• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿನ ಉಳಿತಾಯ : ಸಿಂಗಪುರ ಮಾದರಿಯನ್ನೇಕೆ ಅನುಸರಿಸಬಾರದು?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

2014ರಲ್ಲಿ ಜನೆವರಿ 13ರಿಂದ ಫೆಬ್ರವರಿ 8ರ ವರೆಗೆ ಅಂದರೆ ಸತತವಾಗಿ ಇಪ್ಪತ್ತೇಳು ದಿನಗಳವರೆಗೆ ಸಿಂಗಪುರದಲ್ಲಿ ಒಂದು ಹನಿಯೂ ಮಳೆ ಬೀಳಲಿಲ್ಲ. ಇದರಲ್ಲೇನು ಮಹಾ? ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಮಳೆಗಾಲದಲ್ಲಿ ಕೂಡಾ ತಿಂಗಳುಗಟ್ಟಲೇ ಮಳೆಯಾಗುವುದಿಲ್ಲ ಎನ್ನುತ್ತೀರಾ?

ಹಾಗಾದರೆ ಕೇಳಿ, ಸಮಭಾಜಕ ವೃತ್ತಕ್ಕೆ ಬಹಳ ಹತ್ತಿರವಿರುವ ಸಿಂಗಪುರದಲ್ಲಿ ವಾರದಲ್ಲಿ ಎರಡು ಮೂರು ಬಾರಿ ಮಳೆಯಾಗುವುದು ಸರ್ವೇ ಸಾಮಾನ್ಯ. ಸಿಂಗಪುರದಲ್ಲಿ ಸತತವಾಗಿ ಇಪ್ಪತ್ತೇಳು ದಿನಗಳವರೆಗೆ ವರುಣದೇವ ತನ್ನ ಅವಕೃಪೆ ತೋರಿಸಿದ್ದು ಒಂದು ದಾಖಲೆ. ಹಿಂದಿನ ದಾಖಲೆಯಲ್ಲಿ ಸತತವಾಗಿ ಹದಿನೆಂಟು ದಿನಗಳವರೆಗೆ ಮಳೆಯಾಗಿರಲಿಲ್ಲ.

'ಚಲ್ತಾ ಹೈ' ಮನೋಭಾವಕ್ಕೆ ನಾವು ಭಾರತೀಯರು ಕೊಕ್ಕೆ ಹಾಕುವುದೆಂದು? 'ಚಲ್ತಾ ಹೈ' ಮನೋಭಾವಕ್ಕೆ ನಾವು ಭಾರತೀಯರು ಕೊಕ್ಕೆ ಹಾಕುವುದೆಂದು?

ಆ ಇಪ್ಪತ್ತೇಳು ದಿನಗಳಲ್ಲಿ ಸಿಂಗಪುರದ ತಾಪಮಾನ ಹೆಚ್ಚಾಗಿ ತೀವ್ರ ಸೆಖೆ ಕಾಡತೊಡಗಿತ್ತು. ಸುತ್ತಮುತ್ತಲಿನ ಹುಲ್ಲು ಒಣಗಿ ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗತೊಡಗಿತ್ತು. ಎಲ್ಲರೂ ಸೆಖೆಯ ಬಗ್ಗೆ ಮಾತನಾಡುವವರೇ. "ರಾತ್ರಿ ಪೂರ್ತಿ ಎಸಿ ಹಚ್ಚಿಕೊಂಡು ಮಲಗಬೇಕಾಗಿದೆ ಮಾರಾಯರೇ" ಎಂದೇ ಎಲ್ಲರೂ ಮಾತನಾಡತೊಡಗಿದ್ದರು.

ಈ ಒಣಹವೆಯ ಪರಿಣಾಮವಾಗಿ ಸಿಂಗಪುರದ ಎಲ್ಲ ಕೆರೆಗಳಲ್ಲಿ ನೀರಿನ ಮಟ್ಟ ಸಾಕಷ್ಟು ಕಡಿಮೆಯಾಗಿತ್ತು. ಸಿಂಗಪುರದ ಎಲ್ಲ ಡಿಸ್ಯಾಲಿನೇಶನ್ ಮತ್ತು ನ್ಯೂವಾಟರ್ ಸ್ಥಾವರಗಳು ತಮ್ಮ ಪೂರ್ತಿ ಮಟ್ಟದಲ್ಲಿ ನಡೆಯುತ್ತಿದ್ದವು. ಅದೇ ಸಮಯದಲ್ಲಿ ಪಕ್ಕದ ಮಲಯೇಶಿಯಾದಲ್ಲಿ ಕೂಡ ನದಿ, ಕೆರೆಗಳು ಬತ್ತ ತೊಡಗಿದ್ದವು. ಸಿಂಗಪುರದ ಅರ್ಧದಷ್ಟು ನೀರು ಮಲಯೇಶಿಯದಿಂದಲೇ ಬರುತ್ತಿದ್ದುದರಿಂದ ಇಲ್ಲಿನ ಸರಕಾರ ನೀರಿನ ಉಳಿತಾಯವನ್ನು ಕುರಿತು ಅನೇಕ ಪ್ರಚಾರ ಕಾರ್ಯಕ್ರಮಗಳನ್ನು ಹಾಕಿಕೊಂಡು ಪ್ರಜೆಗಳಿಗೆ ನೀರನ್ನು ಸಾಧ್ಯವಾದಷ್ಟು ಮಟ್ಟಿಗೆ ಉಳಿತಾಯ ಮಾಡಲು ಪ್ರೇರೇಪಿಸತೊಡಗಿತ್ತು. ಅದೃಷ್ಟಾವಶಾತ್ ಕೆಲ ದಿನಗಳ ನಂತರ ಧಾರಾಕಾರ ಮಳೆಯಾಗಿ ಭೂಮಿ ತಣಿಯಿತು. ಕೆರೆಗಳು ತುಂಬಿದವು.

ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಂಕೇಶ್ವರದ ಆ ದಿನಗಳುನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಂಕೇಶ್ವರದ ಆ ದಿನಗಳು

ಸಿಂಗಪುರದಂತಹ ಅತ್ಯಂತ ಪ್ರಬುದ್ಧ ಮತ್ತು ವಿವೇಕವಂತ ಸರಕಾರ ಕೂಡ ಪ್ರಕೃತಿ ದೇವತೆ ಸಿಟ್ಟಿನ ಎದುರು ಮಣಿಯಬೇಕಾಯಿತು. ತನ್ನ ಶಿಸ್ತಿನ ಪ್ರಜೆಗಳಿಗೆ ಕೂಡ ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ವಿಶೇಷ ಮನವಿ ಮಾಡಿಕೊಳ್ಳತೊಡಗಿತ್ತು. "ಅಂತಹುದೇ ಪರಿಸ್ಥಿತಿ ನಮ್ಮ ದೇಶದ ಮಹಾನಗರದಲ್ಲೆಲ್ಲಾದರೂ ಆದರೆ?" ಎಂಬ ಭಯ ನನ್ನ ಮನಸ್ಸಿನಲ್ಲಿ ಮನೆ ಮಾಡತೊಡಗಿತ್ತು. ಚೆನ್ನೈ ನಗರದ ನೀರಿನ ಸಮಸ್ಯೆಯನ್ನು ಕುರಿತು ಕೇಳಿ ಈಗ ಆ ಭಯ ನಿಜವಾಗತೊಡಗಿದೆ ಎಂಬ ಭಾವನೆ ಬರತೊಡಗಿದೆ.

How Singapore is handling water scarcity

ತನ್ನ ಸ್ವಾತಂತ್ರ್ಯ ಪಡೆದಾಗಿನಿಂದ ಸಿಂಗಪುರದ ಸರಕಾರ ನೀರಿನ ಸರಬರಾಜಿನಲ್ಲಿ ಸ್ವಾಯತ್ತತೆ ಹೊಂದಲು ಸಕಲ ಪ್ರಯತ್ನ ನಡೆಸುತ್ತಲಿದೆ. ಮಲಯೇಶಿಯದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇದೆ. ನದಿ ಸಮುದ್ರ ಸೇರುವಲ್ಲಿ ಆಣೆಕಟ್ಟು ಕಟ್ಟಿ ಉಪ್ಪುನೀರನ್ನು ಸಿಹಿಯಾಗಿಸುವ ಮರಿನಾ ಬ್ಯಾರೇಜ್ ಯೋಜನೆಯಾಗಲಿ, ಉಪಯೋಗಿಸಿದ ನೀರನ್ನು ಮತ್ತೆ ಬಳಕೆ ಮಾಡಿಕೊಳ್ಳುವ ನ್ಯೂ ವಾಟರ್ ಯೋಜನೆಯಾಗಲಿ ಅಥವಾ ಡಿಸ್ಯಾಲಿನೇಶನ್ ತಂತ್ರಜ್ಞಾನದಲ್ಲಿ ಹೆಚ್ಚಿನ ಸಾಧನೆಯನ್ನಾಗಲಿ, ಸಿಂಗಪುರ ಸರಕಾರ ಮತ್ತು ಅಲ್ಲಿನ ಉದ್ಯಮಿಗಳು ಸತತವಾಗಿ ನೀರಿನ ವಿಷಯದಲ್ಲಿ ತಮ್ಮ ಸ್ವಾಯತ್ತತೆ ಕಾಪಾಡಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.

ಸಿಂಗಪುರದ ಸರಕಾರ ತಮ್ಮ ಪುಟ್ಟ ರಾಷ್ಟ್ರದಲ್ಲಿಯ ಯಾವದೂ ಸ್ವಾಭಾವಿಕ ಜಲಾನಯನ ಪ್ರದೇಶವನ್ನು ಪ್ರಗತಿಯ ಅಥವಾ ನಗರೀಕರಣದ ಹೆಸರಿನಲ್ಲಿ ಅತಿಕ್ರಮಣ ಮಾಡಿಲ್ಲ. ಅದರ ಬದಲಿಗೆ ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಜಲಾನಯನ ಪ್ರದೇಶದ ವಿಸ್ತೀರ್ಣವನ್ನು ಹೆಚ್ಚುಗೊಳಿಸಿದೆ. ಅದೇ ಐವತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಜಲಾನಯನ ಪ್ರದೇಶ ಬಹಳಷ್ಟು ಕಡಿಮೆಯಾಗಿದೆ.

ಮಹಾನಗರಗಳಲ್ಲಿಯ ನೀರಿನ ಸಂಗ್ರಹಣೆಯ ಮುಖ್ಯ ಘಟಕಗಳಾದ ಕೆರೆ ಸರೋವರಗಳನ್ನು ಹಂತ ಹಂತವಾಗಿ ಮುಚ್ಚಿ ಆ ಸ್ಥಳಗಳನ್ನು ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಕಂಪನಿಗಳು ಆಕ್ರಮಿಸಿವೆ. ಈ ರೀತಿಯಾಗಿ ಕೆರೆ, ಬಾವಿ ಮುಂತಾದ ನೀರಿನ ಆಕರಗಳನ್ನು ಮುಚ್ಚಿ ಹಾಕಿದರೆ ಅಂತರ್ಜಲದ ಮಟ್ಟ ಕೂಡ ಕಡಿಮೆಯಾಗುತ್ತದೆ ಎಂಬುದರ ಸ್ವಲ್ಪವೂ ಪರಿಜ್ಞಾನವಿಲ್ಲದೇ ಸ್ವಾರ್ಥಪೂರ್ಣ ಹಿತಾಸಕ್ತಿಗಳು ದೇಶದ ಒಟ್ಟಾರೆ ಹಿತವನ್ನು ಕಡೆಗಣಿಸುತ್ತಲಿವೆ.

ಈಗ ಚೆನ್ನೈ ನಗರ ಅನುಭವಿಸುತ್ತಿರುವ ನೀರಿನ ತೀವ್ರ ಅಭಾವಕ್ಕೆ ಈ ರೀತಿಯಾಗಿ ಕೆರೆಗಳನ್ನು ಮುಚ್ಚಿ ಹಾಕಿರುವುದೇ ಕಾರಣ ಎಂದು ಅನೇಕ ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಎಲ್ಲ ಮಹಾನಗರಗಳಲ್ಲೂ ಕೆರೆಗಳನ್ನು ಮುಚ್ಚಿ ಹಾಕುವುದು, ಇರುವ ಕೆರೆ, ಸರೋವರ ಮತ್ತು ನದಿಗಳನ್ನು ಕಲುಷಿತಗೊಳಿಸುವುದು ನಿರಂತರವಾಗಿ ನಡೆದಿದೆ. ತಜ್ಞರ ಪ್ರಕಾರ, ಭಾರತ ಪ್ರತಿ ವರ್ಷ 251 ಘನ ಕಿಲೋಮೀಟರ್ ಗಳಷ್ಟು ಅಂತರ್ಜಲವನ್ನು ತೆಗೆಯುತ್ತದೆ. ಇದು ಜಗತ್ತಿನ 25 ಶೇಕಡಾದಷ್ಟು ಪ್ರಮಾಣ. ಅಮೇರಿಕ ಮತ್ತು ಚೀನಗಳಂತಹ ಅತಿ ದೊಡ್ಡ ಕೈಗಾರಿಕೀಕರಣಗೊಂಡ ದೇಶಗಳು ಕೂಡ ಭಾರತದ ಅರ್ಧಕ್ಕಿಂತ ಕಡಿಮೆ (ಎಂದರೆ ಸುಮಾರು 112 ಘನ ಕಿಲೋಮೀಟರ್) ಅಂತರ್ಜಲವನ್ನು ಉಪಯೋಗಿಸುತ್ತವೆ. ಇದು ನಮ್ಮ ದೇಶದಲ್ಲಿ ನೀರಿನ ಬಳಕೆಯಲ್ಲಿ ಉಂಟಾಗುವ ಅನಗತ್ಯ ಸೋರಿಕೆಯನ್ನು ಎತ್ತಿ ತೋರಿಸುತ್ತದೆ.

ನಮ್ಮ ದೇಶದಲ್ಲಿ ಅಂತರ್ಜಲದ ಅತಿ ದೊಡ್ಡ ಪ್ರಮಾಣವನ್ನು ರೈತರು ಉಪಯೋಗಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ನಾವು ಬೆಳೆಯುವ ಬೆಳೆಗಳಿಗೆ ಬೇಕಾಗುವ ನೀರಿನ ಪ್ರಮಾಣಕ್ಕಿಂತ ಬಹಳ ಹೆಚ್ಚು ಉಪಯೋಗಿಸುವುದು ಕಂಡು ಬಂದಿದೆ. ರೈತರಿಗೆ ನೀರಿನ ಸರಿಯಾದ ಮತ್ತು ಸಮರ್ಥ ಬಳಕೆ ವಿಧಾನವನ್ನು ಹೇಳಿಕೊಡುವುದರಲ್ಲಿ ಸರಕಾರ ಅಸಮರ್ಥವಾಗಿದೆ. ಅದೇ ರೀತಿಯಾಗಿ ಬೃಹತ್ ಕೈಗಾರಿಕೆಗಳಿಂದ ಉಂಟಾಗುವ ನೀರಿನ ದುರ್ಬಳಕೆಯನ್ನು ಕೂಡ ತಡೆಗಟ್ಟಲಾಗುತ್ತಿಲ್ಲ. ನಮ್ಮ ದೇಶದಲ್ಲಿ ನೀರಿನ ಬಳಕೆಯನ್ನು ಕುರಿತು ವ್ಯಾಪಕ ಯೋಜನೆಯನ್ನು ರೂಪಿಸುವುದು ಮತ್ತು ಅದನ್ನು ಸಮರ್ಥವಾಗಿ ಕಾರ್ಯಗತಗೊಳಿಸುವುದು ಈ ಎರಡೂ ಅತ್ಯಗತ್ಯವಾಗಿವೆ.

ಈಗ ಚೆನ್ನೈನಲ್ಲಿ ತಲೆದೋರಿರುವ ನೀರಿನ ತೀವ್ರ ಅಭಾವ ಕಳೆದ ವರ್ಷ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರ ಅನುಭವಿಸಿದ ಅಭಾವದ ನೆನಪು ತರಿಸುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬಯಿಗಳನೊಳಗೊಂಡಂತೆ ನಮ್ಮ ದೇಶದ ಇಪ್ಪತ್ತೊಂದು ದೊಡ್ಡ ನಗರಗಳು ಇಂತಹ ಅಭಾವವನ್ನು ಎದುರಿಸಲಿವೆ ಎಂದು ತಜ್ಞರು ಈಗಾಗಲೇ ಭವಿಷ್ಯ ನುಡಿದಿದ್ದಾರೆ.

ಈ ನೀರಿನ ತೀವ್ರ ಅಭಾವವನ್ನು ಎದುರಿಸಲು ಅನೇಕರು ದೇಶದ ಎಲ್ಲ ನದಿಗಳನ್ನು ಜೋಡಿಸುವ ಕಾಲುವೆಗಳನ್ನು ಶೀಘ್ರವಾಗಿ ನಿರ್ಮಿಸಬೇಕು ಎಂದು ಹೇಳುತ್ತಾರೆ. ಉತ್ತರದಿಂದ ದಕ್ಷಿಣದವರೆಗಿನ ಎಲ್ಲ ಮುಖ್ಯ ನದಿಗಳನ್ನು ಜೋಡಿಸುವ ಈ ಯೋಜನೆ ಮಹತ್ವದ್ದಾದರೂ ಈ ಯೋಜನೆ ಇನ್ನೂ ಯೋಜನೆಯ ಘಟ್ಟದಿಂದ ಮುಂದೆ ಹೋಗಿಲ್ಲ. ಆದುದರಿಂದ ಈ ಯೋಜನೆ ಕಾರ್ಯಗತಗೊಳ್ಳಲು ಬಹಳ ವರ್ಷಗಳೇ ಬೇಕು. ಅದರಂತೆ ಇನ್ನೂ ಅನೇಕ ಡಿಸ್ಯಾಲಿನೇಶನ್ ಸ್ಥಾವರಗಳನ್ನು ಸ್ಥಾಪಿಸುವುದು ಮತ್ತು ಬೃಹತ್ ಆಣೆಕಟ್ಟುಗಳನ್ನು ನಿರ್ಮಿಸುವುದು ಮುಂತಾದ ಯೋಜನೆಗಳಿಗೆ ಕೂಡ ತುಂಬಾ ಸಮಯ ಬೇಕಾಗುತ್ತದೆ.

ಆದುದರಿಂದ ಇಂತಹ ಯೋಜನೆಗಳ ಜೊತೆ ಜೊತೆಗೆ ರಾಜಸ್ಥಾನದ ಅಳ್ವಾರ್ ಜಿಲ್ಲೆಯಲ್ಲಿ ಮಾಡಿದಂತೆ ಸಣ್ಣ ಸಣ್ಣ ಚೆಕ್ ಡ್ಯಾಮುಗಳನ್ನು ಕಟ್ಟಿ ನೀರನ್ನು ಸಂಗ್ರಹಿಸಬೇಕಾಗಿದೆ. ಅಲ್ಲದೇ ನೈಸರ್ಗಿಕವಾಗಿ ನೀರು ನಿಲ್ಲುವ ಸ್ಥಳಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಅವುಗಳನ್ನು ದೊಡ್ಡ ಕೆರೆಗಳನ್ನಾಗಿ ಪರಿವರ್ತಿಸಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಹೊಸ ಕೆರೆಗಳನ್ನು ನಿರ್ಮಿಸಿ ಮಳೆ ನೀರು ಹರಿದು ಹೋಗದಂತೆ ತಡೆಗಟ್ಟಬೇಕು. ಇರುವ ಕೆರೆ, ಬಾವಿ ಮತ್ತು ಸರೋವರಗಳಲ್ಲಿನ ಹೂಳೆತ್ತಿಸಿ ಹೆಚ್ಚು ಹೆಚ್ಚು ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಎಲ್ಲ ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿ ಮಳೆ ನೀರಿನ ಕೃಷಿಯನ್ನು ಕಡ್ಡಾಯವಾಗಿ ಮಾಡುವಂತೆ ನಿಯಮಗಳನ್ನು ಜಾರಿಗೆ ತರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮನೆ ಮನೆಯಲ್ಲಿ ನೀರನ್ನು ಬೇಕಾಬಿಟ್ಟಿ ಉಪಯೋಗಿಸದಂತೆ ಮತ್ತು ಹೆಚ್ಚು ಹೆಚ್ಚು ಉಳಿತಾಯ ಮಾಡುವಂತೆ ನಾಗರಿಕರಲ್ಲಿ ಜಾಗೃತಿ ಉಂಟು ಮಾಡುವುದು ಬಹಳ ಮಹತ್ವದ್ದಾಗಿದೆ.

ನೀರು ಒಂದು ಅಮೂಲ್ಯ ಸಂಪನ್ಮೂಲ. ನೀರಿಲ್ಲದೇ ಜೀವನವಿಲ್ಲ. ನಿತ್ಯವೂ ನೀರನ್ನು ಬಳಸುವ ಮೊದಲು ಒಮ್ಮೆ ನಮ್ಮನ್ನು ನಾವು ಎಚ್ಚರಿಸಿಕೊಳ್ಳಬೇಕಾದ ಸಮಯವೀಗಾಗಲೇ ಬಂದಿ ಬಿಟ್ಟಿದೆ. ನಾವು ಸಿಂಗಪುರದಲ್ಲಿ ಇರಲಿ, ಟೋಕ್ಯೋದಲ್ಲಿ ಇರಲಿ ಅಥವಾ ಮುಂಬಯಿಯಲ್ಲಿರಲಿ. ಮುಂಬರುವ ದಿನಗಳಲ್ಲಿ ಶುದ್ಧ ನೀರು ಇನ್ನೂ ಹೆಚ್ಚು ವಿರಳವಾಗಲಿದೆ ಎಂಬುದನ್ನು ಸದಾ ಧ್ಯಾನದಲ್ಲಿಟ್ಟರೆ ಸಮಸ್ಯೆ ಉಲ್ಬಣಿಸುವುದನ್ನು ತಡೆಗಟ್ಟಬಹುದು.

English summary
How Singapore is handling water scarcity? How Singapore is securing and saving water, which gets water from Malaysia also? Why cities like Bengaluru and Chennai should not follow water model followed by Singapore? Writes Vasant Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X