ಚೊಚ್ಚಲ ಮಗುವಿಗೆ ಜನ್ಮ ನೀಡಿದ ನಟಿ ಕವಿತಾ ಗೌಡ: ಮಗನಾ..? ಮಗಳಾ..?
ಬೆಂಗಳೂರು, ಸೆಪ್ಟೆಂಬರ್ 19: ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ ನಟ ಚಂದನ್ ಹಾಗೂ ನಟಿ ಕವಿತಾ ಗೌಡ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟಿ ಕವಿತಾ ಗೌಡ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ತಂದೆ-ತಾಯಾದ ಖುಷಿಯಲ್ಲಿರುವ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಜೋಡಿಗೆ ಶುಭಾಶಯಗಳು ಹರಿದು ಬರುತ್ತಿದೆ.
ಕನ್ನಡ ಚಿತ್ರರಂಗದ ದಿಗ್ಗಜರಾದ ನಟ ವಿಷ್ಣುವರ್ಧನ್, ನಟ ಉಪೇಂದ್ರ, ನಟಿ ಶ್ರುತಿ ಅವರ ಜನ್ಮ ದಿನ ಸೆಪ್ಟೆಂಬರ್ 18ರಂದೇ ನಟಿ ಕವಿತಾ ಗೌಡ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ನಟ ಚಂದನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಾದ ವಿಡಿಯೋ ಮೂಲಕ ಈ ಖುಷಿಯ ವಿಚಾರವನ್ನು ಚಂದನ್ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಮಗುವಿನ ಚೆಂದದ ಕಾಲನ್ನು ಹಿಡಿದುಕೊಂಡಿರುವ ಚಂದನ್, 'ನನ್ನ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ' ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಚಂದನ್ ಹಾಗೂ ನಟಿ ಕವಿತಾ ಗೌಡ ಜೋಡಿಗೆ ಗಂಡು ಮಗು ಜನಿಸಿದ್ದು, ಕಿರುತೆರೆ ಕಲಾವಿದರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿಯನ್ನು ಕೂಡ ನಟ ಚಂದನ್ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಕವಿತಾ ಅವರ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿದ್ದು, ಹಲವಾರು ಸಿನಿಮಾ ಮತ್ತು ಕಿರುತೆರೆ ತಾರೆಯರು ಭಾಗಿಯಾಗಿದ್ದರು.
ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಪರಿಚಯವಾಗಿದ್ದ ನಟ ಚಂದನ್ ಹಾಗೂ ನಟಿ ಕವಿತಾ ಗೌಡ, ಚಿನ್ನು-ಚಂದು ಜೋಡಿ ಎಂದು ಖ್ಯಾತಿ ಪಡೆದಿದ್ದರು. ಬಳಿಕ ಪ್ರೀತಿಸಿ ಕೊರೊನಾ ಸಮಯದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2021ರ ಮೇ ತಿಂಗಳಲ್ಲಿ ಮದುವೆಯಾದರು. ನಟನೆ ಜೊತೆಗೆ ಹೋಟೆಲ್ ಬ್ಯೂಸಿನೆಸ್ ಕೂಡ ಈ ದಂಪತಿ ನಡೆಸುತ್ತಿದ್ದಾರೆ.












Click it and Unblock the Notifications