• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷರು ನಮ್ಮಿಂದ ಕಸಿದುಕೊಂಡಿದ್ದೇ ಹೆಚ್ಚಿದೆ, ಇದಕ್ಕೆ ನೀವೇನಂತೀರಿ?

By ವಸಂತ ಕುಲಕರ್ಣಿ
|
Google Oneindia Kannada News

ನಾನು ಚಿಕ್ಕವನಿದ್ದಾಗ ಎಂದರೆ ಸುಮಾರು ಒಂಬತ್ತನೆಯ ಕ್ಲಾಸಿನಲ್ಲಿರಬಹುದು. ಆಗ ರಜಾ ದಿನಗಳಲ್ಲಿ ಬಿಜಾಪುರಕ್ಕೆ ಹೋಗಿದ್ದೆ. ಅಲ್ಲಿ ನಾನು ನನ್ನ ಸಂಬಂಧಿಯೊಬ್ಬರನ್ನು ಭೇಟಿಯಾದೆ. ಅವರೊಂದಿಗೆ ಮಾತನಾಡುತ್ತ ನಮ್ಮ ಚರ್ಚೆ ಬ್ರಿಟಿಷರ ಆಳ್ವಿಕೆಯ ದಿನಗಳತ್ತ ವಾಲಿತು.

ಇತಿಹಾಸದಲ್ಲಿ ಅಪಾರ ಆಸಕ್ತಿ ಇದ್ದ ನಾನು ಅಂದಿನ ದಿನಗಳಲ್ಲಿ ಕೇವಲ ಪಠ್ಯ ಪುಸ್ತಕಗಳಲ್ಲದೇ ಬೇರೆ ಪುಸ್ತಕಗಳನ್ನೂ ಓದುತ್ತಿದ್ದೆ. ಹಾಗೆಲ್ಲೋ ಓದಿದ ಪುಸ್ತಕಗಳಿಂದ ಪ್ರಭಾವಿತನಾದ ನಾನು, ಬ್ರಿಟಿಷರ ಆಳ್ವಿಕೆಯಲ್ಲಿ ಕೊಹಿನೂರ್ ವಜ್ರದಂತಹ ಭಾರತದ ಅನೇಕ ಅಮೂಲ್ಯ ಸಂಪತ್ತು ಲೂಟಿಯಾಯಿತು. ನಮ್ಮ ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಜೀವನ ಅಸ್ತವ್ಯಸ್ತಗೊಂಡಿತು ಎಂದು ಹೇಳಿದೆ.

ಇಂದಿನ ನಮ್ಮ ದೇಶದ ಪ್ರಮುಖ್ಯ ಸಮಸ್ಯೆಗಳ ಮೂಲ ಬ್ರಿಟಿಷರು ಅನುಸರಿಸಿದ ಒಡೆದು ಆಳು ಎಂಬ ನೀತಿಯೇ ಎಂದು ಭಾವಾವೇಶದಿಂದ ಹೇಳಿದೆ.

ಸಂಕೇಶ್ವರದ ನೆನಪುಗಳ ಚಿತ್ರ ಶಾಲೆ ತುಂಬ ಹಿರಣ್ಯಕೇಶಿ ನದಿ, ಹರಗಾಪುರದ ಗುಡ್ಡ ಸಂಕೇಶ್ವರದ ನೆನಪುಗಳ ಚಿತ್ರ ಶಾಲೆ ತುಂಬ ಹಿರಣ್ಯಕೇಶಿ ನದಿ, ಹರಗಾಪುರದ ಗುಡ್ಡ

ಆಗ ಅವರು "ಬ್ರಿಟಿಷರ ಆಳ್ವಿಕೆಯಿಂದ ಎಲ್ಲವೂ ಕೆಡುಕಾಗಲಿಲ್ಲ. ಹಾಗೆ ನೋಡಿದರೆ ಭಾರತ ದೇಶವನ್ನು ಒಗ್ಗೂಡಿಸಿದವರೇ ಬ್ರಿಟಿಷರು. ಅವರಿಗಿಂತ ಮೊದಲು ಭಾರತ ಎಂಬ ದೇಶವೇ ಇರಲಿಲ್ಲ, ಅದು ಅನೇಕ ರಾಜ್ಯಗಳ ಸಮೂಹವಾದ ಒಂದು ಉಪಖಂಡವಾಗಿತ್ತು ಅಷ್ಟೇ" ಎಂದು ಹೇಳಿದರು.

ಅವರು ಮುಂದುವರೆಸುತ್ತಾ, "ಬ್ರಿಟಿಷರು ಭಾರತಕ್ಕೆ ಆಧುನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು, ರೈಲು ಸಾಗಣೆಯನ್ನು ತಂದರು, ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವವನ್ನು ಜಾರಿಗೆ ತಂದರಲ್ಲದೇ, ತಮ್ಮ ಕಾನೂನು ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೊಳಿಸಿದರು. ಇಂಗ್ಲಿಷ್ ಭಾಷೆಯನ್ನು ಸಾಮಾನ್ಯ ಭಾರತೀಯರಿಗೆ ಕಲಿಸಿದರು. ಇಂದು ಭಾರತ ಒಂದು ಅಧುನಿಕ, ಪ್ರಜಾಸತ್ತಾತ್ಮಕ ಒಕ್ಕೂಟವಾಗಿದ್ದರೆ ಬ್ರಿಟಿಷರೇ ಕಾರಣ" ಎಂದು ಹೇಳಿದರು.

ಅವರ ಈ ಮಾತು ನನ್ನನ್ನು "ಇದು ನಿಜವಿರಬಹುದೇ?" ಎಂದು ಯೋಚನೆಗೀಡು ಮಾಡಿತು. ಅವರು ಹೇಳಿದ್ದರಲ್ಲಿ ಸ್ವಲ್ಪ ಮಟ್ಟಿಗೆ ನಿಜವಿರಬಹುದಾದರೂ, ಭಾರತವನ್ನು ಲೂಟಿ ಮಾಡಲೆಂದೇ ಬಂದ ಬ್ರಿಟಿಷರಿಗೆ ಭಾರತದ ಬಗ್ಗೆ ಎಂತಹ ಚಿಂತೆ ಎಂಬ ಪ್ರಶ್ನೆಯೂ ಮೂಡಿತು.

ಆಗ ನಾನು ನಿರುತ್ತರನಾದರೂ ಮನಸ್ಸಿನಲ್ಲಿ ಈ ಪ್ರಶ್ನೆ ಆಗಾಗ ಕಾಡುತ್ತಲೇ ಇತ್ತು. ನಿಜವಾಗಿಯೂ ತಮ್ಮಿಂದ ಆಳಲ್ಪಡುತ್ತಿದ್ದ ಭಾರತ ಭೂಮಿ ಹಾಗೂ ಅದರ ಪ್ರಜೆಗಳ ಅಭ್ಯುದಯದ ಬಗ್ಗೆ ಅವರಿಗೆ ಕಳಕಳಿ ಇತ್ತೇ? ಹಾಗಿದ್ದರೆ ಹಂತ ಹಂತವಾಗಿ ಭಾರತದ ಎಲ್ಲ ಕುಶಲಕರ್ಮಿಗಳನ್ನು ಅವರೇಕೆ ಮುಗಿಸಿ ಹಾಕಿದರು? ಭಾರತದ ರೈತರನ್ನು ಒತ್ತಾಯವಾಗಿ ನೀಲಿ ಸಸ್ಯಗಳನ್ನು ಬೆಳೆಸಲು ಹಿಂಸಿಸಿ ಭೂಮಿಯನ್ನು ಬರಡುಗೊಳಿಸಲು ಅದೇಕೆ ಪ್ರಯತ್ನಿಸಿದರು? ಯುರೋಪಿನ ಯುದ್ಧದಲ್ಲಿ ಆಹಾರ ಸರಬರಾಜು ಮಾಡಲು ಕ್ಷಾಮದಿಂದ ಕಂಗೆಟ್ಟಿದ್ದ ಬಂಗಾಳದ ನಾಲ್ಕು ದಶಲಕ್ಷ ಜನರನ್ನು ಬಲಿ ಕೊಟ್ಟು ಭಾರತದ ಆಹಾರವನ್ನು ಯುರೋಪಿಗೇಕೆ ವರ್ಗಾಯಿಸಿದರು? ಭಾರತದ ಪುರಾತನ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ವಿಕೃತವಾಗಿ ಏಕೆ ಚಿತ್ರಿಸಿದರು? ಜಲಿಯನ್ ವಾಲಾ ಬಾಗ್ ನಂತಹ ಹಲವಾರು ಹತ್ಯಾಕಾಂಡಗಳನ್ನೇಕೆ ನಡೆಸಿದರು? ಸ್ವರಾಜ್ಯಕ್ಕಾಗಿ ಹೋರಾಡುತ್ತಿದ್ದ ಜನತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಪ್ರಯತ್ನಿಸಿದರೇಕೆ?

ಬ್ರೂಸ್ ಲೀ ಅಭಿಮಾನಿ ಶ್ರೀಧರ ಕಟ್ಟಿ, ಮನಸಿನಲ್ಲಿ ಹಸಿರಾಗುಳಿದ ಅಮದ್ಯಾ ಬ್ರೂಸ್ ಲೀ ಅಭಿಮಾನಿ ಶ್ರೀಧರ ಕಟ್ಟಿ, ಮನಸಿನಲ್ಲಿ ಹಸಿರಾಗುಳಿದ ಅಮದ್ಯಾ

ಅದೆಷ್ಟು ವಿಚಾರ ಮಾಡಿದರೂ ಬ್ರಿಟಿಷರ ಒಳ್ಳೆಯ ಕೆಲಸಗಳ ಮೂಲೋದ್ದೇಶವನ್ನು ಕುರಿತು ಸದಭಿಪ್ರಾಯ ಮೂಡಲಿಲ್ಲ. ಈ ಎಲ್ಲ ಒಳ್ಳೆಯ ಕೆಲಸಗಳನ್ನು ಬ್ರಿಟಿಷರು ತಮ್ಮ ಆಡಳಿತವನ್ನು ಸುಗಮಗೊಳಿಸಲು ಜಾರಿಗೆ ತರಲೇಬೇಕಾಗಿತ್ತು ಎಂಬ ಅಂಶವೇ ಮನಸ್ಸಿನಲ್ಲಿ ಗಟ್ಟಿಯಾಗತೊಡಗಿತ್ತು.

ಬ್ರಿಟಿಷ್ ಆಡಳಿತದ ಕ್ಷಮಾಯಾಚಕರು ಎರಡು ನೂರು ವರ್ಷಗಳ ದುರಾಡಳಿತವನ್ನು ಕಾನೂನುಬದ್ಧಗೊಳಿಸಲು ಇದೇ ವಾದಗಳನ್ನು ಈಗಲೂ ಮುಂದಿಡುತ್ತಾರೆ. ಇತಿಹಾಸವನ್ನು ಸಂಪೂರ್ಣವಾಗಿ ಅರಿಯದ ಜನರು ಅಥವಾ ಅದನ್ನು ಮರೆತು ಹೋದ ಮುಗ್ಧರು ಈ ವಾದಗಳನ್ನು ನಂಬಿ ಬ್ರಿಟಿಷರ ಮಹಿಮೆಯನ್ನು ಈಗಲೂ ಕೊಂಡಾಡುತ್ತಾರೆ.

ನೆನಪನ್ನು ಹಸಿರಾಗಿಸುವ ಸಂಕೇಶ್ವರದ ಸಕ್ಕರೆ ಕಾರಖಾನೆಯ ಭವ್ಯ ಚಿತ್ರಣ ನೆನಪನ್ನು ಹಸಿರಾಗಿಸುವ ಸಂಕೇಶ್ವರದ ಸಕ್ಕರೆ ಕಾರಖಾನೆಯ ಭವ್ಯ ಚಿತ್ರಣ

ಕೆಲ ವರ್ಷಗಳ ಹಿಂದೆ ಮಲೇಷಿಯಾದ ಪೆನಾಂಗಿಗೆ ಹೋಗಿದ್ದೆ. ಅಲ್ಲಿ ಪ್ರವಾಸಿಗರ ಮನರಂಜನೆಗೆಂದು ಕುದುರೆ ಗಾಡಿ ಸವಾರಿಯನ್ನು ಇಟ್ಟಿದ್ದರು. ಅಂತಹ ಸವಾರಿಯೊಂದರಲ್ಲಿ ನಾನು ಕುಳಿತಾಗ, ಅದರಲ್ಲಿ ಬ್ರಿಟಿಷ್ ದಂಪತಿಗಳಿಬ್ಬರು ಕುಳಿತಿದ್ದರು. ನಮ್ಮನ್ನು ಕರೆದೊಯ್ಯುತ್ತಾ ಅಲ್ಲಿನ ಚಾಲಕ ಮಲೇಷಿಯಾದಲ್ಲಿ ಬ್ರಿಟಿಷರ ಆಡಳಿತವನ್ನು ಹಾಡಿ ಹೊಗಳಿದ. ಅವನು ಕೂಡ ಹೆಚ್ಚು ಕಡಿಮೆ ಇದೇ ಗುಣಗಾನ ಮಾಡುತ್ತಿದ್ದ.

ಪಾಶ್ಚಿಮಾತ್ಯ ಕಾನೂನು, ರೈಲು ಸಂಚಾರ, ಅಧುನಿಕ ಇಂಗ್ಲಿಷ್ ಭಾಷೆಯ ಶಿಕ್ಷಣ ಇತ್ಯಾದಿ ಇತ್ಯಾದಿ. ಅದನ್ನು ಕೇಳಿದ ಬ್ರಿಟಿಷ್ ದಂಪತಿ ಬೀಗುತ್ತಿದ್ದರು. ನಾನು ಮಲೇಷಿಯಾದ ಸಂಪನ್ಮೂಲಗಳನ್ನು ನಿಧಾನವಾಗಿ ತಮ್ಮ ದೇಶಕ್ಕೆ ಸಾಗಿಸಿದ, ಅಲ್ಲಿಯ ರೈತರ ಸಾಮಾನ್ಯ ಬೆಳೆಗಳಾದ ಭತ್ತ, ದ್ವಿದಳ ಧಾನ್ಯ ಇತ್ಯಾದಿ ಬೆಳೆಗಳನ್ನು ನಿಲ್ಲಿಸಿ, ರಬ್ಬರ್, ಪಾಮ್ ಎಣ್ಣೆಗಳಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಬಲಾತ್ಕರಿಸಿದ ಮತ್ತು ಮಲೇಷಿಯಾದ ಜನಾಂಗೀಯ ದ್ವೇಷವನ್ನು ಭುಗಿಲೆಬ್ಬಿಸಲು ಎಣ್ಣೆ ಹಾಕಿದ ಬ್ರಿಟಿಷರನ್ನು ಹಾಡಿ ಹೊಗಳುವುದನ್ನು ಕೇಳಿ ಮನಸ್ಸಿನಲ್ಲೇ ಸಿಟ್ಟಾದೆ.

ನೀರಿನ ಉಳಿತಾಯ : ಸಿಂಗಪುರ ಮಾದರಿಯನ್ನೇಕೆ ಅನುಸರಿಸಬಾರದು? ನೀರಿನ ಉಳಿತಾಯ : ಸಿಂಗಪುರ ಮಾದರಿಯನ್ನೇಕೆ ಅನುಸರಿಸಬಾರದು?

ಶಶಿ ತರೂರ್ ಅವರ ಪ್ರಕಾರ ಬ್ರಿಟಿಷರ ಈ ಕಾಣಿಕೆಗಳೆಲ್ಲ ಪೊಳ್ಳೇ. ಬ್ರಿಟಿಷರು ಭಾರತವನ್ನು ಒಂದು ರಾಜಕೀಯ ಒಕ್ಕೂಟವನ್ನಾಗಿ ಮಾಡಿರಲು ಯಶಸ್ವಿಯಾಗಿರಬಹುದು, ಆದರೆ ಭಾರತದ ಇತಿಹಾಸದಾದ್ಯಂತ ಭಾರತವನ್ನು ಒಂದು ಒಕ್ಕೂಟವನ್ನಾಗಿ ಮಾಡುವ ತುಡಿತ ಯಾವಾಗಲೂ ಇದ್ದೇ ಇತ್ತು ಎಂದು ಹೇಳಿದ್ದಾರೆ.

ಅಶೋಕ ಚಕ್ರವರ್ತಿ, ಸಮುದ್ರಗುಪ್ತ, ಹರ್ಷವರ್ಧನ ಮತ್ತು ಇತ್ತೀಚೆಗೆ ಮೊಗಲರ ಔರಂಗಜೇಬ ಕೂಡ ಭಾರತವನ್ನು ಒಂದುಗೂಡಿಸುವ ಪ್ರಯತ್ನ ಮಾಡಿ, ತಕ್ಕ ಮಟ್ಟಿಗೆ ಸಫಲರಾಗಿದ್ದರು ಎಂದು ತಮ್ಮ ಲೇಖನವೊಂದರಲ್ಲಿ ಬರೆದಿದ್ದಾರೆ.

ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಭಾರತ ರಾಜಕೀಯವಾಗಿ ಒಂದಾಗದಿದ್ದರೂ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಯಾವಾಗಲೂ ಒಂದು ಎಂಬ ಮನೋಭಾವನೆ ಎಲ್ಲ ಭಾರತೀಯರಲ್ಲಿತ್ತು. ಅಲ್ಲದೇ, ಭಾರತದ ಹತ್ತಿರದ ನೆರೆಹೊರೆಯವರಾದ ಅರಬರು, ಸಿಂಧು ನದಿಯಾಚೆಗಿನ ಹಿಂದೂ, ಮುಸಲ್ಮಾನರೆಲ್ಲರನ್ನೂ "ಹಿಂದಿಗಳು" ಎಂದೇ ಕರೆಯುತ್ತಿದ್ದರು ಎಂದು ಭಾರತದ ಸ್ವಾತಂತ್ರ್ಯ ಸೇನಾನಿ ಮೌಲಾನಾ ಆಜಾದ್ ಹೇಳಿದ್ದಾರೆ.

ಸಂಕೇಶ್ವರದಲ್ಲಿ ನನ್ನಲ್ಲಿನ ಆಟಗಾರನನ್ನ ಬಡಿದೆಬ್ಬಿಸಿದ್ದ ಅಮ್ಮಣಗಿ ಸರ್ ಸಂಕೇಶ್ವರದಲ್ಲಿ ನನ್ನಲ್ಲಿನ ಆಟಗಾರನನ್ನ ಬಡಿದೆಬ್ಬಿಸಿದ್ದ ಅಮ್ಮಣಗಿ ಸರ್

ಅದೇ ರೀತಿ ಅನೇಕ ಭಾರತೀಯ ಪವಿತ್ರ ಗ್ರಂಥಗಳು ಈ ಭೂಮಿಯನ್ನು ಭರತವರ್ಷ, ಭರತ ಖಂಡ ಎಂದು ಕರೆದಿವೆ.

ಇಲ್ಲಿ ಪ್ರಜಾಪ್ರಭುತ್ವವನ್ನು ಅವರು ಎಂದಿಗೂ ಜಾರಿಗೊಳಿಸಲಿಲ್ಲ. ಸರ್ವ ಸಮಾನತೆಯನ್ನು ಎಂದಿಗೂ ಪಾಲಿಸಲಿಲ್ಲ. ಬ್ರಿಟಿಷರು ಮತ್ತು ಭಾರತೀಯರ ನಡುವಿನ ಅಸಮಾನತೆಯಂತೂ ಸರಿಯೇ ಸರಿ. ಭಾರತದಲ್ಲಿ ಪ್ರಚಲಿತವಿದ್ದ ಅಲ್ಪ ಸ್ವಲ್ಪ ಸಾಮಾಜಿಕ ಅಸಮಾನತೆಗಳನ್ನು ಸಾರ್ವಜನಿಕ ಗಣತಿಯ ಮೂಲಕ ಮೇಲೆತ್ತಿದರು. ಜಾತಿ, ಧರ್ಮಗಳ ಭೇದ- ಭಾವಗಳನ್ನು ಪ್ರೋತ್ಸಾಹಿಸಿ, ಬೆಳೆಸಿ ವಿಷ ಬೀಜಗಳನ್ನು ಬಿತ್ತಿದರು.

ಡಬ್ಲ್ಯು ಆರ್ ಕಾರ್ನಿಷ್ ಎಂಬ ಮದರಾಸಿನಲ್ಲಿದ್ದ ಇಂಗ್ಲಿಷ್ ಜನಗಣತಿ ಅಧಿಕಾರಿಯು 1871ರಲ್ಲಿ "ಪುರಾತನ ಭಾರತದ ಧರ್ಮ ಗ್ರಂಥಗಳಲ್ಲಿ ಹೇಳಲಾದ ತಥಾಕಥಿತ ಜಾತಿ ಪದ್ಧತಿ ಈಗ ಜಾರಿಯಲ್ಲಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ, ಅದೆಂದಾದರೂ ಜಾರಿಯಲ್ಲಿತ್ತೋ ಎಂದು ಅನುಮಾನವಾಗುತ್ತದೆ" ಎಂದು ಹೇಳಿದ್ದಾನೆ.

ಇದರಿಂದ ಸ್ಪಷ್ಟವಾಗುವ ಅಂಶವೇನೆಂದರೆ, ಬ್ರಿಟಿಷರು ಭಾರತದ ಜನರನ್ನು ಜನಗಣತಿಯ ಮೂಲಕ ಮತ್ತು ಗೋಬೆಲ್ಸ್ ನನ್ನು ನಾಚಿಸುವಂತಹ ಪ್ರಚಾರ ತಂತ್ರದ ಮೂಲಕ ಮೊದಲು ಅಸ್ಪಷ್ಟವಾಗಿದ್ದ ಒಡಕುಗಳನ್ನು ಇನ್ನೂ ಹೆಚ್ಚಿಸಿ, ಸಮಾಜವನ್ನು ವಿಭಜಿಸಿ ಕೊನೆಗೆ ದೇಶವನ್ನೇ ವಿಭಜಿಸಲು ಕಾರಣರಾದರು ಎಂಬುದು.

ಬ್ರಿಟಿಷರು 1920ರಲ್ಲಿ ಜಾರಿಗೆ ತಂದ ಮಾಂಟೆಗೂ ಚೆಲ್ಮ್ಸ್ ಫರ್ಡ್ ಸುಧಾರಣೆ ಪ್ರತಿ ಇನ್ನೂರೈವತ್ತು ಜನರಲ್ಲಿ ಕೇವಲ ಒಬ್ಬ ಭಾರತೀಯನಿಗೆ ಓಟು ಹಾಕುವ ಅಧಿಕಾರ ಕೊಟ್ಟರಂತೆ! ಅಂದರೆ ಅದಕ್ಕಿಂತ ಮೊದಲು ಅವರಿಗೂ ಈ ಹಕ್ಕು ಇರಲಿಲ್ಲ! ಅಂದರೆ ಅದೆಂತಹ ಪ್ರಜಾಪ್ರಭುತ್ವವನ್ನು ಅವರು ಭಾರತದಲ್ಲಿ ಜಾರಿಗೆ ತಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ!!

ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ

ಎರಡು ನೂರು ವರ್ಷಗಳ ಕಾಲ ಜನರನ್ನು ಶೋಷಿಸಿ, ಉಪವಾಸ ಕೆಡವಿ, ಅವರ ಸಂಪತ್ತನ್ನು ಲೂಟಿ ಮಾಡಿ, ಅವರ ಕರಕುಶಲ ಕೈಗಾರಿಕೆಗಳನ್ನು ನಾಶಗೊಳಿಸಿ, ವಿರೋಧಿಸಿದವರನ್ನು ಬಂಧಿಸಿ ಜೈಲಿನಲ್ಲಿಟ್ಟು, ತೀವ್ರವಾಗಿ ವಿರೋಧಿಸಿದವರನ್ನು ಕೊಂದು ಹಾಕಿದ ಪ್ರಶಾಸನ ಅದೆಂತಹ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುತ್ತದೆ?

ಅದೇ ರೀತಿ ರೈಲು ಮಾರ್ಗವನ್ನು ಜಾರಿಗೆ ತಂದಿದ್ದಾಗಲಿ, ಇಂಗ್ಲಿಷ್ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿದ್ದಾಗಲಿ ಯಾವುದೇ ರೀತಿಯ ಉಪಕಾರ ಮಾಡಲು ಅಲ್ಲ. ಭಾರತದ ಸಂಪನ್ಮೂಲಗಳನ್ನು ತಮ್ಮ ದೇಶಕ್ಕೆ ಸಾಗಿಸಲು ಮತ್ತು ಬ್ರಿಟಿಷ್ ವಸ್ತುಗಳನ್ನು ಭಾರತದಂತಹ ದೊಡ್ಡ ಮಾರುಕಟ್ಟೆಗೆ ಸುಲಭವಾಗಿ ಒದಗಿಸಲು ರೈಲು ಮಾರ್ಗವನ್ನು ಕಟ್ಟಿದರೆ, ಇಂಗ್ಲಿಷ್ ಶಿಕ್ಷಣ ಅವರ ಆಡಳಿತವನ್ನು ಸುಗಮಗೊಳಿಸಲು ಜಾರಿಗೆ ತರಲಾಯಿತು.

ಅವರ ಭಾಷೆಯನ್ನು ಕಲಿತು, ಅವರಿಗೆ ವಿಧೇಯರಾಗಿ ಅವರು ಹೇಳಿದ್ದನ್ನೆಲ್ಲ ಮಾಡಲು ಅವರಿಗೆ ದೇಶಿ ಗುಲಾಮರ ಅಗತ್ಯವಿತ್ತಲ್ಲವೇ? ಅದಕ್ಕಾಗಿಯೇ ತಮ್ಮ ಶಿಕ್ಷಣ ಪದ್ದತಿಯನ್ನು ಜಾರಿಗೊಳಿಸಿದರು.

ನಾವು ಇತಿಹಾಸದ ಈ ಕಗ್ಗತ್ತಲಿನ ಪುಟಗಳನ್ನು ಸದಾ ನೆನಪಿಡಬೇಕು. ಈ ನೆನಪು ಆ ಕರಾಳ ಇತಿಹಾಸ ಮತ್ತೆ ಮರುಕಳಿಸದಂತೆ ನಮ್ಮನ್ನು ಜಾಗೃತವಾಗಿರಿಸಲಿ. ಬೇರಾರೂ ನಮ್ಮ ಪುಣ್ಯಭೂಮಿಯನ್ನು ಮತ್ತೆ ಆಕ್ರಮಿಸದಿರಲು ನಮ್ಮನ್ನು ಸನ್ನದ್ಧವಾಗಿರಿಸಲಿ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನ್ನು ಒಗ್ಗಟ್ಟಾಗಿ ಬಾಳಲು ಪ್ರೇರೇಪಿಸಲಿ.

English summary
How Britishers looted India, what they gave to India very interesting facts and details by Oneindia columnist Vasant Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X