ನಟಿ ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ, ಸ್ಟಾರ್ ನಟನ ಸಿನಿಮಾದಲ್ಲಿ ನಾಯಕಿ
ಮೂಲತಃ ಕರ್ನಾಟಕದವರೇ ಆಗಿರುವ ನಟಿ ಪೂಜಾ ಹೆಗ್ಡೆ ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿದವರು. ಬಾಲಿವುಡ್‌ನಲ್ಲೂ ಪೂಜಾ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಪ್ರಮುಖ ಸ್ಟಾರ್ ನಟರೊಂದಿಗೆ ನಟಿಸಿರುವ ಪೂಜಾ ಹೆಗ್ಡೆ ಅವರು ಕನ್ನಡದಲ್ಲೂ ನಟಿಸಬೇಕು ಎಂದು ಅವರ ಅಭಿಮಾನಿಗಳು ಆಶಿಸುತ್ತಿದ್ದರು. ಆದರೆ ಇಷ್ಟು ವರ್ಷವಾದ್ರೂ ಆ ಕನಸು ಈಡೇರಲಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅನ್ನೋ ಹಾಗೆ ಕೊನೆಗೂ ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ ಎಂಬ ವಿಚಾರ ಸಖತ್ ಸದ್ದು ಮಾಡುತ್ತಿದೆ. ಅದರಲ್ಲೂ ಸ್ಯಾಂಡಲ್‌ವುಡ್‌ನ ಬಿಗ್ ಸ್ಟಾರ್ ನಟನಿಗೆ ನಾಯಕಿಯಾಗಿ ಪೂಜಾ ಕನ್ನಡ ಸಿನಿಮಾಗಳಲ್ಲಿ ಮಿಂಚಲು ರೆಡಿಯಾಗಿದ್ದಾರಂತೆ.
ಹೌದು ಸಿನಿಮಾ ರಂಗಕ್ಕೆ ಕಾಲಿಟ್ಟು ಹಲವು ವರ್ಷಗಳ ಬಳಿಕ ಪೂಜಾ ಹೆಗ್ಡೆ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತೆಲುಗು ಸಿನಿಮಾಗಳಲ್ಲಿ ಮಿಂಚುವ ಮೂಲಕ ಪೂಜಾ ಟಾಪ್ ನಟಿಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಕೆಲ ಸಿನಿಮಾಗಳು ಹಿಟ್ ಆದ ಬಳಿಕ ಪೂಜಾಗೆ ಬೇರೆ ಚಿತ್ರರಂಗಗಳಿಂದಲೂ ಅವಕಾಶಗಳು ಅರಸಿ ಬಂದಿದ್ದವು. ತಮಿಳು ನಟ ದಳಪತಿ ವಿಜಯ್ ಸೇರಿದಂತೆ ಹಲವು ನಟರೊಂದಿಗೂ ತೆರೆ ಹಂಚಿಕೊಂಡಿರುವ ಪೂಜಾ ಬಾಲಿವುಡ್‌ನಲ್ಲೂ ಖದರ್ ತೋರಿಸಿದ್ದಾರೆ.

ಆದರೆ, ಇತ್ತೀಚೆಗೆ ಪೂಜಾ ಅವರ ಸಿನಿಮಾಗಳು ಅಷ್ಟೊಂದು ಕೈಹಿಡಿಯುತ್ತಿಲ್ಲ ಎನ್ನುವ ಗುಸುಗುಸು ಕೂಡ ಇದೆ. ತೆಲುಗಿನಲ್ಲೂ ಅವರ ಸಿನಿಮಾಗಳು ಕಡಿಮೆಯಾಗಿದ್ದು, ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪೂಜಾ ಅವರು ಸಿಂಪಲ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವವರಲ್ಲ. ಹಾಗಾಗಿ ಕನ್ನಡದಲ್ಲಿ ದೊಡ್ಡ ಸ್ಟಾರ್ ನಟರೊಂದಿಗೆ ಅವರ ಚೊಚ್ಚಲ ಸಿನಿಮಾ ಬರುತ್ತೆ ಅನ್ನೋದು ಗೊತ್ತಿರೋ ವಿಚಾರ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾದಲ್ಲಿ ಪೂಜಾ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ವಿಚಾರ ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಇತ್ತೀಚೆಗಷ್ಟೇ ಸುದೀಪ್ ಅವರ ಬಿಲ್ಲ ರಂಗ ಭಾಷ (ಬಿಆರ್‌ಬಿ) ಸಿನಿಮಾ ಸೆಟ್ಟೇರಿದೆ. ಆದರೆ, ಈ ಸಿನಿಮಾಗೆ ನಾಯಕಿ ಯಾರು ಎಂಬುದು ಇನ್ನೂ ಗುಟ್ಟಾಗಿಯೇ ಇದೆ. ಇದರ ನಡುವೆ ಪೂಜಾ ಹೆಗ್ಡೆ ಅವರ ಹೆಸರು ಈ ಸಿನಿಮಾದ ನಾಯಕಿಯಾಗಿ ಕೇಳಿಬರುತ್ತಿದೆ. ಪೂಜಾ ಕೂಡ ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ಕನ್ನಡ ಸಿನಿಮಾಗಳಲ್ಲಿ ನಟಿಸುವೆ ಎಂದು ಆಸೆ ಬಿಚ್ಚಿಟ್ಟಿದ್ದರು. ಸುದೀಪ್ ಅವರ ಸಿನಿಮಾ ಅಂದ್ರೆ ಕಥೆ ಕೂಡ ಚೆನ್ನಾಗಿರುತ್ತೆ ಅನ್ನುತ್ತೆ ಚಿತ್ರರಂಗ. ಹೀಗಾಗಿ ಪೂಜಾ ಅವರೇ ಈ ಸಿನಿಮಾದಲ್ಲಿ ನಾಯಕಿ ಎಂದು ಹೇಳಲಾಗುತ್ತಿದೆ.
ಆದರೆ, ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಸಿನಿಮಾ ಸುದ್ದಿಗಾರರು ಕೂಡ ಈ ಕುರಿತು ವರದಿ ಮಾಡಿದ್ದಾರೆ. ಈ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದು, ಎಲ್ಲ ಅಂದುಕೊಂಡಂತಾದರೆ ಪೂಜಾ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಲಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪೂಜಾ ಹೆಗ್ಡೆ ಅವರು, ನಾನು ಮೂಲತಃ ಕರ್ನಾಟಕದವಳು, ತುಳು ನಮ್ಮ ಮನೆಯಲ್ಲಿ ಮಾತನಾಡುವ ಭಾಷೆ. ಹಾಗಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸುವಂತೆ ನನಗೆ ಪೋಷಕರಿಂದಲೂ ಒತ್ತಡವಿದೆ. ಕನ್ನಡ ಸಿನಿಮಾಗಳಲ್ಲಿ ನಟಿಸು ಎಂದು ಹೇಳುತ್ತಲೇ ಇರುತ್ತಾರೆ. ಈಗಾಗಲೇ ನಾನು ಹಲವು ಕಥೆಗಳನ್ನು ಕೇಳಿದ್ದೇನೆ. ಆದರೆ ಯಾವುದೂ ಇಷ್ಟವಾಗಲಿಲ್ಲ. ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ನಟಿಸುತ್ತೇನೆ ಎಂದು ಪೂಜಾ ಹೇಳಿದ್ದರು. ಮತ್ತೊಂದೆಡೆ ಸುದೀಪ್ ಅವರಿಗೆ ಪೂಜಾ ಒಳ್ಳೆಯ ಜೋಡಿ ಎಂದು ಹೇಳಲಾಗುತ್ತಿದೆ.












Click it and Unblock the Notifications