KPCC New President: ಡಿಕೆಶಿ ಪದಗ್ರಹಣ ಮುನ್ನವೇ KPCC ಅಧ್ಯಕ್ಷ ಸ್ಥಾನ ಫೈನಲ್, ಬಿಕೆ ಹರಿಪ್ರಸಾದ್‌ಗೆ ಹೊಸ ಹೊಣೆ
ಬೆಂಗಳೂರು: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಕೆಪಿಸಿಸಿ ಅದ್ಯಕ್ಷರು ಯಾರಾಗುತ್ತಾರೆ ಎಂಬುದಕ್ಕೆ ತೆರೆ ಬಿದ್ದಿದೆ. ಇಂದು ಕಾಂಗ್ರೆಸ್ ಹೈಕಮಾಂಡ್‌ನಿಂದಲೇ ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯರಾದ ಬಿಕೆ ಹರಿಪ್ರಸಾದ್ ಅವರ ಆಯ್ಕೆ ಆಗಿದೆ. 'ನೀವು ಎಂಎಲ್‌ಸಿ ಸ್ಥಾನದ ಜೊತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಜವಾಬ್ದಾರಿ ನಿರ್ವಹಿಸುವಂತೆ' ಕಾಂಗ್ರೆಸ್ ವರಿಷ್ಠರು ಅಧಿಕೃತವಾಗಿ ಸೂಚನೆ ನೀಡಿದೆ.
ಕಾಂಗ್ರೆಸ್ ವರಿಷ್ಠರಿಂದಲೇ ಇಂದು ಬುಧವಾರ ಬೆಳಗ್ಗೆ ದೂರುವಾಣಿ ಕರೆ ಬಂದಿದೆ. ನಾಯಕರೊಂದಿಗೆ ಮಾತನಾಡಿದ ಬಿಕೆ. ಹರಿಪ್ರಸಾದ್ ಅವರು ವರಿಷ್ಠ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹೊಸ ಜವಾಬ್ದಾರಿ ನಿರ್ವಹಣೆಗೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಅವರ ಪದಗ್ರಹಣ ದಿನವೇ ಅವರು ನಿರ್ವಹಿಸಿದ್ದ ಕೆಪಿಸಿಸಿ ಸ್ಥಾನಕ್ಕೆ ಹೊಸ ಸಾರಥಿಯ ನೇಮಕವಾಗಿದೆ.

ಕಸರತ್ತು ನಡೆಸಿದ್ದ ಸತೀಶ್ ಜಾರಕಿಹೊಳಿಗೆ ಆಘಾತ
ರಾಹುಲ್ ಗಾಂಧಿ, ಸೋನಿಯಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಕೆ ಹರಿಪ್ರಸಾದ್ ಅವರಿಗೆ ಕರೆ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹೊಣೆ ನೀಡಿದರು. ಹೈಕಮಾಂಡ್‌ನ ಈ ನಿರ್ಧಾರವು ಇತ್ತ ಕೆಪಿಸಿಸಿ ಅಧ್ಯಕ್ಷಗಿರಿಗೆ ಏರುವ ಕನಸು ಕಂಡಿದ್ದ ಉತ್ತರ ಕರ್ನಾಟಕದ ಕಾಂಗ್ರೆಸ್ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ಆಘಾತ ನೀಡಿದಂತಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಲು ಒಂದಷ್ಟು ಕಸರತ್ತು ನಡೆಸಿದ್ದರು. ಈ ಸಂಬಂಧ ದೆಹಲಿ ಮಟ್ಟದಲ್ಲಿ ಲಾಭಿ ನಡೆಸಿದ್ದರು. ಆದರೆ ಆ ಹುದ್ದೆ ಬಿಕೆ ಹರಿಪ್ರಸಾದ್ ಅವರ ಪಾಲಾಗುತ್ತಿದ್ದಂತೆ ಅವರ ಕನಸಿಗೆ ತಣ್ಣೀರೆರಚಿದಂತಾಗಿದೆ. ಹೀಗಾಗಿ ಸತೀಶ್ ಜಾರಕಿಹೊಳಿ ಅವರ ಮುಂದಿನ ನಡೆ ಬಗ್ಗೆ ಕೂತೂಹಲ ಸೃಷ್ಟಿಯಾಗಿದೆ.
ಅಧಿಕೃತ ಕರೆ ಬಂದಿಲ್ಲ: ಸತೀಶ್ ಜಾರಕಿಹೊಳಿ
ಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಯಾರೆಲ್ಲ ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಅನ್ನುವುದರ ಬಗ್ಗೆ ಆಗಲಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರುವವರು ಯಾರು ಎಂಬುದರ ಕುರಿತು ಅಧಿಕೃತ ಕರೆ ಬಂದಿಲ್ಲ ಎಂದು ಸ್ವತಃ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಅವರು ಇನ್ನೂ ಒಂದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಯುಟಿ ಖಾದರ್ ಅವರು ಇಂದು ಮಧ್ಯಾಹ್ನ 3.30ರ ಹೊತ್ತಿಗೆ ಅಧಿಕಾರ ಸ್ವೀಕರಿಸುವ ನೂತನ ಸಚಿವರ ಅಂತಿಮ ಪಟ್ಟಿ ಬರಲಿದೆ ಎಂದು ಹೇಳಿದ್ದರು. ಈ ಮೂಲಕ ಕೊನೆ ಹಂತದವರೆಗೂ ಯಾರೆಲ್ಲ ಸಚಿವರು, ಡಿಸಿಎಂ ಆಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿಕೆ ಹರಿಪ್ರಸಾದ್ ಅವರನ್ನೇ ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆಯೇ ಎಂಬುದರ ಮೇಲೆ ಕುತೂಹಲ ಹೆಚ್ಚಾಗಿದೆ.
ಕಂದಾಯ ಸ್ಥಾನ ನೀಡಿದ್ರೆ ನನ್ನ ಕೆಲಸ ಪೂರ್ಣ: ಕೃಷ್ಣ ಬೈರೇಗೌಡ
ಡಿಕೆ ಶಿವಕುಮಾರ್ ಸಂಪುಟದಲ್ಲಿ ಯಾರಿಗೆ ಯಾವೆಲ್ಲ ಸಚಿವ ಸ್ಥಾನ ಸಿಗಲಿದೆ ಎಂಬುದು ಇನ್ನೇನು ಗೊತ್ತಾಗಲಿದೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ನಾಯಕ ಕೃಷ್ಣ ಬೈರೇಗೌಡ ಅವರು, ತಾವು ಈ ಹಿಂದೆ ನಿರ್ವಹಿಸಿದ್ದ ಕಂದಾಯ ಇಲಾಖೆಯ ಮಂತ್ರಿ ಸ್ಥಾನವನ್ನೇ ನೀಡಬೇಕೆಂದು ಹೈಕಮಾಂಡ್ ಬಳಿ ಕೋರಿದ್ದಾರೆ. ನಾವು ಏನೇ ಹೇಳಿದರು ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನು ಅದನ್ನು ಪಾಲಿಸುವೆ ಅಂತಲೂ ಹೇಳಿದ್ದಾರೆ.
ನಾನು ಈ ಹಿಂದೆ ಕಂದಾಯ ಸಚಿವನಾಗಿದ್ದಾಗ ಇಲಾಖೆಯಲ್ಲಿ ಪರಿವರ್ತನೆ ತಂದಿದ್ದೇವೆ. ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದೇವೆ. 50 ವರ್ಷ ಆಗದ ಬಲದಾವಣೆಯನ್ನು ನಾನು ಸಚಿವನಾಗಿ ಮಾಡಿದ್ದೇವೆ. ಹೀಗಾಗಿ ನನಗೆ ಇಲಾಖೆಯಲ್ಲಿ ಕೆಲಸ ಮಾಡಲು ಮತ್ತೊಂದು ಅವಕಾಶ ನೀಡಬೇಕು.
ಮುಖ್ಯವಾಗಿ ಇಲಾಖೆಯಲ್ಲಿನ ಪರಿವರ್ತನೆಗಾಗಿ, ಜನರಿಗಾಗಿ ನಾವು ಒಂದು ವರ್ಷದ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಒಂದಷ್ಟು ಕೆಲಸಗಳು ಅರ್ಧಕ್ಕೆ ನಿಂತಿವೆ. ಅವುಗಳು ಪೂರ್ಣಗೊಳ್ಳಬೇಕಾದರೆ ನನಗೆ ಕಂದಾಯ ಇಲಾಖೆ ಖಾತೆ ಸಿಗಬೇಕು. ಸಚಿವ ಸ್ಥಾನ ಕೊಡುವುದಾದರೆ ಅದೇ ಸ್ಥಾನ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಮುಂದುವರಿದು ಸಚಿವ ಸ್ಥಾನಕ್ಕೆ ಆಯ್ಕೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು. ಆಯ್ಕೆ ಅಂತ ಬಂದಾಗ ನನ್ನನ್ನು ಕಂದಾಯ ಇಲಾಖೆ ಖಾತೆಗೆ ಪರಿಗಣಿಸಬೇಕೆಂದು ಅವರು ಕೋರಿದ್ದಾರೆ.












Click it and Unblock the Notifications