ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಚಂದ್ರ ಗ್ರಹಣ ಬಂತು ಗ್ರಹಣ

By ಶ್ರೀನಾಥ್ ಭಲ್ಲೆ
|
Google Oneindia Kannada News

ಗ್ರಹಣ ಬಂತು ಗ್ರಹಣ ಅಂದ್ರೆ ಗ್ರಹಣದಲ್ಲಿ ಏನಿದೆ ಅಂತೀನಿ? ಒಂದೊಂದ್ ದೇಶದಲ್ಲಿ ಒಂದೊಂದ್ ರೀತಿ ಆಡ್ತಾರಲ್ಲಾ, ಈ ಗ್ರಹಣದಲ್ಲಿ ಏನಿರಬಹುದು? ಬರಿಗಣ್ಣಲ್ಲಿ ನೋಡಿದರೇನೇ ಎದ್ದು ಕಾಣುತ್ತಿದೆ ನೋಡಿ ಅಲ್ಲೇ ! ಗ್ರಹಣ ಎಂಬ ಪದದಲ್ಲಿ ಗ್ರಹ ಇದೆ. ಗ್ರಹಣ ಎಂಬ ಪದದಲ್ಲಿ ಹಣ ಇದೆ.

ಮುಖ್ಯವಾಗಿ ಗ್ರಹಣ ಅಂದ್ರೆ ಮೂರು ಜನರ ನಡುವೆ ಇರುವ ನೆರಳು ಬೆಳಕಿನ ಆಟ. ಒಬ್ಬರು ದೊಡ್ಡವರು ಮತ್ತೊಬ್ಬರು ಚಿಕ್ಕವರು, ಇವರಿಬ್ಬರ ನಡುವೆ ಆ ಚಿಕ್ಕವರಿಗಿಂತ ಕೊಂಚ ದೊಡ್ಡವರು ಅಡ್ಡ ಬಂದರೆ ನೆರಳು ಬೀಳುತ್ತದೆ. ಇದಾವ ಗ್ರಹಣ ನೀವೇ ಹೇಳಿಬಿಡಿ. ಇದರಂತೆಯೇ, ಒಬ್ಬರು ದೊಡ್ಡವರು ಮತ್ತೊಬ್ಬರು ಚಿಕ್ಕವರಿಗಿಂತ ಕೊಂಚ ದೊಡ್ಡವರು. ಇವರ ನಡುವೆ ಎಲ್ಲರಿಗಿಂತ ಚಿಕ್ಕವರು ಅಡ್ಡ ಬಂದರೆ ನೆರಳು ಬೀಳುತ್ತದೆ. ಇದಾವ ಗ್ರಹಣ ಅಂತಲೂ ನೀವೇ ಹೇಳಿಬಿಡಿ. ಹೇಗಿದ್ರೂ ಪ್ರಶ್ನೆಗಳಿಗೆ ಉತ್ತರ ಕೊಡ್ತಾ ಇದ್ದೀರಾ ಅಲ್ಲವೇ?

ಹುಣ್ಣಿಮೆಯ ದಿನವೇ ಆಗುವ ಗ್ರಹಣ ಯಾವುದು? ಅಮಾವಾಸ್ಯೆಯಂದೇ ಆಗುವ ಗ್ರಹಣ ಯಾವುದು? ಒಂದು ಗ್ರಹಣ ಅಮಾವಾಸ್ಯೆಯಂದೇ ಆಗುತ್ತದೆ, ಮತ್ತೊಂದು ಪೌರ್ಣಿಮೆಯಂದೇ ಆಗುತ್ತದೆ ಅಂತಾದ ಮೇಲೆ ಪ್ರತೀ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಿಗೆ ಆಯಾ ಗ್ರಹಣಗಳು ಏಕೆ ಸಂಭವಿಸುವುದಿಲ್ಲ? ಅಂದ್ರೆ ತಿಂಗಳಿಗೆ ಎರಡು, ವರ್ಷಕ್ಕೆ 24 ಯಾಕೆ ಆಗೋದಿಲ್ಲ? ಪ್ರಶ್ನಾಲೋಕ ನಿಮ್ಮ ಉತ್ತರಗಳಿಗಾಗಿ ಕಾದಿದೆ. ಹೀಗೆ ಹೇಳುವ ಬದಲು 'Nation wants to know' ಎನ್ನಬಹುದೇ?

What is the eclipse? Game of Light and Shadows

ಇಷ್ಟೆಲ್ಲಾ ಪ್ರಶ್ನೆಗಳು ಉದ್ಭವ ಆಗುತ್ತಿರುವಾಗಲೇ ಇನ್ನೆರಡು ಪ್ರಶ್ನೆಗಳು ಬಂತು ನೋಡಿ. ಚಂದ್ರನ ಮೇಲೆ ನೆರಳು ಬಿದ್ರೆ ಚಂದ್ರ ಗ್ರಹಣ, ಭೂಮಿಯ ಮೇಲೆ ನೆರಳು ಬಿದ್ದಾಗ ಸೂರ್ಯ ಗ್ರಹಣ ಹೇಗೆ? ಭೂಮಿ ಗ್ರಹಣ ಆಗಬೇಕಲ್ಲವೇ? ಮೊನ್ನೆ ಇಂಥದ್ದೇ ಚಂದ್ರಗ್ರಹಣ ಆದಾಗ ವಾರ್ತಾಪತ್ರಿಕೆಯೊಂದು Umbra ಮತ್ತು Penumbra ಬಗ್ಗೆ ಉಲ್ಲೇಖಿಸಿದ್ದರು. ಮತ್ತೊಂದು ಕಡೆ ಟಿವಿಯಲ್ಲಿ ಪೌರ್ಣಿಮೆಯಂದೇ ಈ ಗ್ರಹಣ ಬಂದಿ ರೋದು ಇತಿಹಾಸದ ವಿಸ್ಮಯ ಅಂತೆಲ್ಲಾ ಜನರನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದರು. ಒಂದೆಡೆ ವಿಪರೀತ ಜ್ಞಾನ ಅದೂ ಜೀರ್ಣವಾಗದಷ್ಟು, ಮತ್ತೊಂದೆಡೆ ಗೊತ್ತಿರುವುದೂ ಮರೆತೇ ಹೋಗುವಷ್ಟು. ಒಂದು ಅತೀವೃಷ್ಟಿ ಮತ್ತೊಂದು ಅನಾವೃಷ್ಟಿ.

ಕೆಲವು ಮನೆಗಳಲ್ಲಿ ಈ ಗ್ರಹಣ ದಿನನಿತ್ಯದಲ್ಲಿ ನಡೆಯುತ್ತದೆ
ತಿಂಗಳಿಗೆ ಎರಡು, ವರ್ಷಕ್ಕೆ ಇಪ್ಪತ್ತನಾಲ್ಕು ಗ್ರಹಣಗಳೇ ಇದ್ದರೂ ಅದಾವ ದೊಡ್ಡ ವಿಷಯ ಬಿಡಿ. ಕೆಲವು ಮನೆಗಳಲ್ಲಿ ಈ ಗ್ರಹಣ ದಿನನಿತ್ಯದಲ್ಲಿ ನಡೆಯುತ್ತದೆ. ಇದುವೇ ತುತ್ತಾಮುತ್ತಾ ಸನ್ನಿವೇಶ. ಒಮ್ಮೆ ಸೂರ್ಯನ ಸ್ಥಾನದಲ್ಲಿ ಅತ್ತೆಯಾದವಳು ಇದ್ದರೆ ಆ ತುದಿಯಲ್ಲಿ ಸೊಸೆ. ಒಮ್ಮೆ ಸೂರ್ಯನ ಸ್ಥಾನದಲ್ಲಿ ಸೊಸೆ ಇದ್ದರೆ ಮತ್ತೊಂದು ತುದಿಯಲ್ಲಿ ಅತ್ತೆ. ಈ ಅತ್ತೆಸೊಸೆಯರ ಮಧ್ಯೆ ಇರುವ ಗಂಡು ಪಾತ್ರಧಾರಿ ಮಾತ್ರ ಅಡಕತ್ತರಿಯಲ್ಲಿ ಸಿಕ್ಕ ಗೋಟಡಿಕೆ. ಕೆಲವೊಮ್ಮೆ ಜಾರಿ ಆ ಕಡೆ ಈ ಕಡೆ ಹೋದರೆ, ಹಿಡಿದು ಎಳೆದುಕೊಂಡು ಬಂದು, ಸಿಲುಕಿಸಿ ಬಲ ಬಿಟ್ಟು ಒತ್ತುವುದು ಖಚಿತ.

What is the eclipse? Game of Light and Shadows

ಅಣ್ಣಯ್ಯ ಸಿನಿಮಾ ನೋಡಿದ್ದರೆ ಈ ಗ್ರಹಣ ಇನ್ನೊಂದು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ತಂದೆಯಾದವನು ಸೂರ್ಯನಂತೆ ಪ್ರಖರವಾಗಿ ಇರುತ್ತಾನೆ. ಆ ತುದಿಯಲ್ಲಿರುವ ಮಗನೂ ಆ ಬೆಳಕನ್ನುಂಡು ಬೆಳೆಯುತ್ತಾ ಇರುತ್ತಾನೆ. ಮಧ್ಯೆ ಬಂದದ್ದೇ ಮಲತಾಯಿ. ಆಕೆಯ ನೆರಳು ಆ ಮಗನ ಮೇಲೆ ಬಿದ್ದಿದ್ದು ತಂಪಾಗಿದ್ದರೆ ಅದು ಬೇರೆ ವಿಷಯವಾಗುತ್ತಿತ್ತು ಆದರೆ ಗ್ರಹಣವಾಗಿ ಪರಿಣಾಮ ಆಗಿದ್ದು ಮಾತ್ರ ಋಣಾತ್ಮಕ ಪರಿಣಾಮ ಬೀರಿತ್ತು, ಆದರೇನು ಬಿಡಿ ಬಾಕ್ಸ್ ಆಫೀಸಿನಲ್ಲಿ ಪರಿಣಾಮವು ಧನಾತ್ಮಕವಾಗಿಯೇ ಇತ್ತಲ್ಲವೇ?

ಅಣ್ಣಯ್ಯ ಸಿನಿಮಾ ಹೊಸತು ಎಂದುಕೊಂಡರೆ ಪುಟ್ಟಣ್ಣ ಕಣಗಾಲರ ಮಲ್ಲಮ್ಮನ ಪವಾಡ ಕೂಡಾ ಇಂಥಾ ಗ್ರಹಣದ ಪರಿಣಾಮದ ಸಿನಿಮಾ ಕಥೆಯೇ ಆಗಿತ್ತು ಅಲ್ಲವೇ? ಈ ಎರಡೂ ಸಿನಿಮಾಗಳಲ್ಲೂ ಸೊಸೆಯೇ ರಕ್ಷಕಳಾಗಿ ಬಂದು ಸಂಸಾರ ನಿಲ್ಲಿಸಿದ್ದು. ಎರಡೂ ಸಿನಿಮಾ ಸಂಸಾರಗಳಲ್ಲಿ ಹಣ ಜೋರಾಗಿತ್ತು. ಸಂಸಾರ ಒಡೆಯಲು ಮತ್ತು ಆ ಹಣವನ್ನು ಲಪಟಾಯಿಸಲು ಗ್ರಹಗಳ ದಂಡೇ ಅಲ್ಲಿತ್ತು.

ಗ್ರಹಣ ಎಂದರೆ ಮುಗೀತು, ಗರ್ಭಿಣಿ ಹೆಣ್ಣುಗಳು ಅತೀವ ಎಚ್ಚರಿಕೆಯಿಂದ ಇರುತ್ತಿದ್ದರು. ಅವರಿರುವ ಕೋಣೆಯ ಕಿಟಕಿಗಳಿಗೆ ದಪ್ಪನೆಯ ಬಟ್ಟೆ ಹೊದಿಸಿ ಕತ್ತಲು ಮಾಡುತ್ತಿದ್ದುದು ಉಂಟು. ಗ್ರಹಣದ ಕೆಲವು ಘಂಟೆಗಳ ಮುಂಚೆ ಆಹಾರ ತೆಗೆದುಕೊಂಡ ಮೇಲೆ ಮುಗೀತು, ಆ ನಂತರ ಒಂದು ಹನಿ ನೀರನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಗ್ರಹಣದ ಕಾಲ ಕಳೆದ ಮೇಲೆ ಸ್ನಾನಾದಿಗಳು, ತರ್ಪಣ ಕಾರ್ಯಗಳು ನಡೆಯುತ್ತಿತ್ತು. ಆ ನಂತರವೇ ಆಹಾರ ಸ್ವೀಕರಿಸುತ್ತಿದ್ದುದು. ಮುಖ್ಯವಾಗಿ ಗ್ರಹಣದ ವೇಳೆಯಲ್ಲಿ ಹೊಟ್ಟೆಯಲ್ಲಿ ಏನೂ ಇರಬಾರದು ಎಂಬುದೇ ವೈಜ್ಞಾನಿಕ ಸತ್ಯವೂ ಹೌದು.

What is the eclipse? Game of Light and Shadows

ಗ್ರಹಣವನ್ನು ನೋಡುವುದರಿಂದ ಕಣ್ಣಿಗೆ ತೊಂದರೆ
ಕಾಲ ಒಂದಿತ್ತು. ಸೂರ್ಯಗ್ರಹಣ ಅಂತಾದಾಗ ಶಾಲೆಗೂ ರಜೆ. ಗ್ರಹಣ ಹಿಡಿದ ಸಮಯದಲ್ಲಿ ಎಲ್ಲ ಅಂಗಡಿ ಬಾಗಿಲುಗಳೂ ಬಂದ್. ಬೀದಿಯಲ್ಲಿ ಒಂದು ನರಪಿಳ್ಳೆಯೂ ಇರುತ್ತಿರಲಿಲ್ಲ. ಗ್ರಹಣದ ಕಾಲ ಕಳೆದ ನಂತರವೇ ಮತ್ತೆ ವಹಿವಾಟುಗಳು, ಜನ ಸಂಚಾರ ಇತ್ಯಾದಿಗಳು. ಬರಿಗಣ್ಣಿನಲ್ಲಿ ಗ್ರಹಣವನ್ನು ನೋಡುವುದರಿಂದ ಕಣ್ಣಿಗೆ ತೊಂದರೆ ಎಂದು ಗಾಜನ್ನು ಬೆಂಕಿಗೆ ಹಿಡಿದು, ಅದರ ಮೇಲೆ ಮೂಡುವ ಕಪ್ಪನೆಯ ಪದರದ ಮೂಲಕ ನೋಡುತ್ತಿದ್ದುದು ಉಂಟು. ಕೆಲವೊಮ್ಮೆ Pin Hole Camera ಬಳಸಿಕೊಂಡು ಗ್ರಹಣ ನೋಡುತ್ತಿದ್ದುದೂ ಉಂಟು.

ಬರಿಗಣ್ಣಿನಲ್ಲಿ ನೋಡಬಾರದು ಎನ್ನುವವರು ಅಜ್ಞಾನಿಗಳು ಎಂದೇ ಪರಿಗಣಿಸಿ ನೇರವಾಗಿ ಗ್ರಹಣ ನೋಡುತ್ತಾ ದಿಲ್ ದಾರ್ ಎನಿಸಿಕೊಂಡವರೂ ಕಡಿಮೆ ಏನಿಲ್ಲ. ಗ್ರಹಣ ಹಿಡಿಯುವ ದಿನದಂದು, ವಿದೇಶಗಳಲ್ಲಿ ಮಂದಿಯು, ಬಹಳ ಮುಂಚಿತವಾಗಿಯೇ ಸಮುದ್ರ ತೀರದ ಬಳಿ ಸಾಗಿ, ಟೆಂಟ್ ಹಾಕಿಕೊಂಡು ಕೂತು, ತಮ್ಮ ಕ್ಯಾಮೆರಾ, ಟೆಲಿಸ್ಕೋಪ್ ಇತ್ಯಾದಿಗಳನ್ನು ಸಿದ್ಧಪಡಿಸಿಕೊಂಡು ಶಸ್ತ್ರಸಜ್ಜಿತರಾಗಿ ಅದ್ಭುತವಾದ ಚಿತ್ರಗಳನ್ನೂ ತೆಗೆಯುತ್ತಾರೆ. ಯಾವುದು ಸರಿ, ಯಾವುದು ತಪ್ಪು ನಿಮಗೆ ಬಿಟ್ಟದ್ದು.

ಗ್ರಹಣದಂದು ಬೇಯಿಸಿದ ಅಡುಗೆಯನ್ನು ಹಾಗೆಯೇ ಇಡುವಂತಿಲ್ಲ. ಉಂಡು ಮುಗಿಸಿಬಿಡಬೇಕು, ಮರುಬಳಕೆ ಮಾಡಬಾರದು. ಆದರೆ ಕೆಲವೊಂದು ಆಹಾರಪದಾರ್ಥಗಳನ್ನು ಬಳಸಿ ಮುಗಿಸಿ ಬಿಡಲಾಗದು. ಉದಾಹರಣೆಗೆ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಇತ್ಯಾದಿ. ಇಂಥಾ ಆಹಾರಪದಾರ್ಥಗಳ ಮೇಲೆ ದರ್ಬೆಯ ಕಡ್ಡಿಗಳನ್ನು ಇಡುತ್ತಿದ್ದುದು ಉಂಟು.

ಗ್ರಹಣ ಅಂಬೋದು ತಲೆ ಇಲ್ಲದವರ ಕೆಲಸ ಅಂದ್ರೆ ನೀವು ನಂಬಲೇಬೇಕು ಆಯ್ತಾ? ಹೀಗೆ ಹೇಳಿದ್ದರ ವಿಷಯ ಏನು? ಬನ್ನಿ, ಸೀದಾ ಸತ್ಯಯುಗಕ್ಕೆ ಹೋಗೋಣ. ಸುರಾಸುರರು ಅಮೃತ ಪಡೆಯೋದಕ್ಕೆ, ವಾಸುಕಿಯನ್ನು ಹಿಡ್ಕೊಂಡು ಹಿಗ್ಗಾಮುಗ್ಗಾ ಎಳೆಯೋದಾ? ಇರಲಿ ಬಿಡಿ, ಮಧ್ಯೆ ಏನೇನೋ ಆಯ್ತು ಆದರೆ ಕೊನೆಗೆ ಅಮೃತವಂತೂ ಸಿಕ್ಕಿತು. ಅದನ್ನು distribute ಮಾಡೋದಕ್ಕೆ ಮತ್ತೆ ಬಂದವನು ಮಹಾವಿಷ್ಣು. ಬರೀ ಸುರರಿಗೆ ಅಮೃತ ಸಿಗುತ್ತಿರಲು ಮೆಲ್ಲಗೆ ಆ ಕಡೆ ಬಂದ ರಾಹು ಅಮೃತ ಸ್ವೀಕರಿಸಿ ಕುಡಿದಾಗ, ಗಂಟಲಲ್ಲಿ ಇಳಿಯುವ ಮುನ್ನವೇ ಸುದರ್ಶನ ಚಕ್ರ ರಾಹುವಿನ ತಲೆಯನ್ನು ತರಿದಿತ್ತು. ಈ ತಲೆಯಿಲ್ಲದವನೇ ಸೂರ್ಯ ಅಥವಾ ಚಂದ್ರನನ್ನು ನುಂಗಲು ಅಟ್ಟಿಸಿಕೊಂಡು ಹೋಗಿ ನುಂಗುವುದು ಎಂಬುದೇ ಗ್ರಹಣ ಅಂತ ಕಥೆಯಿದೆ. ಇದನ್ನೇ ಆಗಲೇ ಹೇಳಿದ್ದು, ಗ್ರಹಣ ಅನ್ನೋದು ತಲೆ ಇಲ್ಲದವನ ಕೆಲಸ ಅಂತ.

ಬೆಳದಿಂಗಳು ತಂಪು ಅಂತಾರೆ. ದೂರದಿಂದ ನೋಡೋಕ್ಕೆ ಬೆಳ್ಳಗೆ ಚೆಂದಾಗಿ ಕಾಣ್ತಾನೆ. ಹೆಣ್ಣನ್ನು ಚಂದ್ರಮುಖಿ ಅಂತ ಕರೆಯುತ್ತಾರೆ ಕೂಡಾ. ಇಂಥಾ ತಂಪು ಚಂದ್ರನಿಗೆ ಬೆಳಕಿನ supply ಆಗೋದು ಸೂರ್ಯನಿಂದ ತಾನೇ? ಸೂರ್ಯನೂ ಏನೂ ಬೇಸರವಿಲ್ಲದೇ ಆರಾಮವಾಗಿ ಬೆಳಕು ನೀಡುತ್ತಲೇ ಇರುತ್ತಾನೆ ಸರಿ ಆದರೆ ಮಧ್ಯೆ ಭೂಮಿ ಬಂದರೆ ಸುಮ್ಮನೆ ಇರೋದಕ್ಕೆ ಆಗುತ್ತಾ. ಹೋಗ್ಲಿ ಪಾಪ ಅಡ್ಡ ಬಂದ ಹೋದ ಅಂದ್ರೆ ಸುಮ್ಮನಿರಬಹುದು ಆದರೆ ಸಂಪೂರ್ಣವಾಗಿ ಮುಚ್ಚಿಯೇಬಿಟ್ಟರೆ ಸುಮ್ಮನಿರೋದಕ್ಕೆ ಆಗುತ್ತಾ? ಆಗಲೇ ಆ ಚಂದ್ರ ಕೆಂಪಾಗೋದು. ಈಗ ಹೇಳಿದ್ದನ್ನ ಭಿನ್ನವಾಗಿ ಹೇಳೋಣ. ಚಂದ್ರಗ್ರಹಣದ ಸಮಯದಲ್ಲಿ, ಚಂದ್ರನು ಭುವಿಯ ನೆರಳಿನ Umbra ಪ್ರದೇಶದೊಳಗೆ ಹೋದಾಗ ಅಲ್ಲಿನ ಧೂಳಿನ ಕಣಗಳ ನಡುವೆ ನೀಲಿ ಮತ್ತು ಹಸಿರು ಬಣ್ಣಗಳು ಹರಿದು ಹಂಚಿಹೋಗುತ್ತದೆ. ಆದರೆ ಉಳಿಯೋದು ಕೆಂಪು ಮಾತ್ರ. ಹಾಗಾಗಿ ಚಂದ್ರ ಕೆಂಪಾಗಿ ಕಾಣುತ್ತಾನೆ. ಇಂಥಾ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು Big Red Moon ಆಗಿ ಕಾಣಿಸಿಕೊಳ್ಳುತ್ತಾನೆ ಎಂದರೆ ಇದೆ ಅದರ ಹಿಂದಿನ ಕಥೆ ನೋಡ್ರಪ್ಪಾ.

ಇದಿಷ್ಟೇ ನನಗೆ ಗ್ರಹಣ ಬಗ್ಗೆ ಗೊತ್ತಿರೋದು. ನಿಮಗೆ ಗೊತ್ತಿರೋದನ್ನ ಹಂಚಿಕೊಳ್ತೀರಾ ತಾನೇ?

English summary
What is the eclipse? Game of Light and Shadows between celestial objects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X