ಲಕ್ ಬದಲಿಸಿದ ಬಿಗ್ ಬಾಸ್: ಚಿತ್ರರಂಗಕ್ಕೆ ಕಾಲಿಟ್ಟ ಡ್ರೋನ್ ಪ್ರತಾಪ್
ಬಿಗ್ ಬಾಸ್ ಕನ್ನಡ ಸೀಜನ್ 10ರ ಸ್ಪರ್ಧಿಯಾಗಿ ಮನೋರಂಜನಾ ಲೋಕಕ್ಕೆ ಕಾಲಿಟ್ಟ ಡ್ರೋನ್ ಪ್ರತಾಪ್ ಅದೃಷ್ಟವೇ ಬದಲಾಗಿ ಹೋಗಿದೆ. ಬಿಗ್ ಬಾಸ್‌ಗೆ ಬಂದ ಬಳಿಕ ಡ್ರೋನ್ ಪ್ರತಾಪ್ ಜೀವನ ನಿಜಕ್ಕೂ ಬದಲಾಗಿದೆ. ದೂರವಾಗಿದ್ದ ತಂದೆ-ತಾಯಿ ಈಗ ಜೊತೆಯಾಗಿದ್ದಾರೆ. ಅಲ್ಲದೇ ಡ್ರೋನ್ ಪ್ರತಾಪ್ ಮೇಲಿದ್ದ ಜನರ ಅಭಿಪ್ರಾಯವೂ ಕೂಡ ಬದಲಾಗಿದ್ದು, ಡ್ರೋನ್ ಪ್ರತಾಪ್ ಸಾಧನೆಗಳನ್ನು ಸಂಭ್ರಮಿಸುವ ಅಭಿಮಾನಿಗಳು ಕೂಡ ಇದ್ದಾರೆ.
ಡ್ರೋನ್ ಪ್ರತಾಪ್ ಬಿಗ್ ಬಾಸ್ ಕನ್ನಡ ಸೀಜನ್ 10ರ ಫೈನಲಿಸ್ಟ್ ಕೂಡ ಆಗಿದ್ದು, ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಆ ಬಳಿಕ ಕಿರುತೆರೆಯ ಕೆಲವು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಪ್ರತಾಪ್ ಇದೀಗ ಮನೋರಂಜನಾ ಲೋಕದ ಸಮುದ್ರಕ್ಕೆ ಜಿಗಿದಿದ್ದಾರೆ. ಹೌದು, ಬಿಗ್ ಬಾಸ್ ಕನ್ನಡ ಸೀಜನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಹೆಸರಿಡದ ಹೊಸ ಚಿತ್ರವೊಂದಕ್ಕೆ ನಾಯಕ ನಟನಾಗಿ ನಟಿಸಲು ಒಪ್ಪಿಕೊಂಡಿರೋದಾಗಿ ಡ್ರೋನ್ ಪ್ರತಾಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವಾದ ವಿಡಿಯೋ ಮೂಲಕ ಈ ಖುಷಿಯ ವಿಚಾರವನ್ನು ಡ್ರೋನ್ ಪ್ರತಾಪ್ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ಸದ್ಯ ಡ್ರೋನ್ ಪ್ರತಾಪ್ ಶೇರ್ ಮಾಡಿರುವ ವಿಡಿಯೋದಲ್ಲಿ ಕಾರಿನಿಂದ ಇಳಿದ ಪ್ರತಾಪ್ ನೇರವಾಗಿ ಮಂಡ್ಯದ ಕೆ.ಆರ್ ಪೇಟೆಯ ಹುನುಮಾನ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಒಂದು ಸಿನಿಮಾಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು. ನನ್ನ ಒಂದು ಬ್ಯುಸಿನೆಸ್ ಜೊತೆಗೆ ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದೇನೆ. ಶ್ರೀ ಆಂಜನೇಯಸ್ವಾಮಿ ಆಶೀರ್ವಾದದೊಂದಿಗೆ ಎಂದು ವೇದಿಕೆ ಮೇಲೆ ಹೇಳಿದ್ದಾರೆ.

ತಮ್ಮ ಮೊದಲ ಸಿನಿಮಾಗೆ ಸಹಿ ಮಾಡಿರುವ ಫೋಟೋವನ್ನು ಕೂಡ ಡ್ರೋನ್ ಪ್ರತಾಪ್ ಶೇರ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಸಿನಿಮಾ ಯಾವುದು..? ಚಿತ್ರದ ನಿರ್ದೇಶಕರು ಯಾರು..? ನಿರ್ಮಾಪಕರು ಯಾರು..? ಚಿತ್ರದ ಶೀರ್ಷಿಕೆ ಏನು..? ನಾಯಕಿ ಯಾರು..? ಹಾಗೂ ಯಾರ್ಯಾರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಹೆಚ್ಚಾಗಿದೆ. ಈ ಎಲ್ಲಾ ಪ್ರಶ್ನೆಗೆ ಶೀಘ್ರದಲ್ಲೇ ಡ್ರೋನ್ ಪ್ರತಾಪ್ ಹಾಗೂ ಅವರ ಚಿತ್ರತಂಡ ಸದ್ಯದಲ್ಲೇ ಉತ್ತರ ನೀಡುವ ಸಾಧ್ಯತೆ ಇದೆ. ಅದೇನೆ ಇರಲಿ ಕಿರುತೆರೆಯಿಂದ ಇಂದು ಬೆಳ್ಳಿತೆರೆಯತ್ತ ಹೆಜ್ಜೆ ಹಾಕುತ್ತಿರುವ ಡ್ರೋನ್ ಪ್ರತಾಪ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.












Click it and Unblock the Notifications