ಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬೆಂಗಳೂರು, ಮೇ 08: ಕನ್ನಡದ ಪಬ್ಲಿಕ್ ಟಿವಿ ಸುದ್ದಿ ಮಾಧ್ಯಮವು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಕುರಿತು ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯ ಫಲಿತಾಂಶದ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಠಿಯಾಗಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು, ಜೆಡಿಎಸ್ ಕೂಡ ಹಿಂದೆ ಬೀಳದೆ ತನ್ನ ಕಳೆದ ವರ್ಷದ ಸಾಧನೆಯನ್ನೇ ಈ ಬಾರಿಯೂ ಮುಂದುವರೆಸಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.
ಸಮೀಕ್ಷೆ ಪ್ರಕಾರ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 36% ಮತಗಳನ್ನು ಪಡೆಯಲಿದೆ. ಬಿಜೆಪಿ 33% ಮತ ಹಂಚಿಕೆ ಪಡೆಯಲಿದ್ದರೆ. 23% ಮತಗಳನ್ನು ಜೆಡಿಎಸ್ ಪಡೆಯಲಿದೆ ಮತ್ತು ಉಳಿದ 8% ಮತಗಳು ಇತರೆ ಪಕ್ಷ ಹಾಗೂ ಪಕ್ಷಾತೀತ ಅಭ್ಯರ್ಥಿಗಳ ಪಾಲಾಗಲಿವೆ.
ಪಬ್ಲಿಕ್ ಟಿವಿಯ ಜನಾಭಿಪ್ರಾಯದ ಪ್ರಕಾರ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಬಿಜೆಪಿ ಅಲ್ಪ ಹಿನ್ನಡೆ ಅನುಭವಿಸಲಿದೆ ಹಾಗೂ ಜೆಡಿಎಸ್ ಕಳೆದ ಬಾರಿ ಚುನಾವಣೆಯ ಸಾಧನೆಯನ್ನೇ ಮುಂದುವರೆಸಲಿದೆ ಆದರೆ ಈ ಬಾರಿ ಅದು ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚಿದೆ.

ಸಮೀಕ್ಷೆ ಫಲಿತಾಂಶ ಇಲ್ಲಿದೆ
ಪಬ್ಲಿಕ್ ಟಿವಿ ಜನಾಭಿಪ್ರಾಯದ ಪ್ರಕಾರ ಕಾಂಗ್ರೆಸ್ 89-94 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿಯು 86-91 ಸ್ಥಾನಗಳನ್ನು ಪಡೆಯಲಿದೆ. ಜೆಡಿಎಸ್ ಪಕ್ಷವು 38-40 ಸ್ಥಾನಗಳನ್ನು ಪಡೆದರೆ. ಇತರೆ ಪಕ್ಷ ಹಾಗೂ ಪಕ್ಷೇತರರು 0-6 ಸ್ಥಾನಗಳನ್ನು ಗೆಲ್ಲಲಿದ್ದಾರೆ. ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಏರ್ಪಡುತ್ತಿದ್ದು ಮೈತ್ರಿ ಸರ್ಕಾರದ ಸೂಚನೆ ನೀಡುತ್ತಿದೆ.

ಹೈದರಾಬಾದ್ ಕರ್ನಾಟಕದಲ್ಲಿ ಯಾರು ಕಿಂಗ್?
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಈ ಬಾರಿ ಹೊಡೆತ ಬೀಳಲಿದ್ದು ಕಾಂಗ್ರೆಸ್ ಕೇವಲ 17 ಸೀಟು ಪಡೆಯಲಿದೆ. ಬಿಜೆಪಿ ತನ್ನ ಹಿಡಿತ ಉತ್ತಮ ಪಡಿಸಿಕೊಂಡು 20 ಸ್ಥಾನ ಗೆದ್ದರೆ ಜೆಡಿಎಸ್ 2 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಇನ್ನು ಇತರರು 1 ಸ್ಥಾನ ಗೆಲ್ಲಲಿದ್ದಾರೆ ಎನ್ನುತ್ತಿದೆ ಸಮೀಕ್ಷೆ.

ಹಳೆ ಮೈಸೂರಿನಲ್ಲಿ ಜೆಡಿಎಸ್ ಕಿಂಗ್
ಹಳೆ ಮೈಸೂರು ಭಾಗದಲ್ಲಿ ಮಾಮೂಲಿನಂತೆ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಇಲ್ಲಿ ಕಾಂಗ್ರೆಸ್ 21 ಸ್ಥಾನ ಗೆದ್ದರೆ. ಬಿಜೆಪಿ ಗೆಲ್ಲುವುದು ಕೇವಲ 8 ಸ್ಥಾನಗಳಲ್ಲಿ ಜೆಡಿಎಸ್ ಪಕ್ಷ ಇಲ್ಲಿ 28 ಸ್ಥಾನಗಳನ್ನು ಗೆಲ್ಲಲಿದೆ. ಎರಡು ಸ್ಥಾನಗಳು ಇತರರ ಪಾಲಾಗಲಿವೆ.

ಕೈ ಹಿಡಿಯಲಿರುವ ಕರಾವಳಿ
ಕರಾವಳಿ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲಿದೆ ಎನ್ನುತ್ತಿದೆ ಪಬ್ಲಿಕ್ ಟಿವಿ ಸಮೀಕ್ಷೆ. ಇಲ್ಲಿ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ 8 ಸ್ಥಾನಗಳಲ್ಲಿ ಹಾಗೂ ಜೆಡಿಎಸ್ ಕೇವಲ 1 ಸ್ಥಾನದಲ್ಲಿ ಗೆಲ್ಲಲಿದೆಯಂತೆ. ಪಕ್ಷೇತರರು ಇಲ್ಲಿ ಗೆಲವು ಸಾಧಿಸಲಾರರು ಎಂದು ಸಮೀಕ್ಷೆ ಹೇಳಿದೆ.

ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಕಿಂಗ್
ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆಯಂತೆ. ಈ ಭಾಗದಲ್ಲಿ ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 14 ಸ್ಥಾನಗಳಲ್ಲಿ ಜೆಡಿಎಸ್ 6 ಸ್ಥಾನಗಳಲ್ಲಿ ಗೆಲ್ಲಲಿದೆ. ಪಕ್ಷೇತರರು ಇಲ್ಲಿ ಗೆಲ್ಲಲಾರರು.

ಬೆಂಗಳೂರಿನ ರಾಜ ಯಾರು
ರಾಜ್ಯದ ರಾಜಧಾನಿಯಲ್ಲಿ ಕಾಂಗ್ರೆಸ್ ರಾಜನಾಗುವ ಎಲ್ಲ ಲಕ್ಷಣಗಳು ಸಮೀಕ್ಷೆಯಲ್ಲಿ ಗೋಚರಿಸುತ್ತಿವೆ. ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆದ್ದರೆ. ಬಿಜೆಪಿ 12 ಹಾಗೂ ಜೆಡಿಎಸ್ 1ರಲ್ಲಿ ಗೆಲುವು ಸಾಧಿಸಲಿದೆ ಹಾಗೂ ಇತರ ಪಕ್ಷಗಳು ಇಲ್ಲಿ ಖಾತೆ ತೆರೆಯಲಾರವು ಎಂದಿದೆ ಸಮೀಕ್ಷೆ.












Click it and Unblock the Notifications