• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಪಾಟ್ ಲೈಟ್ ಅಥವಾ ಲೈಮ್ ಲೈಟ್ ಸಿಂಡ್ರೋಮ್

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಬೆಳಿಗ್ಗೆ ಹೀಗೆ ವಾಟ್ಸಾಪ್ ನೋಡುವಾಗ ಯಾರೋ ಒಂದು ವಿಡಿಯೋ ಕಳಿಸಿದ್ದರು. ಏನಪ್ಪಾ ಅಂತ ನೋಡಿದರೆ "spotlight or limelight syndrome" ಬಗ್ಗೆ ಒಂದು ಪುಟ್ಟ ವಿಡಿಯೋ ಅದು. ಅದನ್ನು ನೋಡಿದ ಮೇಲೆ ನನ್ನ ಅನಿಸಿಕೆಯನ್ನೂ ನಿಮ್ಮೊಡನೆ ಯಾಕೆ ಹಂಚಿಕೊಳ್ಳಬಾರದೂ ಅನ್ನಿಸಿತು. ಇದರ ಬಗ್ಗೆಯೇ ಒಂದಷ್ಟು ಮಾತು...

ಮೊದಲಿಗೆ ನನ್ನ ಜೀವನದ್ದೇ ವಿಚಾರಗಳು. ಅಂದು ಎಂದರೆ ರೇಷನ್ ಡಿಪೋ'ದಲ್ಲಿ ಸೀಮೆಎಣ್ಣೆ ಕೊಡುತ್ತಿದ್ದ ದಿನಗಳು, ಶನಿವಾರ ಸಂಜೆ ನಾಲ್ಕಕ್ಕೆ ಅವನ ಗಾಡಿ ಬರುತ್ತಿತ್ತು. ಅಷ್ಟು ಹೊತ್ತಿಗೆ ಅಲ್ಲದಿದ್ದರೂ ಅದಕ್ಕಿಂತಲೂ ಮುನ್ನ ಅಲ್ಲಿರಬೇಕು. ಕ್ಯೂನಲ್ಲಿ ನಿಲ್ಲಬೇಕು, ಅವನು ಕೊಟ್ಟಷ್ಟು ತೆಗೆದುಕೊಳ್ಳಬೇಕು. ನೊರೆ ಬರಿಸಿ ಹಾಕಿದಾಗ ಅವನೊಂದಿಗೆ ಜಗಳ ಆಡುವವರು ಕೆಲವರು. ಆಗ ಅವನು ಧಿಮಾಕು ತೋರಿಸೋದು ಇತ್ಯಾದಿ ನಡೆಯುತ್ತಲೇ ಇರುತ್ತಿತ್ತು.

ತಲ್ಲಣಸಿದಿರು ಕಂಡ್ಯ ತಾಳು ಮನವೆ . . . .

ಸೀಮೆಎಣ್ಣೆ ಡಬ್ಬ ತೆಗೆದುಕೊಂಡು ಅಲ್ಲಿಗೆ ಹೋಗಿ ಸೀಮೆಎಣ್ಣೆ ತರೋ ಕೆಲಸ, ಮನೆಯಲ್ಲಿ ಬೇರೆಯವರು ಇಲ್ಲದೇ ಹೋದಾಗ, ನನ್ನದೇ ಆಗಿತ್ತು. ಒಂದು ಕಿಲೋಮೀಟರು ದೂರದಲ್ಲಿದ್ದ ಡಿಪೋಗೆ ನಡೆದು ಹೋಗಬೇಕು ಎಂದರೆ ದು:ಖ. ಬಾಡಿಗೆ ಸೈಕಲ್ ತೆಗೆದುಕೊಂಡು ಹೋಗಿ ಸೀಮೆಣ್ಣೆ ತರುತ್ತಿದ್ದೆ. ಅಂಗಡಿಯವನೇನಾದರೂ ಸೈಕಲ್ ಇಲ್ಲ ಎಂದರೆ ಏನೋ ಧುಮಧುಮ ಅಂತ ಅಂದುಕೊಂಡೇ ಡಿಪೋಗೆ ಹೋಗುತ್ತಿದ್ದೆ.

ಏಕೆ ಹೀಗೆ ಎಂದರೆ ಏನೋ ಸಂಕೋಚ. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಅನ್ನೋ ಆತಂಕ. ನನ್ನನ್ನು ಸೀಮೆಎಣ್ಣೆ ಡಬ್ಬದ ಜೊತೆ ಯಾರಾದರೂ ನೋಡಿದರೆ ಏನು ಕಥೆ ಅನ್ನೋ ಭೀತಿ. ಸೀಮೆಎಣ್ಣೆ ಹಾಕುವವನೊಂದಿಗೆ ಜಗಳ ಆಡಿದರೆ ನನ್ನನ್ನು ನೋಡಿ ಯಾರಾದರೂ ಏನಾದರೂ ಅಂದುಕೊಂಡರೆ?

ಇಂಥದ್ದೇ ಅನಿಸಿಕೆ ಕಾಲೇಜು ದಿನಗಳಲ್ಲೂ ಮುಂದುವರೆದಿತ್ತು. ಭಾನುವಾರ ಕ್ಷೌರ ಮಾಡಿಸಿಕೊಂಡ ಮೇಲೆ ಸೋಮವಾರ ಬಸ್ ಸ್ಟಾಂಡಿನಲ್ಲಿ ನಿಂತಿದ್ದರೆ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಅನ್ನೋ ಭಾವನೆ. ಮಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿ ನಮ್ಮದೇ ಕಾಲೇಜಿನ ಹುಡುಗಿ ಏನಾದರೂ ಕಂಡರೆ ತಲೆ ಮರೆಸಿಕೊಂಡು ಇನ್ನೆಲ್ಲೂ ನಿಲ್ಲುತ್ತಿದ್ದೆ.

ಜೀವನವೇ ಒಂದು ಬೀಳುಏಳಿನ ಸಂತೆ, ನಿಮಗಿದೆಯೇ ಅದರ ಚಿಂತೆ?

ಇದನ್ನೇ spotlight / limelight syndrome ಅನ್ನೋದು. ಅರ್ಥಾತ್ ನಾವೆಲ್ಲಿ ಹೋದರೂ ನಮ್ಮ ತಲೆಯ ಮೇಲೇ ದೀಪ ಬೆಳಗುತ್ತಾ ನಾಲ್ಕು ಜನರ ಕಣ್ಣಿಗೆ ನಾವು ಬಿದ್ದು, ಅವರುಗಳು ನಮ್ಮ ಚಲನವಲನ ಗಮನಿಸುತ್ತಿದ್ದಾರೆ ಎಂಬ ಭೀತಿ.

ಈ ಭೀತಿ ಇರಬೇಕೇ? ಇರಬಾರದೇ? ಅನ್ನೋದಕ್ಕಿಂತಾ ನಮ್ಮ ಮೇಲೆ ಆ limelight ಇದ್ದಾಗ ಆ ಸನ್ನಿವೇಶ ಎದುರಿಸಲು ನಾವೆಷ್ಟು ಸಿದ್ದರಿದ್ದೇವೆ ಅನ್ನೋದನ್ನ ತಿಳಿದುಕೊಳ್ಳಬೇಕು. ಗುಂಪಲ್ಲಿ ಗೋವಿಂದ ಅಂತ ನೂರಾರು ಮಾತನಾಡುವ ಮಂದಿ ಸ್ಟೇಜಿನ ಮೇಲೆ ಕರೆದು ಒಂದೆರಡು ಮಾತಾಡಪ್ಪ ಎಂದಾಗ ಮೈಯೆಲ್ಲಾ ಬೆವರು, ನಾಲಿಗೆ ಮೇಲೆ ಏಳೋದಿಲ್ಲ, ನಿಂತಲ್ಲೇ ತೊಡೆಯಲ್ಲಿ ನಡುಕ, ಹೀಗೆ.

ನಮ್ಮ ತರಗತಿಯಲ್ಲಿ ಹೀಗೆ ಒಮ್ಮೆ ಸಂಸ್ಕೃತ ಲೆಕ್ಚರರ್ ಪಾಠ ಮಾಡುವಾಗ ಒಬ್ಬ ಮಹಾನುಭಾವ ಸಕತ್ ತರಲೆ ಮಾಡುತ್ತಿದ್ದ. ಅವರೂ ನೋಡೋ ಅಷ್ಟೂ ನೋಡಿ ನಂತರ ಅವನನ್ನು ಏಳುವಂತೆ ಹೇಳಿ ಸಂಸ್ಕೃತ ಪಾಠದಲ್ಲಿನ ಒಂದು ಪ್ಯಾರಾಗ್ರಾಫ್ ಓದು ಎಂದರು ಅಷ್ಟೇ. ಎದ್ದು ನಿಂತವನ ಪರಿಯೇ ಬದಲಾಗಿ ಹೋಯ್ತು. ಮುಖದ ಮೇಲೆ ಬೆವರು ಇಳೀತಿತ್ತು. 'ಗಂಟಲು ಸರಿ ಇಲ್ಲಾ ಸಾರ್' ಎಂದವನಿಗೆ ಮೇಷ್ಟ್ರು "ಇಷ್ಟು ಹೊತ್ತೂ ಶಂಖ ಹೊಡೀತಿದ್ದೆ? ನಿಂತ ಜಾಗದಲ್ಲೇ ಮಾತು ಬಾರದ ನೀನು, ಸ್ಟೇಜಿನ ಮೇಲೆ ನಿಂತು ಮಾತಾಡ್ತಾ ಇರೋ ನನ್ನನ್ನೇ ಕಿಚಾಸ್ತೀಯಾ?" ಎಂದು ತರಾಟೆಗೆ ತೆಗೆದುಕೊಂಡ ಮೇಲೆ ತೆಪ್ಪಗಾದ ಅನ್ನಿ.

ಮಾತನಾಡೋದು ಒಂದು ಕಲೆ, ಆದರೆ ಕೆಲವರಿಗೆ ಅದೇ ಕಪ್ಪುಕಲೆ!

ಈ ಸಂದರ್ಭದಲ್ಲಿ ಉತ್ತರಕುಮಾರನನ್ನು ನೆನಪಿಸಿಕೊಳ್ಳದೆ ಇದ್ದರೆ ಹೇಗೆ? ಉತ್ತರಕುಮಾರನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ತನ್ನ ಸುತ್ತಲೂ ಸುಂದರಿಯರು ಇರುವಾಗ ಬರೀ ಬೊಗಳೆ ಬಿಡುತ್ತಿದ್ದ ಉತ್ತರಕುಮಾರ, ಯುದ್ಧಭೂಮಿಯಲ್ಲಿ limelight'ಗೆ ಬಂದ ಕೂಡಲೇ ತಾನೆಲ್ಲೋ ಬರಬಾರದ ಜಾಗಕ್ಕೆ ಬಂದುಬಿಟ್ಟಿದ್ದೇನೆ ಎಂದು ಬೆದರಿ ಯುದ್ಧರಂಗವನ್ನೇ ಬಿಟ್ಟು ಓಡಿಹೋದ. ಇದೊಂದು ಹಾಸ್ಯ ಸನ್ನಿವೇಶದಂತೆ ಕಂಡುಬಂದರೂ ನಿಜ ಜೀವನಕ್ಕೆ ಹೋಲಿಸಿದರೆ ಇಲ್ಲೊಂದು ದೊಡ್ಡ ಕಲಿಕೆಯೇ ಇದೆ.

Limelight'ಗೆ ಹೊಂದಿಕೊಂಡವರ ಜೀವನವೇ ತುಂಬಾ ಭಿನ್ನ. ಈ ವಿಷಯ ಸಿನಿಮಾರಂಗದವರು, ರಾಜಕೀಯ ರಂಗದವರು, ಕ್ರೀಡಾಲೋಕದವರುಗಳಿಗೆ ಅತೀ ಹೆಚ್ಚು ಒಪ್ಪುತ್ತದೆ. ಸಿನಿಮಾ ರಂಗದವರನ್ನೇ ಉದಾಹರಣೆಗೆ ತೆಗೆದುಕೊಂಡರೆ ಪ್ರಸಿದ್ಧಿಗೆ ಬಂದವರು ಎಲ್ಲಿಗೇ ಹೋದರೂ ಅವರ ತಲೆಯ ಮೇಲೆ ದೀಪ ಪ್ರಜ್ವಲಿಸುತ್ತಿರುತ್ತದೆ. ಎಲ್ಲಿ ಹೋದರೂ ಅವರನ್ನು ಜನ ನೋಡುತ್ತಾ ಇರುತ್ತಾರೆ. ಇಂಥವರನ್ನು ಬೆನ್ನಟ್ಟಿ ಚಿತ್ರಗಳನ್ನು ಕ್ಲಿಕ್ಕಿಸೋ paparazzi'ಗಳಿಗೂ ಕಡಿಮೆ ಇಲ್ಲ. ಹೀಗೆ ಪ್ರಕಾಶಮಾನವಾದ ದೀಪದ ಕೆಳಗೇ ಇರುವ ಇವರಿಗೆ ಖಾಸಗಿ ಜೀವನ ಎನ್ನುವುದೇ ದುಸ್ತರವಾಗಿಬಿಡುತ್ತದೆ. ಜನ ತಮ್ಮತ್ತ ನೋಡುತ್ತಿದ್ದಾರೆ ಎಂದಾಗ ಸದಾ ಕೃತಕನಗೆಯ ಮುಖವಾಡ ಧರಿಸಿ ಓಡಾಡಬೇಕಾಗುತ್ತದೆ. ಸ್ವಂತಿಕೆಯೇ ಸತ್ತು ಹೋದಂತೆ ಆಗಿರುತ್ತಾರೆ. ಕೆಲವೊಮ್ಮೆ ಜೇಬಲ್ಲಿ ನಾಲ್ಕು ಕಾಸಿಲ್ಲದೆ ಹೋದಾಗಲೂ ಜನ ತಮ್ಮನ್ನು ನೋಡುತ್ತಿದ್ದಾರೆ ಎಂಬ ಭ್ರಮೆಯಲ್ಲಿ ಹಣ ಹೊಂದಿಸಲು ಯಾವ್ಯಾವುದೋ ಹಾದಿಯನ್ನೂ ಹಿಡಿದಿರುತ್ತಾರೆ. ಇದೊಂದು ಮರೀಚಿಕೆ ಎಂದು ಅರಿವಾಗುವ ಹೊತ್ತಿಗೆ ಏನೇನೋ ಆಗಿಹೋಗಿರುತ್ತಾರೆ.

ಜಗದೊಳಿರುವ ಮನುಜರೆಲ್ಲಾ ಒಂಥರಾ ಒರಟರು!

ರಾಜಕುಮಾರ ವಿಲಿಯಮ್ ಮತ್ತು ಕೇಟ್ ಅವರ ವಿವಾಹವಾದಾಗ, ಲಂಡನ್ ಪತ್ರಿಕೆಗಳು ಹೇಳಿದ ಮಾತು "ಇನ್ನು ಮುಂದೆ ಕೇಟ್ ಜೀವನ ಮುಂಚಿನಂತೆ ಇರುವುದಿಲ್ಲ" ಅಂತ. ಸತ್ಯವೇ, ಇವರುಗಳು ದಿನದ ಪ್ರತೀ ಕ್ಷಣ limelight'ನಲ್ಲೇ ಇರುವವರು. ಪ್ರತೀ ಬಾರಿ ಆಕೆಯು ಜನರ ಮಧ್ಯೆ ಬರುವುದಕ್ಕೆ ಪೂರ್ವ ತಾಲೀಮು ಇದ್ದೇ ಇರುತ್ತದೆ.

ಹೌದು, ಜೀವನದಲ್ಲಿ ಯಾವುದೇ ಕೆಲಸಕ್ಕಾಗಲಿ ಪೂರ್ವ ತಯಾರಿ ಇದ್ದಾಗ ಅದರ ಫಲವೂ ಚೆನ್ನಾಗೇ ಇರುತ್ತದೆ. ಶೇಕಡಾ ನೂರು ಸರಿಯಾಗಿರುತ್ತದೆ ಎಂಬುದು ಗ್ಯಾರಂಟಿ ಇಲ್ಲದಿದ್ದರೂ ತಪ್ಪುಗಳಾಗುವ ಸಂಭವನೀಯತೆ ಕಡಿಮೆ. ಉದಾಹರಣೆಗೆ ಕೆಲಸದ ಇಂಟರ್ವ್ಯೂ ತಯಾರಿ. ಆ ಸಮಯದಲ್ಲಿ ಅಭ್ಯರ್ಥಿ limelightನಲ್ಲಿ ಇರುತ್ತಾರೆ ಎಂಬುದನ್ನು ಮರೆಯಬಾರದು. ಪ್ರತೀ ಚಲನವಲನವನ್ನೂ ಗಮನಿಸುವವರಿರುತ್ತಾರೆ. ಪೂರ್ವತಯಾರಿ ಇದ್ದಷ್ಟೂ ಒಳಿತು. ಇದರಂತೆಯೇ ಯಾವುದೋ ಕಾರ್ಯಕ್ರಮದಲ್ಲಿ ಸ್ಟೇಜಿನ ಮೇಲೆ ನೀವು ಇರುವಿರಿ ಎಂದಾಗ ಅದಕ್ಕೆ ತಕ್ಕಂತೆ ಪೂರ್ವತಯಾರಿ ಅತ್ಯಗತ್ಯ.

spotlight/limelightನ ವೈಶಿಷ್ಟ್ಯವೇ ಬೇರೆ. ಯಾವುದೇ ಅದ್ಭುತವಾದ ಕೆಲಸ ಮಾಡಿದಾಗಲೂ, ಯಾವುದೋ ಒಂದು ಅಡ್ಡಾದಿಡ್ಡಿ ಮಾತನಾಡಿದಾಗಲೂ, ಯಾವುದೋ ಹಗರಣದಲ್ಲಿ ಸಿಲುಕಿಕೊಂಡಾಗಲೂ ಆ ವ್ಯಕ್ತಿ limelight'ಗೆ ಬಂದಿರುತ್ತಾರೆ. ಅಂದರೆ ವಿಷಯ ಇಷ್ಟೇ, ಆ ದೀಪ ತನ್ನ ಕೆಳಗೆ ನಿಂತವರ ಮೇಲೆ ಬೆಳಕು ಚೆಲ್ಲಿ ನಾಲ್ಕು ಜನರ ಕಣ್ಣಿಗೆ ಕಾಣುವ ಹಾಗೆ ಮಾಡುತ್ತದೆ. ಆದರೆ ಆ ಜನ ಇಂಥವರು ಎಂಬುದನ್ನು ಆ ಬೆಳಕು ತಲೆಯೇ ಕೆಡಿಸಿಕೊಳ್ಳುವುದಿಲ್ಲ.

ಸದಾ ಸುದ್ದಿಯಲ್ಲಿರುವವರನ್ನು limelightನಲ್ಲಿ ಇದ್ದಾರೆ ಅಂತಾರೆ. ಆದರೆ ಇಂಥಾ ದೀಪದ ಕೆಳಗೆ ನಿಲ್ಲಲು ಅದನ್ನೇ ಅರಸಿಹೋಗಬಾರದು. Spotlightನ ಬೆಳಕು ನಾವಿದ್ದಲ್ಲೆಲ್ಲಾ ತಾನೇ ಬರುತ್ತದೆ. ಇದರ ಅರ್ಥ ಇಷ್ಟೇ. ನಾವು ಯಾವುದೋ ಒಂದು ಡಿಗ್ರೀ ಅಥವಾ ಮಾಸ್ಟರ್ ಡಿಗ್ರಿ ಪಡೆದ ಮಾತ್ರಕ್ಕೆ spotlightನಲ್ಲಿ ಬರುತ್ತೇವೆ ಎಂದರ್ಥವಲ್ಲಾ. ಅದು ಬರೀ ಅಡಿಪಾಯ ಅಷ್ಟೇ. ಅದನ್ನು ಬೆಳೆಸಿ ಮಹಡಿ ಕಟ್ಟುವ ಕೆಲಸ ಇನ್ನೂ ಬಾಕಿ ಇದೆ ಎಂದರ್ಥ.

ನಮ್ಮ ಬಗ್ಗೆ ಮತ್ತೊಬ್ಬರ ಮುಂದೆ ನಾಲ್ಕು ಮಾತಲ್ಲಿ ಹೇಳಬೇಕು ಎಂದರೆ ಅದಕ್ಕೆ ಸಿದ್ಧವಿದ್ದೇವೆಯೇ? ನಾಲ್ಕು ಜನರ ಮಧ್ಯೆ ಆಂಗ್ಲದಲ್ಲೋ ಅಥವಾ ನಮ್ಮದೇ ಮಾತೃಭಾಷೆಯಲ್ಲಿ ಮಾತನಾಡುವಷ್ಟು ತಾಕತ್ತು ಇದೆಯೇ? ಪುಸ್ತಕದ ಜ್ಞಾನ ಪರೀಕ್ಷೆ ಬರೆಯಲು ಸಹಾಯಕವಷ್ಟೇ ಆದರೆ softskills ಎಂಬುದು ಒಬ್ಬ ವ್ಯಕ್ತಿಯನ್ನು ರೂಪಿಸಲು ಶಕ್ಯವಾಗುತ್ತದೆ.

ತಪ್ಪುಗಳಾಗುತ್ತದೆ ಎಂದು ಹಿಂಜರಿದು ಪ್ರಯತ್ನವನ್ನೇ ಬದಿಗಿರಿಸಿದರೆ ನಷ್ಟ ನಮಗೇ. ಸೋತು ಗೆಲ್ಲುವುದರಿಂದ ಕಲಿಕೆ ಇನ್ನೂ ಹೆಚ್ಚುತ್ತದೆ. ಅನುಭವವೂ ಹೆಚ್ಚುತ್ತದೆ. ಅಯ್ಯೋ ಸೋತೇ ಎಂದು ಅಂದುಕೊಂಡಾಗ, ಮತ್ತು ಪ್ರಯತ್ನವನ್ನೇ ಮುಂದುವರಿಸದೆ ಸುಮ್ಮನೆ ಇದ್ದಾಗ, ಅದು ಸೋಲು ಎಂಬುದನ್ನು ಅರಿತುಕೊಳ್ಳಬೇಕು. ಸದಾ ಮುಂದಿರುತ್ತೇವೆ ಎನ್ನುವ ಹಂಬಲಕ್ಕಿಂತಾ, ಭಿನ್ನವಾಗಿರುವ ಯತ್ನ ಮಾಡಿದರೆ spotlight ನಮ್ಮ ತಲೆಯ ಮೇಲೆ ತಾನೇ ಬರುತ್ತದೆ.

spotlight ಎಂಬುದೂ ಕ್ಷಣಿಕ ಎಂದು ಅರ್ಥೈಸಿಕೊಳ್ಳಬೇಕು. ನಮ್ಮ ತಲೆಯ ಮೇಲೆ ಈ ಬೆಳಕು ಇರಲಿ, ಇಲ್ಲದಿರಲಿ ಕರ್ತವ್ಯ ಬಿಡದೆ ಶ್ರಮಿಸುತ್ತಿರಲೇಬೇಕು.

English summary
Spotlight or Limelight syndrome : How to be or not to be in the spotlight or limelight? Spotlight effect refers to the fact that people considerably overestimate how much attention other people are paying to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X