ಕ್ಷೇತ್ರ ಪರಿಚಯ: ಕಾರ್ಕಳದಲ್ಲಿ ಸುನಿಲ್ ಕುಮಾರ್ ಗೆ ಸಿಗುತ್ತಾ 3ನೇ ಗೆಲುವು?

Subscribe to Oneindia Kannada

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆಯ ತಕ್ಕಮಟ್ಟಿಗೆ ದೊಡ್ಡ ಪಟ್ಟಣ ಕಾರ್ಕಳ. ಮಂಗಳೂರಿನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಗೋಮೇಟೇಶ್ವರ ಮೂರ್ತಿ ಪ್ರಸಿದ್ಧಿಯನ್ನು ಪಡೆದಿದೆ.

18ನೇ ಶತಮಾನದ ಸೈಂಟ್ ಲಾರೆನ್ಸ್ ಚರ್ಚ್, ಚತುರ್ಮುಖ ಬಸದಿ, ಪಡುತಿರುಪತಿ, ಅನಂತ ಪದ್ಮನಾಭ ದೇವಸ್ಥಾನ, ಆನೆಕರೆ ಸೇರಿದಂತೆ ಹಲವು ಕೆರೆಗಳನ್ನು ಇಲ್ಲಿ ಕಾಣಬಹುದು.

ಕಾಂಗ್ರೆಸ್ ಹಿರಿಯ ರಾಜಕಾರಣಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇದೇ ಕಾರ್ಕಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

Karnataka Assembly Election 2018: Karkal Constituency Profile

1967ರಲ್ಲಿ ಇಲ್ಲಿ ಬಿಜೆಪಿ (ಹಿಂದಿನ ಭಾರತೀಯ ಜನ ಸಂಘ) ಗೆಲುವು ಸಾಧಿಸಿತ್ತು ಎಂದರೆ ಇವತ್ತಿಗೂ ಅಚ್ಚರಿಯಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅಂದರೆ 1972ರಲ್ಲಿ ಇಲ್ಲಿ ಕಾಂಗ್ರೆಸ್ ನ ವೀರಪ್ಪ ಮೋಯ್ಲಿ ಗೆಲುವು ಸಾಧಿಸಿದ್ದರು. ನಂತರ ಅವರನ್ನು ಸೋಲಿಸುವವರೇ ಇಲ್ಲಿ ಹುಟ್ಟಲಿಲ್ಲ. 1978, 83, 85, 89, 94 ರಲ್ಲಿ ಇಲ್ಲಿ ಮೋಯ್ಲಿ ಗೆದ್ದರು. ಹೀಗೆ ಸತತ ಆರು ಚುನಾವಣೆಗಳಲ್ಲಿ ಗೆದ್ದಿದ್ದಲ್ಲದೆ 1992-94ರ ವರೆಗೆ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೂ ಅವರು ಏರಿದ್ದರು.

1999ರಲ್ಲಿ ಮೋಯ್ಲಿ ಇಲ್ಲಿ ಕಣಕ್ಕಿಳಿಯಲಿಲ್ಲ. ಮುಂದೆ ಅವರು ಕೇಂದ್ರ ರಾಜಕಾರಣದತ್ತ ತಮ್ಮ ಚಿತ್ತ ಹರಿಸಿದರು. ಇಲ್ಲಿ 1999ರಲ್ಲಿ ಕಾಂಗ್ರೆಸ್ ನ ಎಚ್. ಗೋಪಾಲ ಭಂಡಾರಿ ಕಣಕ್ಕಿಳಿದು ಗೆಲುವು ಸಾಧಿಸಿದರು.

2004ರಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಭದ್ರಕೋಟೆ ಮೊದಲ ಬಾರಿಗೆ ಇಲ್ಲಿ ಬಿರುಕು ಬಿಟ್ಟಿತು. ದತ್ತಪೀಠ ಹೋರಾಟದ ಮೂಸೆಯಿಂದ ಹೊರಬಂದ ಯುವ ರಾಜಕಾರಣಿ ವಿ. ಸುನಿಲ್ ಕುಮಾರ್ ಗೋಪಾಲ್ ಭಂಡಾರಿಗೆ ಸೋಲುಣಿಸಿ ಬಹು ದೀರ್ಘಕಾಲದ ನಂತರ ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ಎಳೆದು ತಂದರು.

ಆದರೆ 2008ರಲ್ಲಿ ಮತ್ತೆ ಗೋಪಾಲ್ ಭಂಡಾರಿ ಎದ್ದು ನಿಂತರು. ಸುಮಾರು ಒಂದು ಸಾವಿರ ಮತಗಳಿಂದ ಸುನಿಲ್ ಕುಮಾರ್ ರನ್ನು ಸೋಲಿಸಿ ಮತ್ತೆ ವಿಧಾನಸಭೆಗೆ ಪ್ರವೇಶ ಗಿಟ್ಟಿಸಿದರು.

2013ರ ಚುನಾವಣೆಯಲ್ಲಿ ಫಲಿತಾಂಶ ಪುನಃ ಅದಲು ಬದಲಾಯಿತು. ಈ ಚುನಾವಣೆಯಲ್ಲಿ ಇಡೀ ಉಡುಪಿಯಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ಶಾಸಕರೆಂದರೆ ಸುನಿಲ್ ಕುಮಾರ್ ಮಾತ್ರ. ಸದ್ಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಸುನಿಲ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕ್ಷೇತ್ರದ ಇತಿಹಾಸ ನೋಡಿದರೆ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಳೆದ ನಾಲ್ಕು ಚುನಾವಣೆಗಳಲ್ಲಿ ಸಮಬಲದ ಹೋರಾಟ ನಡೆದಿದ್ದನ್ನು ಗಮನಿಸಬಹುದು. 2013ರಲ್ಲಿ ಕಾಂಗ್ರೆಸಿನ ಎಚ್. ಗೋಪಾಲ್ ಭಂಡಾರಿ ಇಲ್ಲಿ ಸೋಲು ಕಂಡರೂ ಸೋಲಿನ ಅಂತರ ಮಾತ್ರ ಕೇವಲ 4,254 ಮತಗಳಷ್ಟೇ ಆಗಿತ್ತು. ಹೀಗಾಗಿ ಈ ಬಾರಿಯೂ ಇಲ್ಲಿ ಕಾಂಗ್ರೆಸ್ ಅವಕಾಶವಿದೆ. ಕ್ಷೇತ್ರದ ಮೇಲೆ ಜೆಡಿಎಸ್ ಗೆ ಯಾವುದೇ ಹಿಡಿತವಿಲ್ಲ.

ಒಂದೊಮ್ಮೆ ಇಲ್ಲಿ ಕಾಂಗ್ರೆಸ್ ಗೋಪಾಲ್ ಪೂಜಾರಿಯವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಮತ್ತೆ ಯುವ ರಾಜಕಾರಣಿಗಳಾದ ಗೋಪಾಲ ಭಂಡಾರಿ ಮತ್ತು ಸುನಿಲ್ ಕುಮಾರ್ ಮಧ್ಯೆ ತುರುಸಿನ ಸ್ಪರ್ಧೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Karkal assembly constituency of Udupi district. Get election news from Karkal. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ