• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಕಣ: ನಾಲ್ಕು ಗೋಡೆಗಳ ನಡುವೆ, ಮುಚ್ಚಿದ ಬಾಗಿಲ ಹಿಂದೆ

|
Google Oneindia Kannada News

ದಶದಿಕ್ಕುಗಳು ಎಂದರೆ ಅಷ್ಟದಿಕ್ಕುಗಳು ಜೊತೆಗೆ ಊರ್ಧ್ವ ಮತ್ತು ಅಧರ. ಸದ್ಯಕ್ಕೆ ಮೇಲೆ ಮತ್ತು ಕೆಳಗೆ ಎಂಬ ದಿಕ್ಕುಗಳನ್ನು ಬದಿಗಿರಿಸಿ, Enclosed ಅಥವಾ ಸುತ್ತುವರಿದ ಎಂಬ ಅರ್ಥದಲ್ಲಿ ಬಳಸಿಯಾದಾಗ ಮೂರು ಗೋಡೆಗಳಲ್ಲಿ ಒಂದು ಕೋಣೆ ಮಾಡಬಹುದು. ಆದರೆ ಅದನ್ನು ಕೋಣೆ ಅಂತ ಕರೆಯಲಾಗುವುದಿಲ್ಲ. ಬರೀ ಮೂರು ಏಕೆ ಐದು, ಆರು ಇತ್ಯಾದಿ ಸಂಖ್ಯೆಯ ಗೋಡೆಗಳಿಂದಲೂ ಒಂದು ಕೋಣೆ ಮಾಡಬಹುದು. ಆದರೆ ಇವೆಲ್ಲವೂ ವಿಭಿನ್ನ ವಿನ್ಯಾಸ ಎನ್ನಬಹುದೇ ಹೊರತು ಸಾಮಾನ್ಯವಾಗಿ ಕಂಡು ಬರುವಂಥದ್ದಲ್ಲ. Standard ಎಂದರೆ ನಾಲ್ಕು ಗೋಡೆಗಳು, ಅದಕ್ಕೊಂದು ಬಾಗಿಲು ಎಂದುಕೊಂಡರೆ, ನಾಲ್ಕು ಗೋಡೆಗಳ ನಡುವೆ, ಮುಚ್ಚಿದ ಬಾಗಿಲ ಹಿಂದೆ ಎಂಬುದೇ ಇಂದಿನ ಬರಹದ ಉದ್ದೇಶ.

ನಾಲ್ಕು ಗೋಡೆಗಳ ಮಧ್ಯೆ ಇರುತ್ತಿದ್ದ ನವಿರಾದ ಮಾತುಗಳು, ಮಧುರ ಭಾವನೆಗಳು, ಕೋಪ-ತಾಪ, ಸರಸ-ವಿರಸ, ಮುನಿಸು, ಹುಸಿಮುನಿಸು ಎಂಬೆಲ್ಲವೂ ನಾಲ್ಕು ಗೋಡೆಯ ಒಳಗೆ ಇರಬೇಕು ಎಂಬುದು ಅಂದಿನ ಮಾತಾಗಿತ್ತು. ಪ್ರೈವಸಿ\'ಗೆ ಅಡ್ಡವಾಗುತ್ತದೆ ಎಂಬ ಕಾರಣ ಕೊಟ್ಟು ಎಲ್ಲರಿಂದ ದೂರ ಇರಲು ಬಯಸುವ ಮಂದಿ, ಪ್ರೈವಸಿ ಎಂಬ ಮಾತಿಗೆ ವಿರುದ್ಧವಾಗಿ ನಾಲ್ಕು ಗೋಡೆಗಳ ನಡುವೆ ಇರುವ ವಿಚಾರಗಳನ್ನು ಗೋಡೆಗಳೇ ಇಲ್ಲದ ಸಾಮಾಜಿಕ ತಾಣದ ಗೋಡೆಗಳ ಮೇಲೆ ಹಂಚಿಕೊಂಡಾಗ ಪ್ರೈವಸಿ ಅಥವಾ ಖಾಸಗೀತನ ಎಂದರೆ ಏನು ಎಂದು ಪ್ರಶ್ನಿಸುವಂತೆ ಆಗುತ್ತದೆ.

ನಾಲ್ಕು ಗೋಡೆಗಳ ನಡುವೆ ಎಂಬ ಕೋಣೆಯನ್ನು ಮನೆ ಅಂತಲೇ ಅಂದುಕೊಂಡರೆ, ಹಲವೊಮ್ಮೆ ಕೆಲವು ಸಂಸಾರಗಳಲ್ಲಿ ಆ ನಾಲ್ಕು ಗೋಡೆಗಳ ನಡುವೆ ಇರುವ ಮಂದಿಗೆ ಗೊತ್ತಿರದ ವಿಷಯಗಳು, ಗೋಡೆಗಳ ಆಚೆ ಇರುವ ಬೀದಿಯ ಇತರೆ ಮನೆಯವರುಗಳಿಗೆ ಗೊತ್ತಾಗಿದ್ದಾಗ ಗೋಡೆಗಳಿಗೆ ಕಿವಿ ಇದೆಯೇ ಅನ್ನಿಸುವುದು ಸಹಜ. ಇಲ್ಲಿ ಎರಡು ವಿಷಯ ಅರಿತುಕೊಳ್ಳಬಹುದು. ಒಂದು, ಹೊರಗಿನವರ ಕಿವಿ ನಾಲ್ಕು ಗೋಡೆಗಳ ಮೇಲಿದೆ, ಅಥವಾ ಒಳಗಿರುವವರ ಬಾಯಿ ಗೋಡೆಗಳ ಹೊರಕ್ಕೆ ಇದೆ ಅಂತ. ಕೆಲವರು ಗುಟ್ಟಿನ ಗೂಡು ಅಂತಾದರೆ ಹಲವರ ಹೊಟ್ಟೆಯಲ್ಲಿ ಗುಟ್ಟಿದ್ದರೆ ಅವರಿಗೆ ಮತ್ತೊಬ್ಬರ ಮುಂದೆ ಹಂಚಿಕೊಳ್ಳುವ ತನಕ ನಿದ್ದೆಯೇ ಬರುವುದಿಲ್ಲ. ಹೊಟ್ಟೆ ಉಬ್ಬರಿಸಿಕೊಂಡು ಬರುವುದು ಕಾಲ್ಪನಿಕವೇ ಆದರೂ ಒಂದರ್ಥದಲ್ಲಿ ನಿಜವೇ.

ನಾಲ್ಕು ಗೋಡೆ ನಡುವಿನ ವಿಚಾರ; ಇಂದಿನ ರಿಯಾಲಿಟಿ ಎಂಬ ಹೆಸರಿನ ಪೊಳ್ಳು ಟಿವಿ ಶೋಗಳಲ್ಲಿ ಚಿಕ್ಕ ಮಕ್ಕಳ ಬಾಯಲ್ಲಿ ಅವರ ಮನೆಗಳ ನಾಲ್ಕು ಗೋಡೆಯೊಳಗೆ ನಡೆಯಬಹುದಾದ ವಿಷಯಗಳನ್ನು ನುಡಿಸುವುದನ್ನು ಕೇಳಿದಾಗ ಹೇಸಿಗೆಯಾಗುತ್ತದೆ. ಅರಿತೋ ಅರಿಯದೆಯೋ ಎನ್ನುವುದಕ್ಕಿಂತಾ ಅರಿತೂ ಅರಿತೂ ಚಾನಲ್ ಮಂದಿ ತಪ್ಪು ಮಾಡುತ್ತಿದ್ದಾರೆ ಎನ್ನಿಸದೆ ಇರಲಾರದು. ವಿಪರ್ಯಾಸ ಏನಪ್ಪಾ ಎಂದರೆ, ಅರಿತೂ ತಪ್ಪು ಮಾಡುವುದು ಒಂದು ವಿಷಯವಾದರೆ, ತಪ್ಪಾಗಿದ್ದರೆ ಕ್ಷಮಿಸಿ ಎನ್ನುವ ಉಡಾಫೆ ಮಾತು ಒಂದೆಡೆ, ಈ ರಂಗದ ಮೇಲೆ ನಡೆಯುವುದೆಲ್ಲಾ ಕೇವಲ ಮನರಂಜನೆಗೆ ಮಾತ್ರ ಎಂಬ ತೇಪೆ ಮತ್ತೊಂದು ಕಡೆ. ಸ್ಟೇಜಿನ ಮೇಲೆ ನಡೆಯುವುದು ಮನರಂಜನೆಗೆ ಮಾತ್ರ ಆದರೆ ನಿಜವಲ್ಲ ಎಂದಾದರೆ ಅದನ್ನು ರಿಯಾಲಿಟಿ ಷೋ ಎಂದೇಕೆ ಕರೆಯಬೇಕು? ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದಷ್ಟೇ ಕೇಳಿಕೊಳ್ಳೋದು.

ನಾಲ್ಕು ಗೋಡೆಗಳ ನಡುವೆ ಏನೆಲ್ಲಾ ನಡೆಯಬಹುದು ಎಂಬುದೇ ನಗ್ನಸತ್ಯ. ಕೆಲವೊಂದು ನೈಜ ಸನ್ನಿವೇಶಗಳನ್ನು ನೋಡೋಣ. ಒಂದು ಕಂಪನಿಯವರು ಇಂತಿಷ್ಟು ಜನರನ್ನು ಕೆಲಸದಿಂದ ತೆಗೆದರು ಅಂತ ಸುದ್ದಿ ಬರುತ್ತದೆ ಅಂದುಕೊಳ್ಳಿ. ಅದರ ಬಗ್ಗೆ ಚರ್ಚೆಯಾಗಿದ್ದೇ, ನಾಲ್ಕು ಗೋಡೆಗಳ ನಡುವೆ, ಮುಚ್ಚಿದ ಬಾಗಿಲ ಹಿಂದೆ. ನಮ್ಮ ಕಂಪನಿಯವರು ಮುಂದಿನ ಐದು ವರ್ಷಗಳ ಕಾಲ ಯಾವ ಯೋಜನೆ ಹಾಕಿಕೊಳ್ಳಲಿದೆ, ಯಾವ ಒಂದು product ಆನು ಹೊರತರಲಿದೆ ಎಂಬುದನ್ನೆಲ್ಲಾ ಚರ್ಚಿಸುವುದೇ ನಾಲ್ಕು ಗೋಡೆಗಳ ನಡುವೆ, ಮುಚ್ಚಿದ ಬಾಗಿಲ ಹಿಂದೆ.

Between the Four Walls, Behind a Closed Door

ಮೇಲೆ ಹೇಳಿದ ಒಂದೆರಡು ಸನ್ನಿವೇಶದಲ್ಲಿ ಅರ್ಥವಾಗಬಹುದು, ನಾಲ್ಕು ಗೋಡೆಗಳ ನಡುವೆ ಎಂದರೆ ಅದು ಹೊರಗಿನವರಿಗೆ ಜಗಜ್ಜಾಹೀರಾಗುವ ವಿಷಯವಲ್ಲ ಎಂದು. ಇದನ್ನು ಗೌಪ್ಯ ಎನ್ನಬಹುದು. ಕೆಲವೊಂದು ವಿಷಯಗಳು ಪಬ್ಲಿಕ್ ಆಗುವ ತನಕ ಗೌಪ್ಯ, ಆದರೆ ಹಲವೊಂದು ವಿಷಯಗಳು ಹೇಗೆ ಎಂದರೆ ವಿಷಯಗಳು ಹೇಗಾದರೂ ಹೊರಕ್ಕೆ ಬಂದರೆ ಸಾಮ್ರಾಜ್ಯಗಳೇ ಉರುಳಿಹೋಗುವಷ್ಟು. ಮುಚ್ಚಿದ ಬಾಗಿಲ ಹಿಂದಿನ ವಿಷಯ ಅಂದ್ರೆ ಅಲ್ಲಿಗೆ ಮುಗೀತು. ವಿಷಯ ಅರಿತವರ ಕಿವಿ ತೆರೆದಿರಬೇಕು, ಬಾಯಿ ಮುಚ್ಚಿರಬೇಕು ಅಂತ.

ಇಂಥಾ ವಿಷಯಗಳ ಬಗ್ಗೆ ಮೀಟಿಂಗ್ ಇದೆ ಎಂದರೆ highly confidential ಎಂಬ ಫಲಕ ಹೊತ್ತ ಆಹ್ವಾನ ಬರಬಹುದು, ಅಥವಾ ಸುಮ್ಮನೆ ಮೀಟಿಂಗ್ ಅಂತ ಕರೆಸಿ, ವಿಷಯ ನಮ್ಮಿಬ್ಬರಲ್ಲಿ ಇರಲಿ ಅಂತಾನೋ ಅಥವಾ ವಿಷಯ ನಮ್ಮಿಷ್ಟೇ ಜನರಲ್ಲಿ ಇರಲಿ ಎಂದೋ ಸೂಕ್ಷ್ಮವಾಗಿ ಆರಂಭವಾಗಬಹುದು ಅಥವಾ ಮುಗಿಯಬಹುದು. ಒಂದು ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರ ಒಂದು ಪಯಣದ ಮಾಹಿತಿ, ಮತ್ತೋರ್ವ ದೇಶದ ಹಿರಿಯರೊಡನೆ ಅದ್ಯಾವ ಚರ್ಚೆ ನಡೆಸಿದರು ಎಂಬ ಮಾಹಿತಿಗಳಿಂದ ಆರಂಭವಾಗಿ, ಯಾವುದೇ ದೇಶದ ಸೈನ್ಯದ ಮಾಹಿತಿಗಳ ವರೆಗೆ ಎಲ್ಲವೂ ಸದಾ ಕಾಲ ಗೌಪ್ಯವೇ ಆಗಿರಬೇಕು. ಆಕಸ್ಮಿಕವಾಗಿ ಇಂಥಾ ವಿಷಯಗಳು ಅಪ್ಪಿತಪ್ಪಿ ಕಿವಿಗೆ ಬಿದ್ದರೂ, ಕಾಣೆ-ಕೇಳೇ-ಅರಿಯೇ ಎಂಬಂತೆ ತಪ್ಪಗೆ ಇರಬೇಕಾದುದು ನಾಗರೀಕರಾದ ನಮ್ಮ ಕರ್ತವ್ಯ.

ನಾಲ್ಕು ಗೋಡೆಗಳ ನಡುವೆ, ಮುಚ್ಚಿದ ಬಾಗಿಲ ಹಿಂದೆ ಎಂಬ ವಿಷಯಗಳೆಲ್ಲ ಇಂದು ನೆನ್ನೆಯದಲ್ಲ. ಶ್ರೀರಾಮಚಂದ್ರನು ರಾಜ್ಯವನ್ನಾಳುವ ಸಮಯದಲ್ಲಿ ಒಮ್ಮೆ ಒಬ್ಬ ಋಷಿವರ್ಯನು ಬಂದು ನಿನ್ನಲ್ಲಿ ಏಕಾಂತವಾಗಿ ಮಾತನಾಡಬೇಕು ಎನ್ನುತ್ತಾನೆ. ಏಕಾಂತ ಎಂದರೆ ನಾಲ್ಕು ಗೋಡೆಗಳ ನಡುವೆ, ಮುಚ್ಚಿದ ಬಾಗಿಲ ಹಿಂದೆ ಅಂತ ಅಂದಿನ ದಿನಗಳ ಅರ್ಥ. ಋಷಿವರ್ಯ ಹಾಗೆ ಹೇಳಿದಾಗ ಬಾಗಿಲಿಗೆ ಲಕ್ಷ್ಮಣನನ್ನು ಕಾವಲಿರಿಸಿ ರಾಮನು ಕೋಣೆಯೊಳಗೆ ಹೋಗುತ್ತಾನೆ. ಅಪ್ಪಿತಪ್ಪಿ ಲಕ್ಷ್ಮಣ ಒಳಗೆ ಬಂದರೆ, ಅವನು ಪ್ರಾಣತ್ಯಾಗ ಮಾಡಬೇಕಾಗುತ್ತದೆ ಎಂಬ ನಿಯಮ ಇರಿಸಿಯೇ ಬಾಗಿಲು ಮುಚ್ಚಿರುತ್ತಾನೆ ರಾಮ. ಋಷಿವರ್ಯನು ಕಾಲನಲ್ಲದೇ ಬೇರಾರೂ ಅಲ್ಲ ಎಂದೂ, ರಾಮನ ಅಂತ್ಯಕಾಲ ಸಮೀಪವಾಗಿದೆ ಎಂದು ತಿಳಿಸಲು ಬಂದವನೇ ಆಗಿರುತ್ತಾನೆ. ಮುಂದಿನ ಕಥೆ ನಿಮಗೂ ಗೊತ್ತೇ ಇರುತ್ತದೆ.

ಮಹಾಭಾರತದ ಕಾಲ; ಇನ್ನು ದ್ವಾಪರಯುಗಕ್ಕೆ ಬಂದರೆ, ಧರ್ಮರಾಯ ಮತ್ತು ದ್ರೌಪದಿ ಮುಚ್ಚಿದ ಬಾಗಿಲ ಹಿಂದೆ ಇರುವಾಗಲೇ ಅರ್ಜುನ ಆ ಕೋಣೆಯನ್ನು ಹೊಕ್ಕು ಆಯುಧ ತೆಗೆದುಕೊಳ್ಳಬೇಕಾಗಿ ಬರುತ್ತದೆ. ಅಷ್ಟು ದೊಡ್ಡ ಅರಮನೆಯಲ್ಲಿ ಆಯುಧಕ್ಕೇ ಅಂತ ಬೇರಾವ ಕೋಣೆಯೂ ಇರಲಿಲ್ಲವೇ? ನನ್ನ ಅನಿಸಿಕೆಯ ಪ್ರಕಾರ, ಬಹುಶ: ಯುಧಿಷ್ಠಿರ ಮತ್ತು ದ್ರೌಪದಿ ಆಯುಧದ ಕೋಣೆಯಲ್ಲಿ ಯಾವುದೋ ಘನವಾದ ಚರ್ಚೆಯಲ್ಲಿ ಇದ್ದರು ಎಂದುಕೊಳ್ಳೋಣ. ಏಕಾಂತ ಎಂದರೆ ಬಾಹುಬಂಧನದಲ್ಲಿ ಇದ್ದರು ಎಂದೇಕೆ ಅಂದುಕೊಳ್ಳಬೇಕು? ಇರಲಿ ಬಿಡಿ, ಅರ್ಜುನನು ನಾಲ್ಕು ಗೋಡೆಗಳ ನಡುವೆ ಮುಚ್ಚಿದ ಬಾಗಿಲ ಹಿಂದಿರುವ ಕೋಣೆಗೆ ನುಗ್ಗಿದಾಗ, ಅವರಿಬ್ಬರ ಏಕಾಂತಕ್ಕೆ ಭಂಗ ಬಂತು ಆಮೇಲೆ ಕಡ್ಡಾಯವಾಗಿ ತೀರ್ಥಯಾತ್ರೆಗೆ ಹೊರಟ ಎಂದೆಲ್ಲಾ ಕಥೆಯಿದೆ.

ಒಂದು ಕಾರ್ಖಾನೆಯ ಮಾಲೀಕನು ಕಾರ್ಮಿಕರ ಬೇಡಿಕೆಗೆ ಕಿವಿಡಾಗಿರುತ್ತಾನೆ. ದಂಗೆ ಎದ್ದ ಕಾರ್ಮಿಕರನ್ನು ತಣ್ಣಗಾಗಿಸಲು ಕಾರ್ಮಿಕರ ನಾಯಕನನ್ನು ಮಾತುಕತೆಗೆ ಕರೆಸುತ್ತಾರೆ. ನಾಲ್ಕು ಗೋಡೆಗಳ ನಡುವೆ, ಮುಚ್ಚಿದ ಬಾಗಿಲ ಹಿಂದೆ ಅವನಿಗೆ 'ನಿನ್ನ ಹೆಂಡತಿ ಮಕ್ಕಳ್ನು ಅಪಹರಿಸಲಾಗಿದೆ, ನಾವು ಕೊಡುವ ಹಣ ತೆಗೆದುಕೊಂಡು ತೆಪ್ಪಗೆ ಹೊರಟು ಹೋಗು' ಎನ್ನುತ್ತಾರೆ. ಬೇರೆ ದಾರಿಯಿಲ್ಲದೇ ಅವನು ಅವರುಗಳು ಹೇಳಿದ ಹಾಗೆಯೇ ನಡೆದುಕೊಂಡು ಅಪವಾದ ಹೊರುತ್ತಾನೆ ಎಂಬುದೇ ಅಮಿತಾಬ್ ಪಾತ್ರಧಾರಿಯಲ್ಲಿ ಆಂಗ್ರಿ ಯಂಗ್ ಮ್ಯಾನ್ ಮೂಡಲು ಪ್ರೇರಣೆಯಾಗುತ್ತದೆ. ನಾಯಕ ರೊಚ್ಚಿಗೆದ್ದ ಎಂದರೆ ಸಿನಿಮಾ ಹಿಟ್ ಅಂತ ತಾನೇ ಅರ್ಥ?.

ಇಂದಿನ ದಿನಗಳಲ್ಲಿ ನಾಲ್ಕು ಗೋಡೆಯ ನಡುವೆಯೇ ಎರಡೂ ಪಾರ್ಟಿಗಳು ಇರುವುದು ಬೇಕಿಲ್ಲ. ಒಂದು ಇಂಟರ್ವ್ಯೂ ಆಗಬಹುದು, ಕೆಲಸದ ವಿಷಯದ ವಾರ್ಷಿಕ ಮೌಲ್ಯಮಾಪನ ಆಗಬಹುದು, ಮೌಲ್ಯಮಾಪನದ ನಂತರ ಸಂಬಳದಲ್ಲಿ ಎಷ್ಟು ಹೆಚ್ಚು ಮಾಡಲಾಗಿದೆ ಅಥವಾ ಹಾಗೆಯೇ ಇರಿಸಲಾಗಿದೆ ಎಂಬ ಮಾತುಕತೆ ಇರಬಹುದು, ವ್ಯಾಜ್ಯಗಳ ಬಗ್ಗೆ ಚರ್ಚೆಯಾಗಬಹುದು, ಒಬ್ಬರ ಅರೋಗ್ಯ ತಪಾಸಣೆ ಅಥವಾ ರಿಪೋರ್ಟ್ ಬಗ್ಗೆ ಮಾತುಕತೆಯಾಗಬಹುದು, ಹೀಗೆ ಯಾವುದೂ ಕೂಡ ಒಂದೇ ಸೂರಿನಡಿಯಲ್ಲಿ ಎರಡೂ ಪಾರ್ಟಿಗಳು ಇರಬೇಕಿಲ್ಲ. ಎರಡೂ ಕಡೆಯವರು ತಮ್ಮ ತಮ್ಮ ನಾಲ್ಕುಗೋಡೆಗಳ ನಡುವೆ ಮುಚ್ಚಿದ ಬಾಗಿಲ ಹಿಂದೆ ಇರಬಹುದು. ಆದರೂ ಗೌಪ್ಯ ಕಾಪಾಡಬಹುದು.

ವಿಷಯ ಇಷ್ಟೇ, ಗೌಪ್ಯ ಕಾಪಾಡಲು ಬಾಗಿಲು ಮುಚ್ಚಿರಲೇಬೇಕಿಲ್ಲ, ವಿವೇಕ ಎಂಬ ಬಾಗಿಲು ಗಟ್ಟಿಯಾಗಿರಬೇಕು. ಕಣ್ಣು, ಕಿವಿ, ಮೂಗು, ಬಾಯಿ ಎಂಬ ನಾಲ್ಕು ರಂಧ್ರಗಳೇ ಬಾಗಿಲುಗಳು. ಇದರ ನಡುವೆ ವಿವೇಕ ಎಂಬ ಬಾಗಿಲು ಭದ್ರವಾಗಿರಲು ಎಂಥಾ ಗೌಪ್ಯವನ್ನೂ ಕಾಪಾಡಬಹುದು. ಆಗ ವಿಷಯಗಳೇ ಆಗಲಿ, ಮಾನ-ಮರ್ಯಾದೆಗಳೇ ಆಗಲಿ ಈ ದೇಹವೆಂಬ ಕೋಣೆ ಬಿಟ್ಟು ಹೊರನಡೆಯದು. ಏನಂತೀರಾ?

English summary
Dashadikkas means the octadhikkas along with the higher up and down. At present a room can be made of three walls when used in the sense of enclosed or enclosed, keeping the directions up and down. But it is not called a room.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X