'ನನ್ನ ಜನರೇಷನ್‌ನಲ್ಲಿ 25 ವರ್ಷದಿಂದ ಒಬ್ಬನೇ ಗಂಡನ ಜೊತೆ ಬದುಕುತ್ತಿರುವವಳು ನಾನೊಬ್ಬಳೆ'
ನಟಿ ಮಾಳವಿಕ ಅವಿನಾಶ್ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಮಾತ್ರವಲ್ಲದೇ ಸೆಲೆಬ್ರೆಟಿಗಳ ಡಿವೋರ್ಸ್ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ್ದು, ಡಿವೋರ್ಸ್ ಪಡೆಯಬೇಕು, ದೂರವಾಗಬೇಕು ಎನ್ನುವ ದಂಪತಿಗೆ ತಮ್ಮದೇ ಆದ ಕೆಲವು ವೈಯಕ್ತಿಕ ಸಲಹೆಗಳನ್ನು ನೀಡಿದ್ದಾರೆ.
ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಇವತ್ತಿಗೂ ನನಗೆ ಕರೆ ಬರುತ್ತದೆ. ನನ್ನ ಹತ್ತಿರ ಜನ ಬರುತ್ತಾರೆ. ಯಾರ ಮನೆಯಲ್ಲಿ ಏನೇ ಸಮಸ್ಯೆ ಆದರೂ ನಿಮ್ಮ ಮುಂದೆ ತಂದು ಕೂರಿಸುತ್ತೇವೆ ಬಗೆಹರಿಸಿ ಎನ್ನುತ್ತಾರೆ. ಈಗ ನನಗೆ ಜನ ಸಾಮಾನ್ಯರಿಗೆ ಮಾಡುವಷ್ಟು ಸಮಯ ಇಲ್ಲ. ಈಗ ಸಿನಿಮಾದವರು ದೊಡ್ಡ ದೊಡ್ಡ ಕಲಾವಿದರು ದೊಡ್ಡ ಹೆಸರು ಮಾಡಿದವರು ಅಂತವರು ಬರುತ್ತೇನೆ ಅಂದಾಗ ಬೇಡ ಎನ್ನುವುದಿಲ್ಲ. ಅಲ್ಲೂ ಅಷ್ಟೇ ನಾನು ಸುಮ್ಮನೆ ಕುಳಿತಿರುತ್ತೇನೆ ಅವರು ಮಾತನಾಡುತ್ತಾರೆ. ಈ ವೇಳೆ ಕೆಲವರಿಗೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೆಲವರಿಗೆ ಸಿಗುವುದಿಲ್ಲ ಎಂದರು.'

'ನಾನು ಎಲ್ಲರಿಗೂ ಮತ್ತೆ ಒಂದಾಗಿ ಬದುಕಿ ಅಂತಾ ಸಲಹೆ ನೀಡುತ್ತೇನೆ. ಇದು ನನ್ನ ವೈಯಕ್ತಿಕ ಸಲಹೆ. ಆದರೆ ಕೆಲವೊಂದು ಮದುವೆಗಳು ನೂರಕ್ಕೆ ನೂರು ಮುರಿದು ಬಿದ್ದಿರುತ್ತದೆ. ಅದನ್ನು ಜೋಡಿಸಿ ಲಾಭ ಇಲ್ಲ. ನಾಳೆ ಬೆಳಗ್ಗೆ ಮತ್ತೆ ಅದೇ ಸಮಸ್ಯೆ ಬರುತ್ತದೆ. ಅಂತಹ ಸಂದರ್ಭದಲ್ಲಿ ಡಿವೋರ್ಸ್ ಪಡೆಯುವಂತೆ ಸಲಹೆ ನೀಡುತ್ತೇನೆ. ನನ್ನ ಜೊತೆ ಓದಿದವರ ಬಳಿ ಕಳುಹಿಸುತ್ತೇನೆ.
ಆದರೆ ಡಿವೋರ್ಸ್ ಬಗ್ಗೆ ನಾನು ನೀಡುವ ಸಲಹೆ ಎಂದರೆ ಇದು ಬಗೆ ಹರಿಯಲ್ಲ ಅಂತಾನೋ, ಅಥವಾ ಗಂಡ-ಹೆಂಡತಿ ಒಟ್ಟಿಗೆ ಇರಲು ಸಾಧ್ಯವಿಲ್ಲ. ಮಗು ಇದೆ ಇಲ್ಲಾ ಏನೇ ಆಗಿದ್ದರೂ, ಒಟ್ಟಿಗೆ ಬದುಕುವುದು ಸಾಧ್ಯವೇ ಇಲ್ಲ ಅಂದಾಗ ಇಬ್ಬರು ಎರಡು ಲಾಯರ್‌ಗಳ ಬಳಿ ಹೋಗಿ ಮತ್ತೇನೋ ಸಮಸ್ಯೆಗೆ ಸಿಲುಕಿಕೊಳ್ಳುವುದಕ್ಕಿಂತ ಒಂದೇ ಲಾಯರ್ ಬಳಿ ಹೋಗಿ' ಎಂದರು.
'ನ್ಯಾಯಾಲಯ ಆರು ತಿಂಗಳು ಸಮಯ ಕೊಡುತ್ತದೆ. ಅಂದರೆ ಕೋರ್ಟ್ ಕೂಡ ಇಬ್ಬರು ಒಂದಾಗುವುದನ್ನು ಬಯಸುತ್ತದೆ. ಕಾನೂನು ಮಾತ್ರವಲ್ಲ ಎಲ್ಲರೂ ನೀವು ಒಂದಾಗಲಿ ಎನ್ನುವುದನ್ನು ಬಯಸುತ್ತಾರೆ. ಆರು ತಿಂಗಳಲ್ಲಿ ಅವಧಿಯಲ್ಲಿ ನಿಮಗೆ ಒಬ್ಬರೇ ವಕೀಲರು ಸಾಕು. ಡಿವೋರ್ಸ್ ವಿಚಾರದಲ್ಲಿ ಇಬ್ಬರ ಬಗ್ಗೆ ಮಾತನಾಡಲು ಒಬ್ಬ ವಕೀಲರು ಸಾಕು ಎನ್ನುವುದು ನನ್ನ ಅಭಿಪ್ರಾಯ ಇದು ಎಲ್ಲರಿಗೂ ನನ್ನ ಸಲಹೆ.

ದಯವಿಟ್ಟು ಇದನ್ನು ಮಾಡಿ. ಇಬ್ಬರು ಸೇರಿ ಒಬ್ಬರೇ ಲಾಯರ್ ಬಳಿ ಹೋಗಿ. ನಿಮ್ಮ ಮದುವೆ ಜೀವನದ ಬಗ್ಗೆ ನಿಮಗೆ ಮಾತ್ರ ಗೊತ್ತಿರುತ್ತದೆ. ನಾನು ಐದು ಸಾವಿರ ಜನರ ಕೇಸ್ ನೋಡಿರಬಹುದು. ಆದರೂ ನಿಮ್ಮ ಸಮಸ್ಯೆ ಬಗ್ಗೆ ನಮಗೆ ಗೊತ್ತಿಲ್ಲ. ಯಾರು ಅನುಭವಿಸಿರುತ್ತಾರೋ, ಯಾರು ಬದುಕಿರುತ್ತಾರೋ ಅವರಿಗೆ ಮಾತ್ರ ಗೊತ್ತು. ಯಾರೋ ಏನೋ ಹೇಳುತ್ತಾರೆ, ತಾಯತ ಕಟ್ಟಿ, ಹೋಮ ಮಾಡಿ ಇದೆಲ್ಲಾ ಸಾಧ್ಯವೇ ಇಲ್ಲ' ಎಂದು ಹೇಳಿದರು.
'ನಾನು ಇದನ್ನು ಹೇಳಬೇಕೋ ಹೇಳಬಾರದೋ ಗೊತ್ತಿಲ್ಲ. ನಮ್ಮ ಅಮ್ಮನ ಬಳಿ ಹೇಳುತ್ತಾ ಇರುತ್ತೇನೆ. ಅಮ್ಮಾ, ನನ್ನ ಜನರೇಷನ್‌ನಲ್ಲಿ ಒಂದೇ ಮದುವೆಯಾಗಿ 25 ವರ್ಷದಿಂದ ಒಬ್ಬನೇ ಗಂಡನ ಜೊತೆ ಬದುಕುತ್ತಿರುವವಳು ನಾನೊಬ್ಬಳೆ ಅಂತಾ. ಅದಕ್ಕೆ ನಮ್ಮಮ್ಮ ದೊಡ್ಡ ಇದರ ತರ ಹೇಳಬೇಡ ಅನ್ನುತ್ತಾರೆ. ಆದರೆ ಇದು ಸತ್ಯ' ಎಂದು ಮಾಳವಿಕ ಅವಿನಾಶ್ ಹೇಳಿದ್ದಾರೆ.












Click it and Unblock the Notifications