LPG ಪೂರೈಕೆ ವ್ಯತ್ಯಯ: ಬೆಂಗಳೂರಿನ ಪಿಜಿಗಳಲ್ಲೂ ಆಹಾರ ಪೂರೈಕೆ ಸ್ಥಗಿತದ ಭೀತಿ, ಆತಂಕದಲ್ಲಿ 10 ಲಕ್ಷ ಮಂದಿ
ಬೆಂಗಳೂರು: ನಗರದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿರುವುದು ಕೇವಲ ಹೋಟೆಲ್‌ಗಳ ಮೇಲೆ ಮಾತ್ರವಲ್ಲದೆ, ಲಕ್ಷಾಂತರ ಜನರು ವಾಸವಿರುವ ಪಿಜಿಗಳ (Paying Guest) ಮೇಲೂ ಭೀತಿ ಮೂಡಿಸಿದೆ. ಮುಂದಿನ ಒಂದು ವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಪಿಜಿಗಳಲ್ಲಿ ಆಹಾರ ಪೂರೈಕೆ ಸ್ಥಗಿತಗೊಳ್ಳುವ ಮುನ್ಸೂಚನೆ ನೀಡಲಾಗಿದೆ.
ಮೆನು ಕಡಿತಕ್ಕೆ ಪಿಜಿಗಳ ನಿರ್ಧಾರ
ಬೆಂಗಳೂರಿನಲ್ಲಿ ಅಂದಾಜು 15,000 ಪಿಜಿ ಸೌಲಭ್ಯಗಳಿದ್ದು, ಸಾಫ್ಟ್‌ವೇರ್ ಉದ್ಯೋಗಿಗಳಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರಿಗೆ ದಿನಕ್ಕೆ ಮೂರು ಬಾರಿ ಆಹಾರ ಒದಗಿಸುವುದು ಈಗ ಪಿಜಿ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಕೆಲವು ಪಿಜಿಗಳಲ್ಲಿ ಬಗೆಬಗೆಯ ಅಡುಗೆ ಕಡಿಮೆ ಮಾಡಲಾಗಿದ್ದು, ಸಿಲಿಂಡರ್ ಉಳಿತಾಯಕ್ಕೆ ಮುಂದಾಗಿದ್ದಾರೆ.

ಇಂದು ಪಿಜಿ ಮಾಲೀಕರ ಸಭೆ
ಸಿಲಿಂಡರ್ ಕೊರತೆಯ ಆತಂಕ ಹೆಚ್ಚುತ್ತಿರುವ ನಡುವೆ, ಪಿಜಿ ವಸತಿ ಗೃಹಗಳ ಮಾಲೀಕರು ಕೂಡ ಎಚ್ಚರಿಕೆ ನೀಡಿದ್ದಾರೆ. ಈ ಸಮಸ್ಯೆ ಮುಂದುವರಿದರೆ ಮತ್ತಷ್ಟು ಒಂದು ವಾರದವರೆಗೆ ಮಾತ್ರ ನಿವಾಸಿಗಳಿಗೆ ನಿರಂತರವಾಗಿ ಆಹಾರ ಒದಗಿಸಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಪಿಜಿ ಮಾಲೀಕರ ಕಲ್ಯಾಣ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳುವಂತೆ ಈ ಸಮಸ್ಯೆ ಕುರಿತು ಚರ್ಚಿಸಲು ಮಂಗಳವಾರ (ಇಂದು) ತುರ್ತು ಸಭೆ ಕರೆಯಲಾಗಿದೆ. ಈಗಿರುವ ಗ್ಯಾಸ್ ಸಂಗ್ರಹದ ಆಧಾರದ ಮೇಲೆ ಹೆಚ್ಚುಮಂದಿ ಪಿಜಿಗಳು ಗರಿಷ್ಠ ಒಂದು ವಾರದವರೆಗೆ ಮಾತ್ರ ಅಡುಗೆ ಮಾಡಬಹುದು. ನಂತರ ಆಹಾರ ಸರಬರಾಜು ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಸರ್ಕಾರ ತಕ್ಷಣ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.
ಕೆಲವು ಪಿಜಿ ವಸತಿ ಗೃಹಗಳು ಈಗಾಗಲೇ ಆಹಾರದ ಮೆನು ಕಡಿಮೆ ಮಾಡುವ ಕ್ರಮಕ್ಕೆ ಮುಂದಾಗಿವೆ. ಸಾಮಾನ್ಯವಾಗಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮೂರು ಅಥವಾ ನಾಲ್ಕು ವಿಧದ ಆಹಾರ ನೀಡಲಾಗುತ್ತಿತ್ತು. ಆದರೆ ಗ್ಯಾಸ್ ಕೊರತೆ ಹಿನ್ನೆಲೆಯಲ್ಲಿ ಇದನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ನಮ್ಮ ಬಳಿ ಹಲವು ಖಾಲಿ ಸಿಲಿಂಡರ್‌ಗಳಿವೆ. ಬುಕ್ಕಿಂಗ್ ಮಾಡಲು ಪ್ರಯತ್ನಿಸಿದರೂ ಸ್ಲಾಟ್ ಸಿಗುತ್ತಿಲ್ಲ. ಈ ಪರಿಸ್ಥಿತಿ ಮುಂದುವರಿದರೆ ಮೂರು-ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಅಡುಗೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪಿಜಿಗಳಲ್ಲಿ ಸಾಮಾನ್ಯವಾಗಿ ಒಂದು ಸಮಯದಲ್ಲಿ ಕನಿಷ್ಠ 50 ಮಂದಿಗೆ ಆಹಾರ ತಯಾರಿಸಲಾಗುತ್ತದೆ. ಇಂತಹ ದೊಡ್ಡ ಪ್ರಮಾಣದ ಅಡುಗೆಗೆ ಇಂಡಕ್ಷನ್ ಕುಕ್ಕರ್ ಬಳಸುವುದು ಕಷ್ಟಕರವಾಗಿರುವುದರಿಂದ ಎಲ್‌ಪಿಜಿಗೆ ಪರ್ಯಾಯ ವ್ಯವಸ್ಥೆ ಸಾಧ್ಯವಿಲ್ಲ ಎಂದೂ ಮಾಲೀಕರು ಹೇಳಿದ್ದಾರೆ. ಗೇಲ್ (GAIL) ಇಂಡಿಯಾದ ಅಧಿಕಾರಿಗಳ ಪ್ರಕಾರ, ಸದ್ಯಕ್ಕೆ ಮನೆಗಳಿಗೆ ಪೂರೈಕೆಯಾಗುವ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮತ್ತು ವಾಹನಗಳ ಸಿಎನ್‌ಜಿ (CNG) ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಆದರೆ, ವಾಣಿಜ್ಯ ಸಿಲಿಂಡರ್ ಕೊರತೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉದ್ಯಮಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.
ಪಿಜಿಗಳಲ್ಲಿ ಇರುವವರಿಗೆ ಅನಾನುಕೂಲ
ಪಿಜಿಗಳಲ್ಲಿ ಸಾಮಾನ್ಯವಾಗಿ ದಿನಕ್ಕೆ ಮೂರು ಬಾರಿ ಊಟ ನೀಡಲಾಗುತ್ತದೆ. ಸಿಲಿಂಡರ್ ಇಲ್ಲದಿದ್ದರೆ ಅಡುಗೆ ಮಾಡುವುದು ಅಸಾಧ್ಯವಾಗುವುದರಿಂದ, ನಿವಾಸಿಗಳು ಹೊರಗಿನ ಹೋಟೆಲ್‌ಗಳನ್ನು ಅವಲಂಬಿಸಬೇಕಾಗುತ್ತದೆ. ಆದರೆ ಹೋಟೆಲ್‌ಗಳಲ್ಲೂ ಇದೇ ಸಮಸ್ಯೆ ಇರುವುದರಿಂದ ಅಲ್ಲಿಯೂ ಊಟ ಸಿಗುವುದು ಕಷ್ಟವಾಗಬಹುದು. ಈಗಾಗಲೇ ಕೆಲವು ಪಿಜಿ ಮಾಲೀಕರು ಸಿಲಿಂಡರ್ ಉಳಿಸಲು ಮೆನುವಿನಲ್ಲಿ ಕಡಿತ ಮಾಡಿದ್ದಾರೆ. ಅಂದರೆ, ಹೆಚ್ಚಿನ ವೈವಿಧ್ಯತೆಯ ಆಹಾರದ ಬದಲಿಗೆ ಕೇವಲ ಸೀಮಿತ ಪ್ರಮಾಣದ ಅಥವಾ ಸುಲಭವಾಗಿ ತಯಾರಿಸಬಹುದಾದ ಆಹಾರವನ್ನು ಮಾತ್ರ ನೀಡಲಾಗುತ್ತದೆ.
ಈಗ ಹೋಟೆಲ್‌ಗಳಲ್ಲೂ ದರ ಏರಿಕೆಯಾಗುವುದರಿಂದ ಇದು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಹೊರೆಯಾಗಲಿದೆ. ಈ ಎಲ್‌ಪಿಜಿ ಬಿಕ್ಕಟ್ಟು ಕೇವಲ ಹೋಟೆಲ್ ಮಾಲೀಕರ ಸಮಸ್ಯೆಯಲ್ಲ, ಇದು ಬೆಂಗಳೂರಿನಲ್ಲಿ ವಾಸಿಸುವ ಲಕ್ಷಾಂತರ ಬಾಡಿಗೆದಾರರ ದೈನಂದಿನ ಜೀವನಕ್ಕೂ ದೊಡ್ಡ ಹೊಡೆತ ನೀಡಿದೆ.












Click it and Unblock the Notifications