ಸಿಸಿಎಲ್‌ನಲ್ಲಿ ಡಾರ್ಲಿಂಗ್ ಕೃಷ್ಣ ಅಬ್ಬರ: ಆರ್‌ಸಿಬಿಗೆ ಬರುವಂತೆ ಒತ್ತಾಯ
ಕ್ರಿಕೆಟ್ ಹಾಗೂ ಸಿನಿ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಫೆಬ್ರವರಿ 8ರಿಂದ ಆರಂಭವಾಗಿದ್ದು, 11ನೇ ವರ್ಷದ ಸಿಸಿಎಲ್ ಭರ್ಜರಿಯಾಗಿ ನಡೆಯುತ್ತಿದೆ. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು, ಈವರೆಗೂ ಆಡಿದ ಮೂರು ಪಂದ್ಯಗಳಲ್ಲಿ ಮೂರರಲ್ಲೂ ಕರ್ನಾಟಕ ಬುಲ್ಡೋಜರ್ಸ್ ಅಮೋಘ ಗೆಲುವು ಸಾಧಿಸಿದೆ.
ಈ ಬಾರಿ ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಡಾರ್ಲಿಂಗ್ ಕೃಷ್ಣ ಮಿಂಚುತ್ತಿದ್ದು, ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅರ್ಧ ಶತಕ, ಶತಕ ಸಿಡಿಸುತ್ತಾ ಡಾರ್ಲಿಂಗ್ ಕೃಷ್ಣ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿಗೆ ಬಲವಾಗುತ್ತಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಡಾರ್ಲಿಂಗ್ ಕೃಷ್ಣ ಅಬ್ಬರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಮೊದಲ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಡಾರ್ಲಿಂಗ್ ಕೃಷ್ಣ ಅರ್ಧ ಶತಕ ಗಳಿಸಿದ ಮೇಲೂ ಅಮೋಘ ಪ್ರದರ್ಶನ ನೀಡಿ 80 ರನ್ ಗಳಿಸಿದ್ದರು. ಬಳಿಕ ಎರಡನೇ ಪಂದ್ಯದಲ್ಲಿ ಚೆನ್ನೈ ರೈನೋಸ್ ಎದುರು 50 ರನ್ ಸಿಡಿಸಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಡಾರ್ಲಿಂಗ್ ಕೃಷ್ಣ ಅಬ್ಬರ ಕಂಡು ಎದುರಾಳಿ ತಂಡ ಮಾತ್ರವಲ್ಲದೇ ಸಂಪೂರ್ಣ ಮೈದಾನವೇ ಶಾಕ್ ಆಗಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಹಾಗೂ ಮುಂಬೈ ಹೀರೋಸ್ ತಂಡದ ನಡುವೆ ರೋಚಕ ಪಂದ್ಯ ನಡೆದಿದ್ದು, ಕರ್ನಾಟಕ ಬುಲ್ಡೋಜರ್ ಪರ ಡಾರ್ಲಿಂಗ್ ಕೃಷ್ಣ ಅಬ್ಬರದ ಶತಕ ಬಾರಿಸಿದ್ದಾರೆ. ಕೇವಲ 33 ಎಸೆತಗಳಲ್ಲಿ ಆಕರ್ಷಕ ಶತಕ ಸಿಡಿಸಿದ ಕೃಷ್ಣ, ಒಟ್ಟು 36 ಎಸೆತಗಳಲ್ಲಿ 111 ರನ್‌ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಮೂಲಕ ವೇಗವಾಗಿ ಶತಕ ಬಾರಿಸಿದ ದಾಖಲೆ ನಿರ್ಮಿಸಿದರು.
ಕ್ರಿಕೆಟ್ ಮೈದಾನದಲ್ಲಿ ಡಾರ್ಲಿಂಗ್ ಕೃಷ್ಣ ಪ್ರದರ್ಶನ ನೋಡಿದ ಕ್ರಿಕೆಟ್ ಹಾಗೂ ಸಿನಿ ಪ್ರಿಯರು ಫುಲ್ ಫಿದಾ ಆಗಿದ್ದಾರೆ. ನಟ ಹಾಗೂ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ಡಾರ್ಲಿಂಗ್ ಕೃಷ್ಣ, ಕ್ರಿಕೆಟ್‌ನಲ್ಲೂ ವೃತ್ತಿಪರ ಅನುಭವಿ ಕ್ರಿಕೆಟ್ ಆಟಗಾರನಂತೆ ಪ್ರದರ್ಶನ ತೋರುತ್ತಿದ್ದು, ಅಭಿಮಾನಿಗಳು ಇವರನ್ನು ಐಪಿಎಲ್‌ಗೆ ಆಯ್ಕೆ ಮಾಡಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಡಾರ್ಲಿಂಗ್ ಕೃಷ್ಣ ಅವರನ್ನು ಆಯ್ಕೆ ಮಾಡಿಕೊಳ್ಳಿ ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಆರ್‌ಸಿಬಿ ತಂಡದಲ್ಲಿ ಎಬಿಡಿ ಜಾಗ ತುಂಬಲು ಇವರಿಂದ ಮಾತ್ರ ಸಾಧ್ಯ. ಡಾರ್ಲಿಂಗ್ ಕೃಷ್ಣ ಅವರೇ ಸಿನಿಮಾ ಬಿಟ್ಟು ಬೇಗ ನಮ್ಮ ಆರ್‌ಸಿಬಿ ತಂಡ ಸೇರಿಕೊಳ್ಳಿ ಎಂದು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದಾರೆ.












Click it and Unblock the Notifications