ಮಕ್ಕಳ ಊಟದ ತಟ್ಟೆಗೆ ಕೈಯಿಟ್ಟ ರಮಾನಾಥ ರೈಗೆ ಹೀನಾಯ ಸೋಲು
ಮಂಗಳೂರು, ಮೇ 15: ಹದಿನೈದನೇ ಕರ್ನಾಟಕ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿ ಸರಳ ಬಹುಮತದತ್ತ ದಾಪುಗಾಲು ಹಾಕುತ್ತಿದೆ.
ಇತ್ತೀಚೆಗೆ ಬಂದ ಮಾಹಿತಿಯ ಪ್ರಕಾರ, ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಾಲೀ ಅರಣ್ಯ ಸಚಿವ ರಮಾನಾಥ ರೈ ಹೀಲಾಯ ಸೋಲು ಅನುಭವಿಸಿದ್ದಾರೆ.
ಬಿಜೆಪಿಯ ರಾಜೇಶ್ ನಾಯಕ್ ಅವರು ರಮಾನಾಥ ರೈ ಅವರನ್ನು ಭಾರೀ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ರಾಜೇಶ್ ನಾಯಕ್ ಅವರಿಗೆ 97,802, ರೈ ಅವರಿಗೆ 81,831 ಮತಗಳು ಬಂದಿವೆ. ರಾಜೇಶ್ ನಾಯಕ್ 15,971 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ಸತತವಾಗಿ ಎಂಟನೇ ಬಾರಿಗೆ ನಾಮಪತ್ರ ಸಲ್ಲಿಸಲಿದ್ದ ರಮಾನಾಥ್ ರೈ, ಕಲ್ಲಡ್ಕ ಶಾಲೆಗೆ ಬಿಸಿಯೂಟ ನಿಲ್ಲಿಸಿದ್ದು ಮತ್ತು ಅಲ್ಪಸಂಖ್ಯಾತ ಮತದಿಂದಲೇ ಜಯ ಸಾಧಿಸುತ್ತಿದ್ದೇನೆ ಎನ್ನುವ ರೈ ಹೇಳಿಕೆ ಅವರಿಗೆ ತಿರುಗುಬಾಣವಾಗಿದೆ.
ಇದರ ಜೊತೆಗೆ, ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರ ಬಗ್ಗೆ ರಮಾನಾಥ ರೈ ಅವರು ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಸುದ್ದಿ, ಬಿಲ್ಲವ ಸಮದಾಯವರನ್ನು ಕೆರಳಿಸಿರಬಹುದು.
ಕಲ್ಲಡ್ಕ ಶ್ರೀರಾಮವಿದ್ಯಾಕೇಂದ್ರದ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಕೊಲ್ಲೂರು ಮೂಕಾಂಬಿಕೆ ದೇವಾಲಯದಿಂದ ಬರುತ್ತಿತ್ತು. ಸರಕಾರೀ ಶಾಲೆಗಳಿಗೆ ಮಾತ್ರ ಬಿಸಿಯೂಟ ನೀಡುವುದು ನಿಯಮ ಎನ್ನುವ ಕಾರಣ ನೀಡಿ, ಮಧ್ಯಾಹ್ನದ ಊಟವನ್ನು ನಿಲ್ಲಿಸಲಾಗಿತ್ತು.
ಮತಎಣಿಕೆಯ ಮುನ್ನಾದಿನವಾದ ಸೋಮವಾರದಂದು (ಮೇ 14) ರಮಾನಾಥ ರೈ, ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡಿದ್ದರು.












Click it and Unblock the Notifications