• search

ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೊಳ್ರೀ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಸ್ವಲ್ಪ ಜರುಗುತ್ತೀರಾ ಅನ್ನೋದನ್ನ ಕೆಲವರು ಸ್ವಲ್ಪ ಒತ್ಕೋತೀರಾ ಅಂತಾರೆ, ಮತ್ತೆ ಕೆಲವರು ಸ್ವಲ್ಪ ಸರೀತೀರಾ ಅಂತಾನೂ ಅಂತಾರೆ. ಈ 'ಸ್ವಲ್ಪ' ಅಥವಾ 'ಪ್ಲೀಸ್' ಅನ್ನುವುದೆಲ್ಲಾ ಬಾಗಿಲಿನಿಂದಾಚೆ ಅಂತ 'ಸರ್ಕೊಳ್ರೀ' ಅನ್ನೋವ್ರೇ ಹೆಚ್ಚು. ಎಲ್ಲಿದ್ದೀರಾ ಸ್ವಾಮೀ? ಯಾವ ಕಾಲದಲ್ಲಿ ಇದ್ದೀರಿ? "ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೋ" ಅನ್ನೋವ್ರೇ ಹೆಚ್ಚು, ಗೊತ್ತೋ?

  ಹೋಗ್ಲಿ ಬಿಡಿ, ಕೆಲವೆಲ್ಲಾ ಪ್ರಾಂತ್ಯಾನುಸಾರ ಅಂತ ನಮಗೆಲ್ಲ ಗೊತ್ತೇ ಇದೆ. ದೇಶ ಬಿಟ್ಟು ಆಂಗ್ಲರ ನಾಡಿಗೆ ಬಂದ ಹೊಸತರಲ್ಲಿ "scoot over" ಅನ್ನೋ ಪದಪುಂಜ ಕೇಳಿದಾಗ 'ಅಲ್ಲಾ, ನಾನು ಕೂತಿರೋದು ಪಾರ್ಕ್'ನ ಬೆಂಚಿನ ಮೇಲೆ, ಇದ್ದಕ್ಕಿದ್ದಂತೆ ಮಾತಿನಲ್ಲಿ scooter ಎಲ್ಲಿಂದ ಬಂತು?' ಅಂತ ಅನ್ನಿಸಿತು. ನನ್ನ ಮುಖದ ಮೇಲಿನ ತಾಂಡವವಾಡುತ್ತಿದ್ದ ಗೊಂದಲ ಅರಿತೋ ಏನೋ 'can you shift a little?' ಅಂದನಾತ. ಓ, ಹಾಗೆ!

  ಈ ಒತ್ಕೋತೀರಾ ಅನ್ನೋ concept ಎಲ್ಲರಿಗಿಂತ ಬೇಗ ಯಾರಿಗೆ ಅರ್ಥವಾಗುತ್ತೆ ಅಂದ್ರೆ ಅವಳಿ-ಜವಳಿಗೆ. ಒಳಗಿರೋ ಒಂದು ಸೀಟಲ್ಲಿ ಇಬ್ಬರು ಎಂಟರಿಂದ ಒಂಬತ್ತು ತಿಂಗಳು ಅಡ್ಜಸ್ಟ್ ಮಾಡ್ಕೋಬೇಕು. ಸ್ವಲ್ಪ ಒತ್ಕೋತೀಯ ಅಂತ ಅವಳಿ ಕೂಸು ನುಡಿದರೆ, ನನಗೇ ಜಾಗ ಇಲ್ಲ ಇನ್ನು ನಿನ್ನದು ಬೇರೆ ಕಾಟ ಅಂತ ಜವಳಿಯ ಗೊಣಗಾಟ.

  Life is all about continuous adjustments

  ಹಲವು ವರ್ಷಗಳ (2011) ಹಿಂದೆ ನ್ಯಾಟಲಿ ಸುಲೇಮಾನ್ ಎಂಬಾಕೆ ಎಂಟು ಕಂದಮ್ಮಗಳಿಗೆ ಜನ್ಮವಿತ್ತು 'Octomom' ಎಂಬ (ಕು)ಖ್ಯಾತಿಗೆ ಒಳಗಾಗಿದ್ದಳು. ಇದರಲ್ಲಿ ಕುಖ್ಯಾತಿ ಏನು ಬಂತು ಎಂದರೆ, ಆಗಲೇ ಈಕೆಗೆ ಆರು ಮಕ್ಕಳಿದ್ದು, ಕೆಲಸ ಕಾರ್ಯವಿಲ್ಲದೆ public assistance ಮೇಲೆ ಜೀವನ ಮಾಡುತ್ತಿದ್ದವಳು. ಅದು ಬಿಡಿ, ಈ ಎಂಟು ಮಕ್ಕಳಿಗೆ ಇನ್ನೆಷ್ಟು 'ಸ್ವಲ್ಪ ಒತ್ಕೋತೀರಾ'ಗಳು ಆಗಿರಬೇಡ? ಹೀಗಾಗದೆ ಇರಲಿ ಎಂದೇ ನೂರು ಬೇರೆ ಬೇರೆ ಮಡಿಕೆಗಳಲ್ಲಿ ಕೌರವರು ಹುಟ್ಟಿದ್ದಿರಬೇಕು.

  ಬಹುಶ: ಇದೇ ಸಂದರ್ಭಕ್ಕೆ ಹೊಂದೋ ಕಥೆ ನಿಮಗೆ ನೆನಪಿಗೆ ಬಂದಿರಬಹುದು. ಹೌದು, ಒಂಟೆ ಕಥೆ. ಮರಳುಗಾಡಿನಲ್ಲಿ ಡೇರೆಯೊಳಗಿದ್ದ ಮಾಲೀಕನನ್ನು 'ಗುರೂ, ಹೊರಗೆ ತುಂಬಾ ಗಾಳಿ ನನ್ನ ತಲೆ ಮಾತ್ರ ಡೇರೆಯೊಳಗೆ ಇಡ್ಲಾ ಅಂತ ಶುರುವಾಗಿ ಕೊನೆಗೆ 'ಸ್ವಲ್ಪ ಜರುಗುತ್ತೀಯಾ?' ಅಂತ ಯಜಮಾನನನ್ನೇ ಡೇರೆಯಿಂದ ಹೊರಗೆ ಹಾಕೋ ಕಥೆ. ರಾಜಕೀಯದಲ್ಲಿ ಇಂಥಾ ಕಥೆಗಳು ಸಿಕ್ಕಾಪಟ್ಟೆ ಇವೆ. ಅಂದಿನ ಮೊಘಲರ ಸಾಮ್ರಾಜ್ಯದಲ್ಲಿ 'ಸ್ವಲ್ಪ ಸರ್ಕೋತೀರಾ' ಅಂತ ಸಿಂಹಾಸನದಿಂದಲೇ ಕಿತ್ತೊಗೆದಿರೋ ಕಥೆಗಳು ಅನೇಕ. ಅದು ಬಿಡಿ, ಕಂಸ ಮಾಡಿದ್ದೂ ಇದೇ ತಾನೇ?

  ಇಂದಿನ ಐಟಿ ಕಂಪನಿಗಳಲ್ಲಿ ಆಗ್ತಿರೋದೂ ಇದೇ. ತಮ್ಮ ಕಂಪನಿಯ ಕೆಲಸಗಳನ್ನು ಮಾಡಿಕೊಡಲು ಒಂದು contracting ಕಂಪನಿಯನ್ನು ಕೇಳುತ್ತಾರೆ. ಅವರುಗಳು ಒಂದು ವರ್ಷ ಆ ಕೆಲಸ ಮಾಡಿ ಪರಿಣತಿಯನ್ನೂ ಪಡೆದಿರುತ್ತಾರೆ ಅಂದುಕೊಳ್ಳೋಣ. ಹೊಸಾ ಬಜೆಟ್ ಸಮಯದಲ್ಲಿ ಆ ಕೆಲಸವನ್ನು ಮುಂದುವರೆಸಲು ಮತ್ತೊಂದು ಕಂಪನಿಯ ಜೊತೆ ಕೈಜೋಡಿಸಲಾಗುತ್ತದೆ. ಹೊಸ ಕಂಪನಿಯ ಜನರಿಗೆ ಆ ಹಳೆಯ ಕಂಪನಿಯ ಜನ ಆ ಕೆಲಸ ಕಲಿಸಿಕೊಡಬೇಕು. Shadowing ಹೆಸರಿನಲ್ಲಿ ಕರೆದರೂ ಸರಿ 'ಸ್ವಲ್ಪ ಒತ್ಕೋತೀರಾ' ಅಂದ್ರೂ ಸರಿ, ಒಟ್ನಲ್ಲಿ ಒಂದು ಸೀಟಿನಲ್ಲಿ ಇಬ್ಬರು ಕೂಡೋ ಹಾಗೆ. ಕೊನೆಗೆ ಒಬ್ಬರ ಸೀಟು ಬಿಟ್ಟುಕೊಡುತ್ತಾರೆ ಅನ್ನೋದಷ್ಟೇ ಸತ್ಯ.

  Life is all about continuous adjustments

  ನಾನು ಶಾಲಾದಿನಗಳಲ್ಲಿ ಬಸ್ಸಿನಲ್ಲಿ ಹೋಗಿಬಂದು ಮಾಡುವಾಗಲಂತೂ ನನ್ನಿಷ್ಟದಂತೆ ಒಂದು ಸೀಟಿನಲ್ಲಿ ಕುಳಿತಿದ್ದೇ ನೆನಪಿಲ್ಲ. ನಾನು ನೆಮ್ಮದಿಯಾಗಿ ಕೂತಿದ್ದೇನೆ ಎಂದರೆ ಆಯ್ತು, ಯಾರೋ ಬಂದು ನನ್ನನ್ನು ಸ್ವಲ್ಪ ನೂಕಿ ಕೂಡುತ್ತಾರೆ. ಇಬ್ಬರು ಕೂಡೋ ಸೀಟು ಮೂರು ಜನಕ್ಕೆ ಆಗುತ್ತದೆ. ಎಷ್ಟೋ ಸಾರಿ ನನ್ನನ್ನು ಸರಿಸಿ ಕೂತವರಿಗೆ ಜಾಗ ಸಾಲದೇ, ಅವರು ನನ್ನನ್ನು ಅವರ ತೊಡೆಯ ಮೇಲೆ ಕೂರಿಸಿಕೊಂಡಿದ್ದೂ ಇದೆ. ಆ ಎಲ್ಲಾ ಆಂಟಿಗಳೂ, ಇನ್ನೂ ಇದ್ದರೆ, ಚೆನ್ನಾಗಿರಲಿ!

  ಮದುವೆಯಾದ ಹೊಸತರಲ್ಲಿ ದಂಪತಿಗಳು, ಇಬ್ಬರೇ ತಾನೇ ಎಂದು ತಮಗೆ ಬೇಕಿದ್ದಷ್ಟು ಹಾಸಿಗೆಯನ್ನು ಕೊಂಡಿರುತ್ತಾರೆ. ಕಾಲಕ್ರಮೇಣ ಮಕ್ಕಳು ಅಂತಾದಾಗ 'ಸ್ವಲ್ಪ ಸರಿದು ಮಲಗಿಕೊಳ್ಳಿ. ನಿದ್ದೆಗಣ್ಣಲ್ಲಿ ಮಗುವಿನ ಕೈ ಮೇಲೆ ಮಲಗಿಬಿಟ್ಟೀರಾ' ಎಂದು ಎಚ್ಚರಿಸೋ ಹೆಂಡತಿಯ ಮಾತಿಗೆ, ಸ್ವಲ್ಪ ಸರಿದು ಮಲಗಿಕೊಳ್ಳೋ ಅವಾಂತರದಲ್ಲಿ ಮಂಚದಿಂದಲೇ ಕೆಳಗೆ ಬಿದ್ದ ಪ್ರಸಂಗಗಳೂ ಇವೆ.

  ಹಲ್ಲುಬ್ಬು ಎಂಬೋದು ಯಾವ ದೊಡ್ಡ ವಿಷಯವೂ ಅಲ್ಲ, ಆದರೆ ಅದರಿಂದಾಗಿ ಹಲವಾರು ಬಾಯಿಬಿಟ್ಟು ನಗಲೂ ಹಿಂಜರಿಯುತ್ತಾರೆ. ಎರಡು ಹಲ್ಲುಗಳ ನಡುವೆ ಜಾಗ ಖಾಲಿ ಇದ್ದು ನೋಡುಗರ ಕಣ್ಣಿಗೆ ಹೇಗೋ ಏನೋ ಆದರೆ ಈ ರೀತಿ ನ್ಯೂನತೆ (?) ಇದ್ದವರು ಹಲ್ಲುಗಳಿಗೆ ಕ್ಲಿಪ್ ಏರಿಸಿಕೊಳ್ಳುತ್ತಾರೆ. ಈ ಕ್ಲಿಪ್ ಏನು ಮಾಡುತ್ತದೆ ಎಂದರೆ, ಹಲ್ಲುಗಳನ್ನು ಬಿಗಿದು ಅಂತರ ಕಡಿಮೆ ಮಾಡಿ ಒಗ್ಗೂಡಿಸುತ್ತದೆ. ಅರ್ಥವಾಗದೆ ಇದ್ದರೆ, ಪ್ರತೀ ಹಲ್ಲು ತನ್ನ ಪಕ್ಕದಲ್ಲಿರೋ gums'ಗೆ ಸ್ವಲ್ಪ 'ಒತ್ಕೋತೀರಾ?' ಅಂತ ಕೇಳಿ ಜಾಗ ಭರ್ತಿ ಮಾಡುತ್ತವೆ.

  ವಿಮಾನದಲ್ಲಿ ಪಯಣ ಮಾಡುವವರಿಗೆ ಇಂಥಾ ಕೆಲವು ಅನುಭವ ಆಗಿರಬಹುದು. ಏನಪ್ಪಾ ಎಂದರೆ, ನಿಮ್ಮ ಪಯಣದ ದಿನ, ಟಿಕೆಟ್ ಹಿಡಿದು counter ಬಳಿ ಹೋದಾಗ ಆ ಚೆಲುವೆ 'ಫ್ಲೈಟ್ overbook ಆಗಿದೆ. ಇಂದಿನ ಬದಲಿಗೆ ನಾಳೆ ಹೋಗುತ್ತೀರಾ ಅಂತಾದರೆ ನಿಮ್ಮ ಟಿಕೆಟ್ ದರ ಕೊಂಚ ಕಡಿಮೆ ಮಾಡುತ್ತೇವೆ' ಅಂತ ನುಲಿಯಬಹುದು. ಭಾರತದಲ್ಲಿ ಮೂರು ವಾರ ಇದ್ದು ಈಗ ವಾಪಸಾಗುತ್ತಿದ್ದೇನೆ. ಎಲ್ಲರಿಗೂ ಬಾಯ್ ಎಂದಾಯ್ತು. ಈಗ ಮತ್ತೆ ವಾಪಸ್ ಹೋದರೆ ಏನಂದಾರೋ ಅಂತ 'ಇಲ್ಲಾ sorry... ಹೋದ ಕೂಡಲೇ ಕೆಲಸಕ್ಕೆ report ಮಾಡಿಕೊಳ್ಳಬೇಕು. ಪಯಣ postpone ಮಾಡಲು ಸಾಧ್ಯವಿಲ್ಲ' ಅಂತ ಹೇಳಿದ್ದಾಯ್ತು.

  Life is all about continuous adjustments

  ಪ್ರಶ್ನೆ ಅದಲ್ಲ, ಬದಲಿಗೆ flight ಒಳಗೆ 'ಸ್ವಲ್ಪ ಒತ್ಕೋತೀರಾ' ಅಂತ ಯಾರಾದ್ರೂ ಕೇಳಿದಾಗ ನಾನು ಅವರೊಂದಿಗೆ ಸೀಟು ಹಂಚಿಕೊಳ್ಳಬಹುದು ಅಂತ ಅಂದುಕೊಂಡು flight'ನವರು overbook ಮಾಡಿದ್ರಾ? ನೂರು ಸೀಟ್ ಇದ್ದಾಗ ಅದನ್ನು ನೂರಾಹತ್ತು ಜನಕ್ಕೆ ಹೇಗ್ರೀ ಕೊಡ್ತಾರೆ? ಇದೇನು, ಒಂದು ಸೈಟ್ ಅನ್ನು ಹತ್ತು ಜನಕ್ಕೆ ಮಾರುತ್ತಾರಲ್ಲ ಹಾಗಾ?

  ಈಗ ಮತ್ತೊಂದು ಸಾಮಾನ್ಯ ಸನ್ನಿವೇಶ. ಒಂದು ಮದುವೆ ಮನೆಯಲ್ಲಿ ಹೊಟ್ಟೆಬಿರಿಯಾ ತಿಂದು 'ಇನ್ನು ನನ್ನ ಕೈಲಿ ಇನ್ನು ತಿನ್ನೋಕ್ಕಾಗಲ್ಲಪ್ಪಾ... ಈಗ ಚೇರಿನಿಂದ ನನ್ನನ್ನು ಎಬ್ಬಿಸೋದಕ್ಕೂ ಯಾರದ್ದಾದರೂ ಹೆಲ್ಪ್ ಬೇಕು' ಅಂತೀರಾ. ಆಗ ಅಡುಗೆ ಬಡಿಸುವ ಮಂದಿ ಕಟ್ಟಕಡೆಯ ಐಟಂ ಅಂತ ಐಸ್ಕ್ರೀಮ್ ಕೇಳ್ಕೊಂಡ್ ಬರ್ತಾರೆ. ಮೊದಲೇ ನಿಮಗೂ ಐಸ್ಕ್ರೀಮ್'ಗೂ ಜನುಮಜನುಮದ ಪ್ರೇಮಾನುಬಂಧ! ಪಕ್ಕದವರದ್ದೂ ಸೇರಿಸಿ ಎರಡು ಐಸ್ಕ್ರೀಮ್ ತಿನ್ನುತ್ತೀರ. ಹೊಟ್ಟೆಯೊಳಗೆ ನಡೆದ ವಿಷಯ ಇಷ್ಟೇ, ಐಸ್ಕ್ರೀಮ್ ಬರುತ್ತಾ ಇದೆ ಸ್ವಲ್ಪ "ಒತ್ಕೋತೀರಾ?"

  ನಮಗಿಷ್ಟವಾದದ್ದು ಆದಲ್ಲಿ ಒತ್ಕೊಳ್ಳೋದಕ್ಕೆ ನಮಗೇನೂ ಹಿಂಸೆಯೇ ಆಗೋಲ್ಲ. ನಮಗೆ ಸರಿ ಕಾಣದ್ದು ಆದರೆ ಒತ್ತಿಕೊಳ್ಳೋದು ಬಿಡಿ ಹತ್ತಿರಕ್ಕೂ ಸೇರಿಸೋಲ್ಲ.

  ಅಂದು ವರ್ಣಭೇದ ತಾಂಡವವಾಡುತ್ತಿದ್ದ ದಿನಗಳು. ಒಂದು ಬಸ್ಸಿನಲ್ಲಿ ಹೆಚ್ಚುವರಿ ಸೀಟುಗಳಲ್ಲಿ ಬಿಳಿಯರು ಒಂದಷ್ಟು ಸೀಟುಗಳಲ್ಲಿ ಮಾತ್ರ ಕಪ್ಪು ಜನ ಕೂಡಬಹುದು ಎಂಬ ಭೇದ ಇದ್ದ ದಿನಗಳು. ಬಿಳಿಯರಿಗೇ ಮೀಸಲಾದ ಸೀಟುಗಳು ಭರ್ತಿಯಾಗಿ ಅವರುಗಳು ಬಸ್ಸಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾದಾಗ ಕಪ್ಪುವರ್ಣದವರು ಸೀಟು ಬಿಟ್ಟುಕೊಡಬೇಕು, ಜಾಗ ಇರದಿದ್ದರೆ ಬಸ್ ಇಳಿದು ಹೋಗಬೇಕು.

  ಒಮ್ಮೆ ಹೀಗೇ ನಡೆದಾಗ ಆಗಲೇ ಸೀಟಿನಲ್ಲಿ ಕುಳಿತಿದ್ದ ಕಪ್ಪು ಮಹಿಳೆ ರೋಸಾ ಪಾರ್ಕ್ಸ್, ತನ್ನ ಸೀಟನ್ನು ಬಿಳಿಯರಿಗೆ ಬಿಟ್ಟುಕೊಡಲು ಸಿದ್ದಳಿರಲಿಲ್ಲ. ದ್ವಂದ್ವ ನೀತಿಯ ವಿರುದ್ಧ ಹೋರಾಟದ ಕಿಡಿ ಅಂದು ಹೊತ್ತಿತ್ತು. ಮುಂದೆ ರೋಸಾ'ಗೆ ಶಿಕ್ಷೆ ಕೂಡ ಆಯ್ತು. ಆದರೆ ಹೋರಾಟ ಕಾಡ್ಗಿಚ್ಚಿನಂತೆ ಹರಡಿತು.

  ವರ್ಣಭೇದ ಇರದಿದ್ದರೆ, ಸರಿಸಿ ಕೂತು ಮತ್ತೊಬ್ಬರಿಗೂ ಜಾಗ ಕೊಡುವಂತೆ ವಿನಂತಿಸಿದ್ದರೆ ರೋಸಾ ಪಾರ್ಕ್ಸ್ ಹೆಸರು ಎಲ್ಲೂ ಇರುತ್ತಿರಲಿಲ್ಲ. ಅರ್ಥಾತ್, ಸರಿದು ಕೂತಿದ್ದರೆ ಗಲಭೆ ಇರುತ್ತಿರಲಿಲ್ಲ.

  ಸರಿಸಿಕೊಂಡು ಹೋದರೆ, ಅಡ್ಜಸ್ಟ್ ಮಾಡಿಕೊಂಡು ಸಾಗಿದರೆ ಸಂಸಾರ ತೂಗಿಸಿಕೊಂಡು ಹೋಗಬಹುದು. ಒತ್ಕೊಂಡ್ ಕೂಡ್ತೀರಾ ಅಂದಾಗ ಇರೋ ಜಾಗದಲ್ಲಿ ಅಡ್ಜಸ್ಟ್ ಮಾಡ್ಕೊಂಡ್ ಹೋಗೋದು ಅಂತರ್ಥ. I need my space ಅಂದಾಗ ಅಲ್ಲಿ ಅಹಮಿಕೆ ಕಾಣುತ್ತೆ. ಈ ಬೇಡದ ಅಹಂ ಅನ್ನು ಕಾಲ ಕೆಳಗೆ ಒತ್ತಿ, ಸ್ವಲ್ಪ ಒತ್ಕೊಂಡು ಅಡ್ಜಸ್ಟ್ ಮಾಡ್ಕೊಂಡ್ ಸಾಗೋಣ. ಏನಂತೀರಾ?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Life is the continuous adjustment of internal relations to external relations. Some times you lose more than you win. It's about handling losses and trying to turn them into positives. So, be careful while adjusting yourselves.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more