ಮುಖಪುಟ
*ಶ್ರೀವತ್ಸ ಜೋಶಿ
ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ ।
ಬಾಕಿ ಉಳಿದ ನಾಲ್ಕಾಣೆ ನಾಳೆ ಕೊಡ್ತೇನೆ.... ।।
ಗಣೇಶಸ್ತುತಿಯಾಂದಿಗೆ ಈ ಹೊಸ ಅಂಕಣ ‘ವಿಚಿತ್ರಾನ್ನ’ದ ಶುಭಾರಂಭ. ಗಣೇಶ ಸ್ತುತಿಯೇ ವಿಚಿತ್ರವಾಗಿದೆಯಲ್ಲ ಅಂತ ನೀವು ಅಂದುಕೊಂಡದ್ದು ನೂರು ಪಾಲು ಸತ್ಯ. ಇದು ಕಂತುಗಳಲ್ಲಿ (ಇನ್ಸ್ಟಾಲ್‌ಮೆಂಟ್ಸ್) ಗಣೇಶ ಮಹಾರಾಜನಿಗೆ ಕಪ್ಪ ಕಾಣಿಕೆ ಸಲ್ಲಿಸುವ ವಿಧಾನ. ಕಂತುಪಿತನ ದಿವ್ಯನಾಮ ಮಂತ್ರವನ್ನು ಜಪಿಸುವವಗೆ... ಹಾಗಾಗಿ ಕಂತುಗಳಲ್ಲಿ ಕಾಣಿಕೆ. ಇವತ್ತು ಒಂದಾಣೆ. ಬಾಕಿ ನಾಲ್ಕಾಣೆಯ ಸಂಗತಿ ಆಮೇಲೆ.
ಯಾಕೆ ಕಂತುಗಳಲ್ಲಿ ?
ಈ ಹೊಸ ಅಂಕಣ (ಕಾಲಮ್) ಇವತ್ತಿನ ಮಟ್ಟಿಗೆ ಅಂದರೆ ವರ್ತಮಾನ ಕಾಲಮ್‌ನಲ್ಲಿ ಇದೆ ಸರಿ. ನಿಮಗೆ, ಅರ್ಥಾತ್ ಓದುಗರಿಗೆ, ಇಷ್ಟವಾಗದಿದ್ದರೆ ಮುಂದಿನ ವಾರಗಳಲ್ಲಿ , ಅಂದರೆ ಭವಿಷ್ಯತ್ ಕಾಲಮ್‌ನಲ್ಲಿ ಇರುತ್ತದೆಂದು ಏನು ಗ್ಯಾರಂಟಿ? ಗಣೇಶ ಹೇಗೂ ಎಲ್ಲಾ ಅಡ್ವಾನ್ಸ್ ಈಗಲೇ ಬೇಕು ಅಂತ ಕೇಳುವ ಕಂಟ್ರಾಕ್ಟರ್ ಅಲ್ಲ. ಹಾಗಾಗಿ ವಿಚಿತ್ರಾನ್ನ ಕಾಲಮ್ ಭವಿಷ್ಯತ್ ಕಾಲಮ್‌ಗೆ ಒಂದೊಂದು ವಾರದಂತೆ ಕಾಲಿಡುತ್ತಿದ್ದಂತೆಯೇ ಗಣೇಶನ ಕಪ್ಪಕಾಣಿಕೆಯ ಕಂತು ರಿಲೀಸ್. ಇದು ಗಣೇಶನೊಂದಿಗೆ ನಮ್ಮ ‘ಮೆಮೊರಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್’
ನಿಮಗೆ ಇದುವರೆಗೆ ಗೊತ್ತಿದ್ದ ಚಿತ್ರಾನ್ನಕ್ಕೂ ಈ ವಿಚಿತ್ರಾನ್ನಕ್ಕೂ ಬಹಳ ಹೋಲಿಕೆಯಿದೆ. ಒಗ್ಗರಣೆ-ಉಪ್ಪು-ಖಾರ-ಹುಳಿ ಎಲ್ಲ ಸಮಪ್ರಮಾಣದಲ್ಲಿದ್ದು ರುಚಿರುಚಿಯಾಗಿರುತ್ತದೆ ಎಂಬುದಂತೂ ಖಂಡಿತ. ಅಲಂಕಾರಕ್ಕೆ ಮಾತ್ರ ಇದ್ದು ತಿನ್ನುವಾಗ ತೆಗೆದಿಡುವ ಕರಿಬೇವು ಸೊಪ್ಪು ಈ ವಿಚಿತ್ರಾನ್ನದಲ್ಲಿದೆ, ಆದರೆ ಹದವಾಗಿ. ಹಾಗೆಯೇ ಇದನ್ನು ಸೇವಿಸಿ ‘ಇಂಗು ತಿಂದ ಮಂಗ’ನಂತೆ ನಿಮ್ಮ ಮುಖ ಆಗುವುದು ನಮಗಿಷ್ಟವಿಲ್ಲವಾದ್ದರಿಂದ ಇಂಗು ಇದ್ದೂ ಇಲ್ಲದಂತೆ ಭಾಸವಾಗುವಷ್ಟೇ ಹಾಕಲಾಗಿದೆ. ಎಟುಕದ ದ್ರಾಕ್ಷಿ ಹುಳಿ ಎಂದು ನೀವು ಇದನ್ನು ಬಿಟ್ಟು ಬೇರೆ ಜಾಲತಾಣಗಳಿಗೆ ಹೋಗುವ ಪ್ರಮೇಯ ಬಾರದಂತೆ ಹುಳಿ ಕಡಿಮೆ ಇರುವ ಲಿಂಬೆಹಣ್ಣುಗಳ ಉಪಯೋಗವಾಗಿದೆ. ಹುರಿದ ಶೇಂಗಾಬೀಜ, ಅರಿಸಿನ, ಕೊತ್ತುಂಬ್ರಿ ಸೊಪ್ಪು ಎಲ್ಲ ಮಿಳಿತವಾಗಿವೆ. ಒಂದೊಂದು ಕಲ್ಲು ಸಿಕ್ಕರೆ ಅದಕ್ಕೆ ನಾವು ಜವಾಬ್ದಾರರಲ್ಲ. ಪಡಿತರ ಇಲಾಖೆಯವರು ಕೊಡುವ ರೇಷನ್ ಅಕ್ಕಿಯಲ್ಲಿ ಅಲ್ಲದೆ ಬೇರೆಲ್ಲಿ ಕಲ್ಲು ಸಿಗುತ್ತದೆ?
ಇಂತು ಈ ಪರಿಯಲ್ಲಿ ವಿಚಿತ್ರಾನ್ನದ ಪಕ್ಷಿನೋಟ. ಒಗಟು, ಹಾಸ್ಯ, ಪನ್, ವಿಡಂಬನೆ, ಅಣಕುಹಾಡು, ಜಾಣ್ಮೆಲೆಕ್ಕ, ತರ್ಕ-ಕುತರ್ಕ, ಕ್ಷೇಮ-ಸಮಾಚಾರ... ಎಲ್ಲ ಬರಲಿದೆ ಈ ವಿಚಿತ್ರಾನ್ನ ಅಂಕಣದಲ್ಲಿ . ಪಾಂಡಿತ್ಯ ಪ್ರದರ್ಶನ ಇಲ್ಲ , ಎಕೆಂದರೆ ನಾನು ಪಂಡಿತ ಅಲ್ಲ. ನಾನಂದದ್ದೇ ವೇದವಾಕ್ಯ ಅಂತಿಲ್ಲ, ಯಾಕೆಂದರೆ ಆ ಅಹಂಭಾವ ಖಂಡಿತ ಇಲ್ಲ. ಒಟ್ಟಿನಲ್ಲಿ ನಾವೂ, ನೀವೂ ಮನಸೋದಿಚ್ಛ ನಗುನಗುತ್ತ ಮಾತಾಡಿ ‘ಯೂ ಮೇಡ್ ಮೈ ಡೇ..’ ಎಂದು ದಿನವನ್ನು ಉಜ್ವಲವಾಗಿಸುವ ಒಂದು ಪುಟ್ಟ ಆಸೆ-ಅಭಿಲಾಷೆಯನ್ನಿಟ್ಟುಕೊಂಡು ವಿಚಿತ್ರಾನ್ನ ಎಂಬ ‘ಲೈಟಾಗಿರುವ ಆದರೆ ಲೈಟ್ ಬೀರುವ’ ಅಂಕಣದ ಮೊದಲ ‘ತುತ್ತ’ನ್ನು ನಿಮ್ಮ ಕೈಯಲ್ಲಿಡುತ್ತಿದ್ದೇನೆ.
ತಿನ್ನಿ; ವ್ಹಾ! ಚೆನ್ನಾಗಿದೆ ಎನ್ನಿ. ಸಂಕೋಚವಿಲ್ಲದೆ, ನಿಮ್ಮ ಗೆಳೆಯನೆಂದು ಭಾವಿಸಿ, ಹೇಗಿದೆಯೆಂದು ತಿಳಿಸಿ. ವಿ-ಅಂಚೆಯಲ್ಲಿ : [email protected]












Click it and Unblock the Notifications