ಬೆಂಗಳೂರಿನಲ್ಲಿ ನಿಯಮ ಮೀರಿ ಎತ್ತರ ಕಟ್ಟಿದ ಕಾಂಪೌಂಡ್ ಮಾಲೀಕರಿಗೆ ಸಂಕಷ್ಟ, ನೋಟಿಸ್ ಜಾರಿ
ಬೆಂಗಳೂರು: ಬೆಂಗಳೂರಿನಲ್ಲಿ ತಿಂಗಳ ಹಿಂದಷ್ಟೆ ಸುರಿದ ಮಳೆಗೆ ಕಾಂಪೌಂಡ್ ಗೋಡೆ ಕುಸಿದು 7 ಮಂದಿ ಸಾವನ್ನಪ್ಪಿದ್ದರು. ಈ ದುರಂತ ಕಂಡ ಸಾರ್ವಜನಿಕರು ಸರ್ಕಾರ, ಜಿಬಿಎ ನಿರ್ಲಕ್ಷ್ಯವನ್ನು ಖಂಡಿಸಿದ್ದರು. ಅದರ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೂರ್ವ ನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ನಿಯಮ ಮೀರಿ ಕಟ್ಟಲಾದ ಎತ್ತರದ ಕಾಂಪೌಂಡ್ ವಿರುದ್ಧ ಸಮರ ಸಾರಿದೆ. ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ, ಕ್ರಮ ವಹಿಸಲು ಮುಂದಾಗಿದೆ.
ಬುಧವಾರ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸಮಗ್ರ ರಸ್ತೆ ಅಭಿವೃದ್ಧಿ, ಮಳೆನೀರು ಕಾಲುವೆ ಹೂಳೆತ್ತುವುದು, ಜಂಕ್ಷನ್ ಅಭಿವೃದ್ಧಿ, ರಸ್ತೆ ಪುನಃಸ್ಥಾಪನೆ, ಕಟ್ಟಡ ಸುರಕ್ಷತೆ, ಸಕಾಲ ದೂರುಗಳ ವಿಲೇವಾರಿ ಇನ್ನಿತರೆ ಕಾಮಗಾರಿ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಗಳ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ರಾಷ್ಟ್ರೀಯ ಕಟ್ಟಡ ಸಂಹಿತೆ (ಎನ್‌ಬಿಸಿ) ನಿಯಮಗಳ ಪ್ರಕಾರ ಅನುಮತಿಸಲಾದ ಎತ್ತರಕ್ಕಿಂತ ಹೆಚ್ಚಿನ ಎತ್ತರದಲ್ಲಿ ಕಾಂಪೌಂಡ್ ಗೋಡೆಗಳನ್ನು ನಿರ್ಮಿಸಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳನ್ನು ಗುರುತಿಸಬೇಕು. ಜೊತೆಗೆ ಕಾಂಪೌಂಡ್ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯ ಉಂಟುಮಾಡುವ ಶಿಥಿಲಾವಸ್ಥೆಯ ಹಾಗೂ ಅಪಾಯಕಾರಿ ಕಟ್ಟಡಗಳನ್ನು ಗುರುತಿಸಬೇಕು. ಅಂಥವುಗಳನ್ನು ತೆರವುಗೊಳಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ಕ್ರಮ ಜರುಗಿಸಿದ್ದರ ಕುರಿತು ವಾರದಲ್ಲಿ ಪ್ರಗತಿ ವರದಿ ನೀಡುವಂತೆ ಆಯುಕ್ತರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕಾಮಗಾರಿಗಳ ಡಾಂಬರೀಕರಣ ಬೇಗ ಮುಗಿಯಲಿ
ಸಿಎಂಐಡಿಪಿ (CMIDP) ಮತ್ತು ಎಸ್‌ಎಸ್‌ಐಪಿ (SSIP) ಯೋಜನೆಗಳಡಿ ಕೈಗೊಂಡಿರುವ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪೈಕಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿವೆ. ಈ ಪ್ಯಾಕೇಜುಗಳಲ್ಲಿನ ರಸ್ತೆಗಳನ್ನು ಜೂನ್ 9ರೊಳಗೆ ಡಾಂಬರೀಕರಣ ಮಾಡಬೇಕು. ಉಳಿದ ಇತರ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಬೇಕೆಂದರು.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಸುರಕ್ಷಾ-75 ಯೋಜನೆ ಅಡಿಯಲ್ಲಿ ಪ್ರಸ್ತಾಪಿತ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳ ವಿನ್ಯಾಸಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಬೇಕು ಕಾಮಗಾರಿಗಳ ಅನುಷ್ಠಾನವನ್ನು ವಿಳಂಬವಿಲ್ಲದೆ ಆರಂಭಿಸಬೇಕಿದೆ ಎಂದು ತಿಳಿಸಿದರು.
ಮಳೆ ನೀರು ಕಾಲುವೆಗಳ ಸಮರ್ಪಕ ನಿರ್ವಹಣೆ
ಮಳೆಗಾಲ ಆರಂಭ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಕಾಂಕ್ರೀಟ್ ಮತ್ತು ಕಚ್ಚಾ ಮಳೆ ನೀರು ಕಾಲುವೆಗಳ ಹೂಳು ತೆರವು ಕಾಮಗಾರಿಗಳನ್ನು ಎಎಂಸಿ ಮೂಲಕ ತುರ್ತಾಗಿ ಕೈಗೊಳ್ಳಬೇಕು. ಕಾಲುವೆಗಳಲ್ಲಿ ಸಂಗ್ರಹವಾಗಿರುವ ಹೂಳು, ಕಸ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಳೆಗಿಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಕಾಲುವೆಗಳಲ್ಲಿ ಮಳೆ ನೀರು ಹರಿಯುವ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಅಧಿಕಾರಿಗಳು ಕಾಲುವೆಗಳ ಸಮರ್ಪಕ ನಿರ್ವಹಣೆಗೆ ಮುಂದಾಗಬೇಕೆಂದರು.
ರಸ್ತೆ ಕತ್ತರಿಸಿದ ಸಂಸ್ಥೆಗಳಿಗೆ ನೋಟಿಸ್, ಹಣ ವಸೂಲಿ
ಮುಖ್ಯವಾಗಿ ಮಳೆಗಾಲದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗುತ್ತಿದೆ. ರಸ್ತೆ ಹಾಗೂ ನೀರು ನಿಲ್ಲುವ ಪ್ರದೇಶಗಳನ್ನು ಸಂಚಾರ ಪೊಲೀಸರು ಗುರುತಿಸಿದ್ದಾರೆ. ಅಂತಹ ಎಲ್ಲಾ ಚೋಕ್ ಪಾಯಿಂಟ್‌ಗಳಲ್ಲಿ ಪರಿಹಾರ ಕ್ರಮ ತುರ್ತಾಗಿ ಜರುಗಿಸಬೇಕು. ವಿವಿಧ ನಾಗರಿಕ ಸೇವಾ ಪೂರೈಕೆದಾರ ಸಂಸ್ಥೆಗಳು ರಸ್ತೆ ಕತ್ತರಿಸುವ ಮಾಡಿರುವ ಸ್ಥಳಗಳನ್ನು ಪರಿಶೀಲಿಸುವ ಅಗತ್ಯವಿದೆ. ರಸ್ತೆ ಪುನಃಸ್ಥಾಪನೆ ಕಾಮಗಾರಿಗಳನ್ನು ನಗರ ಪಾಲಿಕೆಯಿಂದ ಕೈಗೊಳ್ಳುವಂತೆ ಸೂಚಿಸಿದರು. ಈ ಕಾಮಗಾರಿಗಳಿಗೆ ತಗಲುವ ವೆಚ್ಚವನ್ನು ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಿ ವಸೂಲಿ ಮಾಡುವಂತೆ ಸೂಚಿಸಿದರು.
ಮಳೆ ಬಂದರೆ ರಸ್ತೆಗಳಲ್ಲಿ ಉಂಟಾಗಿರುವ ಹಾಗೂ ಉಂಟಾಗಬಹುದಾದ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸಮಗ್ರ ಕಾರ್ಯಯೋಜನೆ ಸಿದ್ಧಪಡಿಬೇಕು. ಅದಕ್ಕಾಗಿ ಅಗತ್ಯ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು ಎಂದರು.
ಜೂನ್ 5 ವಿಶ್ವ ಪರಿಸರ ದಿನ
ಪರಿಸರ ದಿನಾಚರಣೆ ಪ್ರಯುಕ್ತ ವಲಯಕ್ಕೆ ಒಂದರಂತೆ 2 ವಾರ್ಡ ಗಳಲ್ಲಿ ಎಲ್ಲಾ ಪೌರ ಕಾರ್ಮಿಕರು, ಗ್ಯಾಂಗ್ ಮ್ಯಾನ್, ಆಟೋ ಟಿಪ್ಪರ್, ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿಕೊಂಡು ಸಂಪೂರ್ಣ ವಾರ್ಡನ್ನು ಸ್ವಚ್ಛಗೊಳಿಸಲು, ಸರ್ಕಾರಿ ಕಟ್ಟಡಗಳನ್ನು ಬಣ್ಣ ಬಳಿಯುವ ಮೂಲಕ ಸಿಂಗರಿಸಲು ಒಟ್ಟಾರೆಯಾಗಿ ಸಮಗ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಬೇಕು.
ಸಹಾಯ ಆಪ್ ನಲ್ಲಿ ಸ್ವೀಕರಿಸಲಾಗಿರುವ ಎಲ್ಲಾ ಬಾಕಿ ದೂರುಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಸಾರ್ವಜನಿಕರಿಂದ ಬಂದಿರುವ ದೂರುಗಳಿಗೆ ಸ್ಪಂದನಾತ್ಮಕ ಪರಿಹಾರಾತ್ಮಕ ಕ್ರಮ ಕೈಗೊಳ್ಳಬೇಕೆಂದು ಆಯುಕ್ತರು ಹೇಳಿದರು.














Click it and Unblock the Notifications