'ವಿಕ್ರಾಂತ್ ರೋಣ' ನಟಿ ಜಾಕ್ವೆಲಿನ್ ತಾಯಿ ನಿಧನ
ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದಲ್ಲಿ ರಕ್ಕಮ್ಮ ಪಾತ್ರದಲ್ಲಿ ಮಿಂಚಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮನೆಯಲ್ಲಿ ಶೋಕ ಆವರಿಸಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ತಾಯಿ ಕಿಮ್ ಫರ್ನಾಂಡಿಸ್ ಅವರು ಇಂದು ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾರ್ಶ್ವವಾಯುವಿಗೆ ತುತ್ತಾಗಿ ಕಿಮ್ ಅವರು ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಬೆಳಿಗ್ಗೆ ಅವರು ನಿಧನರಾಗಿದ್ದು ಜಾಕ್ವೆಲಿನ್ ಆಘಾತಕ್ಕೆ ಒಳಗಾಗಿದ್ದಾರೆ.
ವರದಿಗಳ ಪ್ರಕಾರ ಮಾರ್ಚ್‌ನಲ್ಲಿ ಹೃದಯಾಘಾತದಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಇಂದು ಅವರ ಪತಿ ಎಲ್ರಾಯ್ ಫರ್ನಾಂಡಿಸ್, ಹಿರಿಯ ಮಗಳು ಜೆರಾಲ್ಡೈನ್ ವಾಕರ್, ಪುತ್ರರಾದ ವಾರೆನ್ ಫರ್ನಾಂಡಿಸ್ ಮತ್ತು ರಯಾನ್ ಫರ್ನಾಂಡಿಸ್ ಮತ್ತು ಕಿರಿಯ ಮಗಳು ಜಾಕ್ವೆಲಿನ್ ಅವರನ್ನು ಕಿಮ್ ಅಗಲಿದ್ದಾರೆ. ಅವರ ತಾಯಿಗೆ ಹೃದಯಾಘಾತವಾದಾಗ ಜಾಕ್ವೆಲಿನ್ ಅವರು ಮುಂಬೈನಲ್ಲಿ ಇರಲಿಲ್ಲ. ಬಳಿಕ ಅವರು ನಗರಕ್ಕೆ ಹಿಂತಿರುಗಿ ಇಡೀ ದಿನ ತಾಯಿಯ ಪಕ್ಕದಲ್ಲಿದ್ದರು. ಇಂದು ಮುಂಜಾನೆ ಸಾವಿನ ವಿಚಾರ ತಿಳಿದು ಲೀಲಾವತಿ ಆಸ್ಪತ್ರೆಗೆ ಅವರ ಸಂಬಂಧಿಕರು ಆಗಮಿಸಿದ್ದಾರೆ.

ಜಾಕ್ವೆಲಿನ್ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಂತಾಪ ಸೂಚಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ಜಾಕ್ವೆಲಿನ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರ ತಾಯಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯಾಘಾತದ ನಂತರ ಕಿಮ್ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಜಾಕ್ವೆಲಿನ್ ನೋವಿನಲ್ಲಿರುವುದು ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದೆ.
ಅಲ್ಲದೆ ಕಿಮ್ ಅವರ ಸಾವಿನ ಬಗ್ಗೆ ನಟಿಯ ಟೀಂ ಖಚಿತಪಡಿಸಿದೆ. ನಟಿಯ ಪ್ರೀತಿಯ ತಾಯಿ ಕಿಮ್ ಫೆರ್ನಾಂಡಿಸ್ ಅವರ ನಿಧನಕ್ಕೆ ನಾವು ತೀವ್ರ ದುಃಖಿತರಾಗಿದ್ದೇವೆ. ಅವರು ನಮ್ಮನ್ನು ಬೇಗನೆ ಅಗಲಿದ್ದಾರೆ, ಮತ್ತು ಈ ಅತ್ಯಂತ ಕಷ್ಟಕರ ಸಮಯದಲ್ಲಿ ನಮ್ಮ ಹೃದಯಗಳು ಜಾಕ್ವೆಲಿನ್ ಮತ್ತು ಅವರ ಕುಟುಂಬಕ್ಕೆ ಮಿಡಿಯುತ್ತವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

2015ರಲ್ಲಿ ಕಾರ್ಯಕ್ರಮವೊಂದರಲ್ಲಿ ಜಾಕ್ವೆಲಿನ್ ತಮ್ಮ ತಾಯಿ ಬಗ್ಗೆ ಮಾತನಾಡಿದ್ದರು. ನನ್ನ ತಾಯಿ ಯಾವಾಗಲೂ ನನಗೆ ಬೆಂಬಲವಾಗಿ ನಿಂತಿದ್ದರು. ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಹೆತ್ತವರಿಲ್ಲದೆ ನಾನು ಇಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ಈ ಇಬ್ಬರು ವ್ಯಕ್ತಿಗಳು ತುಂಬಾ ಬಲಶಾಲಿಗಳಾಗಿದ್ದರು. ಅವರು ನನಗೆ ಸ್ಫೂರ್ತಿಯಾಗಿದ್ದರು, ಅದು ನನ್ನನ್ನು ಯಾವಾಗಲೂ ಮುಂದುವರಿಸಿಕೊಂಡು ಹೋಗುತ್ತಿದೆ ಎಂದಿದ್ದರು. ಅವಳು ಯಾವತ್ತೂ ನನ್ನ ಬಗ್ಗೆ, ನನ್ನ ಕೆಟ್ಟ ನಿರ್ಧಾರಗಳ ಮೇಲೂ ಸಹ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಅದಕ್ಕಾಗಿ ನಾನು ಅವಳನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನದೇ ಆದ ದಾರಿ ಕಂಡುಕೊಳ್ಳಲು ಸ್ವಾತಂತ್ರ್ಯ ನೀಡಿದ ತಾಯಿ ಮತ್ತು ತಂದೆಗೆ ಧನ್ಯವಾದಗಳು ಎಂದು ಹೇಳಿದ್ದರು. ಕಿಮ್ ಅವರ ಸಾವಿಗೆ ಬಾಲಿವುಡ್ ನಟ-ನಟಿಯರು ಕಂಬನಿ ಮಿಡಿದಿದ್ದಾರೆ.












Click it and Unblock the Notifications