ಅಪ್ಪ-ಅಮ್ಮ ಬಂದರೂ ಬಾಗಿಲು ತೆರೆಯದ ಬಿಗ್ ಬಾಸ್: ಡ್ರೋನ್ ಪ್ರತಾಪ್ ಕಂಡು ಪ್ರೇಕ್ಷಕರು ಭಾವುಕ
ಬಿಗ್ ಬಾಸ್ ಕನ್ನಡ ಸೀಜನ್ 10 ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಫಿನಾಲೆ ವಾರಕ್ಕೆ ದಿನಗಣನೆ ಆರಂಭವಾಗಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಘಳಿಗೆಗೆ ಸಾಕ್ಷಿಯಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಜನ್ 10 ಇಂದು( ಡಿಸೆಂಬರ್ 28) ರ ಸಂಚಿಕೆಯಲ್ಲಿ ಮತ್ತೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಗೆಲುವಿನ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಡಿಕೊಂಡು ಬರುತ್ತಿದ್ದಾರೆ. ತಮ್ಮ ಬುದ್ಧಿವಂತಿಕೆ, ಮುಗ್ಧತೆಯಿಂದ ಈಗಾಗಲೇ ಪ್ರೇಕ್ಷಕರ ಮನಸು ಗೆದ್ದಿರುವ ಡ್ರೋನ್ ಪ್ರತಾಪ್, ಬಿಗ್ ಬಾಸ್ ಕನ್ನಡ ಸೀಜನ್ 10ರಲ್ಲಿ ಗೆಲುವು ಸಾಧಿಸಬೇಕು ಎನ್ನುವುದು ಬಹುತೇಕ ಪ್ರೇಕ್ಷಕರ ಬಯಕೆಯಾಗಿದೆ. ಇನ್ನೇನು ಫಿನಾಲೆ ವಾರ ಸಮೀಪಿಸುತ್ತಿದ್ದು ಆಟ ದಿನದಿಂದ ದಿನಕ್ಕೆ ಕುತೂಹಲಕಾರಿಯಾಗುತ್ತಿದೆ.

ಈ ವಾರ ಬಿಗ್ ಬಾಸ್ ಮನೆ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದು, ಸ್ಪರ್ಧಿಗಳ ಮನೆಯವರು ಬಂದು ಅವರನ್ನು ಭೇಟಿ ಮಾಡುತ್ತಿದ್ದಾರೆ. ತುಕಾಲಿ ಸಂತೋಷ್ ಪತ್ನಿ, ಕಾರ್ತಿಕ್ ತಾಯಿ, ನಮೃತಾ ತಾಯಿ, ಸಂಗೀತಾ ಅವರ ಸಂಪೂರ್ಣ ಕುಟುಂಬ ಸೇರಿದಂತೆ ಸ್ಪರ್ಧಿಗಳ ಕುಟುಂಬಸ್ಥರು ದೊಡ್ಮನೆಗೆ ಬಂದು ಹೋಗುತ್ತಿದ್ದಾರೆ. ಈ ವಾರದಲ್ಲಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದದ್ದು ಮಾತ್ರ ಡ್ರೋನ್ ಪ್ರತಾಪ್ ಕುಟುಂಬಸ್ಥರ ಆಗಮನಕ್ಕಾಗಿ.
ಡ್ರೋನ್ ಪ್ರತಾಪ್ ವೈಯಕ್ತಿಕ ಕಾರಣಗಳಿಂದ ಸುಮಾರು ಮೂರು ವರ್ಷಗಳಿಂದ ತಮ್ಮ ಕುಟುಂಬಸ್ಥರಿಂದ ದೂರ ಇರುವುದಾಗಿ ಬಿಗ್ ಬಾಸ್‌ನಲ್ಲಿ ಹೇಳಿಕೊಂಡಿದ್ದರು. ಪ್ರತಾಪ್ ಬಿಗ್ ಬಾಸ್ ಮನೆಗೆ ಬರುವ ಸಂದರ್ಭದಲ್ಲಿ ಸಹ ಅವರ ಕುಟುಂಬಸ್ಥರು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಆಗಾಗ ತಮ್ಮ ತಂದೆ-ತಾಯಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದರು.

ಈ ವಾರ ಇತರ ಎಲ್ಲಾ ಸ್ಫರ್ಧಿಗಳ ಕುಟುಂಬಸ್ಥರು ಬಂದರೂ ಸಹ ಪ್ರತಾಪ್ ಮನೆಯವರು ಬರುವುದು ವಿಳಂಬವಾಗಿತ್ತು. ಪ್ರತಾಪ್‌ನ ನೋಡಲು ಮನೆಯವರು ಬರುತ್ತಾರಾ..? ಇಲ್ಲವೋ..? ಎನ್ನುವ ಕುತೂಹಲದಲ್ಲಿದ್ದ ಪ್ರೇಕ್ಷಕರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಪ್ರತಾಪ್ ತಂದೆ ತಾಯಿ ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆ ಬರಲಿದ್ದಾರೆ.
ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಪ್ರತಾಪ್ ಮನೆಯವರಿಗಾಗಿ ಕಾಯುತ್ತಿರುತ್ತಾರೆ, ಸಂಗೀತಾ ಹಾಗೂ ನಮ್ರತಾ ಆತನನ್ನು ಸಮಾಧಾನ ಮಾಡುತ್ತಾರೆ. ಈ ವೇಳೆ ಪ್ರತಾಪ್ ಅವರ ತಾಯಿ ಧ್ವನಿ ಕೇಳುತ್ತದೆ. ಪ್ರತಾಪ್ ಅವ್ವಾ ಎಂದು ಮನೆಯಲ್ಲಾ ಹುಡುಕಾಡುತ್ತಾರೆ.

ಅಷ್ಟರಲ್ಲಿ ಪ್ರತಾಪ್ ತಂದೆ-ತಾಯಿ ಮನೆಯ ಮುಖ್ಯದ್ವಾರದಿಂದ ಪ್ರವೇಶಿಸುತ್ತಾರೆ. ತಂದೆ-ತಾಯಿಯನ್ನು ಕಂಡ ಪ್ರತಾಪ್ ಕಣ್ಣೀರು ಹಾಕುತ್ತಾ ಓಡಿ ಬರುತ್ತಾರೆ. ಆದರೆ ಮನೆಯ ಬಾಗಿಲು ಕ್ಲೋಸ್ ಆಗಿರುತ್ತದೆ. ಬಾಗಿಲು ತೆಗೆಯಿರಿ ಬಿಗ್ ಬಾಸ್ ಎಂದು ಪ್ರತಾಪ್ ಕಣ್ಣೀರು ಹಾಕುವ ದೃಶ್ಯ ನೋಡಿ ಪ್ರೇಕ್ಷಕರು ಕೂಡ ಭಾವುಕರಾಗಿದ್ದಾರೆ.
ಇನ್ನು ಈ ಹಿಂದೆ ಮೂರು ವರ್ಷಗಳ ಬಳಿಕ ಪ್ರತಾಪ್ ತಮ್ಮ ತಂದೆಯೊಂದಿಗೆ ಕರೆಯಲ್ಲಿ ಮಾತನಾಡಿದ್ದರು. ಕಿಚ್ಚ ಸುದೀಪ್ ಅವರ ಮಧ್ಯಸ್ಥಿಕೆಯಲ್ಲಿ ವೀಕೆಂಡ್ ಸಂಚಿಕೆಯಲ್ಲಿ ಪ್ರತಾಪ್ ತಂದೆಯ ಧ್ವನಿ ಕೇಳಿ ಜೋರಾಗಿ ಕಣ್ಣೀರು ಹಾಕಿದ್ದರು. ಪ್ರೇಕ್ಷಕರು ಕೂಡ ಈ ತಂದೆ ಮಗ ಒಂದಾಗಲಿ ಎನ್ನುವ ಆಸೆಯಲ್ಲಿದ್ದರು. ಸದ್ಯ ಪ್ರತಾಪ್ ತಂದೆ-ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದು, ಇಂದಿನ ಸಂಚಿಕೆಯಲ್ಲಿ ಪ್ರತಾಪ್ ಅಪ್ಪ-ಅಮ್ಮನೊಂದಿಗಿನ ಭಾವುಕ ಕ್ಷಣಗಳನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ.












Click it and Unblock the Notifications