ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಕೊನೆಯ ಬೆಂಚಿನ ಮಹಿಮೆ ಬಲ್ಲಿರಾ ಬಲ್ಲಿರಾ...

By ಶ್ರೀನಾಥ್ ಭಲ್ಲೆ
|
Google Oneindia Kannada News

ಮೊದಲಿಗೆ ಈ ಬಲ್ಲಿರಾ ಬಲ್ಲಿರಾ ಎಂದರೆ ನಾ ಬಲ್ಲೆ ಅಂತೇನಲ್ಲ. ನನ್ನ ಜೀವಮಾನವೆಲ್ಲಾ ಮೊದಲಿಗನಾಗಿಯೇ ಇರೋದು, ಎಂದಿಗೂ ಹಿಂದುಳಿದವನಾಗಿ ಇರಲಿಲ್ಲ ಎಂದರೆ 'ಯಪ್ಪಾ, ಏನ್ ಸ್ಕೋಪ್ ತೊಗೋತಿದ್ದಾನೆ' ಅಂದುಕೊಳ್ಳಬೇಡಿ. ಇಲ್ಲಿನ ವಿಷ್ಯ ಬರೀ ಕೊನೆಯ ಬೆಂಚ್ ಸಮಾಚಾರ ಮಾತ್ರ. ನನ್ನ ಜೀವಮಾನವೆಲ್ಲಾ ಮೊದಲ ಬೆಂಚಿನವನಾಗಿಯೇ ಕಳೆದಿರುವುದು. ಪ್ರಾರ್ಥನೆಯಲ್ಲಿ ಮೊದಲಿಗನಾಗಿ ನಿಂತು ತರಗತಿಯ ಒಳಗೆ ಹೋಗಿ ಸೀಟನ್ನು ಅಲಂಕರಿಸುತ್ತಿದ್ದೆ. ಅಷ್ಟು ಹೊತ್ತಿಗೆ ಮಧ್ಯದ ಸಾಲಿನಿಂದ ಹಿಡಿದು ಕೊನೆಯ ಬೆಂಚಿನವರು ಒಳಗೆ ಬರುವಾಗ ನನ್ನ ದರ್ಶನ ಆಗಲೇಬೇಕು.

ನನ್ನ ತರಗತಿಯ ಕೊನೆಯ ಬೆಂಚಿನವರು ಎಲ್ಲರೂ ತರಲೆಗಳಲ್ಲ. ಆದರೆ ಅವರೆಲ್ಲಾ ಕೊನೆಯ ಬೆಂಚಿನವರಾಗಿದ್ದು ಯಾಕೆ ಅಂದ್ರೆ, ಹಿಂದಿನ ಜನ್ಮದಲ್ಲಿ Height ಅನ್ನು ಕೊಟ್ಟು ಹುಟ್ಟಿದ್ದರು ಅದಕ್ಕೆ. ಆಗಿನಿಂದ ಈಗಿನವರೆಗೂ ಸುರೇಶ ನನಗಿಂತ ಒಂದಡಿ ಮೇಲೇ ಇದ್ದಾನೆ, ಆದರೂ ನನಗೆ ಸಕತ್ ದೋಸ್ತ್ ಅನ್ನಿ. ಆದರೂ ಕೊನೆಯ ಬೆಂಚಿನ ವಿಶೇಷತೆ ಏನು?

ಶ್ರೀನಾಥ್ ಭಲ್ಲೆ ಅಂಕಣ: ಬರೀ ಒಂದು ಕರೆಯ ದೂರವಷ್ಟೇ ಅಂದ್ರೆ Just a phone call away ಶ್ರೀನಾಥ್ ಭಲ್ಲೆ ಅಂಕಣ: ಬರೀ ಒಂದು ಕರೆಯ ದೂರವಷ್ಟೇ ಅಂದ್ರೆ Just a phone call away

ಮಧ್ಯದ ಸಾಲಿನವರಿಗೆ ಅರ್ಥವಿಲ್ಲದ ಜೋಕು
ನಮ್ಮಲ್ಲೊಬ್ಬರು ಟೀಚರ್ ಜೋಕ್ ಮಾಡೋವ್ರು. ಎಷ್ಟೋ ಸಾರಿ ಅದು ಬಡತನದ ಹಾಸ್ಯ ಅರ್ಥಾತ್ poor joke ಅಂತ. ಕೆಲವೊಮ್ಮೆ ಕಡುಬಡತನದಿಂದಲೂ ಕೂಡಿರುತ್ತಿತ್ತು. ಈ ಜೋಕ್ ಎಂಬುದು ಮೂರು ವಿಭಾಗದಲ್ಲಿ ತರಗತಿಯಲ್ಲಿ ಅಲೆ ಅಲೆಯಾಗಿ ಹರಿಯುತ್ತಿತ್ತು. ಮೊದಲ ಅಲೆಯಾದ ನಮಗೆ ಬರೀ ಉಗುಳು. ಮಧ್ಯದ ಸಾಲಿನವರಿಗೆ ಅರ್ಥವಿಲ್ಲದ ಜೋಕು ಆದರೆ ನಗದೇ ವಿಧಿಯಿಲ್ಲ. ಕೊನೆಯ ಸಾಲಿನವರಿಗೆ ಸಕತ್ ಮಜಾ. ಕೆಟ್ಟ ಜೋಕು ಎಂದು ಅರಿತು ಸುಮ್ಮನೆ ಹುಯಿಲೆಬ್ಬಿಸಿ ನಗುವುದು ಅರ್ಥಾತ್ ಕಾಲು ಎಳೆಯೋದು. ಆಗೆಲ್ಲ ನಮ್ಮ ಗಮನ ಕೊನೆಯ ಬೆಂಚಿನವರ ಕಡೆ. ನನಗಂತೂ ಜೀವನದಲ್ಲಿ ಒಮ್ಮೆ ಹಿಂದಿನ ಬೆಂಚಿನಲ್ಲಿ ಕೂತು ಪಾಠ ಕೇಳಬೇಕು ಅಂತ ಆಸೆ. ನಕ್ಕುಬಿಟ್ರಾ, ನಿಜ ಬಿಡಿ, ಅಲ್ಲಿನ ಮಜಾ ಹೇಗಿರುತ್ತೆ ಅಂತ ನೋಡಬೇಕು ಅಂತ. ಅದಕ್ಕೂ ಒಂದು ದಿನ ಬಂತು ನೋಡಿ.

ಹಿಂದಿನ ಬೆಂಚು ಅಂದರೆ ಅದೇನೋ ಹೊಸ ಜಗತ್ತು
ನಮ್ಮಲ್ಲಿ ಆಗಾಗ ಟ್ರೈನಿಂಗ್ ಟೀಚರ್ಸ್ ಬಂದು ತರಗತಿ ತೆಗೆದುಕೊಳ್ಳುತ್ತಿದ್ದರು. ನಮ್ಮ ಶಾಲೆಯನ್ನು ನಡೆಸುತ್ತಿದ್ದ ಸಂಸ್ಥೆಯು ಹೈಸ್ಕೂಲ್, ಪ್ರಿ-ಯೂನಿವರ್ಸಿಟಿ ಮತ್ತು ಬಿ.ಎಡ್ ಶಾಲೆಗಳನ್ನು ನಡೆಸುತ್ತಿದ್ದರು. ಹಾಗಾಗಿ ಅಲ್ಲಿ ಬಿ.ಎಡ್ ಓದುವ ವಿದ್ಯಾರ್ಥಿಗಳು ನಮಗೆ ತರಗತಿ ನಡೆಸಲು ಬರುತ್ತಿದ್ದರು. ಅವರಂತೆ ಇನ್ನೂ ಕೆಲವು ಬಿ.ಎಡ್ ಓದುವವರು ನಮ್ಮೊಂದಿಗೆ ಕುಳಿತುಕೊಳ್ಳುತ್ತಿದ್ದರು. ಟ್ರೈನಿಂಗ್ ತೆಗೆದುಕೊಳ್ಳುವವರಿಗೆ ಅದೊಂದು ಅಭ್ಯಾಸ ತರಗತಿ. ನಮಗೆ ಆ ಪಾಠದಲ್ಲಿ ಅಷ್ಟು ಆಸಕ್ತಿ ಇರಲಿಲ್ಲ ಕೂಡ, ಆದರೆ ಪರೀಕ್ಷೆಯಲ್ಲಿ ಇವರು ಮಾಡಿದ ಪಾಠದ ಪ್ರಶ್ನೆ ಇದ್ದಾಗ ಮಾತ್ರ ಕಕ್ಕಾಬಿಕ್ಕಿ.

ಇರಲಿ, ಹೀಗೇ ಒಮ್ಮೆ ಟ್ರೈನಿಂಗ್‌ನವರು ತರಗತಿಗೆ ಬರುತ್ತಿದ್ದಾರೆ ಅಂತ ತಿಳಿದಾಗ, ನಾನು ಸೀದಾ ಹಿಂದಿನ ಬೆಂಚಿನತ್ತ ಹೋಗಿ ಜಗದೀಶನ ಪಕ್ಕ ಕುಳಿತುಕೊಂಡೆ. ಅದೇನೋ ಹೊಸ ಜಗತ್ತು ನನಗೆ. ತರಲೆ ಮಾಡಬಹುದು ಅಂತ ಖುಷಿ. ಮೊದಲ ಅನುಭವ ನೋಡಿ ಹಾಗಾಗಿ ಭಯವೂ ಇತ್ತು. ಟ್ರೈನಿಂಗ್ ಟೀಚರ್ ಒಳಗೆ ಬಂದವರೇ, ಸ್ಟೇಜಿನ ಮೇಲೆ ನಿಂತು ಎಲ್ಲ ವಿದ್ಯಾರ್ಥಿಗಳತ್ತ ಒಮ್ಮೆ ದೃಷ್ಟಿ ಹಾಯಿಸಿ, ನನ್ನೆಡೆಗೆ ನೋಡಿ, ನೆಲದಲ್ಲಿ ವಿಕೆಟ್ ನೆಡುವಂತೆ ಅವರ ದೃಷ್ಟಿಯನ್ನು ನನ್ನಲ್ಲೇ ನೆಟ್ಟು, ತಮ್ಮ ತೋರುಬೆರಳಿನಿಂದ ನನ್ನತ್ತ ಬೆಟ್ಟು ಮಾಡಿ, ಎದ್ದು ನಿಲ್ಲುವಂತೆ ಹೇಳಿ, ಸೀದಾ ಮೊದಲ ಬೆಂಚಿಗೆ ಕರೆಸಿ ಕೂಡಿಸಿದರು. ಇದಪ್ಪಾ ನಸೀಬು ಅಂದ್ರೆ.

ಕನ್ನಡಕ ಹಾಕಿದ ನಂತರ ಅತೀ ಬುದ್ದಿವಂತ
ಆಮೇಲೆ ಕಾಲೇಜಿಗೆ ಬಂದಾಗ ಆಹಾ moment! ಮೊದಲ ದಿನವೇ ಹಿಂದಿನ ಬೆಂಚಿನಲ್ಲಿ ಕೂತೆ. ಅಲ್ಲಿನ ಗಲಭೆಗೆ ತಲೆ ನೋವು ಬಂದು ಮುಂದಿನ ಎರಡು ಬೆಂಚುಗಳಿಗೆ ಹಾರಿದೆ. ಆ ನಂತರ ಮತ್ತೆರಡು ಬೆಂಚು ಮುಂದೆ ಬಂದೆ. ಆ ನಂತರ ಅರಿವಾಯ್ತು ಬೋರ್ಡಿನ ಮೇಲೆ ಬರೆದಿದ್ದು ಎಲ್ಲರಿಗೂ ಕಂಡರೂ ನನಗೆ ಮಾತ್ರ ಮಸುಕು ಮಸುಕು ಅಂತ. ಯಾಕೋ ಸರಿಯಿಲ್ಲ ಅಂತ ಮತ್ತೆ ಮೊದಲ ಬೆಂಚಿನ ಮೊದಲಿಗನಾದೆ.

Srinath Bhalle Column: The Glory of the Last Bench in Schools

ಬೋರ್ಡಿನ ಮೇಲಿನ ಅಕ್ಷರಗಳು ಈಗ ಕಾಣತೊಡಗಿತ್ತು. ಹೀಗೆಯೇ ಮುಂದಿನ ಎರಡು ವರ್ಷ ಕಳೆಯಿತು. ನನ್ನ ಐಬು ನನಗೂ ಗೊತ್ತಾಗಿತ್ತು. ಕಣ್ಣಿಗೆ ಕನ್ನಡಕ ಬಂದಿತ್ತು. ಮೊದ ಮೊದಲು ಕನ್ನಡಕ ಧರಿಸಲು ಸಂಕೋಚ. ಆದರೆ ಅದೇನೋ ಗೊತ್ತಿಲ್ಲ, ಕನ್ನಡಕ ಹಾಕಿದ ನಂತರ ಅತೀ ಬುದ್ದಿವಂತನಂತೆ ಕಾಣತೊಡಗಿದೆ. ಈ ಕನ್ನಡಕದ ದೆಸೆಯಿಂದ ಆ ಮುಂದಿನ ಓದಿನಲ್ಲಿ ಹಿಂದಿನ ಬೆಂಚಿನವನಾಗಿ ಅಲಂಕರಿಸಿದ್ದೆ. ಆದರೆ ತರಲೆ ಮಾಡುವ ಬುದ್ದಿ ಹೊರಟು ಹೋಗಿತ್ತು ಬಿಡಿ.

ಹೀರೋಯಿನ್ ನನ್ನ ಮುಂದೆ ಬರುತ್ತಿದ್ದಳೋ ಇಲ್ಲವೋ
ಸಿನಿಮಾ ಥೀಯೇಟರ್‌ನಲ್ಲಿ ಅತೀ ಹಿಂದಿನ ಬೆಂಚಿನವನಾಗಿ ಕೂರಲು ಆಸೆ. ಮಧ್ಯದಲ್ಲೆಲ್ಲೋ ಕೂತಿರುವಾಗ ಹಿಂದಿನ ಸಾಲಿನವರು ಆ ಕಡೆ ಈ ಕಡೆ ಓಡಾಡುವಾಗ, ನನ್ನ ತಲೆ ತಾಕಿಸಿದರೆ ನನ್ನ ಕ್ರಾಪ್ ಹಾಳಾಗುತ್ತೆ ಅಂತ ನನಗೆ ಹಿಂಸೆ. ಇದು ಒಂದು ಕಾರಣ, ಇನ್ನೊಂದು ವಿಷಯ ಏನಪ್ಪಾ ಅಂದ್ರೆ ನನ್ನ ಮುಂದಿನವರು ಕೊಂಚ ಎತ್ತರ ಇದ್ದರು ಎಂದರೆ ನಿಂತೇ ಸಿನಿಮಾ ನೋಡಬಹುದು ಅಂತ. ಸಿನಿಮಾ ಮಂದಿರ ಸೀಟುಗಳು ಅಂದ ಮೇಲೆ ನೆನಪಾಯ್ತು ನೋಡಿ, ಸದಾ ನನ್ನ ಮುಂದೆ ಎತ್ತರದವರೇ ಬಂದು ಕೂಡುತ್ತಿದ್ದುದು ಸರ್ವೇಸಾಮಾನ್ಯ. ಅವರ ಆ ಪಕ್ಕ ಅಥವಾ ಈ ಪಕ್ಕ ಚಿಕ್ಕ ಮಕ್ಕಳನ್ನು ಕೂರಿಸಿಕೊಳ್ಳುತ್ತಿದ್ದಾಗಲಂತೂ ನನಗೆ ಅತೀ ಸಿಟ್ಟು ಬರುತ್ತಿತ್ತು. ಹೀಗಾಗಿ ಅತೀ ಹಿಂದಿನ ಸೀಟು ಸಿಗಲಿ ಎಂದೇ ಪ್ರಾರ್ಥನೆ ನಡೆದಿರುತ್ತಿತ್ತು.

ಶ್ರೀನಾಥ್ ಭಲ್ಲೆ ಅಂಕಣ: ಆಂಗ್ಲದ GG ಬಗ್ಗೆ ಕನ್ನಡದಲ್ಲಿ ಗಂಟೆಗಟ್ಟಲೆ ಮಾತನಾಡೋಣಶ್ರೀನಾಥ್ ಭಲ್ಲೆ ಅಂಕಣ: ಆಂಗ್ಲದ GG ಬಗ್ಗೆ ಕನ್ನಡದಲ್ಲಿ ಗಂಟೆಗಟ್ಟಲೆ ಮಾತನಾಡೋಣ

ಯಾವ ತೊಂದರೆಯೂ ಬೇಡ ಗಾಂಧಿ ಕ್ಲಾಸಿನಲ್ಲಿ ಮುಂದಿನ ಸೀಟಿನಲ್ಲಿ ಕೂತರೆ ಆಗದೇ ಅಂತ ನೀವು ಕೇಳಬಹುದು. ವಿಧಿಯಿಲ್ಲದೇ ಅದೂ ಒಮ್ಮೆ ಆಗಿತ್ತು. ತೆರೆಯ ಮೇಲಿನ ಹೀರೋಯಿನ್ ನನ್ನ ಮುಂದೆ ಬರುತ್ತಿದ್ದಳೋ ಇಲ್ಲವೋ, ಆದರೆ ಜಾಡಿಸಿ ಒದೆಯುವ ಹೀರೋ ಮಾತ್ರ ನನ್ನೆದೆಗೇ ಒದ್ದಂತೆ ಭಾಸವಾಗುತ್ತಿತ್ತು. 3D ಅಲ್ಲದಿದ್ದರೂ ಇಡೀ ಸ್ಕ್ರೀನ್ ನನ್ನ ಮೈಮೇಲೆ ಬಂದಂತೆ ಆಗುತ್ತಿತ್ತು. ಸಿನಿಮಾ ಬಿಡುವಷ್ಟರಲ್ಲಿ ಭಯಂಕರ ತಲೆನೋವು.

ಉದುರಿಹೋದ ಅಂಗಾಂಗಗಳನ್ನು ಆಯ್ದುಕೊಂಡೇ ಇಳಿಯಬೇಕು
ಊರಿಂದ ಊರಿಗೆ ಹೋಗುವ ಬಸ್ಸುಗಳಲ್ಲಿ ಅದರಲ್ಲೂ ರಾತ್ರಿ ಪ್ರಯಾಣ ಮಾಡುವ ಸರಕಾರಿ ಬಸ್ಸುಗಳಲ್ಲಿ ಕೊನೆಯ ಸೀಟು ಸಿಕ್ಕರಂತೂ ಅದರ ಪಾಡು ಶತ್ರುವಿಗೂ ಬೇಡ. ಸೀಟಿನ ಗುಂಜುಗಳು ಶಿಥಿಲವಾಗಿ ಆ ಹಸಿರು ಹೊದಿಕೆಯ ಸೀಟು ಹೆಚ್ಚು ಕಮ್ಮಿ ಹಲಗೆಯ ಮೇಲಿನ ಬಟ್ಟೆಯಂತೆ ಮಾತ್ರ ಇರುತ್ತಿತ್ತು. ಬಸ್ಸು ಸಾಗುವಾಗ ಹಳ್ಳಕೊಳ್ಳದಲ್ಲಿ ಧಡಕ್ ಧಡಕ್ ಅಂತ ಕುಕ್ಕಿದಾಗ, ನಮ್ಮ ಇಡೀ ದೇಹ ಕುಲುಕಾಡುವಂತೆ ಆಗುತ್ತಿರುತ್ತದೆ. ಕೊನೆಯ ಸ್ಟಾಪಿನಲ್ಲಿ ಇಳಿಯುವ ಮುನ್ನ ಉದುರಿಹೋದ ಅಂಗಾಂಗಗಳನ್ನು ಆಯ್ದುಕೊಂಡೇ ಇಳಿಯಬೇಕೇನೋ ಎನ್ನಿಸಿದರೂ ಅಚ್ಚರಿಯಿಲ್ಲ.

ಏಳು ಸೀಟರ್ ವ್ಯಾನ್‌ಗಳಲ್ಲಿ ಹಿಂದೆ ಸಾಮಾನು ಇರಿಸಲು ಟ್ರಂಕ್‌ಗೆ ಜಾಗವನ್ನೂ ಕೊಡುವ ಉದ್ದೇಶದಿಂದ ಆ ಕೊನೆಯ ಸೀಟನ್ನು ಅದೆಷ್ಟು ಕಿಷ್ಕಿಂದ ಮಾಡಿರುತ್ತಾರೆ ಎಂದರೆ, ಆ ಸೀಟಿನಲ್ಲಿ ಕೂರುವುದೇ ಒಂದು ಶಿಕ್ಷೆ. ಅಪ್ಪಿತಪ್ಪಿ ದೂರ ಪಯಣದಲ್ಲಿ ನಿಮ್ಮದು ಆ ಸೀಟು ಆಗಿದ್ದಲ್ಲಿ ಹಿಂಸೆ Guaranteed ಎನ್ನಬಹುದು.

Lastbenchers ಎಂದರೆ ಒಂದು ರೀತಿ ಶಾಪಗ್ರಸ್ತರು
Lastbenchers ಎಂದರೆ ಒಂದು ರೀತಿ ಶಾಪಗ್ರಸ್ತರು ಎಂಬಂತೆಯೇ ನೋಡುವ ದಿನಗಳಿದ್ದವು, ಇಂದು ಹೇಗೋ ಗೊತ್ತಿಲ್ಲ. ಆದರೆ ಕೊನೆಯ ಬೆಂಚಿನವರು ಎಂದರೆ ಶೈಕ್ಷಣಿಕವಾಗಿಯೇ ಹಿಂದುಳಿದವರು ಎಂಬ ಮನೋಭಾವ. ಬುದ್ದಿ ಬೆಳವಣಿಗೆ ತೀಕ್ಷ್ಣತೆಯಂತೆಯೇ, ದೇಹ ಬೆಳವಣಿಗೆಯಲ್ಲೂ ಇದ್ದಾಗ ಆ ವ್ಯಕ್ತಿ ಕೊನೆಯ ಬೆಂಚಿನವನಾಗಿಯೇ ಇರುತ್ತಾನೆ ಅಲ್ಲವೇ?

ಈ Lastbenchers ಎಂಬುದರ ಮತ್ತೊಂದು ಮುಖ ಎಂದರೆ, ಈ ವಿಷಯ ಗಂಡುಪಾಳ್ಯಕ್ಕೆ ಮಾತ್ರ ಅನ್ವಯಿಸುತ್ತದೆಯೇ? ಹೀಗೆ ಹೇಳಲೂ ಕಾರಣವಿದೆ. ನನ್ನದು ಗಂಡುಮಕ್ಕಳ ಹೈಸ್ಕೂಲ್. ಆ ನಂತರದ ಕಾಲೇಜು ಜೀವನದಲ್ಲಿ ತರಗತಿಯಲ್ಲಿನ ಹೆಣ್ಣುಗಳ ಸಂಖ್ಯೆ ಹತ್ತರಿಂದ ಹನ್ನೆರಡು. ಇಷ್ಟವಿದೆಯೋ, ಇಲ್ಲವೋ ಅವರುಗಳು ಮೊದಲ ಎರಡು ಅಥವಾ ಮೂರು ಬೆಂಚಿನವರೇ ಆಗಿರುತ್ತಿದ್ದರು. ಹೆಣ್ಣುಮಕ್ಕಳ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಈ ಹಿಂದಿನ ಬೆಂಚಿನವರ ಕಥೆ ಏನು ಎಂಬುದನ್ನು ಓದುಗರೇ ಹಂಚಿಕೊಳ್ಳಬೇಕು.

ಮೇಷ್ಟ್ರುಗಳು ಕೆಂಗಣ್ಣು ಬೀರುವುದು ಕೊನೆಯ ಬೆಂಚಿನವರ ಮೇಲೆ
ಕೊನೆಯ ಬೆಂಚಿನವರು ಎಂದ ಮಾತ್ರಕ್ಕೆ ಬರೀ ಮಜಾ ಅಂತೇನಲ್ಲ. ಅಲ್ಲಿನ ಜೀವನ ಬಲು ಕಷ್ಟವಿದೆ. ವಿಮಾನದಲ್ಲಿ ಈ ಲಾಸ್ಟ್ ಬೆಂಚ್‌ನಲ್ಲಿ ಕೂತವರನ್ನು ಕೇಳಿದಾಗ ಗೊತ್ತಾಗುತ್ತದೆ ಆ ಕಷ್ಟ. ಟಾಯ್ಲೆಟ್ ಇರುವ ಬಸ್ಸುಗಳಲ್ಲಿ ಕೊನೆಯ ಬೆಂಚಿನವರ ಪಾಡು ಅನುಭವಿಸಿದವರಿಗೆ ಗೊತ್ತು. ಶಾಲೆಯಲ್ಲೂ ಅಷ್ಟೇ, ಮೇಷ್ಟ್ರುಗಳು ಮೊದಲು ಕೆಂಗಣ್ಣು ಬೀರುವುದು ಕೊನೆಯ ಬೆಂಚಿನವರ ಮೇಲೆಯೇ.

ಮೊದಲ ಬೆಂಚಿನವರೆಲ್ಲಾ ಬುದ್ದಿವಂತರು ಎಂಬ ಮನೋಭಾವ ಇರುವಂತೆ ಕೊನೆಯ ಬೆಂಚಿನವರು ಎಂದರೆ ಅದೇನೋ ತಾತ್ಸಾರ. ನನ್ನ ಜೀವನದಲ್ಲಿನ ಈ ಕೊನೆಯ ಬೆಂಚಿನ ಎಷ್ಟೋ ಮಂದಿ ಇಂದು ಮಹತ್ಸಾಧನೆ ಮಾಡಿದ್ದಾರೆ. ಹಲವಾರು ಬಾರಿ ಅನ್ನಿಸಿದೆ, ಇವರೊಂದಿಗೆ ನಾನೂ ಕೂತಿದ್ದರೆ, ಏನಾದರೂ ಸಾಧನೆ ಮಾಡಬಹುದಿತ್ತೇನೋ ಅಂತ. Lastbencher ಆಗಿ ಅಥವಾ ಅವರೊಂದಿಗಿನ ನಿಮ್ಮ ಅನುಭವ?

English summary
Srinath Bhalle Column: What is Special about the last bench in schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X