Bigg Boss: ಉಗ್ರಂ ಮಂಜು ಗೆಲ್ಲಿಸಲು ಕಳ್ಳೋಟು: ಸಿಕ್ಕಿಬಿದ್ದದ್ದೇಗೆ?
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ಹಂತಕ್ಕೆ ಬಂದು ತಲುಪಿದೆ. ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯುತ್ತಿದ್ದು, ಫಿನಾಲೆಗೆ ಬಂದ ಆರು ಜನರ ಪೈಕಿ ಭವ್ಯ ಗೌಡ ಈಗಾಗಲೇ ಎಲಿಮಿನೇಟ್ ಆಗಿದ್ದು, ಮೋಕ್ಷಿತಾ ಪೈ, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ ಹಾಗೂ ರಜತ್ ಟಾಪ್ ಐದು ಸ್ಪರ್ಧಿಗಳಾಗಿ ಹೊರ ಹೊಮ್ಮಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯ ಒಳಗೂ ಹೊರಗೂ ಈ ಬಾರಿಯ ವಿನ್ನರ್ ಯಾರಾಗಬಹುದು ಎನ್ನುವ ಲೆಕ್ಕಚಾರ ಜೋರಾಗಿದೆ.
ಈಗಾಗಲೇ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಸ್ಪರ್ಧಿಗಳಿಗೆ ಜನರು ಮಾಡಿದ ವೋಟಿಂಗ್ ಪ್ರಮಾಣವನ್ನು ತೋರಿಸಲಾಗಿದೆ. ಗೆದ್ದ ಸ್ಪರ್ಧಿಗೆ ಎಷ್ಟು ವೋಟ್ ಬಂದಿದೆ ಎನ್ನುವ ವಿಚಾರ ಕೂಡ ಬಹಿರಂಗವಾಗಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯ ಆಟ ಎಷ್ಟು ಮುಖ್ಯವೋ ಜನರ ವೋಟ್ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹೀಗಾಗಿ ಸ್ಪರ್ಧಿಗಳು ಮನೆಯೊಳಗೆ ಆಟವಾಡುತ್ತಿದ್ದರೆ, ಇತ್ತ ಹೊರಗಡೆ ಅವರ ಆಪ್ತರು ಜನರಿಂದ ವೋಟ್ ಹಾಕಿಸಲು ಪ್ರಚಾರಗಳನ್ನು ಮಾಡುತ್ತಾರೆ.

ಈ ಬಾರಿ ಈ ಪ್ರಚಾರ ಬೃಹತ್ ಮಟ್ಟದಲ್ಲಿ ನಡೆದಿದ್ದು, ಉಗ್ರಂ ಮಂಜು ಗೆಲುವಿಗಾಗಿ ವಿಶೇಷ ಪ್ರಚಾರ ನಡೆದಿದೆ. ಅಲ್ಲದೇ ಮಂಜು ಅವರ ಗೆಲುವಿಗೆ ಶ್ರಮಪಟ್ಟಿರುವ ಈ ವಿಶೇಷ ತಂಡ ಕಳ್ಳೋಟು ಕೂಡ ಹಾಕಿಸಿದ್ದಾರಂತೆ. ಮಂಜು ಅವರ ಗೆಲುವಿಗಾಗಿ ಶ್ರಮಿಸಿರುವ ಈ ತಂಡವನ್ನು ಬಿಗ್ ಬಾಸ್ ಕನ್ನಡ ಸೀಜನ್ 11 ಗ್ರ್ಯಾಂಡ್ ಫಿನಾಲೆಯ ವೇದಿಕೆ ಮೇಲೆ ಪರಿಚಯಿಸಲಾಗಿದೆ. ಮಂಜು ಅವರು ಮದ್ಯ ಪ್ರಿಯರಾಗಿರುವ ಕಾರಣ ಮದ್ಯದ ಬಾಟಲಿಗಳು ಮಂಜುಗಾಗಿ ವಿಶೇಷ ಪ್ರಚಾರ ನಡೆಸಿವೆ ಎನ್ನುವ ತಮಾಷೆಯ ವಿಡಿಯೋವನ್ನು ವೇದಿಕೆ ಮೇಲೆ ಹಾಕಲಾಗಿದೆ.
ಈ ಹಿಂದೆ ಕೂಡ ಮಂಜುಗಾಗಿ ಈ ಮೂರು ಬಾಟಲಿಗಳು ವೇದಿಕೆ ಮೇಲೆ ಬಂದಿದ್ದವು. ಇದೀಗ ಮತ್ತೆ ವೇದಿಕೆ ಮೇಲೆ ಬಂದಿರುವ ಮೂರು ಬಾಟಲಿಗಳು, 'ಅಣ್ಣ ಅಂದರೆ ನಮ್ಮಣ್ಣ, ನಮಗಿರುವ ಒಬ್ಬರೇ ಅಣ್ಣ ಮಂಜಣ್ಣ. ನಮ್ಮನ್ನೆಲ್ಲಾ ಎಷ್ಟು ಮಿಸ್ ಮಾಡಿಕೊಳ್ಳುತ್ತೀದ್ದೀರಾ ಅಂತಾ ನೀವು ಸೊರಗಿ ಹೋಗಿರುವುದು ನೋಡಿದರೆ ಗೊತ್ತಾಗುತ್ತದೆ. ನಮ್ಮ ಇಡೀ ಸಮುದಾಯ ನಿಮಗೋಸ್ಕರ 90, 90 ವೋಟ್ ಹಾಕಿದ್ದೇವೆ ನಿಮಗೋಸ್ಕರ'.
'ನಿಮ್ಮನ್ನು ಗೆಲ್ಲಿಸದೇ ಹೋದರೆ ನಾಳೆಯಿಂದ ಯಾರಿಗೂ ಕುಡಿಯಲು ಸಿಗಲ್ಲ ಅಂತಾ ಜನರಿಗೆ ಹೆದರಿಸಿ ಬಿಟ್ಟಿದ್ದೇವೆ. ಎಲ್ಲರೂ ಒಳ್ಳೆ ವೋಟಿನಿಂದ ಗೆಲ್ಲಲು ಆಗುತ್ತದಾ? ಅದಕ್ಕೆ ಸ್ವಲ್ಪ ಕಳ್ಳೋಟು ಸಹ ಹಾಕಿಸಿದ್ದೇವೆ. ಅದರಿಂದ ಆದರೂ ಗೆದ್ದೇ ಗೆಲ್ಲುತ್ತೀಯಾ. ನೀವು ಗೆಲ್ಲಬೇಕು ಮಂಜಣ್ಣ, ಉಳಿದವರೆಲ್ಲಾ ಗೆಲ್ಲಿ ಮಂಜಣ್ಣಗೆ ಕಪ್ ಸಿಗಲಿ' ಎಂದು ಬಾಟಲಿಗಳು ಹೇಳಿರುವ ವಿಡಿಯೋ ನೋಡಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.












Click it and Unblock the Notifications