ನನಗೆ ಅಂತಹ ಪಾತ್ರ ಮಾಡಲು ಇಷ್ಟವಿಲ್ಲ, ಯಶ್ ಜೊತೆ ಟಾಕ್ಸಿಕ್‌ನಲ್ಲಿ ನಟಿಸಲು ಬೇರೆ ಕಾರಣ ಇದೆ: ನಟಿ ಹುಮಾ ಖುರೇಷಿ
ಪ್ರಖ್ಯಾತ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival 2026) ಆಯೋಜಿಸಿದ್ದ 'ವುಮೆನ್ ಇನ್ ಸಿನಿಮಾ' ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿ ಬಾಲಿವುಡ್ ನಟಿ ಹುಮಾ ಖುರೇಷಿ ಪಾಲ್ಗೊಂಡಿದ್ದಾರೆ. ನಾಲ್ಕನೇ ಬಾರಿ ಕಾನ್ ಅಂಗಳಕ್ಕೆ ಕಾಲಿಟ್ಟಿರುವ ಹುಮಾ, ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರವಾದ ಯಶ್ ನಟನೆಯ 'ಟಾಕ್ಸಿಕ್' (Toxic) ಮತ್ತು ವೆಸ್ಟರ್ನ್ ಚಿತ್ರರಂಗದಲ್ಲಿ ಭಾರತೀಯ ನಟಿಯರನ್ನು ಬಿಂಬಿಸುವ ಶೈಲಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ಹುಮಾ ಖುರೇಷಿ 'ಎಲಿಜಬೆತ್' ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ ಅವರು, ಯಶ್ ಅವರ ಮಾಸ್ ಇಮೇಜ್ ಹಾಗೂ ಗೀತು ಮೋಹನ್‌ದಾಸ್ ಅವರ ಮೇಕಿಂಗ್ ಶೈಲಿಯೇ ನನ್ನನ್ನು ಈ ಪ್ರಾಜೆಕ್ಟ್‌ಗೆ ಸೆಳೆಯಿತು. ಗೀತು ಈ ಕಥೆಯನ್ನು ನನಗೆ ಹೇಳಿದಾಗ, ಇದು ನನ್ನ ಕೆರಿಯರ್‌ನ ದೊಡ್ಡ ಬಜೆಟ್ ಸಿನಿಮಾ ಎಂದು ಹೇಳಿದ್ದೆ ಎಂದಿದ್ದಾರೆ.

'ಟಾಕ್ಸಿಕ್' ಕೇವಲ ಒಂದು ಕಮರ್ಷಿಯಲ್ ಆಕ್ಷನ್ ಸಿನಿಮಾ ಅಷ್ಟೇ ಅಲ್ಲ, ಅದರಲ್ಲಿ ಅತ್ಯಂತ ಆಳವಾದ ಕಥೆ ಮತ್ತು ವಿಭಿನ್ನ ಪಾತ್ರಗಳಿವೆ. ಚಿತ್ರದ ಹೆಸರೇ ಸೂಚಿಸುವಂತೆ ಸಿನಿಮಾದ ಪ್ರತಿಯೊಂದು ಪಾತ್ರದಲ್ಲೂ ಒಂದಲ್ಲ ಒಂದು ರೀತಿಯ 'ಟಾಕ್ಸಿಕ್' ಅಂಶವಿರುತ್ತದೆ. ಈ ಚಿತ್ರವನ್ನು ಪಾಶ್ಚಿಮಾತ್ಯ ದೇಶಗಳ ಥಿಯೇಟರ್‌ಗಳಲ್ಲೂ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಚಿತ್ರತಂಡ ಯೋಜಿಸುತ್ತಿದ್ದು, ಇದು ಭಾರತೀಯ ಸಿನಿಮಾಗಳಿಗೆ ಜಾಗತಿಕ ಮಟ್ಟದಲ್ಲಿ ಹೊಸ ಮಾರುಕಟ್ಟೆಯನ್ನು ತೆರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಹಾಯಕ್ಕಾಗಿ ಕಾಯುವ ಮಹಿಳೆಯ ಪಾತ್ರ ನನಗೆ ಬೇಡ
ಹಾಲಿವುಡ್ ಅಥವಾ ಪಾಶ್ಚಿಮಾತ್ಯ ಚಿತ್ರರಂಗದಲ್ಲಿ ಭಾರತೀಯ ನಟಿಯರಿಗೆ ನೀಡಲಾಗುವ ಸಾಂಪ್ರದಾಯಿಕ ಪಾತ್ರಗಳ ಬಗ್ಗೆ ಹುಮಾ ಖುರೇಷಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ವೆಸ್ಟರ್ನ್ ಸಿನಿಮಾಗಳಲ್ಲಿ ಸದಾ 'ಸಮಸ್ಯೆಗಳಲ್ಲಿ ಸಿಲುಕಿ ಯಾರೋ ಬಂದು ರಕ್ಷಿಸಲಿ ಎಂದು ಕಾಯುವ ಬಡ ಅಥವಾ ಅಸಹಾಯಕ ಮಹಿಳೆ'ಯ ಪಾತ್ರಗಳನ್ನು ಮಾಡಲು ನನಗೆ ಇಷ್ಟವಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರಂತೆ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಆಸೆ ತಮಗಿದ್ದು, ಯಾವುದೇ ನಿರ್ದಿಷ್ಟ ಜನಾಂಗ ಅಥವಾ ಸಂಸ್ಕೃತಿಗೆ ಸೀಮಿತವಾಗದ ಸಾರ್ವತ್ರಿಕ ಪಾತ್ರಗಳಲ್ಲಿ ನಟಿಸಲು ತಾವು ಬಯಸುವುದಾಗಿ ಹುಮಾ ಸ್ಪಷ್ಟಪಡಿಸಿದ್ದಾರೆ. ನಮ್ಮ ಹಳೆಯ ಇಮೇಜ್‌ಗಳಿಗೆ ನಾವೇ ಅಂಟಿಕೊಳ್ಳಬಾರದು ಎಂದಿದ್ದಾರೆ.
'ಟಾಕ್ಸಿಕ್' ಬಿಗ್ ಬಜೆಟ್ ಸಿನಿಮಾವಾದರೆ, ಮತ್ತೊಂದೆಡೆ ಹುಮಾ ತಮ್ಮ ಸಹೋದರ ಸಾಕಿಬ್ ಸಲೀಮ್ ಜೊತೆಗೂಡಿ 'ಸಲೀಮ್ ಸಿಬ್ಲಿಂಗ್ಸ್' ಬ್ಯಾನರ್ ಅಡಿಯಲ್ಲಿ 'ಬೇಬಿ ದೋ ದೀ ದೋ' (Baby Do Die Do) ಎಂಬ ಮುಂಬೈ ಅಂಡರ್‌ವರ್ಲ್ಡ್ ಹಿನ್ನೆಲೆಯ ಚಿತ್ರವನ್ನು ನಿರ್ಮಿಸಿದ್ದಾರೆ. ನಚಿಕೇತ್ ಸಾಮಂತ್ ನಿರ್ದೇಶನದ ಈ ಚಿತ್ರದಲ್ಲಿ ಹುಮಾ ಖುರೇಷಿ ಕಿವುಡು ಮತ್ತು ಮೂಗಿಯಾಗಿರುವ 'ಬೇಬಿ ಕರ್ಮಾಕರ್' ಎಂಬ ಹಂತಕಿ ಪಾತ್ರದಲ್ಲಿ ನಟಿಸಿದ್ದಾರೆ. ಮಾತು ಹಾಗೂ ಧ್ವನಿಯ ಸಹಾಯವಿಲ್ಲದೆ ಕೇವಲ ಹಾವಭಾವಗಳ ಮೂಲಕ ನಟಿಸುವುದು ದೊಡ್ಡ ಸವಾಲಾಗಿತ್ತು ಎಂದು ಹೇಳಿರುವ ಹುಮಾ, ಈ ಪಾತ್ರಕ್ಕಾಗಿ ವಿಶೇಷವಾಗಿ ಸೈನ್ ಲಾಂಗ್ವೇಜ್ ಕಲಿತಿದ್ದಾಗಿ ಹೇಳಿದ್ದಾರೆ.
ನನ್ನ ಸಿರೀಸ್ ಬಗ್ಗೆ ಅಪಹಾಸ್ಯ ಮಾಡಿದ್ರು
ತಮ್ಮ ಯಶಸ್ವಿ ಪೊಲಿಟಿಕಲ್ ಡ್ರಾಮಾ ವೆಬ್ ಸೀರೀಸ್ 'ಮಹಾರಾಣಿ' ಬಗ್ಗೆ ಮಾತನಾಡಿದ ಹುಮಾ, ಆರಂಭದಲ್ಲಿ ಈ ಸೀರೀಸ್ ಬಗ್ಗೆ ಒಬ್ಬ ಅನಕ್ಷರಸ್ಥ ಗ್ರಾಮೀಣ ಮಹಿಳೆ ಮುಖ್ಯಮಂತ್ರಿಯಾಗುವ ಕಥೆಯನ್ನು ಇಂಗ್ಲಿಷ್ ಮಾಧ್ಯಮಗಳು ಮತ್ತು ನಗರ ಕೇಂದ್ರಿತ ಪ್ರೇಕ್ಷಕರು ಅರ್ಥ ಮಾಡಿಕೊಳ್ಳದೆ ನಿರ್ಲಕ್ಷಿಸಿದ್ದರು. ಆದರೆ, ಭಾರತದ ನಿಜವಾದ ಸಾಮಾನ್ಯ ಜನರಿಗೆ ಈ ಸೀರೀಸ್ ಕನೆಕ್ಟ್ ಆಗಿ, ಇದು ದೇಶದ ಅತಿ ದೊಡ್ಡ ಹಿಟ್ ಶೋಗಳಲ್ಲಿ ಒಂದಾಗಿ ಹೊರಹೊಮ್ಮಿತು. ಸದ್ಯದಲ್ಲೇ ಬರಲಿರುವ 'ಮಹಾರಾಣಿ ಸೀಸನ್ 5' ಪ್ರೇಕ್ಷಕರ ಎಲ್ಲ ಊಹೆಗಳನ್ನು ಉಲ್ಟಾ ಮಾಡಲಿದೆ ಎಂದು ಅವರು ಹೇಳಿದ್ದಾರೆ.













Click it and Unblock the Notifications