Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ
ಬಹುಭಾಷಾ ನಟಿ, ಕನ್ನಡದ ಅನುಷ್ಕಾ ಶೆಟ್ಟಿ ಅವರು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಕಳೆದ ಹಲವು ವರ್ಷಗಳಿಂದ ಅವರ ಮದುವೆಯ ಬಗ್ಗೆ ಹಲವಾರು ವದಂತಿಗಳು ಕೇಳಿಬರುತ್ತಿದ್ದವು. ಆದರೆ ಈ ಬಾರಿ ಮಾಧ್ಯಮಗಳಲ್ಲಿ ಈ ಸುದ್ದಿಯು ಹೆಚ್ಚು ಗಂಭೀರವಾಗಿ ಚರ್ಚೆಯಾಗುತ್ತಿದೆ. ವರದಿಗಳ ಪ್ರಕಾರ ಬೆಂಗಳೂರು ಮೂಲದ ಒಬ್ಬ ಪ್ರತಿಷ್ಠಿತ ಉದ್ಯಮಿಯೊಂದಿಗೆ ಅನುಷ್ಕಾ ಅವರ ವಿವಾಹ ನಿಶ್ಚಯವಾಗಿದ್ದು, ಇಬ್ಬರೂ ಈ ವರ್ಷದ ಅಂತ್ಯದೊಳಗೆ ಮದುವೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವಿಶೇಷವೆಂದರೆ ಈ ಬಾರಿ ಕೇಳಿಬರುತ್ತಿರುವ ಮದುವೆಯ ಸುದ್ದಿಯು ಕೇವಲ ವದಂತಿಯಲ್ಲ, ಬದಲಾಗಿ ಎರಡೂ ಕುಟುಂಬಗಳ ಹಿರಿಯರು ಸೇರಿ ಒಪ್ಪಿ ನಿಶ್ಚಯಿಸಿರುವ ಅರೇಂಜ್ಡ್ ಮ್ಯಾರೇಜ್ ಎಂದು ವರದಿಯಾಗಿದೆ. ಈ ಉದ್ಯಮಿಯು ಅನುಷ್ಕಾ ಕುಟುಂಬಕ್ಕೆ ಮೊದಲೇ ಆಪ್ತರಾಗಿರುವ ಸ್ನೇಹಿತರಾಗಿದ್ದು, ಅನುಷ್ಕಾ ಕೂಡ ಮದುವೆಯ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ದಶಕದಿಂದ ನಟ ಪ್ರಭಾಸ್ ಅವರ ಜೊತೆಗೆ ಅನುಷ್ಕಾ ಹೆಸರು ತಳುಕು ಹಾಕಿಕೊಂಡಿತ್ತಾದರೂ, ಅವರಿಬ್ಬರೂ ಕೇವಲ ಆತ್ಮೀಯ ಸ್ನೇಹಿತರು ಎಂದೇ ಹೇಳಿಕೊಳ್ಳುತ್ತಿದ್ದರು.

ಅನುಷ್ಕಾ ಕುಟುಂಬಕ್ಕೆ ಪರಿಚಿತ ವ್ಯಕ್ತಿ
ಕಳೆದ ಹಲವು ವರ್ಷಗಳಿಂದ ಅನುಷ್ಕಾ ಶೆಟ್ಟಿ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಬಗ್ಗೆ ಮದುವೆಯ ವದಂತಿಗಳು ಕೇಳಿಬರುತ್ತಿದ್ದವು. ಆದರೆ, ಈ ಬಾರಿ ಈ ಸುದ್ದಿಗಳಲ್ಲಿ ಪ್ರಭಾಸ್ ಹೆಸರು ಎಲ್ಲೂ ಕೇಳಿಬರುತ್ತಿಲ್ಲ. ಬದಲಿಗೆ ಬೆಂಗಳೂರು ಮೂಲದ ಈ ಉದ್ಯಮಿಯ ಜೊತೆಗಿನ ಮದುವೆಗೆ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಿವೆ ಎಂದು ವರದಿಯಾಗಿದೆ. ವರನ ಕುಟುಂಬವು ಅನುಷ್ಕಾ ಕುಟುಂಬಕ್ಕೆ ಮೊದಲೇ ಆಪ್ತವಾಗಿತ್ತು ಎಂದು ತಿಳಿದುಬಂದಿದೆ. ಈ ವರ್ಷದ ಅಂತ್ಯದೊಳಗೆ ಇವರು ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆಯಿದೆ.
2005ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅನುಷ್ಕಾ, ಕೇವಲ ಗ್ಲಾಮರ್ ಗೊಂಬೆಯಾಗದೆ ವಿಭಿನ್ನ ಪಾತ್ರಗಳ ಮೂಲಕ ಮನೆಮಾತಾದರು. 'ಅರುಂಧತಿ', 'ಬಾಹುಬಲಿ'ಯ ದೇವಸೇನಾ, 'ರುದ್ರಮದೇವಿ'ಯ ಪರಾಕ್ರಮಿ ರಾಣಿ ಹಾಗೂ 'ಭಾಗಮತಿ'ಯ ಗಂಭೀರ ಪಾತ್ರಗಳು ಅವರಿಗೆ ಅಪಾರ ಅಭಿಮಾನಿ ಬಳಗವನ್ನು ತಂದುಕೊಟ್ಟಿವೆ. ಅನುಷ್ಕಾ ಕನ್ನಡ ಮೂಲದವರಾದರೂ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಅನುಷ್ಕಾ ಮುಂದಿನ ಸಿನಿಮಾಗಳು
ಇನ್ನು ವೃತ್ತಿಜೀವನದ ವಿಚಾರಕ್ಕೆ ಬರುವುದಾದರೆ, ಅನುಷ್ಕಾ ಶೆಟ್ಟಿ ಅವರು ಇತ್ತೀಚೆಗಷ್ಟೇ ತೆಲುಗಿನ 'ಘಾಟಿ' (Ghaati) ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಬಿಡುಗಡೆಯಾದ ಬಳಿಕ ಅವರು ಸಾಮಾಜಿಕ ಜಾಲತಾಣಗಳಿಂದ ತಾತ್ಕಾಲಿಕ ವಿರಾಮ ಪಡೆದು, "ಮತ್ತೆ ಹೊಸ ಕಥೆಗಳೊಂದಿಗೆ ಹಿಂತಿರುಗುವೆ" ಎಂದು ತಿಳಿಸಿದ್ದರು. ಅವರ ಈ ಸೋಷಿಯಲ್ ಮೀಡಿಯಾ ಬ್ರೇಕ್ ಅವರ ಮದುವೆಯ ಸಿದ್ಧತೆಗಾಗಿ ಇರಬಹುದು ಎಂಬುದು ಅಭಿಮಾನಿಗಳು ಊಹಿಸಿದ್ದರು. ಇದರ ನಡುವೆ ಅವರು ಮಲಯಾಳಂನ ಅದ್ದೂರಿ ಬಜೆಟ್‌ನ 'ಕಥನಾರ್ - ದಿ ವೈಲ್ಡ್ ಸೋರ್ಸರರ್' (Kathanar - The Wild Sorcerer) ಚಿತ್ರದ ಮೂಲಕ ಅಲ್ಲಿನ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು 'ನೀಲಾ' ಎಂಬ ನಿಗೂಢ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಲಿದೆ ಎಂದು ಹೇಳಲಾಗುತ್ತಿದೆ.

ದೇವಸೇನಾ ಖ್ಯಾತಿಯ ಅನುಷ್ಕಾ ಅವರು ಮದುವೆಯ ನಂತರ ಬೆಂಗಳೂರಿನ ಸೊಸೆಯಾಗಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಸದ್ಯಕ್ಕೆ ಅನುಷ್ಕಾ ಆಗಲಿ ಅಥವಾ ಅವರ ಕುಟುಂಬದ ಸದಸ್ಯರಾಗಲಿ ಮದುವೆಯ ಬಗ್ಗೆ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಮದುವೆಯ ನಿಖರವಾದ ದಿನಾಂಕ ಮತ್ತು ವರನ ಅಧಿಕೃತ ಮಾಹಿತಿಗಾಗಿ ಅಭಿಮಾನಿಗಳು ಅಧಿಕೃತ ಪ್ರಕಟಣೆಯನ್ನು ಎದುರು ನೋಡುತ್ತಿದ್ದಾರೆ.












Click it and Unblock the Notifications