• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಬ್ಬೊಬ್ಬರೂ ಭಿನ್ನ, ಆಕಾರವೂ ಭಿನ್ನ, ವಿಕಾರವೂ ಭಿನ್ನ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಕಳೆದ ವಾರಾಂತ್ಯ ನಮ್ಮ ಊರಿನಲ್ಲಿ Festival Of India ಎಂಬ ವಾರ್ಷಿಕ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಶುಕ್ರವಾರದಿಂದಲೇ ಹಾಲ್'ನಲ್ಲಿ ತಯಾರಿಗಳು ನಡೆದವು. ಶನಿವಾರ ಮತ್ತು ಭಾನುವಾರದ ದಿನಗಳು ನಾನಾ ವಿಧದ ಊಟತಿಂಡಿಗಳು, ಸ್ಟೇಜಿನ ಮೇಲಿನ ನಾನಾ ವಿಧದ ಕಾರ್ಯಕ್ರಮಗಳು, ಕನ್ನಡಿಗರು ಮತ್ತು ಕನ್ನಡೇತರ ಸ್ನೇಹಿತರ ಭೇಟಿ ಇತ್ಯಾದಿಗಳು ಇತ್ತು. ಈ ಕಾರ್ಯಕ್ರಮ ಪ್ರತಿ ವರ್ಷದಂತೆಯೇ ಈ ವರ್ಷವೂ ನಡೆಯಿತು ಎಂಬುದು ಬಿಟ್ಟರೆ ಬೇರೇನು ವಿಶೇಷ ಎಂಬ ಪ್ರಶ್ನೆ ಮೂಡೋದು ಸಹಜ.

ಶುಕ್ರವಾರದಂದು ಕರೆಮಾಡಿದ ಸ್ನೇಹಿತರೊಬ್ಬರು ಮರುದಿನ ಅಲ್ಲಿ ತಮ್ಮದೊಂದು session ಇದೆ ಬನ್ನಿ ಅಂತ ಆಹ್ವಾನ ಕೊಟ್ಟರು. ಅವರು ಹೇಳಿದ ಸಮಯಕ್ಕೆ ಶನಿವಾರ ಮಧ್ಯಾಹ್ನ ಅಲ್ಲಿಗೆ ಹೋದೆ. Ayurveda for Joint Health ಎಂಬುದೇ ಆ ಒಂದು ಘಂಟೆಗಳ ಕಾಲದ ವಿಚಾರ. ಮೊದಲಿಗೆ ಇದು ಆಯುರ್ವೇದದ ವಿಚಾರ ಅರ್ಥಾತ್ ನನಗೆ ಹೆಚ್ಚು ಅರಿವಿರದ ವಿಚಾರ. ಜಾಯಿಂಟ್ ಅಕೌಂಟ್ ಬಗ್ಗೆ ಕೇಳಿದ್ದೆ ಆದರೆ ಏನಿದು ಜಾಯಿಂಟ್ ಹೆಲ್ತ್. ಗಂಡ ಮಾತ್ರೆ ತೊಗೊಂಡ್ರೆ ಹೆಂಡತಿಗೆ ಖಾಯಿಲೆ ವಾಸಿಯಾಗಬಹುದೇ? ಅಥವಾ ಹೆಂಡತಿ ಚೂರ್ಣ ತೆಗೆದುಕೊಂಡರೆ ಗಂಡ ತೆಗೆದುಕೊಳ್ಳುವಷ್ಟು ಇಲ್ಲವೇ? ಇಂಥಾ ವಿಚಿತ್ರ ಆಲೋಚನೆಗಳಿಂದ ತುಂಬಿದ ಮನಸ್ಸಿನಲ್ಲಿ ಅಲ್ಲಿ ಕೂತೆ.

ಸ್ಪಾಟ್ ಲೈಟ್ ಅಥವಾ ಲೈಮ್ ಲೈಟ್ ಸಿಂಡ್ರೋಮ್

ಅವರಿನ್ನೂ ತಮ್ಮ ಮಾತು ಆರಂಭ ಮಾಡುವ ಮುನ್ನವೇ ಈ ನನ್ನ ಪ್ರಶ್ನೆ ಮುಂದಿಟ್ಟೆ. ಸ್ನೇಹಿತರೇ ಆಗಿದ್ದರಿಂದ ನನ್ನ ತಲೆಯ ಮೇಲೆ ಹೊಡೆಯಲಿಲ್ಲ!

ಅಧಿವೇಶನ ಆರಂಭವಾದ ಮೇಲೆ ನನಗೆ ಅರಿವಾಗಿದ್ದು ಇದು joint pain, arthritis ಇತ್ಯಾದಿ ತೊಂದರೆಗಳ ವಿಚಾರವನ್ನು ಆಯುರ್ವೇದದ ಕಣ್ಣಲ್ಲಿ ನೋಡುವಿಕೆ ಅಂತ. ನಾನು ಅವರಿಗೆ ಹೇಳಿದೆ "ನನಗೆ joint ತೊಂದರೆ ಏನಿಲ್ಲ ಆದರೂ ನಾನೂ, ನನ್ನ ಹೆಂಡತಿ joint ಆಗಿ ಬಂದಿದ್ದೇವೆ". . . ”ಭಾಳಾ ಸಂತೋಷ" ಎಂದ ಅವರು “ಒಂದು ತರಗತಿ ಎಂದ ಮೇಲೆ ಗುರು ಶಿಷ್ಯರ ಚರ್ಚೆ ಮಾಡಿಕೊಂಡು ಕಲಿತಲ್ಲಿ ಇಬ್ಬರಿಗೂ ಒಳಿತು” ಎಂದಾಗ ನಾನು 'joint effort ಇರಲೇಬೇಕು' ಎಂದೇ. ಪ್ರತೀ ಮಾತಿಗೆ ಏನಯ್ಯಾ ನೀನು ಹೀಗೆ joint ಹಾಕ್ತಾ ಇದ್ದೀಯ ಅನ್ನಿಸಿರಬೇಕು ಆದರೆ ಅವರು ಹೇಳಲಿಲ್ಲ.

“ಆಂಗ್ಲ ಔಷಧಿಗಳು ಯಾವುದೇ ಖಾಯಿಲೆಯನ್ನು ಹದ್ದುಬಸ್ತಿನಲ್ಲಿಡಲು ಉಪಯುಕ್ತವಾದರೆ, ಆಯುರ್ವೇದದ ಔಷಧಗಳು ರೋಗದ ಮೂಲವನ್ನು ನಾಶ ಮಾಡುವತ್ತ ಕೆಲಸ ಮಾಡುತ್ತದೆ. ಇದರಿಂದಾಗಿ ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ” ಎಂದರು ಅವರು. ಹೇಗಿದ್ರೂ participate ಮಾಡಿ ಅಂತ ಅನುಮತಿ ಕೊಟ್ಟಿದ್ದರು ಅಂತ “ಆಂಗ್ಲ ಔಷಧಿ ಪೊಲೀಸ್ ಇದ್ದ ಹಾಗೆ ಅಲ್ಲವೇ” ಎಂದೆ . . . ಜಾಯಿಂಟ್ ಹಾಕೋದು ಬಿಟ್ಟು ನಾ ಹೇಳೋದು ಕೇಳಪ್ಪಾ ಅನ್ನೋ ಹಾಗೆ ಮುಖ ಮಾಡಿದ್ರು. ಇನ್ನು ಬಾಯಿ ಮುಚ್ಚಬೇಕು ಅನ್ನಿಸಿತು.

ಜೀವನವೇ ಒಂದು ಬೀಳುಏಳಿನ ಸಂತೆ, ನಿಮಗಿದೆಯೇ ಅದರ ಚಿಂತೆ?

ಜಾಯಿಂಟ್'ಗಳು ಎಲ್ಲಿರುತ್ತವೆ? ಕೈಗಳಲ್ಲಿ, ಕಾಲುಗಳಲ್ಲಿ, ಬೆರಳುಗಳಲ್ಲಿ ಮತ್ತಿತರ ಕಡೆ ಇರುತ್ತವೆ. arthritis ಎಂಬೋದು ಈ joint'ಗಳಲ್ಲಿ ಎಲ್ಲಿ ಬೇಕಾದರೂ ಉಂಟಾಗಬಹುದು. ಇದರಲ್ಲೇ ಹಲವಾರು ವಿಧಗಳಿವೆ. ಕೆಲವು ವಿಧದಲ್ಲಿ ಆ ಜಾಗ ಬರೀ ಕೆಂಪಾಗಬಹುದು. ಕೆಲವರಲ್ಲಿ ಕೆಂಪಾಗಿ ಬಾತುಕೊಳ್ಳಲೂಬಹುದು. ಕೆಲವೊಮ್ಮೆ ಹೊರಗೇನೂ ಕಾಣಿಸಿಕೊಳ್ಳದೇ ಬರೀ ನೋವು ಇರಬಹುದು. ಜಾಯಿಂಟ್'ಗಳಲ್ಲಿರುವ ಮೂಳೆ ಸವೆಯುತ್ತಾ ಹೋದಂತೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ.

ಹೀಗಾದಾಗ ಕೆಲವರು ತಮ್ಮಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದು ಕ್ಯಾಲ್ಸಿಯಂಯುಕ್ತ ಮಾತ್ರೆ ಅಥವಾ ಔಷಧಿ ತೆಗೆದುಕೊಳ್ಳುವವರು ಇದ್ದಾರೆ. ಆದರೆ ಕೆಲವೊಮ್ಮೆ ಕ್ಯಾಲ್ಸಿಯಂ ಹೆಚ್ಚಿ ಈ ರೀತಿ ಆಗೋದೂ ಉಂಟು.

ಪಕ್ಕದ ಮನೆಯವರಿಗೆ ಈ ತೊಂದರೆಯಾದಾಗ ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಂಡಿದ್ದಕ್ಕೆ ಉಪಶಮನ ಆಯ್ತು ಹಾಗಾಗಿ ನಾನೂ ತೆಗೆದುಕೊಳ್ಳುತ್ತೇನೆ ಎಂದುಕೊಂಡು ನಾವೂ ತೆಗೆದುಕೊಳ್ಳುವ ಹಾಗಿಲ್ಲ, ಏಕೆಂದರೆ ಪ್ರತಿಯೊಬ್ಬ ಮನುಷ್ಯನೂ ಭಿನ್ನ . . . ಒಬ್ಬರ ಖಾಯಿಲೆ ಮತ್ತೊಬ್ಬರಿಗೂ ಕಾಣಿಸಿಕೊಂಡಿರಬಹುದು, ಆದರೆ ಇಬ್ಬರಲ್ಲೂ ಯಾವ ರೀತಿಯಲ್ಲಿ ಖಾಯಿಲೆ ಕಾಣಿಸಿಕೊಂಡಿತು ಎಂಬುದರ ಮೂಲ ಒಂದೇ ಆಗಿರಬೇಕಿಲ್ಲ.

ಜಗದೊಳಿರುವ ಮನುಜರೆಲ್ಲಾ ಒಂಥರಾ ಒರಟರು!

ಪಂಚಭೂತಗಳ ಸಂಯೋಜನೆಯಿಂದ ಹುಟ್ಟಿಕೊಂಡ ಮೂರು ದೋಷಗಳನ್ನು ಆಯುರ್ವೇದ ಗುರುತಿಸುತ್ತದೆ. ಇಲ್ಲಿ ದೋಷ ಎಂದರೆ 'ತೊಂದರೆ' ಅಂತಲ್ಲ. ತೊಂದರೆಯನ್ನು ವಿಕಾರ ಎನ್ನುತ್ತಾರೆ. ಮೂರು ದೋಷಗಳು ವಾತ, ಪಿತ್ತ ಮತ್ತು ಕಫ. ಒಬ್ಬ ಮನುಷ್ಯನ ಗುಣಲಕ್ಷಣಗಳನ್ನು ಅವಲೋಕಿಸಿ ಯಾರು ಯಾವ ದೋಷದವರು ಎಂದು ಕಂಡುಕೊಳ್ಳಬಹುದು. ಕೆಲವರು ಒಂದಕ್ಕಿಂತ ಹೆಚ್ಚು ದೋಷಕ್ಕೆ ಸೇರಿದವರಾಗಿರಬಹುದು ಅಥವಾ ಮೂರೂ ದೋಷಗಳನ್ನು ಸಮಾನವಾಗಿ ಇರುವವರೂ ಆಗಿರಬಹುದು. ಹೇಗೆ ಬೆರಳಚ್ಚು ಒಬ್ಬೊಬ್ಬ ವ್ಯಕ್ತಿಯಲ್ಲೂ ಈ ದೋಷಗಳ combination ಭಿನ್ನ… ಹಾಗಾಗಿ ಒಬ್ಬೊಬ್ಬ ಮನುಷ್ಯನೂ ಭಿನ್ನ. ಇದು ಹುಟ್ಟಿನಿಂದ ಬಂದಿದ್ದು ಎಂಬುದನ್ನು ಗಮನಿಸಬಹುದು.

ಒಬ್ಬೊಬ್ಬರೂ ಭಿನ್ನ ಎಂದ ಮೇಲೆ, ಒಬ್ಬರಿಗೆ ಕೆಲಸ ಮಾಡುವ ಔಷಧಿ ಮತ್ತೊಬ್ಬರಿಗೆ ಹೇಗೆ ವಿಷವಾಗಬಹುದೋ, ಅದರಂತೆಯೇ ಆಹಾರ ಕೂಡ. ಕೆಲವರು ಎಷ್ಟೇ ಆಹಾರ ಉಂಡರೂ ದಪ್ಪ ಆಗದೆ ಇರಬಹುದು. ಮತ್ತೆ ಕೆಲವರು ಒಂದು ಚೂರು ಹೆಚ್ಚು ತಿಂದರೂ ತೂಕ ಬಲು ಬೇಗ ಏರಬಹುದು. ದಪ್ಪಗಿದ್ದ ಮಾತ್ರಕ್ಕೆ ಆರೋಗ್ಯವಂತರಲ್ಲ. ಸಣ್ಣಕ್ಕಿದ್ದ ಮಾತ್ರಕ್ಕೆ ಅವರಿಗೇನೋ ತೊಂದರೆ ಅಂತಲ್ಲ. ಹಾಗೆಯೇ ದಪ್ಪ ಎಂದ ಮಾತ್ರಕ್ಕೆ ಅವರಿಗೆ ಏನೋ ತೊಂದರೆ ಇದೆ ಅಂತಲ್ಲ. ಸಣ್ಣ ಎಂದ ಮಾತ್ರಕ್ಕೆ ಅವರು ಆರೋಗ್ಯವಂತರು ಅಂತೇನಲ್ಲ.

ಈ ಸಂದರ್ಭದಲ್ಲಿ ನಮ್ಮ ಎಸ್ಪಿ ಬಾಲು ವಿಷಯ ನೆನಪಾಗುತ್ತೆ. ಈಚೆಗೆ ಅವರು ತಮ್ಮ ದೇಹದ ತೂಕವನ್ನು ತುಂಬಾ ಇಳಿಸಿಕೊಂಡಿದ್ದರು. ಎಲ್ಲರೂ ಅವರನ್ನು 'ಏನಾಯ್ತು ಏನಾಯ್ತು' ಅಂತ ಕೇಳೋದೇ. ಅವರು "ನಾನು ದಪ್ಪ ಇದ್ದು ಅನಾರೋಗ್ಯ ಇದ್ದಾಗ ಯಾರೂ ಕೇಳಲಿಲ್ಲ. ಈಗ ಸಣ್ಣ ಆಗಿ ಆರೋಗ್ಯವಂತನಾಗೋದಕ್ಕೆ ಪ್ರಯತ್ನ ಪಡ್ತಾ ಇದ್ರೆ, ಎಲ್ರೂ ಕೇಳ್ತಿದ್ದೀರಾ. ಎನ್ರಪ್ಪಾ ನಿಮ್ಮ ಕಾಳಜಿ?" ಅನ್ನೋ ಅರ್ಥದಲ್ಲಿ ಕೇಳಿದ್ದರು.

ಇವೆಲ್ಲಾ ವಿಷಯಗಳು ಸ್ವಲ್ಪ ಮಟ್ಟಿಗೆ ಅರ್ಥವಾಗುತ್ತಿದ್ದಂತೆ, ನನ್ನ ತಲೆಯಲ್ಲಿ ಹಲವಾರು ವಿಚಾರಗಳು ಮೂಡತೊಡಗಿತ್ತು. ಕಾಲುಗಳ ವಿಚಾರವಾಗಿಯೇ ಯೋಚಿಸಿದರೆ, ಅತಿಯಾಗಿ ನಿಂತಾಗಲೂ, ಓಡಾಡುವಾಗಲೂ, ಜಿಗಿದಾಡುವಾಗಲೂ ಏನಾದರೂ ಸರಿ ಒಟ್ಟಾರೆ ಕಾಲುಗಳ ಮೇಲೆ ಭಾರ ಹೇರಿದಂತಾಗಿ ಒತ್ತಡ ಹೆಚ್ಚಿ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.

ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೊಳ್ರೀ!

ಈ ಒತ್ತಡ ಹಾಕುತ್ತಿರುವವರು ಯಾರು? ಕಾಲುಗಳ ಮೇಲಿರುವ ದೇಹದ ಇತರ ಭಾಗ. ಈ ಮಿಕ್ಕ ದೇಹದ ಭಾಗ ಕಾಲುಗಳ ಮೇಲೆ ನಿಂತಿದೆಯೋ? ಅಥವಾ ಕೂತಿದೆಯೋ? ಒಂದು ರೀತಿ ಯೋಚಿಸಿದರೆ ದೇಹದ ಇತರ ಭಾಗ ಕೂತಿದೆ, ಇನ್ನೊಂದು ರೀತಿ ಇದು ನಿಂತಿದೆ.

ಒಬ್ಬರು, ತಮ್ಮ ಕಾಲ ಮೇಲೆ ತಾವು ನಿಲ್ಲೋದು ಅಂದರೇನು? ಸ್ವತಂತ್ರರು ಅಂತ ಅಲ್ಲವೇ? ತಲೆಯು ಕೆಲಸ ಮಾಡಲು ಕಾಲುಗಳು ಬೇಕೇ? ಹೊಟ್ಟೆಯು ಜೀರ್ಣ ಕ್ರಿಯೆ ನಡೆಸಲು ಕಾಲುಗಳ ಅವಶ್ಯಕತೆ ಇದೆಯೇ? ಕಾಲುಗಳೇ ಇಲ್ಲದವರು ಬದುಕಿಲ್ಲವೇ? ಅರ್ಥಾತ್ ದೇಹದ ಇತರ ಭಾಗ ತಮ್ಮ ಕಾಲ ಮೇಲೆ ತಾವು ನಿಂತಿದೆ. ದೇಹದ ಇತರ ಭಾಗ independent.

ಆದರೆ ಕೂತಿದೆ ಹೇಗೆ? ಒಂದು ಡಬ್ಬದ ಮೇಲೆ ಮತ್ತೊಂದು ಡಬ್ಬ ಇಟ್ಟರೆ ಹೇಗೆ ಕಾಣುತ್ತೋ ಹಾಗೆ. ತಲೆಯ ಮೇಲಿನ ಕೂದಲಿದ್ದಂತೆ. ನೋಡೋಕ್ಕೆ ಕೂತಿದೆ. ಬೆನ್ನ ಮೇಲೆ ಕೂತ ಬೇತಾಳ ವಿಕ್ರಮ ಹೋದೆಡೆ ಹೋಗುತ್ತದೆ. ನಾವು ನಡೆಯುವಾಗ ಕಾಲುಗಳು ಒಂದೆಡೆ ಹೊಟ್ಟೆ ತಲೆಗಳು ಬೇರೆ ಕಡೆ ಹೋಗುತ್ತದೆಯೇ? ಹಾಗಾಗಿ ಕಾಲುಗಳ ಮೇಲೆ ಮಿಕ್ಕ ಭಾಗ ಕೂತಿದೆ.

ಕಾಲುಗಳ ಮೇಲೆ ಹೆಚ್ಚು ಒತ್ತಡ ಬೀಳದಂತೆ ನೋಡಿಕೊಳ್ಳಬೇಕು ಎಂದರೆ ಆ ಮೇಲ್ಭಾಗವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದೇ ನನ್ನ ಚಿಂತನೆ ಆಗಿತ್ತು.

ಒಂದು ಘಂಟೆಗಳ ಕಾಲದಲ್ಲಿನ ಹದಿನೈದು ನಿಮಿಷಗಳಷ್ಟು ವಿಚಾರವನ್ನು ಮಾತ್ರ ಇಲ್ಲಿ ಹಂಚಿಕೊಂಡಿದ್ದೇನೆ. ಇದಾದ ನಂತರ 'Benefits of yoga' ಎಂಬ ಅಧಿವೇಶನ ಇತ್ತು. ಈ ಅಧಿವೇಶನ 45 ನಿಮಿಷಗಳ ಕಾಲ ಆದ ಮೇಲೆ 'Stress Management' ಬಗ್ಗೆಯೂ ಒಂದು ಅಧಿವೇಶನ ಇತ್ತು. ಮುಂದೊಂದು ದಿನ ಇವುಗಳ ಬಗ್ಗೆಯೂ ಮಾತನಾಡೋಣ. ಆಗಬುಹುದೇ?

ಒಟ್ಟಾರೆ ಹೇಳೋದಾದ್ರೆ, ಒಬ್ಬೊಬ್ಬರೂ ಭಿನ್ನ. ಆಕಾರವೂ ಭಿನ್ನ… ವಿಕಾರವೂ ಭಿನ್ನ… ಒಬ್ಬರ ಆಕಾರದ ಬಗ್ಗೆ, ವಿಕಾರದ ಬಗ್ಗೆ ಅನವಶ್ಯಕ ಕಾಳಜಿ ಬೇಡ.

English summary
Session on Ayurveda for Joint Health at Festivals of India. Srinath Bhalle explains what he learnt in the session in USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X