Karnataka Weather: ಜುಲೈ ತಿಂಗಳ ಬೇಸಿಗೆಯ ಬಿಸಿಲಿಗೆ ಕಂಗಾಲಾದ ಕರುನಾಡು, ಹೇಗಿದೆ ಇಂದು ರಾಜ್ಯದಲ್ಲಿ ಹವಾಮಾನ ವರದಿ?
ಬೆಂಗಳೂರು: ನಮ್ಮ ಕ್ಯಾಲೆಂಡರ್ ತಿಂಗಳ ಪ್ರಕಾರ, ಜುಲೈ ಎಂದರೆ ಮಳೆ ಧೋ ಎಂದು ಸುರಿಯಬೇಕಿತ್ತು. ಜನರಿಗೆ ಮನೆಯಿಂದ ಹೋರಬರಲು ಆಗದಂತೆ ವರುಣದೇವ ಬಿಟ್ಟುಬಿಡಂತೆ ಸುರಿಯುತ್ತಿದ್ದ. ಆದರೆ ಈ ಬಾರಿ ಏಕೋ ವರುಣದೇವ ಮುನಿಸಿಕೊಂಡಂತಿದೆ. ಏಕೆಂದರೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಹಗಲಿನಲ್ಲಿ ರಸ್ತೆಗೆ ಇಳಿದರೆ ಈ ಬೇಸಿಗೆಯ ಬಿಸಿಲು ಜನರನ್ನ ಸುಡುತ್ತಿದೆ. ತಂಪು ಗಾಳಿ, ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆಯಿಂದ ಕೂಡಿರಬೇಕಿದ್ದ ಜುಲೈ ತಿಂಗಳು, ಈಗ ಸಂಪೂರ್ಣ ಬೇಸಿಗೆಯಾಗಿ ಬದಲಾಗಿದೆ. ಅದೂ ಎಷ್ಟೇಂದರೆ ಇದು ಮಳೆಗಾಲ ಎಂದರೆ ನಂಬಲಸಾಧ್ಯ ಎನ್ನುವಂತಾಗಿದೆ.
ಇಂದಿನ (ಜುಲೈ 15) ಹವಾಮಾನ ಇಲಾಖೆಯ ವರದಿ ಪ್ರಕಾರ, ರಾಜ್ಯದಲ್ಲಿ ತಾಪಮಾನ ಭಾರಿ ಏರಿಕೆಯಾಗಲಿದೆ. ಇದು ಕೇವಲ ಬೆಂಗಳೂರಿಗೆ ಮಾತ್ರವಲ್ಲ, ಇಡೀ ರಾಜ್ಯದ ಹವಾಮಾನದಲ್ಲಿ ಏರುಪೇರಾಗಿದೆ.

112 ವರ್ಷಗಳ ದಾಖಲೆ ಮುರಿದ ಬೆಂಗಳೂರಿನ ತಾಪಮಾನ
ರಾಜಧಾನಿ ಬೆಂಗಳೂರುನಲ್ಲಿ ಮಂಗಳವಾರ (ಜುಲೈ 14) ಅಂದರೆ ನಿನ್ನೆ ಗರಿಷ್ಠ 33.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಕಳೆದ 112 ವರ್ಷಗಳಲ್ಲೇ ಜುಲೈ ತಿಂಗಳಿನಲ್ಲಿ ದಾಖಲಾದ ಅತಿ ಹೆಚ್ಚು ಉಷ್ಣಾಂಶವಾಗಿದೆ. ಹವಾಮಾನ ಇಲಾಖೆ ಪ್ರಕಾರ, ಈ ಹಿಂದೆ ಅಂದರೆ 1914ರ ಜುಲೈ 1ರಂದು 33.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲೆಯಾಗಿತ್ತು. ಪ್ರತಿ ವರ್ಷ ಜುಲೈ ತಿಂಗಳಲ್ಲಿ 28.3 ಡಿಗ್ರಿ ಸೆಲ್ಸಿಯಸ್ ಇರುತ್ತಿತ್ತು. ಮತ್ತೆ ಇರಬೇಕು ಕೂಡ. ಆದರೆ, ಈ ಬಾರಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 5.3 ಡಿಗ್ರಿ ಸೆಲ್ಸಿಯಸ್‌ನಷ್ಟು ಭಾರಿ ಏರಿಕೆಯಾಗಿದೆ. ನಗರದ ಎಚ್‌ಎಎಲ್ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನಗರದ ಪೂರ್ವ ಭಾಗಗಳ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಒಂದು ಕಾಲದಲ್ಲಿ ಕೂಲ್ ಸಿಟಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ ಈಗ ಬಿಸಿಲ ಬೇಗೆ ಶುರುವಾಗಿದೆ.
ಜುಲೈ 15ರ ಹವಾಮಾನ ಮುನ್ಸೂಚನೆ ಹೇಗಿದೆ?
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಇಂದಿನ ಹವಾಮಾನವು ಮತ್ತಷ್ಟು ಬಿಸಿಲು ಹೆಚ್ಚಿರಲಿದೆ. ಜುಲೈ 15ರಂದು ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ಬಿಸಿಲು ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡದ ಒಂದೆರಡು ಕಡೆಗಳಲ್ಲಿ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದ್ದು, ತಾಪಮಾನವು ನಿನ್ನೆಗಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಿರಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಹ 30-40 ಕಿ.ಮೀ ವೇಗದಲ್ಲಿ ಬಿಸಿ ಗಾಳಿ ಬೀಸುವ ಮುನ್ಸೂಚನೆ ಇದೆ. ನೆರೆಯ ಆಂಧ್ರಪ್ರದೇಶದಲ್ಲಿ ಬಿಸಿಗಾಳಿಯ ವಾತಾವರಣ ಕರ್ನಾಟಕದ ಗಡಿ ಜಿಲ್ಲೆಗಳ ಮೇಲೂ ಪ್ರಭಾವ ಬೀರುತ್ತಿದೆ.
ದಿಢೀರ್ ತಾಪಮಾನ ಏರಿಕೆಗೆ ಕಾರಣವೇನು?
ಈ ಹವಾಮಾನ ಬದಲಾವಣೆಗೆ ನೈರುತ್ಯ ಮುಂಗಾರು ಕೊರತೆ ಮತ್ತು ಎಲ್-ನಿನೋ ಪರಿಣಾಮವೇ ಕಾರಣ. ಜೂನ್ ತಿಂಗಳಿನಲ್ಲಿ ವಾಡಿಕೆಯಂತೆ ಮಳೆಯಾದರೂ, ಜುಲೈ ಆರಂಭದಿಂದಲೇ ಮುಂಗಾರು ಕೈಕೊಟ್ಟಿದೆ. ಆಗಸದಲ್ಲಿ ಮೋಡಗಳೇ ಇಲ್ಲದ ಕಾರಣ, ಸೂರ್ಯನ ಕಿರಣಗಳು ನೇರವಾಗಿ ಭೂಮಿಯನ್ನು ತಲುಪುತ್ತಿದೆ. ಹಾಗಾಗಿ ಹಗಲಿನಲ್ಲಿ ತಾಪಮಾನ ಏರಿಕೆಯಾಗುತ್ತಿದೆ.ಇನ್ನೂ ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾದರೆ ಮಾತ್ರ ಮಳೆಯ ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ತಜ್ಞರು.


Click it and Unblock the Notifications
