'ಅಂಕಲ್-ಆಂಟಿ ಲವ್ ಸ್ಟೋರಿ' ಟ್ರೋಲ್: ಬೇಜಾರಿಲ್ಲ ಎಂದ ಉಗ್ರಂ ಮಂಜು
ಬಿಗ್ ಬಾಸ್ ಕನ್ನಡ ಸೀಜನ್ 11ರ ಆರಂಭದಿಂದ ಗೌತಮಿ ಜಾದವ್ ಮತ್ತು ಉಗ್ರಂ ಮಂಜು ಕೊನೆಯ ದಿನದ ವರೆಗೂ ಉತ್ತಮ ಸ್ನೇಹಿತರಾಗಿದ್ದರು. ಇವರಿಬ್ಬರ ಸ್ನೇಹದ ಬಗ್ಗೆ ಹೊರಗಡೆ ಕೆಲವು ನೆಗೆಟಿವ್ ಟ್ರೋಲ್‌ಗಳು ಹರಿದಾಡುತ್ತಿದ್ದವು. ಅದರಲ್ಲೂ ಅಂಕಲ್-ಆಂಟಿ ಲವ್ ಸ್ಟೋರಿ ಎನ್ನುವ ಟ್ರೋಲ್ ಸಖತ್ ವೈರಲ್ ಆಗಿತ್ತು. ಈ ಬಗ್ಗೆ ಇದೀಗ ಸ್ವತಃ ಉಗ್ರಂ ಮಂಜು ಮಾತನಾಡಿದ್ದಾರೆ.
'ಈ ದೇಶದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ಯಾರು ಏನೂ ಬೇಕಾದರೂ ಮಾತನಾಡಬಹುದು. ಅವರು ಏನು ನೋಡಿರುತ್ತಾರೋ ಅದನ್ನು ಮಾತನಾಡಬಹುದು. ಇಪ್ಪತ್ನಾಲ್ಕು ಗಂಟೆಗಳ ಕಾಲ ಅಲ್ಲಿ ಏನು ನಡೆದಿರುವುತ್ತದೆಯೋ ಗೊತ್ತಿಲ್ಲ. ಒಂದೂವರೆ ಗಂಟೆ ಹೇಗೆ ತೋರಿಸುತ್ತಾರೋ, ಅದು ಕೂಡ ಗೊತ್ತಿಲ್ಲ. ಆದರೆ ಆಂಟಿ-ಅಂಕಲ್ ಲವ್ ಸ್ಟೋರಿ ಅಂತಾ ಹೇಳಲು ನಾವೇನು ಆ ರೀತಿ ಮಾತನಾಡಿಲ್ಲ. ಆ ರೀತಿ ನಡೆದುಕೊಂಡಿಲ್ಲ' ಎಂದರು.

'ಮದುವೆ ಆಗಿರುವ ಹೆಣ್ಣು ಮಗು ಅವರು, ನಾವಿಬ್ಬರು ಸ್ನೇಹಿತರಾದರೆ ಇದ್ದರೆ ಆ ರೀತಿನಾ? ಯಾಕೆಂದರೆ ಒಬ್ಬ ಹುಡುಗ ಹುಡುಗ ಆ ರೀತಿ ಗೆಳೆಯರಾದರೆ ಏನೂ ಸಮಸ್ಯೆ ಇರುವುದಿಲ್ಲ. ನಾನು ರಂಗಭೂಮಿ ಕಲಾವಿದನಾಗಿ ಬೆಳೆದಿರುವುದರಿಂದ, ನನಗೆ ಮೂರು ಜನ ತಂಗಿಯಂದಿರು ಇರುವುದರಿಂದ, ನಮ್ಮ ಅಕ್ಕಂದಿರು, ದೊಡ್ಡಪ್ಪನ ಮಕ್ಕಳು, ಹೀಗೆ ನಾನು ಹೆಣ್ಣು ಮಕ್ಕಳ ಜೊತೆ ಹೆಚ್ಚಾಗಿ ಬೆಳೆದು ಬಂದಿರುವುದು. ಹೀಗಾಗಿ ಈ ರೀತಿ ಕಮೆಂಟ್‌ಗಳಿಗೆ ಉತ್ತರ ಕೊಡಬೇಕು ಅಂತಾ ಅನಿಸಲಿಲ್ಲ ನನಗೆ' ಎಂದು ಉಗ್ರಂ ಮಂಜು ನೇರವಾಗಿ ಹೇಳಿದ್ದಾರೆ.
'ಟ್ರೋಲ್ ಪೇಜ್‌ಗಳಿಂದ ಒಂದಿಷ್ಟು ಹಣ ಬರುತ್ತದೆ. ಅದರಿಂದ ಅವರು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಟ್ರೋಲ್ ಅವರು ನಮ್ಮ ಬಗ್ಗೆ ಒಳ್ಳೆಯದು ಕೂಡ ಮಾಡಿದ್ದಾರೆ. ಅಂದರೆ ನಮ್ಮ ಟಾಸ್ಕ್‌ಗಳದ್ದು, ನಮ್ಮ ಸಿನಿಮಾಗಳ ಪ್ರಮೋಷನ್‌ಗಳದ್ದು, ಹೀಗೆ ತುಂಬಾ ಒಳ್ಳೆಯದನ್ನು ಕೂಡ ಮಾಡಿದ್ದಾರೆ. ಹೀಗಿರುವಾಗ ಇದು ಯಾವುದೋ ಒಂದು ಹೇಳಿಕೆಗೆ ನಾನು ಕಮೆಂಟ್ ಮಾಡುವುದು ಸರಿಯಲ್ಲ' ಎಂದರು.

'ಇಂತಹ ಟ್ರೋಲ್‌ಗಳ ಬಗ್ಗೆ ಪಾಸಿಟಿವ್ ನೆಗೆಟಿವ್ ಅಂತಾ ಏನಿಲ್ಲ. ಅವರಿಗೆ ಏನು ಅನಿಸಿದೆಯೋ ಅವರು ಟ್ರೋಲ್ ಮಾಡಿದ್ದಾರೆ. ಆದರೆ ನನಗೆ ಗೊತ್ತು ನನ್ನ ಕುಟುಂಬಕ್ಕೆ ಗೊತ್ತು. ಅವರಿಗೆ ಗೊತ್ತು ಅವರ ಕುಟುಂಬಕ್ಕೆ ಗೊತ್ತು ಏನು ಅಂತಾ. ನಾವು ನಮ್ಮ ತಂದೆ-ತಾಯಿಗೆ, ನಮ್ಮ ಜೊತೆ ಹುಟ್ಟಿದವರಿಗೆ ಉತ್ತರ ಕೊಡಬೇಕಾಗುತ್ತದೆ. ಅವರಿಗೆ ಇದು ಸಮಸ್ಯೆ ಇಲ್ಲ ಅಂದ ಮೇಲೆ ನಾನು ಅಷ್ಟೊಂದು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಅವರ ಕುಟುಂಬಕ್ಕೂ ಬೇಜಾರಿಲ್ಲ. ನಮಗೂ ಬೇಜಾರಿಲ್ಲ. ನಮ್ಮ ಮಧ್ಯೆ ಒಳ್ಳೆಯ ಸ್ನೇಹ ಇತ್ತು' ಎಂದು ಉಗ್ರಂ ಮಂಜು ಆರ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications