• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಸಂಕೇಶ್ವರದ ದಿನಗಳು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಸುಮಾರು ಮೂರು ದಶಕಗಳ ಹಿಂದಿನ ಘಟನೆ. ಒಂದು ಮನೆಯಲ್ಲಿ ಗುರುವಾರ ಗುರು ರಾಘವೇಂದ್ರರ ಭಜನೆ ಏರ್ಪಾಡಾಗಿತ್ತು. ಸಂಜೆ ಭಜನೆಗೆಂದು ಎಲ್ಲ ಜನರು ಸೇರಿದ್ದರು. ಮನೆಯ ಯಜಮಾನತಿ ರಾಯರ ಮತ್ತು ದೇವರ ಫೋಟೊ ಇಟ್ಟು ಅಲಂಕರಿಸಿ, ಪೂಜೆಯ ಸಾಮಗ್ರಿಗಳು, ಮಂಗಳಾರತಿ, ನೈವೇದ್ಯಗಳೆಲ್ಲವನ್ನೂ ತಯಾರು ಮಾಡಿದ್ದರು. ಭಜನೆಗೆಂದು ಜನರೆಲ್ಲ ಬಂದು ಸೇರಿದರೂ ಸಂಜೆ ಐದೂವರೆಗೆಲ್ಲ ಬಂದು ಬಿಡುತ್ತಿದ್ದ ಮನೆಯ ಯಜಮಾನರು ಆಫೀಸಿನಿಂದ ಬರಲೇ ಇಲ್ಲ. ಕೊನೆ ಘಳಿಗೆಯಲ್ಲಿ ಅದೇನೋ ಕೆಲಸದಲ್ಲಿ ಸಿಕ್ಕುಹಾಕಿಕೊಂಡರು. ಕೊನೆಗೆ ಆರೂವರೆಗೆ ಅವರಿಂದ ಫೋನು ಬಂದಿತು. ಅವರಿಗೆ ವಾಪಸ್ ಬರಲು ಇನ್ನೂ ಒಂದು ಗಂಟೆಯಾಗುತ್ತದೆ ಎಂದು ತಿಳಿಯಿತು. ನೆರೆದಿದ್ದ ಜನರೆಲ್ಲರಿಗೂ ತುಂಬಾ ತಡವಾಗಿ ಬಿಡುತ್ತದೇನೋ ಎಂದು ಆತಂಕವಾಯಿತು.

ಅಷ್ಟರಲ್ಲಿ ಆ ಮನೆಯ ಹನ್ನೊಂದು ವರ್ಷದ ಹುಡುಗ ತಾನು ಭಜನೆ ಶುರು ಮಾಡುತ್ತೇನೆ ಎಂದು ಮುಂದೆ ಬಂದ. ತನ್ನ ತಂದೆಯ ಸ್ಥಳದಲ್ಲಿ ಕುಳಿತು ಇಕ್ಕೆಲದಲ್ಲಿದ್ದ ತಬಲಾ ಮತ್ತು ಹಾರ್ಮೋನಿಯಂ ವಾದಕರ ಪ್ರೋತ್ಸಾಹದಿಂದ ಶುರು ಮಾಡಿಯೇ ಬಿಟ್ಟ. ನೆರೆದಿದ್ದ ಸಭಿಕರಿಗೆ ಅಚ್ಚರಿಯಾಗುವಂತೆ ಮುಂದಿನ ಒಂದೂವರೆ ತಾಸಿನಲ್ಲಿ ಮಾಧ್ವರ ಪದ್ಧತಿಯಂತೆ ಪೂರ್ತಿಯಾಗಿ ತಾರತಮ್ಯೋಕ್ತ ಭಜನೆಯನ್ನು ಮಾಡಿ ಮುಗಿಸಿಯೇ ಬಿಟ್ಟ. ಎಲ್ಲ ಜನ ವಾಹ್ ವಾಹ್ ಎಂದಿದ್ದೇ ಎಂದಿದ್ದು. ನೈವೇದ್ಯ, ಮಂಗಳಾರತಿ, ಮಂತ್ರಪುಷ್ಪಗಳು ಮುಗಿದು ಜನರೆಲ್ಲ ಪ್ರಸಾದ ಸ್ವೀಕರಿಸಿ ಹೊರಟು ಹೋದ ಮೇಲೆ ಮನೆಯ ಯಜಮಾನರು ವಾಪಸ್ಸಾದರು. ಹಾದಿಯಲ್ಲಿಯೇ ಇದಿರಾದ ಜನರಿಂದ ಮನೆಯಲ್ಲಿ ನಡೆದ ಘಟನೆ ಅವರಿಗೆ ತಿಳಿದಿದ್ದರಿಂದ ಅವರ ಮುಖದಲ್ಲಿ ಪ್ರಸನ್ನತೆ ತುಳುಕಾಡುತ್ತಿತ್ತು.

ಯಶಸ್ಸಿನ ಬಗ್ಗೆ ಮಾತಾಡೋರೆ ಎಲ್ಲ, ಸೋಲಿನ ಬಗ್ಗೆ ಸೊಲ್ಲೇ ಇಲ್ಲ! ಯಶಸ್ಸಿನ ಬಗ್ಗೆ ಮಾತಾಡೋರೆ ಎಲ್ಲ, ಸೋಲಿನ ಬಗ್ಗೆ ಸೊಲ್ಲೇ ಇಲ್ಲ!

ಅಂದ ಹಾಗೆ, ಇದು ನಮ್ಮ ಮನೆಯಲ್ಲಿಯೇ ನಡೆದ ಘಟನೆ. ಅಂದು ಪೂರ್ತಿ ಒಂದೂವರೆ ಗಂಟೆಗಳ ಕಾಲ ಭಜನೆ ಮಾಡಿದ ಆ ಹುಡುಗ ನಾನೇ. ನನಗೆ ನೆನಪಿರುವ ಮಟ್ಟಿಗೆ ಮೊತ್ತ ಮೊದಲು ನಾನು ಸಂಪೂರ್ಣವಾಗಿ ಕಲಿತ ಹಾಡೆಂದರೆ ವಿಜಯದಾಸರ ಜನಪ್ರಿಯ ಕೃತಿ "ಪವಮಾನ ಪವಮಾನ ಜಗದ ಪ್ರಾಣ". ನಾನು ಸುಮಾರು ಆರು ವರ್ಷದವನಾಗಿರಬಹುದು. ಬಹುಶಃ ಅಂದಿನ ದಿನಗಳಲ್ಲಿ ಸಂಗೀತದಲ್ಲಿ ಆಸಕ್ತಿ ಇರುವ ಎಲ್ಲ ಮಕ್ಕಳು ಈ ಪದವನ್ನು ಖಂಡಿತವಾಗಿ ಕಲಿಯುತ್ತಿದ್ದರು ಎಂದು ನನ್ನ ಅನಿಸಿಕೆ. ಮನೆಯಲ್ಲಿ ತಂದೆ ತಾಯಿ ಇಬ್ಬರಿಗೂ ಸಂಗೀತದ ಆಸಕ್ತಿ. ತಂದೆಯಂತೂ ಶಾಸ್ತ್ರೀಯ ಸಂಗೀತದ ಪಕ್ಕಾ ಅಭಿಮಾನಿ. ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅವರಿಂದಲೇ ಹಾಡುವ ಹುಚ್ಚು ನಮಗೆ ಬಳುವಳಿಯಾಗಿ ಬಂದದ್ದು.

ಅಣ್ಣ ಹಾಡುವುದು ಮಾತ್ರವಲ್ಲ. ತಬಲಾ ಕೂಡ ಕಲಿತಿದ್ದ. ಮನೆಯಲ್ಲಿದ್ದ ತಬಲಾ ತೆಗೆದುಕೊಂಡು ತನಗೆ ತಾನೇ ತೀನ್ ತಾಲದ ಠೇಕಾ ಹಿಡಿಯುವುದನ್ನು ಕಲಿತಿದ್ದ ಅವನನ್ನು ನೋಡಿದ ಎಲ್ಲರೂ ತಬಲಾ ಕಲಿಯಲಿಕ್ಕೆ ಹಾಕಿ ಎಂದು ತಂದೆ ತಾಯಿಗಳಿಗೆ ಸಲಹೆ ನೀಡತೊಡಗಿದರು. ಅಂತೆಯೇ ಅವನು ಬಿಜಾಪುರದ ಖ್ಯಾತ ಸಂಗೀತ ಶಿಕ್ಷಕರಾದ ಥಿಟೆ ಅವರ ಹತ್ತಿರ ಸುಮಾರು ಒಂದು ವರ್ಷದ ಮಟ್ಟಿಗೆ ಕಲಿತ ಎಂದು ನೆನಪು. ತಂದೆಯವರು ಕೆಲಸದ ಮೇಲೆ ಬೆಳಗಾವಿ ಜಿಲ್ಲೆಗೆ ಹೋದ ನಂತರ ಅವನ ಕಲಿಕೆ ನಿಂತು ಹೋಯಿತು. ಮುಂದೆಯೂ ಅವನಿಗೆ ಕಲಿಯುವ ಅವಕಾಶ ದೊರಕಲಿಲ್ಲ. ಅವನಿಗೆ ತಬಲಾ ಸಹಜವಾಗಿ ಒಲಿದು ಬಂದ ವಿದ್ಯೆಯಾಗಿತ್ತು. ಮುಂದೆ ಕಲಿಯಲು ಅವನಿಗೆ ಅವಕಾಶ ದೊರಕಿದ್ದರೆ ತಬಲಾ ವಾದನದಲ್ಲಿ ಸಮರ್ಥ ಕಲಾವಿದನಾಗಿ ಹೊರಹೊಮ್ಮುತ್ತಿದ್ದ ಎಂದು ಅನೇಕ ಬಾರಿ ಅಂದುಕೊಳ್ಳುತ್ತೇನೆ.

ನನಗೆ ನೆನಪಿರುವ ಮಟ್ಟಿಗೆ ಮೊಟ್ಟ ಮೊದಲು ವೇದಿಕೆಯ ಮೇಲೆ ಹಾಡಿದ್ದು ತಂದೆಯವರ ಬಿಜಾಪುರದ ಆಫೀಸಿನ ವಾರ್ಷಿಕ ಉತ್ಸವದಲ್ಲಿ. ನಾನು ಮತ್ತು ಅಣ್ಣ ಇಬ್ಬರೂ ಜಂಟಿಯಾಗಿ ಪವಮಾನ ಪದವನ್ನು ಹಾಡಿದ್ದೆವು. ನಾನು ಸುಮಾರು ಆರು ವರ್ಷದವನಾಗಿರಬಹುದು. ನಮಗೆ ಅರಿಷಿಣ ಹಳದಿ ಬಣ್ಣದ ಪೆನ್ನನ್ನು ಬಹುಮಾನವಾಗಿ ನೀಡಿದ್ದರು. ನನಗೆ ನಾನು ಹಾಡು ಹಾಡಿದ್ದಕ್ಕಿಂತ ಆ ಅರಿಷಿಣ ಹಳದಿ ಪೆನ್ನು ಸಿಕ್ಕಿದ್ದು ಖುಷಿ ತಂದಿತ್ತು. ಸದಾ ಅದನ್ನು ಹತ್ತಿರವೇ ಇಟ್ಟುಕೊಂಡಿರುತ್ತಿದ್ದೆ.

ಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣ

ಅಲ್ಲಿಂದ ಮುಂದೆ ನಾವೆಲ್ಲ ಸಂಕೇಶ್ವರಕ್ಕೆ ಬಂದ ನಂತರ ತಂದೆ ಪ್ರತೀ ಗುರುವಾರ ಸಂಜೆ ನಮ್ಮ ಮನೆಯಲ್ಲಿ ಭಜನೆ ಕಾರ್ಯಕ್ರಮ ಇಟ್ಟುಕೊಳ್ಳುತ್ತಿದ್ದರು. ಸುತ್ತಮುತ್ತಲಿನ ಅನೇಕ ಜನರು ಭಜನೆ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಈ ಭಜನೆ ಕಾರ್ಯಕ್ರಮ ಸುಮಾರು ಎರಡು ತಾಸುಗಳಷ್ಟು ನಡೆಯುತ್ತಿತ್ತು. ಉತ್ತರ ಕರ್ನಾಟಕದ ನಮ್ಮ ಭಾಗದ ಭಜನಾ ಕಾರ್ಯಕ್ರಮದಲ್ಲಿ ಸಾಮೂಹಿಕ ಗಾನ ಕಡಿಮೆಯೇ. ಹಾಡಲು ಬಲ್ಲ ಮತ್ತು ಹಾಡುವ ಇಚ್ಛೆಯುಳ್ಳ ಎಲ್ಲರೂ ಒಬ್ಬೊಬ್ಬರಾಗಿಯೇ ಹಾಡುವುದು ರೂಢಿ. ಹೀಗಾಗಿ ಇಂತಹ ಭಜನೆಗಳಲ್ಲಿ ಸಾಮಾನ್ಯವಾಗಿ ಸುಶ್ರಾವ್ಯವಾಗಿ ಹಾಡಬಲ್ಲಂಥವರು ಹೆಚ್ಚು ಅವಕಾಶ ಪಡೆಯುತ್ತಾರೆ. ಹೀಗಾಗಿ ನಮ್ಮ ತಂದೆ, ತಾಯಿಯರನ್ನೊಳಗೊಂಡಂತೆ ಕೆಲವೇ ಜನ ಹಾಡುತ್ತಿದ್ದರು. ನನಗೆ ಕೂಡ ಕೆಲವೊಮ್ಮೆ ಅವಕಾಶ ದೊರೆಯುತ್ತಿತ್ತು. ಇಂತಹ ಒಂದು ಭಜನೆ ಕಾರ್ಯಕ್ರಮದಲ್ಲಿಯೇ ಮೇಲೆ ನಾನು ಹೇಳಿದ ಘಟನೆ ನಡೆದದ್ದು.

Sankeshwar Days - part 7 : Bhajans and Classical music

ಅಂದು ನನ್ನ ತಂದೆಯವರಿಗೆ ನನಗೆ ಶಾಸ್ತ್ರೀಯ ಗಾಯನ ಕಲಿಸಿ ಎಂದು ಅನೇಕ ಜನ ಹೇಳಿದ್ದರಂತೆ. ನಮ್ಮ ಮನೆಯ ಭಜನೆಗಾಗಿ ತಂದೆಯವರ ಮಿತ್ರರಾದ ತಬಲಾ ವಾದಕ ನೇರಲೇಕರ್ ಮತ್ತು ಹಾರ್ಮೋನಿಯಂ ವಾದಕರಾದ ವೈದ್ಯ ಅವರು ಹಾಜರಿರುತ್ತಿದ್ದರು. ಅವರಿಬ್ಬರೂ ಶಾಸ್ತ್ರೀಯವಾಗಿ ಈ ವಾದ್ಯಗಳನ್ನು ಕಲಿತವರಲ್ಲ ಎಂದು ನನ್ನ ನೆನಪು. ಸ್ವಯಂ ಪ್ರತಿಭೆಯಿಂದಲೇ ತಕ್ಕ ಮಟ್ಟಿಗೆ ನುಡಿಸುವುದನ್ನು ಕಲಿತುಕೊಂಡಿದ್ದರು. ಅವರು ಕೂಡ ತಂದೆಗೆ ಬಲವಾಗಿ ಶಿಫಾರಸು ಮಾಡಿದರು. ಅದರಂತೆ ನನಗೆ ಮನೆಯಲ್ಲಿಯೇ ಸಂಗೀತ ಕಲಿಸಲು ಗುರುಗಳೊಬ್ಬರನ್ನು ಗೊತ್ತು ಮಾಡಿದರು. ಹಿರೇಮಠ ಎಂಬ ಆ ಗುರುಗಳು ವೃದ್ಧರಾಗಿದ್ದರಿಂದ ಅವರು ಕಲಿಸಲು ಬಂದಿದ್ದೇ ಕಡಿಮೆ. ನಾನು ಕಲಿತದ್ದೂ ಕಡಿಮೆ! ಸಂಕೇಶ್ವರದಂತಹ ಚಿಕ್ಕ ಊರಿನಲ್ಲಿ ಬೇರಾರೂ ಸಂಗೀತ ಕಲಿಸಲು ಸಿಗಲಿಲ್ಲ ಎಂದು ಕಾಣುತ್ತದೆ.

ಹರಗಾಪುರ ಹಳ್ಳಿ ಸಹಪಾಠಿಗಳಾದ ಕಾಂಬಳ್ಯಾ ಕಣಕಣ್ಯಾ ಲೋಹ್ಯಾಹರಗಾಪುರ ಹಳ್ಳಿ ಸಹಪಾಠಿಗಳಾದ ಕಾಂಬಳ್ಯಾ ಕಣಕಣ್ಯಾ ಲೋಹ್ಯಾ

ಸಂಕೇಶ್ವರಕ್ಕೆ ಬಂದ ಹೊಸದರಲ್ಲಿ ಒಂದು ರಾತ್ರಿ ನಮ್ಮ ಮನೆಯಲ್ಲಿ ಭಜನೆ ನಡೆಯುತ್ತಿರುವಾಗ, ಹಿಂದಿನ ಸಾಲಿನಲ್ಲಿ ಕುಳಿತಿದ್ದ ನಮ್ಮ ತಂದೆಯವರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಜನಾರ್ಧನನ ಮುಖದಲ್ಲಿ ಒಮ್ಮೆಲೇ ನಗು ಮೂಡಿತು. ನನ್ನನ್ನು ಹಿಂದೆ ಕರೆದ. ನಾನು ಸಾವಕಾಶವಾಗಿ ಎದ್ದು ಅವನ ಹತ್ತಿರ ಹೋಗಿ ಕುಳಿತೆ. ಕೈಬೆರಳು ಮಾಡಿ ಬಾಗಿಲತ್ತ ತೋರಿಸಿದ. ಒಳಗೆ ತಬಲಾ ಹಾರ್ಮೋನಿಯಂ ಸಮೇತ ಭರ್ಜರಿಯಾಗಿ ಭಜನೆ ನಡೆಯುತ್ತಿದ್ದರೆ ಹೊರಗೆ ಯಾವನೋ ಒಬ್ಬ ಕುಡುಕ ಕಂಠಪೂರ್ತಿ ಕುಡಿದು ಮಸ್ತಾಗಿ ಕುಣಿಯುತ್ತಿದ್ದ. ಅಲ್ಲಿಯವರೆಗೆ ಅಂತಹ ದೃಶ್ಯ ನೋಡಿಯೇ ಇರದಿದ್ದ ನನಗೆ ಜೋರಾಗಿ ನಗು ಬಂದಿತು. ಎಲ್ಲರೂ ನನ್ನತ್ತ ನೋಡಿದರು. ಅಷ್ಟರಲ್ಲಿಯೇ ಆ ಕುಡುಕ ತೂರಾಡುತ್ತ ಮನೆಯೊಳಗೆ ಬರಬೇಕೆ? ಬಂದವನೇ ಹಾಡುವುದನ್ನು ಮತ್ತೆ ಶುರು ಮಾಡಲು ಆಜ್ಞಾಪಿಸಿದ. ನಗುತ್ತಲೇ ತಂದೆ ಮುಂದಿನ ಹಾಡನ್ನು ಆರಂಭಿಸಿದರು.

ಹಾಡು ಕೇಳುತ್ತಲೇ ಕುಡುಕನಿಗೆ ಒಮ್ಮೆಲೇ ಬಹಳ ಖುಶಿಯಾಗಿ ತಾನೂ ತೊದಲು ತೊದಲಾಗಿ ಕಿರುಚಲಾರಂಭಿಸಿದ. ಒಮ್ಮೆಲೇ ಆಭಾಸವಾಗಿ ಹಾಡುವವರು, ವಾದನ ನುಡಿಸುವವರು ಅವಾಕ್ಕಾದರು. ಹೇಗೋ ಹಾಡು ಮುಗಿದ ಮೇಲೆ ಹಾರ್ಮೋನಿಯಂ ವಾದಕ ವೈದ್ಯ ಅವರು "ಪೂರ್ತಿ ಕುಡಿದು ಟುಣ್ ಆಗ್ಯಾರ, ಅದಕ್ಕೇ ತಮ್ಮ ಒಡಕು ಧನಿ ಕೂಡಿಸಲಿಕ್ಕೆ ಹತ್ಯಾರ" ಎಂದರು. ಅದು ಕುಡುಕನಿಗೆ ಕೇಳಿಸಿ "ಏಯ್, ನಾನು ಕುಡದಿಲ್ಲ. ನೀವೇ ಎಲ್ಲಾರೂ ಕುಡದೀರಿ" ಎಂದು ಚೀರಿದ. ವೈದ್ಯ ಅವರು "ನಿಮಗ ಅಂದಿಲ್ಲ. ಈ ಹಾರ್ಮೋನಿಯಂ ಯಾಕೋ ಕುಡಿದವರ ಹಾಂಗ ಒಡಕಾಗಿ ಕೇಳಿಸಲಿಕ್ಕ ಹತ್ಯದ. ಅದಕ್ಕ ಬೈದದ್ದು" ಅಂದ ಮೇಲೆ ಆತನಿಗೆ ಸಮಾಧಾನವಾಯಿತು. ಉಳಿದವರೆಲ್ಲ ಹಗುರಾಗಿ ನಕ್ಕರು. ಸ್ವಲ್ಪ ಹೊತ್ತಿನ ನಂತರ ಆತ ತೂರಾಡುತ್ತಲೇ ಎದ್ದು ಹೊರಟುಹೋದ!

ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ

ಮುಂದೆ ತಂದೆಯವರ ಈ ಸಂಗೀತಾಸಕ್ತ ಗುಂಪು ಬೆಳೆದು ದೊಡ್ಡದಾಯಿತು. ಖಡಕಭಾವಿ ಗುರುಗಳು, ಅಂಧ ಸಂಗೀತ ಶಿಕ್ಷಕರಾದ ಹಡಪದ್ ಗುರುಗಳು, ಸಂಕೇಶ್ವರದ ಜಮೀನ್ದಾರರಲ್ಲೊಬ್ಬರಾದ ವೇಣುವಾದಕ ನಾನಾ ಸಾಹೇಬ್ ಭಿಡೆ ಮತ್ತು ಸಂಕೇಶ್ವರ ಮದುವೆ ಬ್ಯಾಂಡಿನಲ್ಲಿ ಶಹನಾಯಿ ನುಡಿಸುವ ಧುಮಾಳ್ ಸೇರಿಕೊಂಡರು. ಇವರ ಜೊತೆಗೆ ಆಗಾಗ ಸಂಕೇಶ್ವರ ಬಸವಣ್ಣನ ಗುಡಿಯಲ್ಲಿ ಪೂಜೆ ಸಲ್ಲಿಸುವ ನನ್ನ ಮೊಟ್ಟ ಮೊದಲ ಸಂಗೀತ ಗುರು ಹಿರೇಮಠ ಎಂಬ ಸಂಗೀತ ಶಿಕ್ಷಕರೂ ಆಗಾಗ ಸೇರುತ್ತಿದ್ದರು. ಅವರಿಗೆ ಕೇವಲ ಭಜನೆ ಮಾಡುವುದರಿಂದ ಸಾಕಾಗುತ್ತಿರಲಿಲ್ಲ. ಹೀಗಾಗಿ ಹದಿನೈದು ದಿನಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ನಮ್ಮ ಮನೆಯಲ್ಲಿ ಅವರ ಬೈಠಕ್ ಕೂಡುತ್ತಿತ್ತು. ಆಗ ಶುದ್ಧ ಶಾಸ್ತ್ರೀಯ ಗಾಯನದ ಪೂಜೆ ಮನೆಯಲ್ಲಾಗುತ್ತಿತ್ತು.

ಶಾಸ್ತ್ರೀಯ ಗಾಯನದಲ್ಲಿ ನನ್ನ ಅತೀವ ಆಸಕ್ತಿ ಅಲ್ಲಿಂದಲೇ ಶುರುವಾಯಿತು. ಇಂದಿಗೂ ಇಂಪಾದ ಕಂಠದ ಖಡಕಭಾವಿ ಗುರುಗಳ ರಾಗಶ್ರೀ ರಾಗದ "ಬನ ಬನದಿ ಹಾಡುವ ಕೋಗಿಲೆಗಳೇ, ಬಂತು ವಸಂತ ನವಮಾಸವು" ಎಂಬ ಕನ್ನಡ ನಾಟ್ಯಗೀತೆ, ಹಡಪದ್ ಗುರುಗಳ ಪಟದೀಪ ರಾಗದ ಬಂದಿಶ್ "ಕವನ ಸುಖ ಪಾಯೋ, ರಾಮನಾಮಕಿ" ಮತ್ತು ಜೀವನ್ ಪುರಿ ರಾಗದ ದಾಸರ ಪದ "ಪೋಗದಿರೆಲೋ ರಂಗಾ ಬಾಗಿಲಿಂದಾಚೆಗೆ", ನೇರಲೇಕರ್ ಅವರ ರಾಗ ಹಂಸಧ್ವನಿಯ "ತಾಂಡವ ನೃತ್ಯ ಕರೀ ಗಜಾನನ", ವೈದ್ಯ ಅವರ ಸುಮಧುರ ಹಾರ್ಮೋನಿಯಂ ವಾದನ ಮತ್ತು ನಾನಾಸಾಹೇಬ್ ಭಿಡೆ ಅವರ ಮಧುರ ಕೊಳಲಿನಲ್ಲಿ ಸಿನೇಮಾ ಹಾಡು "ಜುಲುಮಿ ಸಂಗ ಆಂಖ ಲಡೀ" ಎಂಬ ಹಾಡುಗಳು ಮನಸ್ಸಿನ ಪಟಲದಲ್ಲಿ ಅಚ್ಚಳಿಯಾಗಿ ಉಳಿದುಕೊಂಡಿವೆ. ಸಂಕೇಶ್ವರದ ದಿನಗಳು ಜೀವನದ ಹಾದಿಯನ್ನೆಲ್ಲಾ ಹಸಿರಾಗಿಸಿವೆ.

English summary
Sankeshwar Days - part 7 : Bhajans and Classical music. Vasant Kulkarni from Singapore writes how he got basic training in singing bhajans and classic songs, and recalls the evening when he got the opportunity to sing and impress the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X