ಸೂರ್ಯ ನಮಸ್ಕಾರ ಮಾಡುವಾಗ ಈ ಅಂಶ ಗಮನದಲ್ಲಿರಲಿ
ಸಾಮಾನ್ಯವಾಗಿ ನಮ್ಮ ಬೆಳಗಿನ ದಿನ ಆರಂಭವಾಗುವುದು ರವಿ ಮೂಡಿದ ಮೇಲೆ. ಅವನು ಬರುವವರೆಗೂ ಸುಖನಿದ್ರೆಯಲ್ಲಿರುವ ನಮ್ಮನ್ನು ಎಚ್ಚರಿಸುವುದು ಚಿಲಿಪಿಲಿ ಸದ್ದು ಮಾಡುವ ಪಕ್ಷಿಗಳೆಂದರೆ ತಪ್ಪೇನಿಲ್ಲ. ರವಿಯು ಜಗಕೆ ಬೆಳಕು ನೀಡುವವನು, ಅವನಿಂದಲೇ ನಾವು ಬದುಕಿರುವುದು. ಏಕೆಂದರೆ ನಾವು ಉಸಿರಾಡುವ ಗಾಳಿ ನೀಡುವ ಗಿಡಗಳಿಗೆ ರವಿಯೇ ಮೂಲ ಕಾರಣ. ಆದ್ದರಿಂದ ನಾವು ರವಿಗೆ ನಮಸ್ಕರಿಸುವುದು ನಮ್ಮ ಆದ್ಯ ಕರ್ತವ್ಯವೆಂದುಕೊಳ್ಳಬೇಕು.
ಬದುಕು ನೀಡಿದವರಿಗೆ ನಮಸ್ಕರಿಸುವುದು ನಮ್ಮ ಕರ್ತವ್ಯವೆಂದೇ ತಿಳಿದುಕೊಳ್ಳಬೇಕು. ಸೂರ್ಯಕಾಂತಿಯನ್ನೊಮ್ಮೆ ನೋಡಿದರೆ ಗೊತ್ತಾಗುತ್ತದೆ. ಅದು ಸೂರ್ಯನಿರುವ ದಿಕ್ಕಿನೆಡೆಗೆ ಹೊತ್ತಿಗೆ ಸರಿಯಾಗಿ ಬಾಗುತ್ತಿರುತ್ತದೆ. ಸಂಜೆ ಮುದುಡಿಕೊಳ್ಳುತ್ತದೆ. ನಂತರ ಬೆಳಗಿನ ಹೊತ್ತು ಸೂರ್ಯ ಹುಟ್ಟುವ ದಿಕ್ಕಿಗೆ ಮತ್ತೆ ಮುಖ ಮಾಡಿ ನಿಲ್ಲುತ್ತದೆ. ಕನಿಷ್ಠ ಗಿಡವೆನಿಸಿಕೊಂಡಿರುವ ಸೂರ್ಯಕಾಂತಿಯ ಗಿಡದ ಬುದ್ಧಿಯ ಕಣವಷ್ಟಾದರೂ ನಮ್ಮಲ್ಲಿದ್ದರೆ ನಾವೂ ಸೂರ್ಯ ನಮಸ್ಕಾರವನ್ನು ಮಾಡುವುದು ನಮ್ಮ ಧರ್ಮ ಎಂದುಕೊಳ್ಳಬೇಕು.
ಮೊದಲಿಗೆ ಯೋಗಾಭ್ಯಾಸ ಆರಂಭಿಸುವ ಮುನ್ನ ವಹಿಸಿಕೊಳ್ಳಬೇಕಾದ ಮುಂಜಾಗೃತೆಯ ಕುರಿತಾದ ಈ ಹಿಂದಿನ ಲೇಖನವನ್ನೊಮ್ಮೆ ಓದಿಕೊಂಡು ಮನದಟ್ಟು ಮಾಡಿಕೊಳ್ಳಿ. ನಂತರ ಸೂರ್ಯ ನಮಸ್ಕಾರ ಮಾಡಲು ಮುಂದಡಿ ಇಡಿ. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ಸೂರ್ಯ ನಮಸ್ಕಾರ ಮಾಡುವ ಮುನ್ನ ಮಾಡಬೇಕಾದ ಕೆಲವೊಂದು ಸೂಚನೆಗಳಿವು. [ಯೋಗಾಭ್ಯಾಸ ಆರಂಭಿಸುವವರಿಗೆ ಉಪಯುಕ್ತ ಟಿಪ್ಸ್]

* ಸೂರ್ಯ ನಮಸ್ಕಾರ ಮಾಡುವವರು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿರಬೇಕು.
* ಮಳೆಗಾಲವಾಗಿದ್ದರಿಂದ ಮಳೆ ಹನಿ ಬೀಳದಿರುವ ಸ್ಥಳದಲ್ಲಿ ನಿಲ್ಲಬೇಕು.
* ಕನ್ನಡಕ ಧರಿಸಿಕೊಳ್ಳುವವರು ಅದು ಗಟ್ಟಿಯಾಗಿ ಕಣ್ಣಿಗೆ ಹೊಂದಿಕೆಯಾಗಿದ್ದರೆ ಮಾತ್ರ ಧರಿಸಿಕೊಂಡಿರಬೇಕು.
* ಜೇಬಿನಲ್ಲಿ ಯಾವುದೇ ಅನವಶ್ಯಕ ವಸ್ತುಗಳನ್ನು ಇಟ್ಟುಕೊಂಡಿರಬಾರದು.
* ಸೂರ್ಯ ನಮಸ್ಕಾರ ಮಾಡುವ ಮುನ್ನ ಕನಿಷ್ಠ 10 ನಿಮಿಷ ವಾರ್ಮ್ ಅಪ್ ಮಾಡಿರಬೇಕು. ವಾರ್ಮ್ ಅಪ್ ಅಂದರೆ, ವಾಕಿಂಗ್, ಜಾಗಿಂಗ್, ಸ್ಕಿಪ್ಪಿಂಗ್, ರನ್ನಿಂಗ್ ಮುಂತಾದವುಗಳು.
* ಕೊರಳಿನಲ್ಲಿ, ಕೈಯಲ್ಲಿ ಆಭರಣಗಳಿದ್ದರೆ ಅವುಗಳನ್ನು ಮುಂಜಾಗೃತೆಗಾಗಿ ತೆಗೆದಿಡಬೇಕು. ನಂತರ ಧರಿಸಿಕೊಳ್ಳಬಹುದು.
* ಸೂರ್ಯ ನಮಸ್ಕಾರವನ್ನು ಮೊದಲನೇ ಸಲ ಮಾಡುವವರು ಕೇವಲ 10 ಬಾರಿ ಮಾಡಬೇಕು. ನಂತರ ದಿನಕ್ಕೊಂದರಂತೆ ಹೆಚ್ಚಿಸಿಕೊಳ್ಳುತ್ತ ಒಂದು ವಾರದ ಹೊತ್ತಿಗೆ ಕನಿಷ್ಠ 15 ಸೂರ್ಯ ನಮಸ್ಕಾರಗಳನ್ನು ಹಾಕುವ ಅಭ್ಯಾಸ ಮಾಡಿ ಪರಿಣಿತರಾಗಬೇಕು.
* ಮೊದಲನೇ ಬಾರಿ ಆಸನಗಳನ್ನು ಮಾಡುವವರಿಗೆ ಸ್ವಲ್ಪ ಮೈ ಕೈ ನೋವು ಬರುತ್ತದೆ. ಆದರೆ ಚಿಂತೆ ಮಾಡದೇ ಯೋಗಾಭ್ಯಾಸ ಮುಂದುವರೆಸಿ.
* ಅವರು ಬರುತ್ತಾರೆ ಇವರು ಬರುತ್ತಾರೆ ಎಂದುಕೊಂಡು ಯಾರಿಗೂ ಕಾಯುವುದು ಬೇಡ. ನಿಮ್ಮಷ್ಟಕ್ಕೆ ನೀವು ಆರಂಭಿಸಬೇಕು.
* ಮನೆಮಂದಿ ಎಲ್ಲರೂ ಮಾಡುವುದು ತುಂಬಾ ಸೂಕ್ತ. ಸಮಯ ಹೊಂದಾಣಿಕೆ ಆಗದಿದ್ದರೆ ಸಮಯ ಬದಲಾಯಿಸಿಕೊಂಡು ಯೋಗಾಭ್ಯಾಸ ಮಾಡಲು ಸೂಚಿಸಬೇಕು.
* ಮನೆಯ ಹಿರಿಯರಾಗಿದ್ದರೆ ಮನೆಯ ಕಿರಿಯ ಸದಸ್ಯರಿಗೆ, ಮನೆಯ ಕಿರಿಯ ಸದಸ್ಯರಾಗಿದ್ದರೆ ಮನೆಯ ಹಿರಿಯರಿಗೆ ಯೋಗಾಭ್ಯಾಸದ ಮಹತ್ವ ಹೇಳಿ ಕೊಡಬೇಕು.
* ವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಯೋಗಾಭ್ಯಾಸ ಸೂಕ್ತವೆಂದು ತಿಳಿದುಕೊಳ್ಳಬೇಕು. ತಿಂಗಳ ಬಜೆಟ್ ನಲ್ಲೂ ಉಳಿತಾಯ ಕಂಡುಕೊಳ್ಳಬಹುದು.
ಸೂರ್ಯ ನಮಸ್ಕಾರವು 12 ಆಸನಗಳನ್ನು ಒಳಗೊಂಡಿರುವ ಒಂದೇ ಆಸನವಾಗಿದೆ. ಸೂರ್ಯ ನಮಸ್ಕಾರ ಮಾಡುವ ಬಗೆ ಮುಂದಿನ ಲೇಖನದಲ್ಲಿದೆ.












Click it and Unblock the Notifications