Get Updates
Get notified of breaking news, exclusive insights, and must-see stories!

ಜಗದೊಳಿರುವ ಮನುಜರೆಲ್ಲಾ ಒಂಥರಾ ಒರಟರು!

ಜಗದೊಳಿರುವ ಮನುಜರೆಲ್ಲಾ ಒರಟರು... ಕೆಲವರು ಒಳಗೆ ಒರಟು... ಕೆಲವರು ಹೊರಗೆ ಒರಟು... ಕೆಲವರು ಒಳಗೂ ಹೊರಗೂ ಒರಟು... ಕೆಲವೇ ಕೆಲವು ಮಂದಿ ಒಳಗೂ ಹೊರಗೂ ಮೃದು. ಒಂಥರಾ ಹೂವಿದ್ದಂತೆ!

ಉತ್ತರ ಕರ್ನಾಟಕದ ಮಂದಿ ಒರಟು ಅಂತ ಕೆಲವರು ಹೇಳಬಹುದು. ಮತ್ತೆ ಹಲವರು ಹೇಳ್ತಾರೆ ಮಂದಿ ಒರಟಲ್ಲ ಸ್ವಾಮೀ, ಅವರ ಭಾಷೆ ಒರಟು ಅಷ್ಟೇ. ಮಂದಿಯಾಗಲಿ, ಭಾಷೆಯಾಗಲಿ ಒರಟು ಅಥವಾ ಮೃದು ಎಂಬ ನಿರ್ಧಾರಕ್ಕೆ ಬರೋ ಮುನ್ನ, ಅದು ಹೇಗೆ ಅಂತ ತಿಳಿದುಕೊಳ್ಳಬೇಕು. ಹೇಳೋ ಮಾತು ಒಂದೇ ಆದರೂ, ಭಾವ ಒಂದೇ ಆದರೂ ಭಾಷೆ ಸ್ವಲ್ಪ ಅನ್ಯ ಅಷ್ಟೇ. ಅದನ್ನೇ ಅಲ್ಲವೇ ನಮ್ಮ ಜಿ.ಎಸ್. ಎಸ್ ಅವರು ಹೇಳಿರೋದು!

ಹಾಡು ಹಳೆಯದಾದರೇನು ಭಾವ ನವ ನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ

ಹೃದಯದಲ್ಲಿರೋ ಭಾವನೆ ಅರುಹಲು ಪ್ರತೀ ಭಾಷೆಯೂ ಒರಟು. ಅದು ಒರಟಾಗಿಲ್ಲದೆ ಇದ್ದಿದ್ದರೆ, ಇಷ್ಟೊಂದು ರೀತಿಯ ಪ್ರೇಮ ಗೀತೆಗಳು ಇರುತ್ತಿದ್ದವು ಅಂತೀರಾ? "ನನ್ನವಳು ನನ್ನೆದೆಯಾ ಹೊನ್ನಾಡನಾಳುವಳೂ... " ಎಂಬ ಕೆ.ಎಸ್.ನ ಅವರ ಕವನವಾಗಲೀ, "ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ... " ಎಂಬ ಅಬ್ಬರದ ಪ್ರೇಮವಾಗಲಿ ಇರುತ್ತಿರಲಿಲ್ಲ.

What kind of person are you? Introvert, Extrovert or ambivert

ಹಲವು ದಿನಗಳ ಹಿಂದೆ ಸಾಮಾಜಿಕ ತಾಣದಲ್ಲೇ ಒಂದು ಪುಟ್ಟ ಸಂವಾದ ಓದಿದ್ದೆ. ಈಗಿನ ಹುಡುಗಿಯರು ಒರಟು ಪ್ರೇಮಕ್ಕೆ ಯಾಕೆ ಬೀಳ್ತಾರೆ ಅಂತ. ಈ ವಿಷಯದಲ್ಲಿ "ಈಗಿನ ಹುಡುಗಿಯರು" ಅನ್ನೋದು ತರವಲ್ಲ ಎನಿಸುತ್ತದೆ. ಸಿನಿಮಾ ಉದಾಹರಣೆ ತೆಗೆದುಕೊಳ್ಳೋಣ. ಒಂದು ಕಪ್ಪು-ಬಿಳುಪು ಚಿತ್ರದ ಹಾಡು ನೋಡ್ತಿದ್ದೆ. ಸುನಿಲ್ ದತ್ ಒಬ್ಬ ಡಕಾಯಿತ. ಒಂದು ಕಣ್ಣು ಇಲ್ಲ ಎನಿಸುವಂತೆ ಇತ್ತು. ಕ್ರೌರ್ಯ ಅನ್ನೋದು ಢಾಳಾಗಿ ಕಾಣಿಸುತ್ತಿತ್ತು. ಅವನ ಸುತ್ತ ವಯ್ಯಾರದಿಂದ ವಹೀದಾ ರೆಹ್ಮಾನ್ (ಇರಬೇಕು) ನೃತ್ಯ ಮಾಡಿದ್ದೂ ಮಾಡಿದ್ದೆ.

ಒರಟುತನ 'masculine/ಪುರುಷತ್ವದ' ಸಂಕೇತ ಅನ್ನೋದು ಸರ್ವವೇದ್ಯ. ಅಬ್ಬರಿಸಿ ಬೊಬ್ಬಿರಿದರೆ ಪೌರುಷ ಅನ್ನೋದು ನವರಸಗಳಲ್ಲೂ ನೋಡಿದ್ದೇವೆ. ಈ ಕಾಲಕ್ಕೆ ಹುಡುಗಿಯರು 'ಒರಟ'ನನ್ನು ಒಲವಿಗೆ ಬಯಸುತ್ತಾರೆ ಎನ್ನಬಹುದು. ಇಲ್ಲದೆ ಇದ್ದಿದ್ದರೆ 'ಒರಟ, ಐ ಲವ್ ಯು' ಅನ್ನೋ ಸಿನಿಮಾ ಇರ್ತಿತ್ತೇ?"

ಅದೆಲ್ಲಾ ಬಿಡಿ ನಾನು ಇಂದು ಹೇಳಹೊರಟಿರೋದು ಈ ಒರಟರ ಬಗ್ಗೆ ಅಲ್ಲವೇ ಅಲ್ಲ! ಇಂದಿನ ವಿಷಯ Introvert ಮತ್ತು Extrovert ಎಂಬ ಒರಟು ಜನಗಳ ಬಗ್ಗೆ!

ಭಾವನೆಗಳನ್ನು ಹೊರಚೆಲ್ಲದೆ ತನ್ನೊಳಗೆ ಇಟ್ಕೊಂಡು ನಲಿಯೋದೋ ಅಥವಾ ಒದ್ದಾಡೋದೇ ಈ introvert ಪ್ರಮುಖ ಗುಣ. ಇದಕ್ಕೆ ವಿರುದ್ಧವಾದದ್ದು extrovertಗಳು. ಸಲೀಸಾಗಿ, ನಿರ್ಭಿಡೆಯಿಂದ ಹೊರಜಗತ್ತಿನೊಡನೆ ಸಂಪರ್ಕ ಮಾಡುವ ವ್ಯಕ್ತಿಗಳು. ಪಾರ್ಟಿಗಳಲ್ಲಿ ಕೆಲವರನ್ನು ನೀವು ನೋಡಿರಬಹುದು. ಬಾಗಿಲಲ್ಲಿ ಬರುತ್ತಿದ್ದಂತೆಯೇ ಅವರದ್ದೇ ಒಂದು ಹವಾ! ಅವರುಗಳು ಬಂದು ಹೋದ ಮೇಲೆ 'ಮಳೆ ಬಂದು ನಿಂತ ಹಾಗಾಯ್ತು' ಎನ್ನಿಸಿದರೆ ಅವರೇ ಎಕ್ಸ್ಟ್ರಾ ಒರಟುಗಳು.

What kind of person are you? Introvert, Extrovert or ambivert

ಹೆಣ್ಣು ತಗ್ಗಿಬಗ್ಗಿ ನಡೀಬೇಕು, ಕಷ್ಟ ನುಂಗಿಕೊಳ್ಳಬೇಕು, ಸಂತೋಷವಾದ್ರೆ ಊರಿನಲ್ಲಿರೋವ್ರಿಗೆಲ್ಲಾ ಗೊತ್ತಾಗೋ ಹಾಗೆ ವ್ಯಕ್ತಪಡಿಸಬಾರದು, ನಾಲ್ಕು ಜನ ಇದ್ದಾಗ ಗಟ್ಟಿಯಾಗಿ ನಗಬಾರದು ಹಾಗೆ ಹೀಗೆ ಅಂತೆಲ್ಲಾ ಹೆಣ್ಣಿನ ಸುತ್ತ ಕೋಟೆ ಕಟ್ಟುವ ಕಾಲದಲ್ಲಿ ಅವರು ಹೇಳಿದ್ದು "ಹೆಣ್ಣುಗಳು introvert ಆಗಿರಬೇಕು" ಅಂತ.

ಮನೆ ಗಂಡಸು ಅಂದ್ರೆ ಧೈರ್ಯವಂತ ಆಗಿರಬೇಕು, ಹೊರಗೆ ಹೋಗಿ ದುಡೀಬೇಕು, ಹೆಂಗಸಿನ ಹಾಗೆ ಮನೆಯಲ್ಲಿ ಕೂರಬಾರದು, ಮಾತಾಡೋದಕ್ಕೆ ಹೆಂಗಸಿನ ಹಾಗೆ ನಾಚಬಾರದು, ಅಳಬಾರದು ಅಬ್ಬಬ್ಬಾ ಒಂದೇ ಎರಡೇ! ಇಷ್ಟೆಲ್ಲಾ ರೂಲ್ಸ್ ಹೇರುವಾಗ ಅವರು ಹೇಳಿದ್ದು "ಗಂಡುಗಳು extrovert ಆಗಿರಬೇಕು" ಅಂತ.

extrovert ಆದ ಹೆಣ್ಣುಗಳು ಸಬಲೆ, ದಿಟ್ಟೆ ಮತ್ತೂ ಕೆಲವೊಮ್ಮೆ ಗಂಡುಬೀರಿ ಪಟ್ಟವನ್ನೂ ಹೊರಬೇಕಾಯ್ತು. ಇಂಥವರು ಹೈ-ಕ್ಲಾಸ್ ಜನವಾದರೆ ಅಡ್ಡಿಯಿಲ್ಲ, ಆದರೆ ಇಂಥವರು ಮಧ್ಯಮವರ್ಗದವರು ಆದರೆ ಕಥೆ ಮುಗೀತು. ಇಷ್ಟರವರೆಗೆ 'ಸಮಾಜ' ಅಂತ ಹೇಳಿದ್ದರೆ ಅದು ಈ ಮಾಧ್ಯಮ ವರ್ಗದವರಿಗೆ ಮಾತ್ರ ಅಂತ ವಿಶೇಷವಾಗಿ ಹೇಳಬೇಕಿಲ್ಲ.

What kind of person are you? Introvert, Extrovert or ambivert

ಮಧ್ಯಮವರ್ಗದ extrovert ಹೆಣ್ಣುಗಳು, introvert ಗಂಡುಗಳು ಬಹಳ ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಕೆಲವರು ನೇರವಾಗಿ ಕುಹಕಕ್ಕೆ ಒಳಗಾದರೆ ಮಿಕ್ಕವರು ಹಿಂದಿನಿಂದ ಚುಚ್ಚುವವರ ಮಾತಿಗೆ ಗುರಿಯಾಗಿ ಹಿಂಸೆ ಅನುಭವಿಸುತ್ತಾರೆ.

'ಕೆಲಸ ಮುಗಿಸಿಕೊಂಡು ಮನೆಗೆ ಬಂದು ಸೋಫಾದ ಮೇಲೆ ಕೂತರೆ ಮುಗೀತು ಅವಳ ಗಂಡ, ಒಬ್ಬರ ಜೊತೆ ಮಾತಿಲ್ಲ, ಕಥೆಯಿಲ್ಲ. ಹೊರಗಂತೂ ಕಾಲಿಡಲ್ಲ, ಒಬ್ಬರ ಮನೆಗೆ ಬರೋಲ್ಲ. ತುಂಬಾ ಮೂಡಿ'... ಹೀಗೆ. ಇದು ಆತನ ಗುಣ. ಆ ಬಡಪಾಯಿ ಒಳಗೂ ಹೊರಗೂ introvert. ಏನು ಮಾಡೋದು?

'ಅವಳ ವಿಷಯ ಬಿಡಿ, ಜಗಳಗಂಟಿ. ದೊಡ್ಡೋರಿಲ್ಲಾ ಚಿಕ್ಕೋರಿಲ್ಲ ಅಂತ ಮುಖದ ಮೇಲೆ ಹೊಡೆದ ಹಾಗೆ ಮಾತು. ಗಂಡುಬೀರಿಗೆ ಗಂಡು ಹುಡುಕೋದೇ ದೊಡ್ಡ ಸವಾಲು' ಹಂಗೆ ಹಿಂಗೇ ಅಂತ ಹೆಣ್ಣಿನ ಬಗ್ಗೆ ಮಾತು. ಇದು ಅವರ ಗುಣ, ಏನ್ಮಾಡೋಕ್ಕಾಗುತ್ತೆ?

ಇವರು introvert, ಅವರು extravert ಅಂತ ಭೇದ ಮಾಡಿ ಎರಡು ಗುಂಪು ಅನ್ನೋಕ್ಕಾಗಲ್ಲ. ಮೂಲತಃ introvert ಆಗಿರುವವರು ಸಂದರ್ಭಕ್ಕೆ ತಕ್ಕಂತೆ extrovert ಆಗುತ್ತಾರೆ. ಸ್ವಭಾವತಃ extrovert ಆಗಿರುವವರು ಹಲವೊಮ್ಮೆ ಮೌನಿಗಳಾಗಿ introvert ಆಗುತ್ತಾರೆ. ಈ ಮಿಕ್ಸ್ ತಳಿಯನ್ನು ambivert... ಅಂಬಿ ಒರಟು ಅಂತ ನಾ ಹೇಳ್ತಿಲ್ಲ, ಎಲ್ಲರಿಗೂ ಗೊತ್ತಿದೆ!

ಕೆಲವು ಸಿನಿಮಾ ನಟರನ್ನೇ ಉದಾಹರಣೆ ತೆಗೆದುಕೊಂಡರೆ, ತೆರೆಯ ಮೇಲೆ ಅವರು ಕಾಣಿಸಿಕೊಳ್ಳುವ ರೀತಿ ನೋಡಿದಾಗ ಅವರು ಸಿಕ್ಕಾಪಟ್ಟೆ ಸೋಷಿಯಲ್ ಅನ್ನಿಸುತ್ತೆ. ಆದರೆ ಶೂಟಿಂಗ್ ಸಮಯದಲ್ಲಿ ಕ್ಯಾಮೆರಾ ಎದುರಿಸುವ ಸಮಯದಲ್ಲಿ, ಪಾತ್ರಕ್ಕೆ ತಕ್ಕಂತೆ ಅವರ ನಡುವಳಿಕೆ ಇದ್ದರೂ, ಅದರಾಚೆ ಅವರಷ್ಟಕ್ಕೆ ಅವರು ಏನೋ ಓದುತ್ತಾ ಕುಳಿತಿರುವುದೋ, ಸಿಗರೇಟ್ ಹೊಡ್ಕೊಂಡ್ ಕೂತಿರೋದೋ ಅಥವಾ ಮತ್ತೇನೋ. ಅರ್ಥಾತ್ ಅವರಷ್ಟಕ್ಕೆ ಅವರಿರುವಂಥಾ ಸನ್ನಿವೇಶ. ಇದಕ್ಕೆ ಸಾಮಾನ್ಯ ಜನ ಇಡೋ ಹೆಸರು 'ಕೊಬ್ಬು' ಅಂತ! ರೀಲ್ ಬೇರೆ ರಿಯಲ್ ಬೇರೆ ಅಲ್ಲವೇ! ಸ್ವಭಾವತಃ ಅವರು introvert ಅಷ್ಟೇ! ಉದಾಹರಣೆಗೆ ಅನಂತನಾಗ್, ಅಜಯ್ ದೇವಗನ್, ಕೋಮಲ್ ಮೊದಲಾದವರು.

ನಮ್ಮ ದೇಶದ ಶಾಲಾ ಪದ್ದತಿಯಲ್ಲಿ ಅವಿಭಾಜ್ಯ ಅಂಗವೆಂದರೆ introvert ಗುಣ ಹೇರಿಕೆ. ಅಂದರೆ, ಕ್ಲಾಸಿನಲ್ಲಿ ಮಾತನಾಡಕೂಡದು, ಪ್ರಶ್ನೆ ಮಾಡಕೂಡದು ಇತ್ಯಾದಿ. ಮಕ್ಕಳಲ್ಲಿ ಪ್ರಶ್ನೆ ಉದ್ಭವವಾದರೆ ಅದನ್ನು ಅಲ್ಲೇ ಮೊಟಕುಗೊಳಿಸಿ 'ಸುಮ್ಮನೆ ಕೂರು' ಎಂಬಂತೆ ದಂಡಿಸೋದು. Inquisitive ಮನಗಳು ಬೆಳೆಯುವುದಕ್ಕೆ ಆಸ್ಪದವೇ ಇರೋದಿಲ್ಲ.

ಅಮೆರಿಕಾದಲ್ಲಿ ಇತ್ತೀಚೆಗೆ ಒಂದು ಪಿಡುಗು ದಿನ ದಿನಕ್ಕೆ ಏರುತ್ತಲೇ ಇದೆ. ಮಿಡಲ್ ಸ್ಕೂಲಿನಿಂದ ಶುರುವಾಗಿ ಅತೀ ಹಿರಿಯರವರೆಗೂ ಯಾವುದೇ ಕ್ಷೇತ್ರದವರೂ ತಲೆಕೆಟ್ಟವರಂತೆ ವರ್ತಿಸಿ ಬಂದೂಕು ಕೈಲಿಹಿಡಿದು, ಸಿನಿಮಾಗಳಲ್ಲಿ ತೋರಿಸುವಂತೆ, ಸುಮ್ಮನೆ ಧಡ ಧಡ ಗುಂಡು ಹಾರಿಸೋದು. ಕೆಲವೊಮ್ಮೆ ತಾವೂ ಗುಂಡು ಹಾರಿಸಿಕೊಂಡು ಸಾಯ್ತಾರೆ. ಎಲ್ಲಾ ಆದ ಮೇಲೆ ಇಂಥವರು ಹೀಗೇಕೆ ಎಂದು ಅವಲೋಕಿಸಿದಾಗ, ಹೆಚ್ಚಿನವರು ಮಾನಸಿಕ ಅಸ್ವಸ್ಥರೋ ಮತ್ತೇನೋ ಆಗಿರುತ್ತಾರೆ. ಕೆಲವರ ಬಗ್ಗೆ ಅವರ ಸುತ್ತಲಿನ ಜನ ಹೇಳೋದು "ಅವನಷ್ಟಕ್ಕೆ ಅವನಿರುತ್ತಿದ್ದ. ಯಾವತ್ತೂ ಯಾರಿಗೂ ಹಾನಿ ಮಾಡಿದ್ದಾಗಲಿ, ಅಥವಾ ಅಂಥಾ ಉದ್ದೇಶ ಇರುವಂತೆ ತೋರ್ಪಡಿಸುತ್ತಿರಲಿಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಅಂತ ಇದ್ದವನು ಹೀಗೆ ಎಂದರೆ ನಂಬೋಕ್ಕೆ ಆಗ್ತಿಲ್ಲ" ಅಂತ. "ಚೂಪಾ ರುಸ್ತುಮ್" ಆದ Introvert'ಗಳು ಅಪಾಯ ಅಂತ ಹೇಳ್ತಿಲ್ಲ.

Introvert, Extrovert, ambivert ಸ್ವಭಾವಗಳು ಅಷ್ಟೇ. ಒರಟರೆಲ್ಲಾ ಕೆಡುಕರಲ್ಲಾ. ಒರಟರಲ್ಲಾ ಎಂದ ಮಾತ್ರಕ್ಕೆ ಹೂವಿನಂತಲ್ಲಾ. ಅದೆಲ್ಲಾ ಬಿಡಿ, ನಿಮಗೆ ತಿಳಿದಿರುವಂತೆ ನೀವು ಯಾವ ರೀತಿ ಒರಟು ಜನ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+