿಸಿದ್ದಾರೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾವನ್ನು ಕುಟುಂಬ ಸಮೇತ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನಿರ್ಮಿಸುವವರಿಗೆ ಕಾಂತಾರ ಚಾಪ್ಟರ್-1 ಪ್ರೇರಣೆಯ ಸಂಕೇತವಾಗಿದೆ ಎಂದು ವಿಜಯೇಂದ್ರ ಕೊಂಡಾಡಿದ್ದಾರೆ.
ವಿನೂತನ ಪ್ರಯೋಗದ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಆಕರ್ಷಣೆ ಹಾಗೂ ಮೆರಗು ತಂದುಕೊಟ್ಟ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್-1 ಸಿನಿಮಾವನ್ನು ಕುಟುಂಬ ಸಮೇತ ವೀಕ್ಷಿಸಲಾಯಿತು. ಭಾರತೀಯ ಚಿತ್ರರಂಗ ಹಾಗೂ ಪ್ರೇಕ್ಷಕರು ಈ ನೆಲದ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಆಚಾರ, ವಿಚಾರ ಹಾಗೂ ಐತಿಹಾಸಿಕ ಹಿನ್ನೆಲೆಯ ಚಲನಚಿತ್ರಗಳಿಗೆ ವಿಶೇಷ ಮನ್ನಣೆ ಹಾಗೂ ಆದ್ಯತೆ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.

ಈ ನಿಟ್ಟಿನಲ್ಲಿ ಕರಾವಳಿಯ ಸಾಂಪ್ರದಾಯಿಕ, ಧಾರ್ಮಿಕ ಶ್ರದ್ಧೆಯನ್ನು ಆಧರಿಸಿ ಕಾಂತಾರ ಹಾಗೂ ಕಾಂತಾರ ಭಾಗ-1 ಚಿತ್ರಗಳು ವಿಶ್ವದ ಗಮನ ಸೆಳೆದಿದ್ದು, ಕರುನಾಡಿನ ಚಿತ್ರರಂಗದ ಇತಿಹಾಸದಲ್ಲಿ ಒಂದು ದೊಡ್ಡ ಮೈಲಿಗಲ್ಲು. ಕನ್ನಡ ಚಿತ್ರಗಳು ಭವಿಷ್ಯದ ದಿನಗಳಲ್ಲಿ ನಮ್ಮ ಸಾಂಸ್ಕೃತಿಕ ನೆಲೆಗಟ್ಟನ್ನು ಆಧರಿಸಿ ನಿರ್ಮಾಣಗೊಂಡರೆ ಪ್ರೇಕ್ಷಕರು ಒಪ್ಪುತ್ತಾರೆ, ಅಪ್ಪುತ್ತಾರೆ ಎಂಬುದಕ್ಕೆ ಕಾಂತಾರ ಭಾಗ-1 ಸಾಕ್ಷಿ ಎಂದು ಹೊಗಳಿದ್ದಾರೆ.
ಇದು ಸಿನಿಮಾ ನಿರ್ಮಿಸುವವರಿಗೆ ಪ್ರೇರಣೆಯ ಸಂಕೇತವಾಗಿದೆ. ಚಿತ್ರತಂಡ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಪರಿಕಲ್ಪನೆಯ ರೂವಾರಿ ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ ಅಭಿನಂದನೆಗಳು. ಕನ್ನಡ ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ವೀಕ್ಷಿಸಲಿ, ಪ್ರೋತ್ಸಾಹಿಸಲಿ ಎಂದು ಹಾರೈಸಿದ್ದಾರೆ.

ಕೆಜಿಎಫ್ ದಾಖಲೆ ಉಡೀಸ್
ಕಾಂತಾರ ಚಾಪ್ಟರ್ 1 ಸಿನಿಮಾ ದೇಶೀಯವಾಗಿ ₹255.75 ಕೋಟಿ ನಿವ್ವಳ ಸಂಗ್ರಹ ಸೇರಿ ಭಾರತದಲ್ಲಿ 307 ಕೋಟಿ ರೂಪಾಯಿ ದಾಖಲೆಯ ಕಲೆಕ್ಷನ್ ಮಾಡಿದೆ. ವಿದೇಶಗಳಿಂದ ₹63 ಕೋಟಿ ಗಳಿಸಿರುವ ಈ ಚಿತ್ರವು ಬಿಡುಗಡೆಯಾದ ಮೊದಲ ಐದು ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 370 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರವು ಮೊದಲ ದಿನವೇ ₹20 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿತು.
ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ಸುಮಾರು ₹79 ಕೋಟಿ ಗಳಿಸಿದೆ. ಇದು ಕರ್ನಾಟಕದಲ್ಲಿ ಇದುವರೆಗಿನ ಅತಿ ದೊಡ್ಡ ಓಪನಿಂಗ್ ಎನ್ನಲಾಗಿದೆ. ಇದಕ್ಕೂ ಮೊದಲು, ಕೆಜಿಎಫ್ ಅಧ್ಯಾಯ-2 ನಾಲ್ಕು ದಿನಗಳಲ್ಲಿ ₹73.5 ಕೋಟಿ ಗಳಿಸಿತ್ತು. ಆದರೆ ಈಗ ಕಾಂತಾರ ರಾಜ್ಯದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಹಿಂದಿ ಭಾಷೆಯಲ್ಲಿ 5ನೇ ದಿನದಂದು 8.7 ಕೋಟಿ ಗಳಿಸಿದೆ. ಒಟ್ಟಾರೆಯಾಗಿ, ಈ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 83.7 ಕೋಟಿ ನಿವ್ವಳ ಗಳಿಸಿದೆ. ಜಿಎಸ್‌ಟಿಗೆ ಅನುಗುಣವಾಗಿ ಒಟ್ಟು ದೇಶೀಯ ಕಲೆಕ್ಷನ್ 98.76 ಕೋಟಿ ಎಂದು ವರದಿಯಾಗಿದೆ.












Click it and Unblock the Notifications