• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; Laptop ಎಂದರೆ ತೊಡೆಯೇರಿ ಕೂರೋದು ಅಂತ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಈ ಲ್ಯಾಪ್ ಟಾಪ್ ಅಂದ್ರೇನು? ಒಂದು ಕಾಲದಲ್ಲಿ ದೊಡ್ಡ ದೊಡ್ಡ ಕಂಪ್ಯೂಟರ್ ಗಳು ಇರುತ್ತಿದ್ದವು. ಹಿಮಾಲಯ ಪರ್ವತದಲ್ಲಿರುವ ಕೊರೆವ ಚಳಿಯಂತೆ ಭಾಸವಾಗುತ್ತಿತ್ತು ಕಂಪ್ಯೂಟರ್ ರೂಮುಗಳು. ಅಂಥ ಚಳಿಯಲ್ಲಿ ಭದ್ರವಾಗಿ ಕುಳಿತಿರುತ್ತಿದ್ದ ಕಂಪ್ಯೂಟರ್ ಗಳ ಕೋಣೆಯಂತೂ ಸದಾ ಬಾಗಿಲು ಬಡಿದುಕೊಂಡೇ ಇರುತ್ತಿತ್ತು. ಕೆಲವೊಮ್ಮೆಯಂತೂ ಹೊರಗೆ ಶೂಗಳನ್ನು ಬಿಟ್ಟು ಒಳಗೆ ನಡೆಯಬೇಕಿತ್ತು. ಇಂದಿಗೂ ಹಲವಾರು server ರೂಮುಗಳು ಮತ್ತು ಡೇಟಾ ಸೆಂಟರ್ ಗಳಲ್ಲಿ ಈ ಪದ್ಧತಿಯನ್ನು ಪಾಲಿಸುತ್ತೇವೆ ಬಿಡಿ.

   Sachin Tendulkars real reason behind retirement was revealed by coach Gary Kristen|Oneindia Kannada

   ಇಂಥ ವಿಶೇಷ ಸ್ಥಾನಗಳನ್ನು ಬದಿಗಿಟ್ಟು, ಸಾಮಾನ್ಯ ಜೀವನದ ಸನ್ನಿವೇಶ ನೋಡಿದಾಗ desktop ಕಂಪ್ಯೂಟರ್ ಗಳು ಮನೆಗೆ ಬಂದವು. ಆ ನಂತರ ಬಂದಿದ್ದೇ laptop. ಆಮೇಲಿನದ್ದು ಇತಿಹಾಸ. ಮಕ್ಕಳ ಮೆದುಳಲ್ಲೇ ಬ್ರಹ್ಮದೇವ ಕಂಪ್ಯೂಟರ್ ಚಿಪ್ ಇಟ್ಟಿದ್ದಾನೋ ಎನ್ನುವಷ್ಟು ಬುದ್ಧಿವಂತ ಮಕ್ಕಳು ಇಂದಿನವರು. ಹಾಗಾಗಿ ಇಂದು, ಕಂಪ್ಯೂಟರ್ ಎಲ್ಲೆಲ್ಲೂ ಇವೆ ಅಂತಾಯ್ತು.

   ಶ್ರೀನಾಥ್ ಭಲ್ಲೆ ಅಂಕಣ; ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ...

   ಈಗ ಆ ಯಂತ್ರಗಳನ್ನು ಬಿಟ್ಟು ಈ ಏಕ್ದಂ ಒಂದಾನೊಂದು ಕಾಲಕ್ಕೆ ಹಾರೋಣ. laptop ಬಗ್ಗೆ ಬೇಕಾದಷ್ಟು ಪುರಾಣ ಕಥೆಗಳಿವೆ. ಇವೆಲ್ಲವನ್ನೂ ಕಥಾಶ್ರವಣಗಳಲ್ಲಿ ಕೇಳುತ್ತಾ, ಟಿ.ವಿ, ನಾಟಕ, ಸಿನಿಮಾಗಳಲ್ಲಿ ನೋಡುತ್ತಾ ಬಂದಿದ್ದೇವೆ. ಅದನ್ನೇ ಕೊಂಚ ಚಿಕ್ಕದಾಗಿ ಹಲವಾರು ಸನ್ನಿವೇಶಗಳಲ್ಲಿ ನೋಡೋಣ.

   ಶ್ರೀಮದ್ ಭಾಗವತದಲ್ಲಿ ಉತ್ತಾನಪಾದ ಎಂಬ ರಾಜನ ಕಥೆಯ ಉಲ್ಲೇಖ ಇದೆ. ಈ ಉತ್ತಾನಪಾದ ಎಂಬ ರಾಜನಿಗೆ ಸುನೀತಿ ಮತ್ತು ಸುರುಚಿ ಎಂಬ ಇಬ್ಬರು ಹೆಂಡಿರು. ಹಾಗಾಗಿ 'ಅವನ' ಕಥೆ ಮುಗೀತು. ಆದರೆ ಈ ಕಥೆ ಮುಂದುವರೆಯುತ್ತದೆ. ಸುನೀತಿ ಹಿರಿಯ ರಾಣಿ. ಸುರುಚಿ ಕಿರಿಯ ರಾಣಿ. ಹೀಗೇ ಒಮ್ಮೆ ಉತ್ತಾನಪಾದ, ಸುರುಚಿ ಮತ್ತು ಅವರಿಬ್ಬರ ಪುತ್ರ 'ಉತ್ತಮ' ಆಟವಾಡುತ್ತಿರಲು, ಅಲ್ಲಿಗೆ ಸುನೀತಿಯಲ್ಲಿ ಹುಟ್ಟಿರುವ ಉತ್ತಾನಪಾದನ ಮಗ ಧ್ರುವ ಬರುತ್ತಾನೆ. ತನ್ನ ತಂದೆಯ ತೊಡೆಯ ಮೇಲೆ ಕುಳಿತಿರುವ ಉತ್ತಮನನ್ನು ನೋಡಿ ತಾನೂ ಖಾಲಿ ಇರುವ ಇನ್ನೊಂದು ತೊಡೆಯೇರಿ ಕೂಡಬೇಕು ಎಂದು ಧ್ರುವನು ಹತ್ತಿರ ಬರಲು, ಅವನನ್ನು ಸುರುಚಿ ನೂಕಿ "ನನ್ನ ಮಗನಾಗಿ ಹುಟ್ಟಿದ್ದರೆ ನಿನಗೆ ಈ ಸ್ಥಾನ ಅಷ್ಟೇ! ನೀನು ನನ್ನ ಮಗನಲ್ಲ ಹಾಗಾಗಿ ನಿನಗೆ ಈ ಸ್ಥಾನವಿಲ್ಲ" ಎನ್ನುತ್ತಾಳೆ.

   ಶ್ರೀನಾಥ್ ಭಲ್ಲೆ ಅಂಕಣ; ಮಂಡಿಯೂರುವಿಕೆ ನಗಣ್ಯ ಅಲ್ಲ

   ಆಗ ಧ್ರುವಕುಮಾರನಿಗೆ ತನ್ನ ಜೀವನಧ್ಯೇಯ ಏನು ಅಂತ ಅರಿವಾಗಿ, ತನ್ನ ಗುರಿ ಸಾಧಿಸಲು ಅಮ್ಮನನ್ನು ಒಪ್ಪಿಸಿ ತಪಸ್ಸಿಗೆ ಹೋಗುತ್ತಾನೆ ಅಂತೆಲ್ಲಾ ಕಥೆ ಸಾಗುತ್ತದೆ. ಇವನ ತಪಸ್ಸಿಗೆ ಮೆಚ್ಚಿ ಮಹಾವಿಷ್ಣು ಪ್ರತ್ಯಕ್ಷನಾಗಲು ಇವನ ಬೇಡಿಕೆ, ತಾನು ತಂದೆಯ ತೊಡೆಯನೇರಿ ಕುಳಿತುಕೊಳ್ಳಬೇಕು ಎಂಬ ಆಶಯವಾಗಿತ್ತು ಅಷ್ಟೇ. ಅರ್ಥಾತ್ ಧ್ರುವಕುಮಾರ laptop ಆಗಲು ಬಯಸಿದ್ದ. ಗೊತ್ತಾಯ್ತಲ್ಲಾ !

   ಈಗ ಮತ್ತೊಬ್ಬ ಬಾಲಕನ ಕಥೆ. ಇವನು ಧ್ರುವನಿಗಿಂತ ಕೊಂಚ ದೊಡ್ಡವ. ಹಾಗಾಗಿ ಕಥೆಯೂ ಕೊಂಚ ದೊಡ್ಡ. ಪಟ್ಟ ಕಷ್ಟಗಳೂ ಕೊಂಚ ಅಧಿಕ. ಇವನೇ ಹಿರಣ್ಯಕಶಿಪು ಮತ್ತು ಕಯಾದು ಪುತ್ರನಾದ 'ಪ್ರಹ್ಲಾದ ಕುಮಾರ'. ಉದರವೆಂಬ ಗೃಹದಿಂದ ಬಿಡುಗಡೆಯಾಗಿ ಹೊರಬರುವ ಮುನ್ನವೇ ನಾರದರ ಗರಡಿಯಲ್ಲಿ tuition ಪಡೆದ ಅದ್ಭುತ ಬಾಲಕ. ಮುಂದೆ ಗುರುಕುಲದಲ್ಲಿ ವಿದ್ಯೆ ಕಲಿತು ಬಂದವ ಅಪ್ಪಟ ವಿಷ್ಣುಭಕ್ತನಾಗಿ ರಕ್ಕಸ ಅಪ್ಪನ ಮುಂದೆ ನಿಲ್ಲುತ್ತಾನೆ. ತನ್ನ ಮುಂದೆ ತನ್ನ ಶತ್ರುವಿನ ಗುಣಗಾನ ಮಾಡುತ್ತಿದ್ದರೆ ಯಾರಿಗೆ ತಾನೇ ಹೊಟ್ಟೆ ಉರಿಯಲ್ಲ! ಇದೇ ಹಿರಣ್ಯಕಶಿಪುವಿಗೂ ಆಗಿದ್ದು. ಮುಂದೆ ನಡೆದದ್ದೆಲ್ಲಾ ಅಪ್ಪ-ಮಗನ ನಡುವೆ ಒಂಥರಾ ಯುದ್ಧ. ಪ್ರತೀ ಬಾರಿಯೂ ಗೆದ್ದು ಬಂದವನ ರಕ್ಷಣೆಗೆ ಕಂಬ ಒಡೆದು ಬಂದವ ನಾರಸಿಂಹ. ಆ ನಂತರ ಹಿರಣ್ಯಕಶಿಪುವಿನ ವಧೆಯಾದ ಮೇಲೆ ಉಗ್ರನಾಗಿದ್ದ ನಾರಸಿಂಹ ಶಾಂತನಾದ. ಆಗ ಪ್ರಹ್ಲಾದಕುಮಾರ ಅವನ ತೊಡೆಯೇರಿ ಕೂರುತ್ತಾನೆ. ಇದು ಪ್ರಹ್ಲಾದ laptop ಆದ ಕಥೆ.

   ಶ್ರೀನಾಥ್ ಭಲ್ಲೆ ಅಂಕಣ; ಮನಸ್ಸು, ಹೃದಯಕ್ಕೂ ಶೋಧಕ ಬೇಕು

   ಸತ್ಯಯುಗದಿಂದ ಸೀದಾ ಕಲಿಯುಗಕ್ಕೆ ಬರೋಣ. ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಅಮೇರಿಕಾದಲ್ಲಿ ಎಲ್ಲ ಮಾಲ್ ಗಳೂ ಶೃಂಗಾರ ತಳೆದು ಗ್ರಾಹಕರನ್ನು ಸ್ವಾಗತಿಸುತ್ತವೆ. ಸಾಮಾನ್ಯವಾಗಿ ಮಾಲ್ ನ ಮಧ್ಯ ಭಾಗದಲ್ಲಿ ಮಕ್ಕಳಿಗೆ ಆಕರ್ಷಣೆಯಾಗಿ ಹೆಚ್ಚು ವಿಶೇಷವಾಗಿ ಅಲಂಕರಿಸಿ, ಅಲ್ಲಿ ಸಾಂತಾಕ್ಲಾಸ್ ವೇಷಧಾರಿಯೊಬ್ಬ ಒಂದು ವಿಶೇಷ ಖುರ್ಚಿಯಲ್ಲಿ ಕೂತು, ಸರದಿಯಲ್ಲಿ ಬರುವ ಮಕ್ಕಳನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳೋದು, ಅದನ್ನು ಚಿತ್ರ ತೆಗೆಯೋದು ನಡೆಯುತ್ತದೆ. ಪ್ರತೀ ಚಿತ್ರಕ್ಕೂ ಇಷ್ಟು ಅಂತ ಬೆಲೆ ಇರುತ್ತದೆ ಬಿಡಿ. ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಸಾಂತಾನ laptop ಆಗಿ ಕೂರುವ ಮಕ್ಕಳಿಗೆ ಅದೊಂದು ಮೋಜಿನ ಸಮಯ.

   ಈಗ ನಮ್ಮ ಕೃಷ್ಣನ ಯುಗಕ್ಕೆ ಹೋಗೋಣ ಬನ್ನಿ. ಕೃಷ್ಣಯುಗ ಅಂತ ಅದನ್ನು ಕರೆಯೋದಿಲ್ಲ ಬದಲಿಗೆ ದ್ವಾಪರಯುಗ ಎನ್ನುತ್ತಾರೆ. ದ್ವಾಪರದಲ್ಲಿ ಕೃಷ್ಣಲೀಲೆ ಇದೆ. ದ್ವಾಪರದಲ್ಲಿ ಭಾಗವತ ಕಥಾನಕವಿದೆ, ಗೀತೋಪದೇಶವಿದೆ ಅದರಂತೆಯೇ ಕುರು ವಂಶದ ಕಥಾನಕವೂ ಇದೆ. ಜೂಜನ್ನಾಡುವ ಮೂಲಕ ತನ್ನೆಲ್ಲಾ ಆಸ್ತಿಪಾಸ್ತಿಯನ್ನು ಕಳೆದುಕೊಳ್ಳುತ್ತಾನೆ ಯುಧಿಷ್ಠಿರ. ಅದು ಹಾಗೆಯೇ ಮುಂದುವರೆದು ತಮ್ಮಂದಿರನ್ನೂ ಕೊನೆಗೆ ಹೆಂಡತಿಯನ್ನೂ ಜೂಜಿನಲ್ಲಿ ಕಳೆದುಕೊಳ್ಳುತ್ತಾನೆ. ಸಭೆಯ ಮಧ್ಯೆ 'ದಾಸಿ' ದ್ರೌಪದಿಯನ್ನೂ ಕರೆಸುತ್ತಾನೆ. ಜಯದಿಂದ ಮದವೇರಿದ್ದ ದುರ್ಯೋಧನ ತನ್ನ ತೊಡೆತಟ್ಟಿ ದ್ರೌಪದಿಯನ್ನು laptop ಆಗಲು ಕರೆಯುತ್ತಾನೆ. ತನ್ನ ಸಾವಿನ ಹಾದಿಯನ್ನು ತಾನೇ ರೂಪಿಸಿಕೊಳ್ಳುತ್ತಾನೆ.

   ವಿಷ್ಣುವಿನ ಅವತಾರವಾದ ಭೂವರಾಹ ಸ್ವಾಮಿಯು ಭೂದೇವಿಯನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವಂತೆ, ಭೋಗಾನಾರಸಿಂಹನು ಲಕ್ಷ್ಮೀದೇವಿಯನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವಂತೆ ಕಾಣುವುದೆಲ್ಲವೂ laptopಗಳೇ. ಈಗ ಕಲಿಯುಗಕ್ಕೆ ಬರೋಣ.

   ಗಂಡುಮಕ್ಕಳಿಗೆ ಹುಟ್ಟುಕೂದಲನ್ನು ತೆಗೆಯುವ ಒಂದು ಶಾಸ್ತ್ರಕ್ಕೆ ಜಾವಳ ಎನ್ನುತ್ತೇವೆ. ಅದಕ್ಕೊಂದು ಸಮಾರಂಭವೂ ಇರುತ್ತದೆ. ಆ ಕೂಸನ್ನು ತೊಡೆಯ ಮೇಲೆ ಕೂರಿಸಿಕೊಂಡ ಮೇಲೆ ನಾಪಿತ ಕೊಂಚ ಹೆಚ್ಚಾಗಿಯೇ ಬೆಳೆದಿರಬಹುದಾದ ಕೂದಲನ್ನು ತೆಗೆಯುವಾಗ, ತನಗೇನೋ ಮಾಡುತ್ತಿದ್ದಾರೆ ಎಂಬ ಭೀತಿಯಿಂದ ಮಗು ಅಳೋದು ಸಹಜ. ಕೂಸನ್ನು ಹಿಡಿದುಕೊಂಡು ತೊಡೆಯ ಮೇಲೆ ಕೂರಿಸಿಕೊಳ್ಳೋದೇ ಒಂದು ಸಾಹಸ. ಜೊತೆಗೆ ಅವರು ಬಳಸುವ ಕತ್ತಿಯಿಂದ ಅಕಸ್ಮಾತ್ ಏಟಾದರೆ ಎಂಬ ಭಯ ಕೂಡ. ಒಟ್ಟಾರೆ ಹೇಳೋದಾದ್ರೆ, ಪೂರ್ಣವಾಗಿ ಕೂದಲನ್ನು ತೆಗೆಯುವ ಹೊತ್ತಿಗೆ ನಾಪಿತ, ಕೂಸು ಮತ್ತು ಕೂಸಿನ ಅಪ್ಪ ಇವರೆಲ್ಲ calorie ಚೆನ್ನಾಗಿ burn ಆಗಿರುತ್ತೆ.

   ಮಗನಿಗೆ ಚಿಕ್ಕ ವಯಸ್ಸು ಇರುವಾಗಲೇ ಮುಂಜಿ ಮಾಡಿದಾಗ, ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಕಿವಿಯಲ್ಲಿ ಗಾಯತ್ರಿ ಮಂತ್ರ ಹೇಳುತ್ತಾನೆ ತಂದೆ. 'ಚಿಕ್ಕ ವಯಸ್ಸು' ಎಂದೇಕೆ ಹೇಳಿದ್ದು ಎಂದರೆ, ಕೆಲವರಿಗೆ ಅವರ ಮದುವೆಯ ಹಿಂದಿನ ದಾರ ಶಾಸ್ತ್ರಕ್ಕೆ ಮುಂಜಿ ಮಾಡುವುದು ಇದೆ. ಮದುಮಗನನ್ನು, ನಿನ್ನ ತಂದೆಯ ತೊಡೆಯೇರಿ ಕುಳಿತುಕೊಳ್ಳಬೇಕು ಎನ್ನಲಾದೀತೆ?

   ಹೆಣ್ಣೊಪ್ಪಿಸಿಕೊಡುವ ಶಾಸ್ತ್ರದಲ್ಲಿ ಮದುಮಗಳನ್ನು ಗಂಡನ ಮನೆಯ ಹಿರಿಯರ ತೊಡೆಯ ಮೇಲೆ ಕೂರಿಸುವ ಸಂಪ್ರದಾಯ ಇದೆ. ನಮ್ಮ ಮನೆಯ ಮಗಳನ್ನು ನಿಮಗೆ ಒಪ್ಪಿಸುತ್ತಿದ್ದೇವೆ, ಚೆನ್ನಾಗಿ ನೋಡಿಕೊಳ್ಳಿ ಎಂಬರ್ಥದಲ್ಲಿ ನಡೆಸುತ್ತಿದ್ದ ಈ ಶಾಸ್ತ್ರಕ್ಕೆ ಇಂದು ಯಾವ ಅರ್ಥವೂ ಇಲ್ಲ ಎನ್ನಲಾರೆ ಆದರೆ ಬೆಲೆ ಇಲ್ಲ ಎನ್ನುತ್ತೇನೆ.

   ಬಸ್ಸಿನಲ್ಲಿ ಚಿಕ್ಕಮಕ್ಕಳು ತಮ್ಮಷ್ಟಕ್ಕೆ ತಾವು ಸೀಟಿನಲ್ಲಿ ಕೂರಲು ಜನ ಬಿಡೋಲ್ಲ ನೋಡಿ. ತಮಗೆ ಸೀಟು ಸಿಗಲಿಲ್ಲ ಎಂದರೆ ಸಾಕು ಆ ಚಿಕ್ಕವರನ್ನು ನೂಕಿ ಕೂರುತ್ತಾರೆ ಇಲ್ಲವೇ ಅವರನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಕೂರುತ್ತಾರೆ. ಎರಡು ವರ್ಷದವರೆಗಿನ ಚಿಕ್ಕಮಕ್ಕಳಿಗೇ ಅಂತ ಒಂದು ಸೀಟನ್ನು ವಿಮಾನದಲ್ಲಿ ಕೊಡುವುದಿಲ್ಲ. ಮೊದಲ ಬಾರಿ ಸಂಸಾರ ಸಮೇತನಾಗಿ ಅಮೆರಿಕಕ್ಕೆ ಬರುವಾಗ ಮಗರಾಯ ಹೆಚ್ಚು ಕಮ್ಮಿ laptop ಆಗಿಯೇ ಪಯಣ ಮಾಡಿದ್ದು.

   ಈ laptop ಅರ್ಥಾತ್ ತೊಡೆಯ ಮೇಲೆ ಕೂರಿಸಿಕೊಳ್ಳುವ ಪದ್ಧತಿಯ ಹಲವಾರು ಆಯಾಮಗಳನ್ನು ನೋಡಿದೆವು. ಆದರೆ ಹಲವು ವಿಷಯ ಹೇಳದೆಯೇ ಬಿಟ್ಟಿರುವೆ ಕೂಡ. ಅದರಲ್ಲೊಂದು ಎಂದರೆ ಶೋಷಣೆ. ನಿಮ್ಮ ಮುದ್ದುಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರಲಿ ಮತ್ತು ಕೊಂಚ ಹೆಚ್ಚು ಎಚ್ಚರಿಕೆ ಇರಲಿ ಎಂಬ ಸೂಕ್ಷ್ಮ ಎಚ್ಚರಿಕೆಯ ಮಾತುಗಳಿಂದ ಈ ಲ್ಯಾಪ್ ಟಾಪ್ ಮಾತು ಮುಗಿಸುತ್ತೇನೆ...

   English summary
   Laptop means sitting on lap. Laptop is machine now. But in historical stories, we can get different examples for laptop
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X