ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಬನ್ನಿ ಟಿಕೆಟ್ ತೆಗೆದುಕೊಳ್ಳೋಣ

|
Google Oneindia Kannada News

ಟಿಕೆಟ್ ತೆಗೆದುಕೊಳ್ಳುವುದು ಎಂದರೆ ಭಿನ್ನವಾದ ಅರ್ಥವಿದೆ ಅಲ್ಲವೇ? ನಾನು ಹಾಗೆ ಹೇಳಲಿಲ್ಲ ಬಿಡಿ. ಬನ್ನಿ ಟಿಕೆಟ್ ತೆಗೆದುಕೊಳ್ಳೋಣ ಎಂದರೆ ಈ ವಾರದ ವಿಷಯಕ್ಕೆ ಟಿಕೆಟ್ ಎಂಬ ವಿಚಾರವನ್ನು ಕೈಗೆ ತೆಗೆದುಕೊಳ್ಳೋಣ ಅಂತ. ಒಂದರ್ಥದಲ್ಲಿ, ನಾವೆಲ್ಲರೂ ಸ್ವರ್ಗಲೋಕದ ನಿವಾಸಿಗಳೇ.

ಅಲ್ಲಿದೆ ನಮ್ಮನೆ, ಇಲ್ಲಿ ಬಂದಿಹೆವು ಸುಮ್ಮನೆ. ಅಲ್ಲಿಂದ ಕೆಳಗೆ ಇಳಿದು ಬರುವಾಗ ರಿಟರ್ನ್ ಟಿಕೆಟ್ ಹಿಡಿದುಕೊಂಡೇ ಬರುತ್ತೇವೆ ಎಂಬುದು ಕಂಗ್ಲಿಷ್ ಆಧ್ಯಾತ್ಮ. ಇಲ್ಲಿ ಒಂದು ವಿಷಯ ಆಲೋಚಿಸಬೇಕು ಅನ್ನಿಸುತ್ತದೆ. ಟಿಕೆಟ್ ತೆಗೆದುಕೊಂಡವರು ಮೇಲೇ ಯಾಕೆ ಹೋಗಬೇಕು? ಬಲಿ ಚಕ್ರವರ್ತಿಯಂತೆ ಕೆಳಕ್ಕೆ ಯಾಕೆ ಹೋಗಬಾರದು?

ಸುಳ್ಳು ಹೇಳಿ ಸಿಕ್ಕಿಕೊಂಡು ಕಂಡಕ್ಟರ್‌ನಿಂದ ಬೈಸಿಕೊಂಡಿದ್ದೀರಾ?
ಟಿಕೆಟ್ ಎಂದಾಗ ಹತ್ತು ಹಲವಾರು ವಿಷಯಗಳು ತಲೆಯಲ್ಲಿ ಹಾದು ಹೋಗೋದು ಸಹಜ. ಎಸ್‌ಎಸ್‌ಎಲ್‌ಸಿ ಅಂತಹ ದೊಡ್ಡ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಬೇಕೇ ಬೇಕು. ಆದರೂ ಇಂಥಾ ಹಾಲ್ ಟಿಕೆಟ್ ಅನ್ನೇ ಮರೆತು ಪರೀಕ್ಷೆಯ ಕೇಂದ್ರಕ್ಕೆ ಹೋಗಿದ್ದೀರಾ? ಕದ್ದು ಸಿನಿಮಾಕೆ ಹೋಗೋದು ಹೆಚ್ಚು ಕಮ್ಮಿ ಎಲ್ಲರೂ ಮಾಡಿರುವಂತಹ ಒಂದು ಸಾಹಸ ಎನ್ನಬಹುದು. ಹಾಗೆ ಮಾಡಿ ಜೇಬಿನಲ್ಲೇ ಟಿಕೆಟ್ ಉಳಿಸಿಕೊಂಡು ಅಮ್ಮನ ಕೈಲಿ ಬೈಸಿಕೊಂಡಿದ್ದೀರಾ? ಬಸ್ ಪಾಸ್ ಇದೆ ಅಂತ ಸುಳ್ಳು ಹೇಳಿ ಸಿಕ್ಕಿಕೊಂಡು ಕಂಡಕ್ಟರ್‌ನಿಂದ ಬೈಸಿಕೊಂಡಿದ್ದೀರಾ?

ಟಿಕೆಟ್ ಕೊಳ್ಳಲು ಕಾಸು ಇಲ್ಲದೇ ಪ್ರಯಾಣ ಮಾಡಿದ್ದೀರಾ? ಚುನಾವಣೆ ಎದುರಿಸಲು ಟಿಕೆಟ್ ಗಳಿಸಿದ್ದೀರಾ? ಐಪಿಎಲ್ ಕ್ರಿಕೆಟ್ ನೋಡಲು ಟಿಕೆಟ್ ಖರೀದಿಸಿದ್ದೀರಾ? ಝೂಮ್ ಬರಾಬರ್ ಝೂಮ್ ಚಿತ್ರದಲ್ಲಿನ ಟಿಕೆಟ್ ಟು ಹಾಲಿವುಡ್ ಎಂಬ ಹಾಡಿನಲ್ಲಿ ಟಿಕೆಟ್ ಎಂಬ ಪದ ಎಷ್ಟು ಬಾರಿ ಬಂದಿದೆ ಗೊತ್ತೇ? ಹೋಗಲಿ ಬಿಡಿ, ಒಬ್ಬ ಕಂಡಕ್ಟರ್ ಆದವರು ಒಂದು ಟ್ರಿಪ್‌ನಲ್ಲಿ ಎಷ್ಟು ಬಾರಿ ಟಿಕೆಟ್ ಎಂಬ ಪದ ಬಳಸುತ್ತಾರೆ?

Srinath Bhalle Column: Lets Come to Take Ticket

ನನಗೆ ಕೊಟ್ಟು ಅಭ್ಯಾಸವೇ ಹೊರತು ತೆಗೆದುಕೊಂಡು ಅಭ್ಯಾಸವಿಲ್ಲ
ನಾನು ಪ್ರಿ-ಕೆಜಿ ಶಾಲೆಯಲ್ಲಿ ಓದುವಾಗಲೇ ನನ್ನ ಬಸ್ ಪಯಣ ಆರಂಭವಾಗಿತ್ತು. ಕೇವಲ ಎರಡೇ ಬಸ್ ಸ್ಟಾಪ್‌ಗಳೇ ಆಗಿತ್ತು. ಶಾಲೆಗೆ ಹೋಗುವ ಬಿಟಿಎಸ್‌ಗೆ ಹತ್ತಿಸಲು ಅಮ್ಮ ಬರುತ್ತಿದ್ದರು. ಎರಡು ಸ್ಟಾಪ್‌ಗಳಾದ ಮೇಲೆ ಕೊನೆ ಬಸ್ ಸ್ಟಾಪ್. ಕಂಡಕ್ಟರ್ ನನ್ನನ್ನು ಅಲ್ಲೇ ಬದಿಯಲ್ಲಿದ್ದ ಸಣ್ಣ ರೂಮಿನ ಶಾಲೆಗೆ ಬಿಟ್ಟು ಬಹುಶಃ ಕಾಫಿಗೆ ಹೋಗುತ್ತಿದ್ದಿರಬಹುದು. ಇರಲಿ, ವಾಪಸ್ ಬರುವಾಗ ಆ ಶಾಲೆಯ ಏಕಮಾತ್ರ ಟೀಚರ್ ಬಸ್ಸಿನಲ್ಲಿ ಕೂರಿಸಿದರೆ ಎರಡು ಸ್ಟಾಪ್‌ಗಳಾದ ನಂತರ ಅಮ್ಮ ಇಳಿಸಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಯಾಕೆ ಹೇಳಿದೆ ಅಂದ್ರೆ, ನನಗೆ ಕೊಟ್ಟು ಅಭ್ಯಾಸವೇ ಹೊರತು ತೆಗೆದುಕೊಂಡು ಅಭ್ಯಾಸವಿಲ್ಲ. ಅರ್ಥಾತ್ ಬಹುಶಃ ಅಮ್ಮ ಕಂಡಕ್ಟರ್‌ಗೆ ದುಡ್ಡು ಕೊಡುತ್ತಿದ್ದರು ಆದರೆ ನಾನು ಟಿಕೆಟ್ ತೆಗೆದುಕೊಂಡದ್ದು ನೆನಪೇ ಇಲ್ಲ ಅಂತ.

ಅಲ್ಯೂಮಿನಿಯಂ ಪೆಟ್ಟಿಗೆಯಲ್ಲಿ ಹಲವಾರು ದರದ ಟಿಕೆಟ್
ಬಿಟಿಎಸ್ ಬಸ್ ಪಯಣ ಎಂಬುದು ಬೆಂಗಳೂರು ನಗರದೊಳಗಿನ ಪಯಣ. ಬೆಂಗಳೂರಿನ ಬಸ್‌ಗಳಂತೆಯೇ ಮಿಕ್ಕ ನಗರಗಳಲ್ಲೂ ಇಂಥಾ ಬಸ್‌ಗಳು ಇರುತ್ತದೆ. ಎರಡು ದೂರದ ಊರುಗಳ ನಡುವಿನ ಪಯಣ ಮತ್ತೊಂದು ಬಗೆ. ನಗರದೊಳಗಿನ ಪಯಣದಲ್ಲಿ, ಕಂಡಕ್ಟರ್ ಆದವರು ಕೈನಲ್ಲಿ ಟಿಕೆಟ್ ಬಂಡಲ್ ಹಿಡಿದುಕೊಂಡಿದ್ದರೆ, ದೂರದ ಊರಿನ ಪಯಣದ ಕಂಡಕ್ಟರ್ ಬಳಿ ಅಲ್ಯೂಮಿನಿಯಂ ಪೆಟ್ಟಿಗೆಯಲ್ಲಿ ಹಲವಾರು ದರದ ಟಿಕೆಟ್‌ಗಳನ್ನು screw ಹಾಕಿ ಭದ್ರವಾಗಿರಿಸಿಕೊಳ್ಳಲಾಗಿರುತ್ತದೆ. ಇಂಥಾ ಊರಿಗೆ ಎಂದು ಹಣ ನೀಡಿದಾಗ, ಆ ಡಬ್ಬ ತೆಗೆದು ಅಲ್ಲೊಂದು ಟಿಕೆಟ್ ಇಲ್ಲೊಂದು ಟಿಕೆಟ್ ಎಂದೆಲ್ಲಾ ಸೆಳೆದು, ಅದ್ಯಾವುದೋ ಅಡಕೆ ಕತ್ತರಿಯಂಥಾ ಸಾಧನದಿಂದ ಟಿಕೆಟ್ ಮೇಲೆ ಒತ್ತಿದಾಗ ಕಟ ಕಟ ಅಂತ ಸದ್ದಿನೊಂದಿಗೆ ಟಿಕೆಟ್ ಮೇಲೆ ಅಲ್ಲೊಂದು ಇಲ್ಲೊಂದು ತೂತುಗಳು ಮೂಡುತ್ತಿತ್ತು. ಅದೇಕೆ ಈ ರೀತಿ ಕಟಕಟ ಅಂತ ನನಗಂತೂ ಗೊತ್ತಿರಲಿಲ್ಲ, ಈಗಲೂ ಅಷ್ಟೇ.

ಮುಂದಿನ ದಿನಗಳಲ್ಲಿ ಬಸ್ ಪಾಸ್ ಮಾಡಿಸಿಕೊಂಡು ಬಹಳಷ್ಟು ವರ್ಷಗಳ ಕಾಲ ಓಡಾಡಿದ್ದಿದೆ. ಈ ಪಾಸ್ ಎಂಬುದು ಬಸ್, ಟ್ರೈನ್ ಯಾವುದೂ ಆಗಬಹುದು. ಪಾಸ್ ಎಂಬುದೂ ಒಂದು ರೀತಿಯ ಟಿಕೆಟ್. ದಿನನಿತ್ಯದಲ್ಲಿ ಟಿಕೆಟ್ ಕೊಂಡು ಪಯಣಿಸುವಂತೆ, ಪಾಸ್ ಎಂಬುದು ತಿಂಗಳಿಗೆ ಇಷ್ಟು ಅಂತ ಹಣ ಸಂದಾಯ ಮಾಡಿ ಪಯಣಿಸುವುದು. ವಿಮಾನ ಯಾನದಲ್ಲಿ ಟಿಕೆಟ್ ಜೊತೆ ಪಾಸ್ ಕೂಡಾ ಇರುತ್ತದೆ. ಈ ಬೋರ್ಡಿಂಗ್ ಪಾಸ್ ಎಂಬುದು ಒಂದು ಬಾರಿಯ ಬಳಕೆಗೆ ಮಾತ್ರ.

ಸಿನಿಮಾ ಮುಗಿಸಿ ಹೊರಟರೆ ಅದು ರಿಟರ್ನ್ ಟಿಕೆಟ್ ಅಲ್ಲ
ನಾ ಕಂಡ ಮುಂದಿನ ಟಿಕೆಟ್ ಎಂದರೆ ಸಿನಿಮಾ ಟಿಕೆಟ್. ಬಹಳ ವರ್ಷಗಳ ಕಾಲ, ನಾನು ಸಾಲಿನಲ್ಲಿ ನಿಂತು ಸಾಗಿ ಕೌಂಟರ್ ಬಳಿ ಬಂದು ನಿಲ್ಲುವಾಗ ಆ ಗೂಡಿನೊಳಗೆ ಯಾರಿದ್ದಾರೆ ಎಂದೇ ನೋಡಲಾಗುತ್ತಿರಲಿಲ್ಲ. ನಾನು ಯಾರ ಜೊತೆ ಬಂದಿರುತ್ತಿದ್ದೆನೋ ಅವರೇ ಟಿಕೆಟ್ ತೆಗೆದುಕೊಳ್ಳುತ್ತಿದ್ದು. ಆ ನಂತರ ಒಂದು ಯೋಚನೆ ಬಂತು. ಕೌಂಟರ್‌ನಿಂದ ಹಿಡಿದು ಒಂದಷ್ಟು ದೂರದವರೆಗೂ ಕಬ್ಬಿಣ barricade ಹಾಕಿರುತ್ತಿದ್ದರು. ಕೌಂಟರ್ ಬಳಿ ಬರುತ್ತಿದ್ದಂತೆ, ನಾನು ಅದರ ಮೇಲೆ ಹತ್ತಿ ಗೂಡಿನೊಳಗೆ ದುಡ್ಡು ಕೊಟ್ಟು ಟಿಕೆಟ್ ತೆಗೆದುಕೊಳ್ಳುತ್ತಿದ್ದೆ.

ಒಟ್ಟಾರೆ ಹೇಳೋದಾದರೆ ಸಿನಿಮಾ ನೋಡಲು ಟಿಕೆಟ್ ಎಂದುಕೊಳ್ಳುತ್ತಿದ್ದರೂ, ಒಂದು ರೀತಿ ರಿಟರ್ನ್ ಟಿಕೆಟ್, ಆದರೆ ಮತ್ತೊಂದು ರೀತಿ ಅಲ್ಲ. ಸಿನಿಮಾ ಇಷ್ಟವಾಗಲಿಲ್ಲ ಅಂತ ಅರ್ಧಕ್ಕೆ ಎದ್ದು ಹೊರಟರೆ ಅಥವಾ ಪೂರ್ಣವಾಗಿ ಸಿನಿಮಾ ಮುಗಿಸಿ ಹೊರಟರೆ ಅದು ರಿಟರ್ನ್ ಟಿಕೆಟ್ ಅಲ್ಲ ಏಕೆಂದರೆ ನೀವು ಮತ್ತೆ ವಾಪಸ್ ಬರೋದಿಲ್ಲ ನೋಡಿ. ಥಿಯೇಟರ್ ಒಳ ಹೊಕ್ಕ ಮೇಲೆ, ಬೇರೇನೋ ಕಾರಣಕ್ಕೆ ಹೊರಕ್ಕೆ ಬಂದು ಮತ್ತೆ ಒಳಗೆ ಹೋಗಬೇಕು ಎಂದಾಗ ಅದು ರಿಟರ್ನ್ ಟಿಕೆಟ್ ನಿಜ ಆದರೆ ಅಲ್ಲಿ ಟಿಕೆಟ್ ಚೆಕ್ ಮಾಡುವವರಿಗೆ ಹೇಳಿ ಹೋಗುವುದು ಕ್ಷೇಮ.

ಮತ್ತೊಂದು ದಿನಕ್ಕೆ ಪಯಣ ಬೆಳೆಸುವಿರಾದರೆ ಕಡಿಮೆ ಬೆಲೆಗೆ ಕೊಡುತ್ತೇವೆ
ಫ್ಲೈಟ್ ಟಿಕೆಟ್ ಒಂದು ದೊಡ್ಡ ವಿಚಾರ ಅನ್ನಿ. ನಾವು ಭಾರತಕ್ಕೆ ಬರುವ ಪ್ಲಾನಿಂಗ್ ಅನ್ನು ಬಲು ಮುಂಚಿತವಾಗಿಯೇ ನಡೆಸಿ ಟಿಕೆಟ್ ಬುಕ್ ಮಾಡುವುದು ಉಂಟು. ಬೇಸಿಗೆಯ ರಜೆಯ ಸಮಯದಲ್ಲಿ ಭಾರತಕ್ಕೆ ವಿಸಿಟ್ ಮಾಡುವುದು ಎಂದಾದರೆ, ಹೆಚ್ಚಿನ ಮಂದಿ ಅದೇ ಸಮಯದಲ್ಲಿ ಪಯಣ ಬೆಳೆಸುವುದರಿಂದ ಟಿಕೆಟ್ ಬೆಲೆಗಳೂ ಜಾಸ್ತಿ. ಇಂಥಾ ಅವಲಂಬನೆ ಇರದಿರುವಾಗ ಬುಕ್ ತೆಗೆದಿರಿಸಿದಾಗ ಕೊಂಚ ಕಡಿಮೆ ಬೆಲೆಗೆ ಸಿಗುತ್ತದೆ. ಕೆಲವೊಮ್ಮೆ ಏನು ಮಜಾ ಎಂದರೆ, ಫ್ಲೈಟ್ ಕಂಪನಿಯಿಂದ ಕರೆ ಬರುತ್ತದೆ.

"ನೀವು ಪ್ರಯಾಣ ಮಾಡುವ ದಿನ ಫ್ಲೈಟ್ ಭರ್ತಿಯಾಗಿದೆ, ಮತ್ತೊಂದು ದಿನಕ್ಕೆ ಪಯಣ ಬೆಳೆಸುವಿರಾದರೆ ಕಡಿಮೆ ಬೆಲೆಗೆ ಕೊಡುತ್ತೇವೆ' ಅಂತ. ಮುಂಚೆಯೇ ಬುಕ್ ಆದ ಫ್ಲೈಟ್ ಈಗೇಕೆ ಭರ್ತಿಯಾಯ್ತು ಅಂತ ಕೇಳದಿರಿ. ಅದಕ್ಕೆ ಕಾರಣಗಳು ಹಲವಾರು. ಮತ್ತೂ ಕೆಲವೊಮ್ಮೆ ಫ್ಲೈಟ್ ಏರಲು ಕಾಯುತ್ತಾ ಕೂತಿರುವಾಗ, "ಬಿಸಿನೆಸ್ ಕ್ಲಾಸ್'ನಲ್ಲಿ ಕೆಲವು ಸೀಟುಗಳು ಖಾಲಿ ಇವೆ. ಕೊಂಚ ಹೆಚ್ಚಿನ ಹಣ ಕೊಟ್ಟು ನಿಮ್ಮ ಟಿಕೆಟ್ ಅನ್ನು upgrade ಮಾಡಿಕೊಳ್ಳಬಹುದು ಎಂದೂ ಹೇಳಲಾಗುತ್ತದೆ.

ಕೈಲಿ ಹಣವಿದೆ ಎಂದರೆ ಎಲ್ಲವೂ ಲಭ್ಯವಲ್ಲ
ಎಲ್ಲ ಪಯಣವೂ ಪೂರ್ವ ನಿರ್ಧಾರಿತವೇ ಆಗಿರುವುದಿಲ್ಲ ಅಲ್ಲವೇ? ಯಾವುದೋ ಕಾಗದ ಪತ್ರ ವ್ಯವಹಾರ, ಸಮೀಪದವರ ಅನಾರೋಗ್ಯ ಅಥವಾ ದೇಹಾಂತ್ಯವಾದಾಗ ತುರ್ತು ಪಯಣ ಮಾಡಲೇಬೇಕಾಗುತ್ತದೆ. ಇಲ್ಲೂ ಸಾಕಷ್ಟು ಅಡಚಣೆ ಎದುರಾಗುತ್ತದೆ. ಪಾಸ್‌ಪೋರ್ಟ್ validity ಎಂಬುದು ಆರು ತಿಂಗಳಿಗಿಂತ ಕಡಿಮೆ ಇದ್ದರೆ ಟಿಕೆಟ್ ಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನು ವೀಸಾ ಕೃಪೆ ಇಲ್ಲ ಎಂದರೆ ಆಗಲೂ ತೊಂದರೆಯೇ. ಕೈಲಿ ಹಣವಿದೆ ಎಂದರೆ ಎಲ್ಲವೂ ಲಭ್ಯವಲ್ಲ ಎಂಬುದಕ್ಕೆ ಇದೂ ಸಾಕ್ಷಿ.

ಕಳೆದ ವರ್ಷ ನಾವು Vacation ಎಂದು ಪ್ರಯಾಣ ಮಾಡಿದಾಗ online ಫ್ಲೈಟ್ ಟಿಕೆಟ್ ಕಾದಿರಿಸಿದಾಗ, ಮುಂದಿನ ಆಯ್ಕೆ ನಿಮಗೆ ಹೋಟೆಲ್ ಕೂಡಾ ಬೇಕೇ ಅಂತ. ಅದನ್ನೂ ಮಾಡಿದ ಮೇಲೆ, ನಿಮಗೆ ಅಲ್ಲಿ ಸುತ್ತಾಡಲು ಕಾರು ಬುಕ್ ಮಾಡಬೇಕೇ ಅಂತ. ಅದೂ ಆಯ್ತು ಎಂದಾದಾಗ, ಸುತ್ತಲಿನ ಜಾಗಗಳು ಹೀಗಿವೆ, ಅದಕ್ಕೆ ನೀವು ಟಿಕೆಟ್ ಕಾದಿರಿಸುವಿರಾ ಎಂಬ ಆಯ್ಕೆ. ಅದೂ ಆಯ್ತು ಎಂದ ಮೇಲೆ ಮತ್ತೊಂದು ಮಗದೊಂದು. ಎಲ್ಲವೂ ಟಿಕೆಟ್ ಟಿಕೆಟ್ ಟಿಕೆಟ್. ಎಲ್ಲವೂ ಒಂದಕ್ಕೊಂದು ಲಿಂಕ್. ಎಲ್ಲವೂ ಬೇರೆ ಬೇರೆ ವ್ಯವಹಾರ ಆದರೂ ಒಂದಕ್ಕೊಂದು ಅವಲಂಬಿತ. ಒಂದು ಕುಂಠಿತವಾದರೆ ಮಿಕ್ಕೆಲವೂ domino ಕಾರ್ಡ್‌ನಂತೆ ಉರುಳುತ್ತವೆ. ಕೋವಿಡ್ ಸಮಯದಲ್ಲಿ ಎಲ್ಲೆಡೆ ಹೇಗೆ ಕುಸಿತ ಕಂಡಿತು ಅಂತ ಗೊತ್ತಾಯ್ತಲ್ಲ?

ಬಲಿ ಚಕ್ರವರ್ತಿಯಂತೆ ಕೆಳಕ್ಕೆ ಯಾಕೆ ಹೋಗಬಾರದು?
ಈಗ ಮೇಲಿನ ಒಂದೆರಡು ಪ್ರಶ್ನೆಗಳಿಗೆ ಉತ್ತರ ನೋಡೋಣ. ಟಿಕೆಟ್ ತೆಗೆದುಕೊಂಡವರು ಮೇಲೇ ಯಾಕೆ ಹೋಗಬೇಕು? ಅಂತ ಕೇಳಿದೆ. ಸಿಂಪಲ್. ಅಲ್ಲೇ ಹೇಳಿದಂತೆ ರಿಟರ್ನ್ ಟಿಕೆಟ್ ಹಿಡಿದುಕೊಂಡು ಬಂದ ಮೇಲೆ, ಬಂದಿರುವ ಕಡೆಗೆ ತಾನೇ ಮತ್ತೆ ವಾಪಸಾಗಬೇಕು? ಇಲ್ಲದಿದ್ದರೆ ರಿಟರ್ನ್ ಅಂತ ಹೇಗಾಗುತ್ತದೆ? ಬಲಿ ಚಕ್ರವರ್ತಿಯಂತೆ ಕೆಳಕ್ಕೆ ಯಾಕೆ ಹೋಗಬಾರದು? ಅಂತ ಕೇಳಿದೆ.

ಮನುಷ್ಯ ಒಂದು ದುರ್ಗಂಧದ ಬೀಡು. ಅವನ ಬೀಡು ಏನಿದ್ದರೂ ಭೂಲೋಕ ಮಾತ್ರ. ಮೇಲಿನ ಲೋಕಕ್ಕೆ ದೈಹಿಕವಾಗಿ ಹೋದರೆ ತ್ರಿಶಂಕುವಿನ ಸ್ಥಿತಿಯೇ ಆಗೋದು. ಇನ್ನು ಪಾತಾಳಕ್ಕೆ ಹೋಗಲು ವಾಮನಪಾದದ ಅಗತ್ಯವಿದೆ. ಇದಂತೂ ಸುಲಭ ಸಾಧ್ಯವಲ್ಲ. ಭುವಿಯ ನೆಲವನ್ನು ಬಿಟ್ಟು ಸಾಗುವುದು ಆವಿ ಸ್ವರೂಪಿ ಆತ್ಮ. ಹಾಗಾಗಿ ಅದು ಮೇಲಕ್ಕೇ ಸಾಗುತ್ತದೆ. ನೆಲದಿಂದ ಪಾತಾಳ ಹತ್ತಿರವೋ? ನೆಲದಿಂದ ಮೇಲಿನ ಲೋಕ ಹತ್ತಿರವೋ? ಎಂಬುದನ್ನು ಬಿಡುವಾಗಿರುವಾಗ ಸುಮ್ಮನೆ ಆಲೋಚನೆ ಮಾಡಿ. ಉತ್ತರ ಸಿಕ್ಕರೂ ಅದು ಆತ್ಮಕ್ಕೆ apply ಆಗೋದಿಲ್ಲ. ಮೇಲಿನ ಲೋಕದಿಂದ ರಿಟರ್ನ್ ಟಿಕೆಟ್ ಪಡೆದು ಬಂದಿರುವುದು ಆತ್ಮ ಮಾತ್ರ, ದೇಹ ಅಲ್ಲ. ಏನಂತೀರಾ?

English summary
Srinath Bhalle Column: Let me take up the issue of the ticket for this week's issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X